ರಾಜ್ಯ ಸುದ್ದಿಗಳು

ಮೊದಲನೇ ದಿನ ನಾಲ್ವರಿಂದ ಐದು ನಾಮಪತ್ರ ಸಲ್ಲಿಕೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಮೊದಲನೇ ದಿನವೇ ನಾಲ್ವರಿಂದ ನಾಮಪ್ರತ್ರ ಸಲ್ಲಿಕೆಯಾಗಿದೆ.

ಮಾಜಿ ಡಿಸಿಎಂ ಈಶ್ವರಪ್ಪ, ಎಎಪಿ ಪಕ್ಷದ ಅಭ್ಯರ್ಥಿಯಾಗಿ ಸುಭಾನ್ ಖಾನ್, ಕೆ.ಆರ್.ಎಸ್. ಪಕ್ಷದ ಅಭ್ಯರ್ಥಿಯಾಗಿ ಎಸ್.ಕೆ.ಪ್ರಭು ನಾಮಪತ್ರ ಸಲ್ಲಿಸಿದರು. ಪ್ರಜಾಕೀಯ ಪಕ್ಷದಿಂದ ಅರುಣ್ ಕೆ.ಎ ನಾಮಪತ್ರ ಸಲ್ಲಿಸಿದ್ದಾರೆ. ಈಶ್ವರಪ್ಪನವರ ಪರವಾಗಿ ವಿಶ್ವಾಸ ನಾಮಪತ್ರ ಸಲ್ಲಿಸಿದ್ದು ನಾಲ್ವರಿಂದ ಐದು ನಾಮಪತ್ರ ಸಲ್ಲಿಕೆಯಾಗಿದೆ.

ಏ.19 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ-ಡಿಸಿ ಗುರುದತ್ತ ಹೆಗಡೆ

ಏ.12 ರಿಂದ 19 ರವರೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರಗಳನ್ನು ಉಮೇದುದಾರರು ಅಥವಾ ಸೂಚಕರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚುನಾವಣಾ ನಾಮಪತ್ರ ಸಲ್ಲಿಕೆ ಮತ್ತು ಚುನಾವಣಾ ಪ್ರಕ್ರಿಯೆ ಕುರಿತು ಮಾಹಿತಿ ನೀಡಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಚುನಾವಣಾ ಆಯೋಗವು ಮಾ.16 ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಧಿಸೂಚನೆ ಹೊರಡಿಸಿದ್ದು, ಅದರಂತೆ 14-ಶಿವಮೊಗ್ಗ ಲೋಕಸಭಾ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ಸಂಬಂಧಿಸಿದಂತೆ ಉಮೇದುವಾರರು ಅಥವಾ ಅವರ ಸೂಚಕರು ನಾಮಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಅಥವಾ ಸಹಾಯಕ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಏ.12 ರಿಂದ ಏ.19 ರವರೆಗೆ ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 3.00 ರ ನಡುವೆ ಯಾವುದೇ ದಿನದಂದು (ಸರ್ಕಾರಿ ರಜಾದಿನದ ಹೊರತು) ಸಲ್ಲಿಸಬಹುದಾಗಿದೆ.

ನಾಮ ಪತ್ರದ ನಮೂನೆಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ವೇಳೆಯಲ್ಲಿ ಪಡೆದುಕೊಳ್ಳಬಹುದು. ನಾಮ ಪತ್ರಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ, ಶಿವಮೊಗ್ಗ ಇಲ್ಲಿ ಏ.20ರ(ಶನಿವಾರ) ರಂದು ಬೆಳಿಗ್ಗೆ 11.00 ಗಂಟೆಗೆ ಪರಿಶೀಲನೆಗೆ ತೆಗೆದುಕೊಳ್ಳಲಾಗುತ್ತದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ತಿಳಿವಳಿಕೆ ಪತ್ರವನ್ನು ಉಮೇದುವಾರನು ಅಥವಾ ಅವರ ಯಾರೇ ಸೂಚಕರು ಅಥವಾ ಅದನ್ನು ಸಲ್ಲಿಸಲು ಉಮೇದುವಾರನಿಂದ ಲಿಖಿತದಲ್ಲಿ ಅಧಿಕೃತನಾದ ಆತನ ಚುನಾವಣಾ ಏಜೆಂಟನು ಮೇಲ್ಕಂಡ ಇಬ್ಬರಲ್ಲೊಬ್ಬ ಅಧಿಕಾರಿಗೆ ನಿಗದಿಪಡಿಸಿದ ಕಚೇರಿಯಲ್ಲಿ ಏ.22 ರಂದು ಮಧ್ಯಾಹ್ನ 03.00 ಗಂಟೆಗೆ ಮುಂಚೆ ಸಲ್ಲಿಸಬಹುದಾಗಿದೆ ಎಂದರು.

ಚುನಾವಣೆಗೆ ಸ್ಪರ್ಧೆ ನಡೆದ ಸಂದರ್ಭದಲ್ಲಿ ಮೇ.7 ರ ಮಂಗಳವಾರ ಬೆಳಿಗ್ಗೆ 07.00 ಗಂಟೆಯಿಂದ ಸಂಜೆ 06.00 ಗಂಟೆಯ ವರೆಗೆ ಮತದಾನ ನಡೆಯುವುದು. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗ ನೀಡಿರುವ ಎಲ್ಲಾ ಸೂಚನೆಗಳನ್ನು ಪಾಲಿಸುವ ಮೂಲಕ ಅಗತ್ಯ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಬೇಕು.

ಅಭ್ಯರ್ಥಿಗಳು ನಾಮಪತ್ರವನ್ನು ನಮೂನೆ-2ಎ ನಲ್ಲಿ ಸಲ್ಲಿಸಬೇಕು. ನಮೂನೆ-26 ರಲ್ಲಿ ರೂ.100/- ಗಳ ಛಾಪಾ ಕಾಗದದಲ್ಲಿ ಅಭ್ಯರ್ಥಿಯ ಘೋಷಣಾ ಪತ್ರ, ಬೇಬಾಕಿಗೆ ಸಂಬಂಧಿಸಿದ ಇಲಾಖೆ ಹಾಗೂ ನೋಟರಿ ಪಬ್ಲಿಕ್ ರವರಿಂದ ದೃಢೀಕರಣ ಪತ್ರ ಸಲ್ಲಿಸಬೇಕು. ಸಾಮಾನ್ಯ ಅಭ್ಯರ್ಥಿಗಳು ರೂ.25000/- ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಶೇ.50 ವಿನಾಯಿತಿ ನೀಡಿ ರೂ.12500/- ಗಳ ಭದ್ರತಾ ಠೇವಣಿಯನ್ನು ನಿಗದಿಪಡಿಸಲಾಗಿರುತ್ತದೆ. ಅಭ್ಯರ್ಥಿಗಳು ಹೊಸದಾಗಿ ಬ್ಯಾಂಕ್ ಖಾತೆ ತೆರೆದು ಅದರಲ್ಲೇ ತಮ್ಮ ಚುನಾವಣಾ ವೆಚ್ಚಗಳನ್ನು ನಿರ್ವಹಿಸಬೇಕಾಗುತ್ತದೆ. ಒಬ್ಬ ಅಭ್ಯರ್ಥಿ ಗರಿಷ್ಟ 4 ನಾಮಪತ್ರಗಳನ್ನು ಸಲ್ಲಿಸಬಹುದು ಹಾಗೂ ಎರಡಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತಿಲ್ಲ.

ರಾಷ್ಟ್ರೀಯ, ರಾಜ್ಯ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಗೆ ಒಬ್ಬ ಸೂಚಕರು, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷ, ಪಕ್ಷೇತರರಿಗೆ 10 ಸೂಚಕರು ಸಹಿ ಮಾಡಿರಬೇಕು. ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಜೊತೆಗೆ 4 ಇತರ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ನಾಮಪತ್ರ ಸ್ವೀಕೃತಿ ಕೇಂದ್ರದಿಂದ 100 ಮೀಟರ್ ಅಂತರದೊಳಗೆ ಪ್ರವೇಶಿಸಲು ಅವಕಾಶವಿರುತ್ತದೆ.

ನಾಮಪತ್ರ ಸ್ವೀಕೃತಿ ಕೇಂದ್ರದ ಒಳಗಡೆ, ಪ್ರವೇಶ ದ್ವಾರದಲ್ಲಿ, ನಿರ್ಗಮನ ದ್ವಾರದಲ್ಲಿ ಕಣ್ಗಾವಲಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಾಮಪತ್ರ ಸ್ವೀಕೃತಿ ಕಾರ್ಯದ ಚಿತ್ರೀಕರಣ ಮಾಡಲು ವೀಡಿಯೋ ಕ್ಯಾಮೇರಾದೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಮಾನ್ಯ ಚುನಾವಣಾ ಆಯೋಗದ ಮಾರ್ಗದರ್ಶಗಳನ್ವಯ ನಾಮಪತ್ರ ಸ್ವೀಕೃತಿ ಕಾರ್ಯಕ್ಕೆ ಅವಶ್ಯವಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಅನುಸರಿಸಬೇಕಾದ ಸೂಚನೆಗಳ ಬಗ್ಗೆ ತಿಳಿಸಿದರು.

ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಹಾಜರಿದ್ದರು.

ಇದನ್ನೂ ಓದಿ-https://suddilive.in/archives/12629

Related Articles

Leave a Reply

Your email address will not be published. Required fields are marked *

Back to top button