ಸ್ಥಳೀಯ ಸುದ್ದಿಗಳು

ಎರಡು ದಿನ ‘ಮುಟ್ಟಿಸಿಕೊಂಡವನು’ ಹಾಗೂ ‘ಕಸಾಂದ್ರ ಮತ್ತು ಸತಿ’ ನಾಟಕಗಳ ಪ್ರದರ್ಶನ

ಸುದ್ದಿಲೈವ್/ಶಿವಮೊಗ್ಗ

ಮೈಸೂರು ರಂಗಾಯಣದ ‘ಮುಟ್ಟಿಸಿಕೊಂಡವನು’ ಹಾಗೂ ‘ಕಸಾಂದ್ರ ಮತ್ತು ಸತಿ’ ನಾಟಕಗಳು ಶಿವಮೊಗ್ಗದಲ್ಲಿ ಪ್ರದರ್ಶನವಾಗಲಿದೆ. ಮೈಸೂರು ರಂಗಾಯಣವು ಒಂದು ರಂಗ ಪ್ರಯೋಗಶಾಲೆಯಾಗಿದ್ದು, ಕಳೆದ 34 ವರ್ಷಗಳಿಂದ ಅನೇಕ ವಿಶಿಷ್ಟ ರಂಗಪ್ರಯೋಗಗಳ ಮೂಲಕ ರಂಗಭೂಮಿಯ ಇತಿಹಾಸದಲ್ಲಿ ದಾಖಲೆ ಸೃಷ್ಠಿಸಿದೆ.

ಪ್ರಸಕ್ತ ಸಾಲಿನಲ್ಲಿ ರಂಗಾಯಣ ಸಿದ್ಧಪಡಿಸಿರುವ ಎರಡು ಹೊಸ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ರಂಗಾಯಣದ ಸಹಕಾರದೊಂದಿಗೆ ದಿ: 18-11-2023 ರ ಶನಿವಾರ ‘ಮುಟ್ಟಿಸಿಕೊಂಡವನು’ ಮತ್ತು ದಿ:19-II-2023 ರ ಭಾನುವಾರದಂದು ‘ಕಸಾಂದ್ರ ಮತ್ತು ಸತಿ’ ನಾಟಕ ಪ್ರದರ್ಶನವನ್ನು ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ.

0:18-11-2023 ರಂದು ಪ್ರದರ್ಶಿಸುವ ‘ಮುಟ್ಟಿಸಿಕೊಂಡವನು’ ನಾಟಕ ಪಿ. ಲಂಕೇಶ್ ಕಥೆಯಾಧಾರಿತವಾಗಿದ್ದು, ರಂಗಾಯಣದ ಹಿರಿಯ ಕಲಾವಿದರಾದ ಶ್ರೀಮತಿ ನಂದಿನಿ ಕೆ.ಆರ್. ಅವರು ನಿರ್ದೆಶಿಸಿದ್ದಾರೆ. ಈ ನಾಟಕದಲ್ಲಿ ಹಳ್ಳಿಗಾಡಿನ ರೈತಾಪಿ ಜನರಲ್ಲಿ ಸಹಜವಾಗಿಯೇ ಇರುವ ಒಳ್ಳೆಯತನ ಮತ್ತು ಮುಗ್ಧತೆಗಳು ಹೇಗೆ ನಮ್ಮ ಜಾತಿ ವ್ಯವಸ್ಥೆಯ ಕ್ರೂರ ಅನಿಷ್ಟಗಳ ಕೈಯಲ್ಲಿ ಸಿಕ್ಕು ನಲುಗುತ್ತವೆ ಎಂಬುದರ ಮೇಲೆ ಈ ಕತೆ ಬೆಳಕು ಚೆಲ್ಲುತ್ತದೆ.

ದಿನಾಂಕ:19-11-2023 ರಂದು ಪ್ರದರ್ಶಿಸುವ ‘ಕಸಾಂದ್ರ ಮತ್ತು ಸತಿ’ ನಾಟಕ ಹೆಚ್.ಎಸ್. ಶಿವಪ್ರಕಾಶ್ ಅವರು ರಚಿಸಿದ್ದು, ಮೊದಲ ಬಾರಿಗೆ ಎರಡು ನಾಟಕಗಳನ್ನು ಸೇರಿಸಿ ಪ್ರದರ್ಶಿಸುತ್ತಿರುವ ಹೊಸ ರಂಗಪ್ರಯೋಗ ಇದಾಗಿದೆ. ಈ ನಾಟಕವನ್ನು ಹೆಗ್ಗೋಡಿನ ಹಿರಿಯ ರಂಗ ನಿರ್ದೇಶಕರಾದ ಶ್ರೀ ಬಿ.ಆರ್. ವೆಂಕಟರಮಣ ಐತಾಳ ಅವರು ನಿರ್ದೇಶನ ಮಾಡಿದ್ದಾರೆ. ಹೆಚ್.ಎಸ್. ಶಿವಪ್ರಕಾಶರು ಗ್ರೀಕ್ ಪುರಾಣ ಹಾಗೂ ಈಸ್ಕಿಲಸ್ ನ ಅಗಮೆಮೋನ್ ನಾಟಕಗಳನ್ನು ಆಧರಿಸಿ ‘ಕಸಾಂದ್ರ’ ನಾಟಕವನ್ನು ಮತ್ತು ಶಿವಪುರಾಣಗಳು ಹಾಗೂ ದೇಸಿ ಜಾನಪದ ಪುರಾಣಗಳಲ್ಲಿ ಬರುವ ದಾಕ್ಷಾಯಣಿಯ ಕಥೆಯನ್ನು ಆಧರಿಸಿ ‘ಸತಿ’ ಎಂಬ ನಾಟಕವನ್ನೂ ಬರೆದಿದ್ದಾರೆ. ಈ ಎರಡೂ ದುರಂತ ಕಥೆಗಳು ಮಾನವಕುಲದ ಆದಿಮ ರೂಪಕಗಳು. ಇದು ಮನುಕುಲದ ಇತಿಹಾಸದಲ್ಲಿ ಇಂದಿಗೂ ಪ್ರಸ್ತುತವಾಗಿರುವ ಸರ್ವಾಧಿಕಾರ ದರ್ಪ ದಮನ ಹಿಂಸೆಯ ಸ್ವರೂಪಗಳನ್ನು ಪುರಾಣದ ಚೌಕಟ್ಟಿನಲ್ಲಿ ನೋಡುವ ಪ್ರಯತ್ನವಾಗಿದೆ.

ಈ ಎರಡು ನಾಟಕಗಳು, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ. ಆದ್ದರಿಂದ ತಾವು ದಯಮಾಡಿ ನಾಟಕಗಳ ಪ್ರದರ್ಶನಕ್ಕೆ ಹೆಚ್ಚಿನ ಪ್ರಚಾರ ನೀಡಿ, ಅಪಾರ ಸಂಖ್ಯೆಯಲ್ಲಿ ರಂಗಾಸಕ್ತರು ಬಂದು ಈ ರಂಗಪ್ರಯೋಗಗಳನ್ನು ವೀಕ್ಷಿಸುವಂತೆ ಮಾಡಿ, ನಾಟಕಗಳ ಪ್ರದರ್ಶನವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕೋರುತ್ತೇನೆ.

ಇದನ್ನೂ ಓದಿ-https://suddilive.in/archives/3111

Related Articles

Leave a Reply

Your email address will not be published. Required fields are marked *

Back to top button