ಸ್ಥಳೀಯ ಸುದ್ದಿಗಳು

ಶರಾವತಿ ಸಂತ್ರಸ್ತರ ಬಾಕಿ ಪ್ರಕರಣದ ತ್ವರಿತ ಇತ್ಯರ್ಥಕ್ಕೆ ಈಶ್ವರ ಖಂಡ್ರೆ ಸೂಚನೆ

ಹುಲಿ ಉಗುರು: ಕಾನೂನು ಇಲಾಖೆ ಜೊತೆ ಚರ್ಚಿಸಿ ಕಡತ ಮಂಡಿಸಲು ಆದೇಶ

ಸುದ್ದಿಲೈವ್/ಬೆಂಗಳೂರು, ಡಿ. 19

ಲಿಂಗನಮಕ್ಕಿ ಜಲಾಶಯಕ್ಕಾಗಿ ತಮ್ಮ ಭೂಮಿ ಕಳೆದುಕೊಂಡ ಸಂತ್ರಸ್ತರು ಮತ್ತು ಉಳಿಮೆ ಜಾಗದ ಭೂಹಕ್ಕು ನೀಡುವಂತೆ 6 ದಶಕಗಳಿಂದ ಹೋರಾಟ ಮಾಡುತ್ತಿರುವ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಕಲ್ಪಿಸುವ, ಅರಣ್ಯ ಹಕ್ಕು ಕಾಯಿದೆಯಡಿ ಅರಣ್ಯವಾಸಿಗಳ ಹಕ್ಕು ರಕ್ಷಿಸುವ ಹಾಗೂ ಹುಲಿ ಉಗುರು ಸೇರಿದಂತೆ ವನ್ಯ ಜೀವಿಗಳ ಅಂಗಾಂಗದ ಫಲಕಗಳು, ಆಭರಣಗಳೇ ಮೊದಲಾದ ವಸ್ತುಗಳನ್ನು ಸರ್ಕಾರಕ್ಕೆ ಮರಳಿಸಲು ಒಂದುಬಾರಿ ಅವಕಾಶ ನೀಡುವ ನಿಟ್ಟಿನಲ್ಲಿ ಕಾನೂನಾತ್ಮಕ ವಿಷಯಗಳ ಕುರಿತಂತೆ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಮತ್ತು ಕಾನೂನು ಇಲಾಖೆ ಹಾಗೂ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ.

1958ರಿಂದ 1969ರ ನಡುವೆ ರಾಜ್ಯಕ್ಕೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯ ಮತ್ತು ಜಲ ವಿದ್ಯುತ್ ಯೋಜನೆಯ ನಿರ್ಮಾಣದ ವೇಳೆ ರೈತರು ಗಣನೀಯ ಪ್ರಮಾಣದಲ್ಲಿ ತಮ್ಮ ಭೂಮಿ ಕಳೆದುಕೊಂಡಿದ್ದು, ಸಂತ್ರಸ್ತ ಕುಟುಂಬಗಳಿಗೆ ಸುಮಾರು 9136 ಎಕರೆ 27 ಗುಂಟೆ ಅರಣ್ಯ ಭೂಮಿಯನ್ನು ಬಿಡುಗಡೆ ಮಾಡಲಾಗಿತ್ತು. ಇದನ್ನು ಅಂದಿನ ಮೈಸೂರು ಅರಣ್ಯ ನಿಯಂತ್ರಣ -1900 ಸೆಕ್ಷನ್ 30ರಡಿ ಡಿ ರಿಸರ್ವ್ ಮಾಡಲಾಗಿತ್ತು. ಆದರೆ ಅದು ಅಧಿಸೂಚನೆ ಆಗಿರಲಿಲ್ಲ, ಬಿಡುಗಡೆಯಾದ ಈ ಜಾಗದಲ್ಲಿ ಸಂತ್ರಸ್ತ ಕುಟುಂಬಗಳು ವಾಸಿಸುತ್ತಿದ್ದು ಅವರಿಗೆ ಸರ್ಕಾರದ ಸೌಲಭ್ಯ ಲಭಿಸುತ್ತಿಲ್ಲ. ಹೀಗಾಗಿ ಸಮಸ್ಯೆ ಉಂಟಾಗಿದೆ.

ಇದನ್ನು ಮನಗಂಡು ಸರ್ಕಾರ 2015-2017ರ ನಡುವೆ ಅರಣ್ಯ ಭೂಮಿಯನ್ನು ಡಿ ರಿಸರ್ವ್ ಮಾಡಿತು. ಆದರೆ ಈ ಆದೇಶಕ್ಕೆ ಮುನ್ನ ಭಾರತ ಸರ್ಕಾರದಿಂದ ಪೂರ್ವಾನುಮತಿ ಪಡೆದಿಲ್ಲ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ನ್ಯಾಯಾಲಯದ ಆದೇಶದನ್ವಯ ಸರ್ಕಾರ ತನ್ನ ಆದೇಶ ಹಿಂಪಡೆಯಿತು. ಈಗ 23.03.203ರಂದು 9129 ಎಕರೆ ಭೂಮಿ ಡಿ ರಿಸರ್ವ್ ಮಾಡವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಈ ಎಲ್ಲದರ ಹಿನ್ನೆಲೆಯಲ್ಲಿ ಇಂದು ಕಾನೂನು ಇಲಾಖೆ ಉನ್ನತಾಧಿಕಾರಿಗಳು, ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಲಾಗಿದ್ದು, ಎಲ್ಲ ಸಂತ್ರಸ್ತರಿಗೂ ನ್ಯಾಯ ದೊರಕಬಹುದು ಎಂಬ ಭರವಸೆಯನ್ನು ಸಚಿವರು ವ್ಯಕ್ತಪಡಿಸಿದರು,

ಹುಲಿ ಉಗುರು:ಸಂಪುಟಕ್ಕೆ ಪ್ರಸ್ತಾವನೆ

ವನ್ಯ ಜೀವಿಗಳ ಅಂಗಾಂಗದ ವಸ್ತುಗಳನ್ನು ಇಟ್ಟುಕೊಳ್ಳಲು ಕಾನೂನಿನಲ್ಲಿ ಅಕಾಶವಿಲ್ಲದ ಕಾರಣ, ಸರ್ಕಾರಕ್ಕೆ ಮರಳಿಸಲು ಅವಕಾಶ ನೀಡಬಹುದು, ಕೇರಳ ಸರ್ಕಾರ ಕೈಗೊಂಡ ನಿರ್ಧಾರ ಮತ್ತು ನಮ್ಮ ಸರ್ಕಾರದ ಉದ್ದೇಶಿತ ನಿರ್ಧಾರ ವಿಭಿನ್ನವಾಗಿದ್ದು, ಈ ನಿಟ್ಟಿನಲ್ಲಿ ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ಕಡತವನ್ನು ಪುನರ್ ಮಂಡಿಸಲು ಸೂಚನೆ ನೀಡಲಾಗಿದೆ.

ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ, ಕಾನೂನಿನ ಅರಿವಿಲ್ಲದೆ ತಮ್ಮ ಬಳಿ ವನ್ಯ ಜೀವಿಗಳ ಅಂಗಾಂಗದ ವಸ್ತುಗಳನ್ನು ನೋಂದಣಿ ಮಾಡದೆ ಇಟ್ಟುಕೊಂಡಿರುವ ಮುಗ್ದ ಜನತೆಗೆ ಕಿರುಕುಳ ಆಗದ ರೀತಿಯಲ್ಲಿ ಒಂದು ಬಾರಿ ಕೊನೆಯ ಅವಕಾಶ ನೀಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಇದಕ್ಕೂ ಮುನ್ನ ವಿಕಾಸಸೌಧದ ಅರಣ್ಯ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕೇಂದ್ರ ಸರ್ಕಾರದ ಉನ್ನತಾಧಿಕಾರಿ ಮಹೇಶ್, ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಬಿಜ್ಜೂರ್, ಅರಣ್ಯ ಮತ್ತು ಕಾನೂನು ಇಲಾಖೆಯ ಉನ್ನತಾಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ-https://suddilive.in/archives/5072

Related Articles

Leave a Reply

Your email address will not be published. Required fields are marked *

Back to top button