ಸ್ಥಳೀಯ ಸುದ್ದಿಗಳು

ಕಾಡು ಕೋಳಿ ಪುಕ್ಕ ಹೊರದೇಶಕ್ಕೆ ಅಂಚೆ ಮೂಲಕ ಪಾರ್ಸೆಲ್ ಮಾಡುತ್ತಿದ್ದ ಭೂಪ!

ಸುದ್ದಿಲೈವ್/ಶಿವಮೊಗ್ಗ

ಇತ್ತೀಚೆಗೆ ಅರಣ್ಯ ಇಲಾಖೆ ಹಲವು ಕಾರಣಗಳಿಗೆ ಸಾಕಷ್ಟು ಪ್ರಚಾರದಲ್ಲಿದೆ. ಬಹಳ ಮುಖ್ಯವಾಗಿ ಹುಲಿ ಉಗುರು, ಜಿಂಕೆ, ಕಾಡುಕೋಣ ಕೊಂಬುಗಳು, ಪ್ರಾಣಿ ಚರ್ಮ, ಮಾಂಸ ಹೀಗೆ ಮರೆತ ಘಟನೆಗಳನ್ನೂ ಇಲಾಖೆ ಕೆದುಕುತ್ತಿದೆ.

ಸೆಲೆಬ್ರಿಟಿಗಳಿಂದ ಸಾಮಾನ್ಯನವರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಿಸಿ ಮುಟ್ಟಿಸಿದ್ದಾರೆ. ಜೊತೆಗೆ ಅರಣ್ಯ ಕಾನೂನುಗಳ ಕುಣಿಕೆಯಿಂದ ಪ್ರಭಾವಿಗಳೂ ನುಣುಚಿಕೊಳ್ಳುವ ಅನೇಖ ಘಟನೆಗಳೂ ನಡೆದಿವೆ. ೧೯೭೨ರ ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಸಾಲು ಸಾಲು ಪ್ರಕರಣಗಳನ್ನ ಕಳೆದೊಂದು ತಿಂಗಳಲ್ಲಿ ದಾಖಲಿಸಿಕೊಂಡಿರುವ ಇಲಾಖೆ ಜನರಿಗೂ ಈ ಮೂಲಕ ಕಾನೂನು ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ಕಾಡು ಪ್ರಾಣಿಗಳೆಂದರೆ ಹುಲಿ, ಚಿರತೆ, ಜಿಂಕೆಗಳಷ್ಟೇ ಅಲ್ಲ. ಮಲೆನಾಡಿನ ಕಾಡಿನಲ್ಲಿ ವಿರಳವಾಗಿ ಕಾಣಸಿಗುವ ಕಾನುಕೋಳಿ ಅಥವಾ ಕಾಡು ಕೋಳಿಗಳೂ ಸಹ ಹೌದು.

ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿ ಹಳೇ ಮೈಸೂರು ಭಾಗದ ಕಾಡುಗಳ ಆಸುಪಾಸು ಇರುವ ಹಕ್ಕಿಪಿಕ್ಕಿ ಜನಾಂಗ ಬೇಟೆಗೆ ಪ್ರಸಿದ್ಧಿ. ಮೊದಲೆಲ್ಲಾ ಮುಖ್ಯ ಕಸುಬನ್ನಾಗಿಸಿಕೊಂಡವರೇ ಇದ್ದರು. ಕಾಲಕ್ರಮೇಣ ಉಪಕಸುಬನ್ನಾಗಿ ಬೇಟೆ ಮುಂದುವರಿಸಿಕೊಂಡರು.

ಆಹಾರಕ್ಕಾಗಿಯೇ ಆದ್ಯತೆ ಹೆಚ್ಚಿದ್ದರಿಂದ ಹಕ್ಕಿಗಳು, ಸಣ್ಣಪುಟ್ಟ ಪ್ರಾಣಿಗಳ ಬೇಟೆಯನ್ನ ಅರಣ್ಯ ಇಲಾಖೆ ಸಿಬ್ಬಂದಿಯೂ ಮಾಫಿ ಮಾಡುತ್ತಲೇ ಬಂತು. ಜೊತೆಗೆ ಗಿಡಮೂಲಿಕೆಗಳನ್ನ ಮಾರುವ ರೂಢಿ ಇರುವ ಈ ಸಮುದಾಯ ದೂರದ ಆಫ್ರಿಕನ್‌ ರಾಷ್ಟ್ರಗಳಿಗೆ ತೆರಳಿ ಅಲ್ಲೇ ತಂಗಿ, ಹಣ ಸಂಪಾದನೆ ಮಾಡಿಕೊಳ್ಳುವ ಕಲೆಯನ್ನೂ ಕರಗತಗೊಳಿಸಿಕೊಂಡಿದೆ. ಹೀಗಿರುವ ಸಮುದಾಯದ ದಾವಣಗೆರೆ ಚನ್ನಗಿರಿ ಸಮೀಪದ ಹಕ್ಕಿಪಿಕ್ಕಿ ಸದಸ್ಯ ಅಜಯ್‌ ಎಂಬಾತ ಕಾಡುಕೋಳಿ ರೆಕ್ಕೆ-ಪುಕ್ಕವನ್ನ ಹೊರದೇಶಕ್ಕೆ ಅಂಚೆಯಲ್ಲಿ ಸಾಗಾಟ ಮಾಡಲು ಹೋಗಿ ಎರಡನೇ ಸಲ ಸಿಕ್ಕಿಬಿದ್ದಿದ್ದಾನೆ.

ಈತನ ವಿರುದ್ಧ ೨೦೨೧ರಲ್ಲಿ ಇದೇ ತರಹದ ಪ್ರಕರಣ ದಾಖಲಾಗಿತ್ತು. ಆದರೆ ದುರ್ಬಲ ಅರಣ್ಯ ಇಲಾಖೆ ಕಾನೂನು, ಸೂಕ್ತ ಸಾಕ್ಷಾಧಾರಗಳ ಕೊರತೆ ಜಾಮೀನು ಮೇಲೆ ಆಚೆ ಬಂದಿದ್ದ. ಈಗ ಪುನಃ ರಾಜ್ಯ ಅರಣ್ಯ ಇಲಾಖೆ ಸಂಚಾರಿ ದಳ ಈತನ ವಿರುದ್ಧ ದೋಷಾರೋಪ ಹೊರಿಸಿ ಕಟಕಟೆಯಲ್ಲಿ ನಿಲ್ಲಿಸಿದೆ.

ಏನಿದು ಕಾಡು ಕೋಳಿ ಪುಕ್ಕ ಫಾರಿನ್‌ ಪೋಸ್ಟ್‌ ರಹಸ್ಯ..?

ಚನ್ನಗಿರಿ ಸುತ್ತಲು ಸಹಜವಾಗಿ ಕಾಡುಕೋಳಿ ಬೇಟೆ ಇತ್ತು. ಮಾಂಸಕ್ಕಾಗಿ ಬಳಸಿ ರೆಕ್ಕ-ಪುಕ್ಕಗಳನ್ನ ಬಿಸಾಡುತ್ತಿದ್ದರು. ಈ ಅನುಪಯುಕ್ತ ರೆಕ್ಕೆಗಳಿಗೆ ಹೊರದೇಶದಲ್ಲಿ ಬೇಡಿಕೆ ಇರೋದನ್ನ ಅಜಯ್‌ ಮೊಬೈಲ್‌ಲ್ಲಿ ನೋಡಿ ತಿಳಿದಿದ್ದ. ಅಲ್ಲಿನ ಹವ್ಯಾಸಿ ಮೀನುಗಾರರೂ ಸಹ ಇದನ್ನ ಕುಂಚದ ತರಹ ಬಳಸುತ್ತಿದ್ದು, ಸಹಜವಾಗಿ ಬೇಡಿಕೆ ಇತ್ತು. ಅವರನ್ನ ಸಂಪರ್ಕಿಸಿ ಪೋಸ್ಟ್‌ ಮೂಲಕವೇ ಕಳಿಸುತ್ತಿದ್ದ. ಹಣ ಬಂದರೆ ಲಾಭ, ಬಾರದಿದ್ದರೆ ತೊಂದರೆ ಇಲ್ಲ ಎಂಬ ಲೆಕ್ಕಾಚಾರದಲ್ಲಿ ನಿರಂತರವಾಗಿ ಕಾಡುಕೋಳಿ ಸಂಹಾರ ಸಾಗಿತ್ತು. ಸ್ಥಳೀಯವಾಗಿ ಬೇಟೆಯಾಡುವವರಿಂದಲೂ ಚಿಲ್ಲರೆ ಹಣಕ್ಕೆ ಬಿಸಾಡುವ ರೆಕ್ಕೆ-ಪುಕ್ಕ ಖರೀದಿಸಿ, ಹೊರದೇಶಕ್ಕೆ ನಕಲಿ ಫ್ರಂ ಅಡ್ರೆಸ್‌ ಬಳಸಿ ಅಂತರ್‌ದೇಶಿ ಅಂಚೆ ಮೂಲಕ ಕಳಿಸುತ್ತಿದ್ದ. ಒಮ್ಮೆ ಬೆಂಗಳೂರಿನಲ್ಲಿ ಈ ಪ್ಯಾಕೆಟ್‌ಗಳು ಸಿಕ್ಕಿದ್ದವು. ಸೀರೆ ಹೆಸರಲ್ಲಿ ಸಾಗಾಟವಾಗುತ್ತಿದ್ದ ಬಾಕ್ಸ್‌ಗಳನ್ನ ಬಿಚ್ಚಿದಾಗ ಈ ದಂಧೆ ಬೆಳಕಿಗೆ ಬಂದಿತ್ತು. ಎರಡನೇ ಸಲವೂ ಚನ್ನಗಿರಿಯಿಂದ ಪೋಸ್ಟ್‌ ಆದ ಬಗ್ಗೆ ಮಾಹಿತಿ ಸಿಕ್ಕ ನಂತರ ಅರಣ್ಯ ಇಲಾಖೆ ಅಜಯ್‌ ಎಂಬಾತನೇ ವೃತ್ತಿಪರ ದಂಧೆಕೋರ ಎಂಬುದು ಗೊತ್ತಾಗುತ್ತಿತ್ತು. ಆತನನ್ನ ಕೆಲ ತಿಂಗಳ ಹಿಂದೆ ಬಂಧಿಸಿರುವ ಸಂಚಾರಿ ಹಾಗೂ ಜಾಗೃತ ದಳ ಅಧಿಕಾರಿಗಳು ತನಿಖೆ ಮುಗಿಸಿ ಕೋರ್ಟ್‌‌ಗೆ ಸಾಕ್ಷಾಧಾರಗಳನ್ನ ನೀಡಿದ್ದಾರೆ. ಕಳೆದ ಸಲ ಕಾನೂನು ಕುಣಿಕೆಯಿಂದ ಜಾರಿದ್ದ ಈತನ ಮೇಲೆ ಬಲವಾದ ಸಾಕ್ಷ್ಯಗಳನ್ನ ಒದಗಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಂಚಾರಿ ದಳದ ಅರಣ್ಯಾಧಿಕಾರಿ ಹನುಮಂತರಾಯ ರೆಡ್ಡಿ ಈ ಖತರ್‌ನಾಕ್‌ ದಂಧೆಯ ಬಗ್ಗೆ ವಿವರಿಸಿದರು. ಅಜಯ್‌ ನಷ್ಟವಿಲ್ಲದ ದಂಧೆ ಆರಂಭ ಮಾಡಿದ್ದ. ಬಂದರೆ ಲಾಭ, ಹೋದರೆ ನಷ್ಟವಿಲ್ಲ ಎಂಬಂತೆ ಈ ವ್ಯವಹಾರ ಕರಗತ ಮಾಡಿಕೊಂಡು, ಇಂಗ್ಲೆಂಡ್‌, ಸ್ಕಾಟ್ಲ್ಯಾಂಡ್‌, ಕೆನಡಾ ರಾಷ್ಟ್ರಗಳಿಗೆ ಕಳಿಸುತ್ತಿದ್ದ. ೨೦೨೧ರಲ್ಲಿ ಈತನ ಮೇಲೆ ಮೊದಲ ಪ್ರಕರಣ ದಾಖಲಿಸಿದ್ದೆವು. ಸ್ಥಳೀಯ ಜನರಿಗೆ ಆಸೆ ತೋರಿಸಿ ಕಾಡುಕೋಳಿ ಬೇಟೆ ಮಾಡಿಸುತ್ತಿದ್ದ, ಮಾಂಸ ಅವರಿಗೆ ಕೊಟ್ಟು ಪುಕ್ಕವನ್ನ ಮಾತ್ರ ಕೊಂಡುಕೊಳ್ಳುತ್ತಿದ್ದ. ಮಾಂಸವಿಲ್ಲದ ತರಹ ಪುಕ್ಕ ತೆಗೆದು ಪೋಸ್ಟ್‌ ಮೂಲಕ ಪಾರ್ಸೆಲ್‌ ಮಾಡುತ್ತಿದ್ದ. ಅಂಚೆ ಕಚೇರಿಯಲ್ಲಿ ಕೆಲವು ಬಾಕ್ಸ್‌ಗಳಲ್ಲಿ ಸೀರೆ ಇಟ್ಟು ಉಳಿದ ಬಾಕ್ಸ್‌ಗಳಲ್ಲಿ ಕಾಡುಕೋಳಿ ಪುಕ್ಕ ಇಟ್ಟು ಕಳಿಸುತ್ತಿದ್ದ. ತೆರೆದು ತೋರಿಸಿ ಎಂದಾಗ ಸೀರೆ ಬಾಕ್ಸ್ ತೋರಿಸಿ, ಪರಿಶೀಲನೆ ಮಾಡಿದ ಮೇಲೆ ಕಾಡುಕೋಳಿ ಬಾಕ್ಸ್‌ಗಳನ್ನಿಟ್ಟು ರವಾನೆ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಸ್ಯಾಂಪಲ್ ಬಾಕ್ಸ್ ತೆರೆದು ನೋಡಿದಾಗ ಸುಮಾರು ೨೫ ಬಾಕ್ಸ್‌ಗಳು ಸಿಕ್ಕಿದ್ದವು. ಹಿರಿಯ ಅರಣ್ಯಾಧಿಕಾರಿಗಳ ಗಮನಕ್ಕೆ ಬಂದು, ನಮ್ಮ ವ್ಯಾಪ್ತಿಗೆ ಬರುವುದರಿಂದ ತನಿಖೆ ಜವಾಬ್ದಾರಿ ವಹಿಸಿದ್ದರು. ಕಳೆದ ವರ್ಷ ಈತ ಹಾಗೂ ಈತನ ಸಹಚರರ ಮೇಲೆ ಪ್ರಕರಣ ದಾಖಲಿಸಿದ್ದೆವು. ಪುನಃ ಆತನ ಮೇಲೆ ಪ್ರಕರಣ ದಾಖಲಿಸಿದರೂ ಜಾಮೀನು ಪಡೆದಿದ್ದ. ಪದೇ ಪದೇ ಈತ ಇದೇ ಕೆಲಸ ಮಾಡುತ್ತಿದ್ದ. ಸದ್ಯ ಚನ್ನಗಿರಿ ಕೋರ್ಟ್‌‌ಲ್ಲಿ ಈತನ ವಿರುದ್ಧ ವಿಚಾರಣೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ-https://suddilive.in/archives/3124

Related Articles

Leave a Reply

Your email address will not be published. Required fields are marked *

Back to top button