ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ಒಂದು ಲಕ್ಷ ರೂ.ದಂಡ

ಸುದ್ದಿಲೈವ್/ಶಿವಮೊಗ್ಗ

ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನೊಂದಿಗೆ ಕಿರಿಕ್ ತೆಗೆದು ಆತನಿಗೆ ಚಾಕು ಇರಿದು ಆತನ ಹತ್ಯೆಗೆ ಕಾರಣರಾದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿ ಇಲ್ಲಿನ ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ದಿನಾಂಕಃ 01-01-2021 ರಂದು ರಾತ್ರಿ ಶಿಕಾರಿಪುರ ಟೌನ್ ವಾಸಿಗಳಾದ ಇಸಾಕ್ ಮತ್ತು ನೌಶಾದ್ ರವರುಗಳು ಮಧ್ಯಪಾನ ಮಾಡಿಕೊಂಡು ಆಶ್ರಯ ಬಡಾವಣೆಯ ಅಂಗಡಿಯೊಂದರ ಹತ್ತಿರ ಕೂಗಾಡುತ್ತಿದ್ದು, ಆ ಸಮಯದಲ್ಲಿ ಶಿಕಾರಿಪುರ ಟೌನ್ ಆಶ್ರಯ ಬಡಾವಣೆಯ ವಾಸಿ ಮನೋಜ್ 20 ವರ್ಷ ಈತನು ಸ್ಥಳಕ್ಕೆ ಹೋದಾಗ ಆತನೊಂದಿಗೆ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ಚಾಕುವಿನಿಂದ ಆತನ ಎದೆಗೆ ಚುಚ್ಚಿ ಕೊಲೆ ಮಾಡಿರುತ್ತಾರೆಂದು ಮೃತನ ಸಹೋದರ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ ತನಿಖಾಧಿಕಾರಿಗಳಾದ ಶಿಕಾರಿಪುರದ ಡಿವೈಎಸ್ಪಿ ಶಿವಾನಂದ ಮದರಖಂಡಿ, ತನಿಖೆ ಕೈಗೊಂಡು ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾಗಿ ಶ್ರೀಮತಿ ಪುಷ್ಪ ವಾದ ಮಂಡಿಸಿದ್ದರು.
ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಧೀಶರಾದ ಶ್ರೀಮತಿ ಬಿ.ಆರ್ ಪಲ್ಲವಿ ರವರು ಇಂದು ಆರೋಪಿತರಾದ ಸೈಯ್ಯದ್ ಇಸಾಕ್, (20) ಮತ್ತು ಮೊಹಮ್ಮದ್ ನೌಷಾದ್, (21) ಆಶ್ರಯ ಬಡಾವಣೆ ಶಿಕಾರಿಪುರ ಟೌನ್ ರವರುಗಳ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಆರೋಪಿತರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 1,00,000/- ರೂ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/1041
