ರಾಜ್ಯ ಸುದ್ದಿಗಳು

ಕ್ರೀಡಾಕೂಟಕ್ಕೆ ಗುಂಡು ಎಸೆಯುವ ಮೂಲಕ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ನಗರದ ನೆಹರೂ ಕ್ರೀಡಾಂಗಣದಲ್ಲಿ ಸಚಿವ ಮಧು ಬಂಗಾರಪ್ಪ ಗುಂಡು ಎಸೆಯುವ ಮೂಲಕ ಸರ್ಕಾರಿ ನೌಕರರ ಕ್ರೀಡಕೂಟಕ್ಕೆ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಬಲೂನ್ ಹಾರಿಸಿ, ಗುಂಡು ಎಸೆಯುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಕ್ರೀಡೆಗಳು ಮಾನವ ಜೀವನದ ಅಗತ್ಯಗಳಲ್ಲಿ ಒಂದಾಗಿದ್ದು ಪ್ರತಿದಿನ ನಮ್ಮ ದೈನಂದಿನ ಚಟುವಟಿಕೆಗಳ ಜೊತೆ ಯಾವುದಾದರೂ ಕ್ರೀಡೆಯನ್ನು ಆಡಬೇಕೆಂದರು.

ಸರ್ಕಾರಿ ನೌಕರರಿಂದಲೇ ರಾಜ್ಯ ಸರ್ಕಾರದ ಕೆಲಸ ಕಾರ್ಯಗಳು ನಡೆಯುತ್ತಿವೆ. ಅಧಿಕಾರಿ-ನೌಕರರ ಒತ್ತಡ ನಿರ್ವಹಣೆಗೆ ಕ್ರೀಡೆ ಸಹಕಾರಿಯಾಗಿದ್ದು ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸುವಂತೆ ತಿಳಿಸಿದರು.

ಶಿಕ್ಷಣ ಇಲಾಖೆಯಿಂದಲೇ ಅತಿ ಹೆಚ್ಚು ನೌಕರರಿದ್ದು ಇದು ದೊಡ್ಡ ಇಲಾಖೆ. ಹಲವಾರು ಸಮಸ್ಯೆಗಳು ಇವೆ. ಶಿಕ್ಷಕರ ನೇಮಕ ಆಗಬೇಕಿದೆ. ನಾನು ಸಚಿವ ಸ್ಥಾನ ಸ್ವೀಕರಿಸಿದ ನಂತರ 32 ಸಾವಿರ ಸರ್ಕಾರಿ ಶಿಕ್ಷಕರ ವರ್ಗಾವಣೆಗೆ ಕ್ರಮ ವಹಿಸಿದ್ದು, 43 ಸಾವಿರ ಅತಿಥಿ ಉಪನ್ಯಾಸಕರ ನೇಮಕ ಮಾಡಿದ್ದೇನೆ. ಜೊತೆಗೆ ಹೊಸದಾಗಿ 12500 ಶಿಕ್ಷಕರ ನೇಮಕ ಆಗಿದ್ದು 11500 ಜನ ಈಗಾಗಲೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯ ಶಿಕ್ಷಕರ ನೇಮಕ, ಶಿಕ್ಷಕರ ಬಡ್ತಿ ಸೇರಿದಂತೆ ಇತರೆ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹಾರ ಒದಗಿಸಲಾಗುವುದು ಎಂದರು.

ಕಳೆದ ಬಜೆಟ್‍ನಲ್ಲಿ ಶಿಕ್ಷಣ ಇಲಾಖೆ 37,500 ಕೋಟಿ ನೀಡಿದ್ದರು. ಈ ಬಾರಿ 44,412 ಕೋಟಿ ನೀಡಿದ್ದು ಇಲಾಖೆಯಲ್ಲಿನ ಸಮಸ್ಯೆಗಳು ಬಗೆಹರಿಯುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ಕ್ರಮಗಳನ್ನು ವಹಿಸುತ್ತೇನೆ ಎಂದ ಅಂದು ಬಂಗಾರಪ್ಪನವರು ಇದೆ ನೆಹರು ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರಿಗೆ 12% ರಷ್ಟು ವೇತನ ಹೆಚ್ಚು ಮಾಡಿದ್ದನ್ನು ಸ್ಮರಿಸಿದರು.
ಮಾನ್ಯ ಮುಖ್ಯಮಂತ್ರಿಗಳು ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಮತ್ತು ಹಳೆ ಪಿಂಚಣಿ ವ್ಯವಸ್ಥೆ ಜಾರಿ ಬಗ್ಗೆ ಇತೀಚಿನ ರಾಜ್ಯ ಸರ್ಕಾರಿ ನೌಕರರ ಸಮಾವೇಶದಲ್ಲಿ ಭರವಸೆ ನೀಡಿದ್ದು ಅದನ್ನು ಜಾರಿಗೆ ತರುತ್ತಾರೆಂಬ ವಿಶ್ವಾಸ ನನ್ನಲ್ಲಿದೆ. ವೇತನ ಆಯೋಗದ ವರದಿ ಬಂದ ನಂತರ ನಾನೂ ಸಹ ಸರ್ಕಾರಿ ನೌಕರರ ಹಕ್ಕುಗಳ ಬಗ್ಗೆ ಧ್ವನಿ ಎತ್ತುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದ ಅವರು ಎಲ್ಲರೂ ಸೇರಿ ಜಿಲ್ಲೆಯ ಅಭಿವೃದ್ದಿಗಾಗಿ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದರು.

ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತು ಸಾಂಸ್ಕøತಿ ಸ್ಪರ್ಧೆಯು ಮೇ ತಿಂಗಳಲ್ಲಿ ಜಿಲ್ಲೆಯಲ್ಲಿಯೇ ನಡೆಯಲಿದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದು, ಆ ಕ್ರೀಡಾಕೂಟಕ್ಕೆ ಸಹ ನನ್ನ ಕಡೆಯಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಒತ್ತಡದಲ್ಲಿ ಕೆಲಸ ಮಾಡುವ ನೌಕರರಿಗೆ ಕ್ರೀಡಾಕೂಟ ಅಗತ್ಯವಾಗಿರುವ ಹಿನ್ನೆಲೆ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಾ ಬರಲಾಗಿದೆ. ಇದು 5 ನೇ ಜಿಲ್ಲಾ ಮಟ್ಟದ ಕ್ರೀಡಾಕೂಟವಾಗಿದೆ. ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. 5.20 ಲಕ್ಷ ಸರ್ಕಾರಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ನೇಮಕಾತಿಗಳು ಆಗುತ್ತಿಲ್ಲ. ಇತರೆ 22 ರಾಜ್ಯಗಳಿಗೆ ಮತ್ತು ಕೇಂದ್ರಕ್ಕೆ ಹೋಲಿಸಿದರೆ ಕಡಿಮೆ ವೇತನ, ಆರೋಗ್ಯ ಯೋಜನೆ ಇಲ್ಲ.
ಕ್ರೀಡಾಕೂಟಗಳಿಗೆ ಇನ್ನೂ ಹೆಚ್ಚಿನ ಉತ್ತೇಜನ, ಉತ್ತಮ ಕ್ರೀಡಾಂಗಣ ಮತ್ತು ಸರ್ಕಾರಿ ಕ್ರೀಡಾಕೂಟ ನಡೆಸಲು ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಶಿವಮೊಗ್ಗದಲ್ಲಿಯೇ ರಾಜ್ಯ ಮಟ್ಟದ ಕ್ರೀಡಾ ಕೂಟ ನಡೆಸಲು ಯೋಜಿಸಲಾಗಿದೆ.
70 ಸಾವಿರ ಶಿಕ್ಷಕರಿಗೆ ಇನ್ನೂ ಮುಂಬಡ್ತಿ ದೊರತಿಲ್ಲ. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಸಚಿವರು ಬಗೆಹರಿಸುತ್ತಾರೆಂಬ ನಂಬಿಕೆ ಇದೆ. ಹಾಗೂ ಆಯೋಗದ ವರದಿ ಬಂದ ನಂತರ 7ನೇ ವೇತನ ಆಯೋಗ ಮತ್ತು ಓಪಿಎಸ್ ಜಾರಿಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್,ಥ್ರೋಬಾಲ್, ಕಬ್ಬಡ್ಡಿ,ವಾಲಿಬಾಲ್, ಟೆನ್ನಿಕಾಯ್ಟ್, ಬ್ಯಾಸ್ಕೆಟ್ ಬಾಲ್, ಪುಟ್ಬಾಲ್, ಹಾಕಿ, ಕ್ರಿಕೆಟ್, ಈಜು,ಟೆನ್ನಿಸ್, ಚೆಸ್, ವೇಟ್ ಲಿಫ್ಟಿಂಗ್, ಫವರ ಲಿಫ್ಟಿಂಗ್, ಬಾಲ್ ಬ್ಯಾಡ್ಮಿಂಟನ್, ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್,ಕರಂ, ಕುಸ್ತಿ, ಯೋಗ,ಖೋ- ಖೋ. ಕ್ರೀಡೆಗಳಿದ್ದವು. ಸಾಂಸ್ಕøತಿಕ ಕಾರ್ಯ ಕ್ರಮಗಳಾದ ಸಂಗೀತ, ನೃತ್ಯ,ವಾದ್ಯ ಸಂಗೀತ ,ಜಾನಪದ ಗೀತೆ,ಜಾನಪದ ನೃತ್ಯ ,ಕಿರು ನಾಟಕ, ಕರಕುಶಲ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ , ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮೊಹನ್ ಕುಮಾರ್, ಗೌರವ ಅಧ್ಯಕ್ಷ ಕೃಷ್ಣಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರುಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಪದಾಧಿಕಾರಿಗಳು ಹಾಗೂ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಸರ್ಕಾರಿ ನೌಕರರು ಹಾಜರಿದ್ದರು.

ಇದನ್ನೂ ಓದಿ-https://suddilive.in/archives/10038

Related Articles

Leave a Reply

Your email address will not be published. Required fields are marked *

Back to top button