ಸ್ಟ್ಯಾನ್‌ಫೋರ್ಡ್ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿ ಡಾ. ಬಿ. ಜೆ. ಗಿರೀಶ ಮತ್ತು ಡಾ. ಬಿ.ಇ. ಕುಮಾರಸ್ವಾಮಿ

ಸುದ್ದಿಲೈವ್/ಶಂಕರಘಟ್ಟ, ಅ. 05

ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಟಾಪ್ ಶೇ. 02ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯಡಾ. ಬಿ. ಜೆ. ಗಿರೀಶ್ ಮತ್ತು ಡಾ. ಬಿ. ಇ. ಕುಮಾರಸ್ವಾಮಿ ಸತತ ಮೂರನೇಯ ವರ್ಷ ಸ್ಥಾನ ಪಡೆದಿದ್ದಾರೆ.
ಪ್ರತಿಷ್ಠಿತ ಎಲ್ಸೇವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಸ್ಟಾನ್‌ಫೋರ್ಡ್ ವಿವಿಯ ಜಾನ್ ಅಯೋನ್ನಿಡಿಸ್ ಅಕ್ಟೋಬರ್ 04ರಂದು ಬಿಡುಗಡೆ ಮಾಡಿರುವ ವಿಶ್ವದ ಅಗ್ರ ಶೇ. 02ರ ಶ್ರೇಷ್ಠ ವಿಜ್ಞಾನಿಗಳ ಡೇಟಾಬೇಸ್‌ನಲ್ಲಿ ವಿವಿಯ ಇಬ್ಬರು ಪ್ರಾಧ್ಯಾಪಕರು ಸ್ಥಾನ ಪಡೆದಿದ್ದು, ವಿವರಗಳು ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿದೆ.
2018ರಲ್ಲಿ ಪ್ರಾರಂಭವಾದ ಈ ರ‍್ಯಾಂಕಿಂಗ್ ಪಟ್ಟಿ, ಈಗ ಆರನೇ ವರ್ಷಕ್ಕೆ ಕಾಲಿರಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು, ಸಂಶೋಧನಾ ಉಲ್ಲೇಖಗಳು, ಸಹಲೇಖನಗಳು, ಹೆಚ್-ಇಂಡೆಕ್ಸ್ ಸೇರಿದಂತೆ ಹಲವು ಸಂಯೋಜಿತ ಮಾನದಂಡಗಳನ್ನು ಬಳಸಿ ಜಗತ್ತಿನ ಅತ್ಯುತ್ತಮ ಒಂದು ಲಕ್ಷ ವಿಜ್ಞಾನಿಗಳನ್ನು ಗುರುತಿಸಿ ದತ್ತಾಂಶವನ್ನು ಪ್ರಕಟಿಸಲಾಗಿದೆ. ಪಟ್ಟಿಯು 22 ವಿಜ್ಞಾನ ವಿಷಯಗಳು ಮತ್ತು 174 ಉಪ ವಿಜ್ಞಾನ ವಿಷಯಗಳನ್ನು ವಿಂಗಡಿಸಿ ರಚಿಸಿರುವುದಾಗಿದ್ದು, ವೃತ್ತಿ ಜೀವಮಾನದ ಸಾಧಕರು ಮತ್ತು 2023ನೇ ಸಾಲಿನ ಸಾಧಕರು ಎಂಬ ಎರಡು ವಿಭಾಗಗಳಲ್ಲಿ ಪ್ರಕಟಿಸಲಾಗಿದೆ.
2023ರ ಸಾಲಿನ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ 40,686ನೇ ಸ್ಥಾನವನ್ನು ಪಡೆದಿರುವ ವಿವಿಯ ಗಣ ತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಜೆ. ಗಿರೀಶ್ ಇಂಜಿನಿಯರಿಂಗ್, ಅನ್ವಯಿಕ ಭೌತಶಾಸ್ತ್ರ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯಗಳನ್ನು ಕುರಿತು ಅತ್ಯುತ್ತಮ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಸತತ ಆರನೇ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧನೆಯನ್ನು ಮಾಡಿದ್ದಾರೆ.
ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಬಿ. ಇ. ಕುಮಾರಸ್ವಾಮಿ 1,79,264ನೇ ಸ್ಥಾನದಲ್ಲಿದ್ದು, ಸತತ ಮೂರನೇ ವರ್ಷ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಈ ವರ್ಷದ ಪಟ್ಟಿಯಲ್ಲಿ ಭಾರತದ ವಿವಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸುಮಾರು 2000 ಕ್ಕೂ ಅಧಿಕ ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ. ಇಬ್ಬರೂ ಪ್ರಾಧ್ಯಾಪಕರು ಜೀವಮಾನದ ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದಿರುವುದು ಗಮನಾರ್ಹ.
ಸ್ಟಾನ್‌ಫೋರ್ಡ್ ವಿವಿಯ ಜಾಗತಿಕ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಈ ಇಬ್ಬರು ಪ್ರಾಧ್ಯಾಪಕರು ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ಇದು ವಿಶ್ವವಿದ್ಯಾಲಯದ ಅಧ್ಯಾಪಕರ ಶೈಕ್ಷಣ ಕ ಗುಣಮಟ್ಟ ಮತ್ತು ಸಂಶೋಧನಾ ಚಟುವಟಿಕೆಗಳ ಸ್ಥಿರತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಪ್ರಭಾರ ಕುಲಪತಿ ಪ್ರೊ. ಎಸ್. ವೆಂಕಟೇಶ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ-https://suddilive.in/archives/577
