ರಾಜಕೀಯ ಸುದ್ದಿಗಳು

ಸಚಿವದ್ವಯರಿಂದ ಶಿವಮೊಗ್ಗದಲ್ಲಿ ಯುವ ಜ್ಯೋತಿ ಜಾಥಾ

ಸುದ್ದಿಲೈವ್/ಶಿವಮೊಗ್ಗ

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಕಾರ್ಯಕ್ರಮ ಶುಕ್ರವಾರ ಶಿವಮೊಗ್ಗದಲ್ಲಿ‌ ಅನುಷ್ಠಾನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಎನ್ ಎಸ್ ಯು ಐ ಘಟಕದ ವತಿಯಿಂದ ಯುವ ಜ್ಯೋತಿ ಜಾಥಾ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ‌ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ಎಲ್ಲ ವರ್ಗದ ಜನರಿಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಉದ್ಯೋಗ ಅರಸುತ್ತಿರುವ ಯುವ ಜನರಿಗೆ ಆರ್ಥಿಕ ನೆರವು ಒದಗಿಸುವ ಆಶಯದಿಂದ ಯುವ ನಿಧಿ ಜಾರಿಯಾಗುತ್ತಿದೆ.

ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿ‌ ಕೆಲಸ‌ ಹುಡುಕುತ್ತಿರುವ ಯುವಜನತೆ ಸರ್ಕಾರದ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಯುವ ಜನರಿಗಾಗಿ‌ ಸರ್ಕಾರ ಯೋಜನೆ ಜಾರಿಗೊಳಿಸಿದ್ದು, ಅರ್ಹ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿ‌ ಸಲ್ಲಿಸಿ ಪ್ರಯೋಜನ ಪಡೆಯಬೇಕು ಎಂದು ಶಿವಮೊಗ್ಗ ಎನ್ ಎಸ್ ಯು ಐ ಪದಾಧಿಕಾರಿಗಳು ಅನಿಸಿಕೆ ವ್ಯಕ್ತಪಡಿಸಿದರು.

ಯುವ ಜ್ಯೋತಿ ಜಾಥಾವು ಶಿವಮೊಗ್ಗ ನಗರದ ಜೈಲ್ ವೃತ್ತದಿಂದ ಟಿ.ಸೀನಪ್ಪ ಶೆಟ್ಟಿ ( ಗೋಪಿ ವೃತ್ತ ) ವೃತ್ತದವರೆಗೂ ನಡೆಯಿತು. ನೂರಾರು ಎನ್ ಎಸ್ ಯು ಐ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಯುವ ನಿಧಿ ಯುವಕರ ಆಶಾನಿಧಿ ಸೇರಿದಂತೆ ವಿವಿಧ ಘೋಷಣೆಗಳನ್ನು ಪ್ರದರ್ಶಿಸಲಾಯಿತು.

ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ‌ಯುವನಿಧಿ ಯೋಜನೆ ಕುರಿತು ಜಾಗೃತಿ ಮೂಡಿಸುವ ಆಶಯದಿಂದ ಶಿವಮೊಗ್ಗ ಜಿಲ್ಲಾ‌ ಎನ್ ಎಸ್ ಯು ಐ ಘಟಕ ಯುವ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲಾ ಮಟ್ಟದಲ್ಲಿ ಎನ್ ಎಸ್ ಯು ಐ ಉತ್ತಮ‌‌ ಕೆಲಸ‌ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ‌ ಮಧು ಬಂಗಾರಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ಜನವರಿ‌12ರ‌ ಶಿವಮೊಗ್ಗ ಕಾರ್ಯಕ್ರಮದಲ್ಲಿ ಯುವನಿಧಿ‌ ಯೋಜನೆಗೆ ಚಾಲನೆ ನೀಡಲಿದ್ದು, ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳು ಹಾಗೂ ಪದವಿ ವಿದ್ಯಾರ್ಥಿಗಳು ಯೋಜನೆಯ ಅನುಷ್ಠಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗ್ಡೆ, ಎಚ್.ಸಿ.ಯೋಗೀಶ್, ಆರ್.ಪ್ರಸನ್ನಕುಮಾರ್, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ವಿಜಯ್,‌ ಮಧುಸೂದನ್, ಕೆ.ಚೇತನ್, ಚರಣ್, ಹರ್ಷಿತ್, ರವಿ ಕಾಟಿಕೇರೆ, ಕಲೀಂ ಪಾಷಾ, ದೇವೆಂದ್ರಪ್ಪ, ಸಂತೆಕುಡೂರು ವಿಜಯ್, ಧೀರಜ್, ರಂಗೇ ಗೌಡರು ಮತ್ತಿತರರು ಜಾಥಾದಲ್ಲಿ ಹೆಜ್ಜೆ ಹಾಕಿದರು.

ಇದನ್ನೂ ಓದಿ-https://suddilive.in/archives/6567

Related Articles

Leave a Reply

Your email address will not be published. Required fields are marked *

Back to top button