ಸ್ಥಳೀಯ ಸುದ್ದಿಗಳು

ರಾಮ ಮಂದಿರಕ್ಕೆ ಸಂಗ್ರಹಿಸಿದ್ದ ಇಟ್ಟಿಗೆ ಬಳಸಿಲ್ಲ; ಧಾರ್ಮಿಕ ಭಾವನೆಗೆ ಬಿಜೆಪಿಯಿಂದ ಧಕ್ಕೆ-ಆಯನೂರು ಆರೋಪ

ಸುದ್ದಿಲೈವ್/ಶಿವಮೊಗ್ಗ

ಅಯೋಧ್ಯೆಯ ರಾಮ ಮಂದಿರದ ಕಟ್ಟಡವನ್ನು ಕಲ್ಲಿನಿಂದ ನಿರ್ಮಿಸಲಾಗಿದೆ. ಇಲ್ಲಿ ದೇಶದ ರಾಮ ಭಕ್ತರು ಪೂಜೆ ಸಲ್ಲಿಸಿ ನೀಡಿದ ಇಟ್ಟಿಗೆ ಬಳಸಿಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ದೂರಿದರು.

ಶಿಕಾರಿಪುರ ತಾಲ್ಲೂಕಿನ ಮಳವಳ್ಳಿ ಅಗ್ರಹಾರ, ಮುಚಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಹಳ್ಳಿ (ಡೈರಿ ವೃತ್ತ)ದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು.

ರಾಮ ಮಂದಿರ ನಿರ್ಮಾಣದ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ರಾಮ ಮಂದಿರ ಕಟ್ಟಡ ನಿರ್ಮಾಣಕ್ಕೆ ₹3800 ಕೋಟಿ ದೇಣಿಗೆ ಸಂಗ್ರಹದೊಂದಿಗೆ ಪ್ರತಿ ಹಳ್ಳಿಯ ಜನರಿಂದ ಇಟ್ಟಿಗೆ ಸಂಗ್ರಹಿಸಲಾಗಿದೆ. ಜನರು ಇಟ್ಟಿಗೆಗೆ ಪೂಜೆ ಸಲ್ಲಿಸಿ ಅಯೋಧ್ಯಗೆ ಕಳುಹಿಸಿಕೊಟ್ಟಿದ್ದರು. ಆದರೆ, ಕಟ್ಟಡ ನಿರ್ಮಾಣಕ್ಕೆ ಇಟ್ಟಿಗೆ ಬಳಕೆ ಆಗಿಲ್ಲ. ಇದರಿಂದ, ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದರು.

ಇಲ್ಲಿ ಚುನಾವಣೆಯ ಉದ್ದೇಶದಿಂದ ಅರೆ- ಬರೆಯಾಗಿ ರಾಮ ಮಂದಿರ ಉದ್ಘಾಟಿಸಲಾಗಿದೆ. ರಾಮ ಭಕ್ತರು ನೀಡಿದ ಇಟ್ಟಿಗೆ ಎಲ್ಲಿ ಹೋದವು. ಇದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಉತ್ತರಿಸಬೇಕು. ಇಲ್ಲಿ ರಾಮ ಮಂದಿರ ನಿರ್ಮಾಣ ಜನರಿಂದ ಆಗಿದೆ. ಆದರೆ, ಬಿಜೆಪಿ ಹಾಗೂ ಸ್ಥಳೀಯ ಸಂಸದರು ರಾಮನ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಆದ್ದರಿಂದ ಇಲ್ಲಿ ಅರ್ಹತೆ ಕಳೆದುಕೊಂಡಿದ್ದಾರೆ ಎಂದರು.

ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬೂಟಾಟಿಕೆಗೆ ತಿರುಗೇಟು ನೀಡಬೇಕಿದೆ. ಅದೇ, ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ, ಹರಸಬೇಕು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಯಿಂದ ಅಶಕ್ತರು, ಕೂಲಿ- ಕಾರ್ಮಿಕರು ನೆರವು ಪಡೆದಿದ್ದಾರೆ. ಈ ಹಿಂದೆ, ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರು ಜನಪರ ಆಡಳಿತ ನಡೆಸಿ, ಜನ ಸಾಮಾನ್ಯರ ಬದುಕಿಗೆ ದಾರಿ ದೀಪವಾಗಿದ್ದರು. ನಾನು ಅವರ ಮಗಳು! ಅವರ ಹಾದಿಯಲ್ಲೇ ಸಾಗಬೇಕು ಎನ್ನುವ ಉದ್ದೇಶ ಹೊಂದಿದ್ದೇನೆ. ಅದೇ, ಕಾರಣಕ್ಕೆ ನನಗೆ ಮತ ನೀಡಿ ಹರಸಬೇಕು ಎಂದು ಕೋರಿದರು.

ನಟ ಶಿವರಾಜಕುಮಾರ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಗೀತಾಗೆ ಹಣದ ಅವಶ್ಯಕತೆ ಇಲ್ಲ. ಆದರೆ, ಜನ ಸಾಮಾನ್ಯರ ಸೇವೆ ಮಾಡುವ ಕನಸು ಗೀತಾಳ ರಕ್ತದಲ್ಲಿಯೇ ಅಡಕವಾಗಿದೆ‌. ಆದ್ದರಿಂದ, ಚುನಾವಣೆ ಕಣಕ್ಕೆ ದುಮುಕಿದ್ದಾರೆ‌. ಇಲ್ಲಿನ ಜನರ ಸೇವೆ ಮಾಡಲು ಗೀತಾಗೆ ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು‌.

ಬಿಳಕಿ- ನರಸಾಪುರ, ಬಳ್ಳಿಗಾವಿ, ತಾಳಗುಂದ, ಹೀರೆ ಜಂಬೂರು, ಚಿಕ್ಕಜಂಬೂರು, ಸುಣ್ಣದಕೊಪ್ಪ, ಕೊರಟಗೆರೆ, ಉಡುಗಣಿ, ತಡಗಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಮತಯಾಚನೆ ನಡೆಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌಡ, ಕೆಪಿಸಿಸಿ ಸದಸ್ಯ ಗೋಣಿ ಮಹಲ್ತೇಶ್, ನಗರದ ಮಹದೇವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳ ಶಿವರಾಂ, ಪುಷ್ಪ ಶಿವಕುಮಾರ್, ಧೀರರಾಜ ಹೊನ್ನವಿಲೆ, ಬಲ್ಕೀಷ್ ಭಾನು, ಭಂಡಾರಿ ಮಾಲತೇಶ್, ಮಳವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಸೇರಿ ಕಾರ್ಯಕರ್ತರು ಇದ್ದರು.

ಇದನ್ನೂ ಓದಿ-https://suddilive.in/archives/12969

Related Articles

Leave a Reply

Your email address will not be published. Required fields are marked *

Back to top button