ಶತಮಾನೋತ್ಸವದ ವೇಳೆ ರಾಜಕೀಯ ನಾಯಕರಿಂದ ಕಾರ್ಖಾನೆ ಉಳಿಸಿಕೊಳ್ಳುವ ಮಂತ್ರ ಪಠಣ!

ಸುದ್ದಿಲೈವ್/ಭದ್ರಾವತಿ

ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ೧೦೦ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಹಿರಿಯ ಚಲನ ಚಿತ್ರ ನಟ, ನಿವೃತ್ತ ಉದ್ಯೋಗಿ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಶತಮಾನೋತ್ಸವ ಸಮಾರಂಭ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರವರು ಶನಿವಾರ ಉದ್ಘಾಟಿಸಿದರು.
ಮೈಸೂರು ಸುತ್ತೂರು ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮತ್ತು ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು. ಉದ್ಯಮಿ ಡಾ. ವಿಜಯಸಂಕೇಶ್ವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ ಅಧ್ಯಕ್ಷತೆವಹಿಸಿದ್ದರು.
ಬಿಎಸ್ ವೈ ಮಾತು
ಕೇಂದ್ರಕ್ಕೆ ಒತ್ತಡ ತಂದು ಕಾರ್ಖಾನೆ ಉಳಿಸುವ ಕೆಲಸ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಜೊತೆ ಈ ಬಗ್ಗೆ ಚರ್ಚಿಸಿದ್ದೇನೆ. ಸುಮಾರು 3500 ಕಾರ್ಮಿಕರ ಬದುಕು ಉಳಿಸೋ ಕೆಲಸ ಮಾಡುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.
ಈ ಕಾರ್ಖಾನೆ ಕರ್ನಾಟಕ ಜನರ ಭಾವನಾತ್ಮಕ ವಿಷಯವಾಗಿದೆ. ಸತತ ಪ್ರಯತ್ನದಿಂದ ಈ ಕಾರ್ಯ ಆಗಲಿದೆ ಎಂದರು.
ಸಚಿವ ಮಧು ಬಂಗಾರಪ್ಪ ಹೇಳಿಕೆ
ವಿಐಎಸ್ ಎಲ್ ಕಾರ್ಖಾನೆ ಉಳಿಸಲು ರಾಜ್ಯ ಸರ್ಕಾರ ಸಂಪೂರ್ಣ ಪ್ರಯತ್ನಿಸಲಿದೆ. ಕೇಂದ್ರ ಹಾಗೂ ರಾಜ್ಯ ಪ್ರಯತ್ನದಿಂದ ಕಾರ್ಖಾನೆಯ ಗತ ವೈಭವ ಮರು ಕಳಿಸಲಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಕೇಂದ್ರ ಒಂದು ಹೆಜ್ಜೆ ಇಟ್ಟರೆ ನಾವು ಕಾರ್ಖಾನೆ ಉಳಿವಿಗೆ ಮೂರು ಹೆಜ್ಜೆ ಇಡುತ್ತೇವೆ. ವಿಶ್ವೇಶ್ವರಯ್ಯ ಕಟ್ಟಿದ ಕಾರ್ಖಾನೆ ಉಳಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ಸಂಸದ ಬಿ ವೈ ರಾಘವೇಂದ್ರ, ಬಿಎಸ್ ವೈ ಜೊತೆಗೂಡಿ ಈ ಕೆಲಸ ಆಗಬೇಕಾಗಿದೆ. ಪಕ್ಷಾತೀತವಾಗಿ ಎಲ್ಲರೂ ಈ ವಿಚಾರದಲ್ಲಿ ಹೋರಾಡಬೇಕು ಎಂದರು.
ಇದನ್ನೂ ಓದಿ-https://suddilive.in/archives/2463
