ಸ್ಥಳೀಯ ಸುದ್ದಿಗಳು

ತೀರ್ಥಹಳ್ಳಿಯ ಅರಳಸುರಳಿಯಲ್ಲಿ ಅರ್ಚಕರ ಮನೆಯಲ್ಲಿ ನಡೆದ ಸಜೀವ ದಹನ

ಸುದ್ದಿಲೈವ್/ತೀರ್ಥಹಳ್ಳಿ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಎಂಬ ಹಳ್ಳಿಯಲ್ಲೊಂದು ನಡೆದ ಘೋರ ದುರಂತ ಎಂತಹವನನ್ನಾದರೂ ಬೆಚ್ಚಿಬೀಳಿಸುತ್ತದೆ. ಬ್ರಾಹ್ಮಣ ಕುಟುಂಬವೊಂದು ಸ್ವಯಂ ಚಿತೆಯ ರೂಪದಲ್ಲಿ ಮಲಗುವ ಕೊಠಡಿಯಲ್ಲಿ ಬೆಂಕಿಗೆ ಆಗುತಿಯಾಗಿದೆ. ನಾಲ್ವರಿದ್ದ ಕುಟುಂಬದಲ್ಲಿ ಓರ್ವ ಯುವಕ ಬದುಕುಳಿದಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ಧಾನೆ.

ಅರಳಸುರಳಿಯಲ್ಲೇ ಇರುವ ಆರೇಳು ವಿರಳ ಮನೆಗಳ ಸ್ಥಳಕ್ಕೆ ಕಲ್ಲೋಣಿ ಎಂದು ಹೆಸರು. ಈ ಊರಿನ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬ ಕೇಕುಡ. ಇವರ ಮೂಲ ಘಟ್ಟದ ಕೆಳಗಿನವರು. ಈ ಕುಟುಂಬದಲ್ಲಿನ ಅಣ್ಣ ತಮ್ಮಂದಿರು ನಾನಾ ವೃತ್ತಿಯಲ್ಲಿದ್ದಾರೆ. ಅದರಲ್ಲೊಬ್ಬರು ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕರೂ ಆಗಿದ್ದಾರೆ.

ಅಣ್ಣ ತಮ್ಮಂದಿರ ಪೈಕಿ ಊರಲ್ಲೇ ಇರುವ ರಾಘವೇಂದ್ರ ( ೬೫), ಆತನ ಪತ್ನಿ ನಾಗರತ್ನ ( ೫೫) ಹಾಗೂ ಪುತ್ರ ಶ್ರೀರಾಮ್‌ ( ೩೦) ಮಲಗುವ ಕೋಣೆಯಲ್ಲಿ ಬೆಂಕಿಗೆ ಆಹುತಿಯಾಗಿದ್ದಾರೆ. ಕಿರಿಯ ಮಗ ಭರತ್‌ ಬೆಂಕಿಯ ಕೆನ್ನಾಲಗಿಯಿಂದ ಹೊರಬಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ನಾನಾ ತನಿಖಾ ತಂಡಗಳು, ಬೆರಳಚ್ಚು. ಶ್ವಾನ ದಳಗಳು ಸ್ಥಳದಲ್ಲಿದ್ದು ತನಿಖೆ ಚುರುಕುಗೊಂಡಿದೆ. ಮೃತ ದೇಹಗಳನ್ನ ಹೊರತೆಗೆದು ಶವಪರೀಕ್ಷೆ ಮಾಡಲಾಗಿದೆ.

ಮೂರು ಆಯಾಮದಲ್ಲಿ ತನಿಖೆ: ಎಸ್‌ಪಿ

ಶಿವಮೊಗ್ಗ ಎಸ್‌ ಪಿ ಮಿಥುನ್‌ ಕುಮಾರ್‌ ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಿ, ಮೂರು ಜನ ಕೋಣೆಯೊಳಗೆ ಭಾನುವಾರ ಮುಂಜಾನೆ ಸಜೀವ ದಹನವಾಗಿದ್ದಾರೆ. ತಂದೆ ರಾಘವೇಂದ್ರ, ಪತ್ನಿ ನಾಗರತ್ನ ಹಿರಿಯ ಪುತ್ರ ಶ್ರೀರಾಮ್‌ ಮೃತರು. ಬದುಕುಳಿದು ಚಿಕಿತ್ಸೆ ಪಡೆಯುತ್ತಿರುವ ಕಿರಿಯ ಮಗ ಭರತ್‌ ಈ ಘಟನೆ ಸಂಬಂಧ ಕೆಲವು ಸುಳಿವು ನೀಡಿದ್ದಾನೆ. ತನಿಖೆ ಮುಂದುವರಿದಿದೆ ಎಂದರು. ಮನೆಯೊಳಗೆ ಪರಿಶೀಲನೆ ಮಾಡುವ ವೇಳೆ ಕೆಲ ಮಾಹಿತಿ ದೊರೆತಿದೆ. ಎರಡು ಮೂರು ಆಯಾಮಗಳಿವೆ. ಕಟ್ಟಿಗೆ ಹಾಕಿಕೊಂಡು ಬೆಂಕಿ ಇಟ್ಟುಕೊಂಡ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ. ಈಗಲೇ ಯಾವ ನಿರ್ಧಾರಕ್ಕೂ ಬರಲು ಸಾಧ್ಯವಿಲ್ಲ ಎಂದರು.

ಆರ್‌ಎಸ್‌ಎಸ್‌ ಹಿನ್ನೆಲೆ ಇದ್ದ ಕುಟುಂಬ

ಘಟನೆ ಕಿವಿಗೆ ಬಿದ್ದ ತಕ್ಷಣ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿರಪರಿತ ಕುಟುಂಬ ಆರ್ಥಿಕವಾಗಿ ಸಧೃಡವಾಗಿತ್ತು. 10 ಎಕರೆ ಅಡಿಕೆ ತೋಟ ಹೊಂದಿದೆ. ಈ ಕುಟುಂಬದ ಕೃಷ್ಣಮೂರ್ತಿ ಸನ್ಯಾಸಿಯಾಗಿದ್ದಾರೆ. ಸಂಘಪರಿವಾರಕ್ಕಾಗಿ ದುಡಿದಿದ್ದಾರೆ. ಈ ಬೆಂಗಳೂರಿನಲ್ಲಿದ್ದಾರೆ.

ಹತ್ತು ಎಕರೆ ಅಡಕೆ ತೋಟ ಅಂದ್ರೆ ಎಷ್ಟು ಆಗ್ತಿತ್ತು..? ಅದರಲ್ಲೂ ಶ್ರೀರಾಮ್‌ ಎಂಬುವ ಯುವಕ ಅಡಕೆ ವ್ಯವಹಾರ ಮಾಡುತ್ತಿದ್ದ. ಈ ಭಾಗದ ಜನರಿಂದ ಅಡಕೆ ಕೊಳ್ಳುತ್ತಿದ್ದ. ಕುಟುಂಬದ ಸದಸ್ಯರು ಬರುತ್ತಿದ್ದಾರೆ. ಅವರೆಲ್ಲರ ವಿಚಾರಣೆ ನಡೆಯಲಿದೆ. ನಂತರವಷ್ಟೇ ಸಾವಿನ ರಹಸ್ಯ ಬಹಿರಂಗವಾಗಲಿದೆ ಎಂದರು.

ಕೇಕುಡ ಕುಟುಂಬ ಈ ತರಹ ಆತ್ಮಹತ್ಯೆಗೆ ಪ್ರಯತ್ನಪಟ್ಟು ಮೃತರಾಗುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಕುಟುಂಬ ಕಲಹದ ಬಗ್ಗೆ ನಾವು ಸಾವಿನ ಸಂದರ್ಭದಲ್ಲಿ ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ. ಏನೇನು ಮಾಡಿಕೊಂಡಿದ್ದರು ಎಂದು ನಮಗೂ ಗೊತ್ತಿಲ್ಲ. ಆದರೆ ಈ ತರಹ ದಾರುಣವಾಗಿ ಮೃತರಾಗುತ್ತಾರೆ. ತಮ್ಮನ್ನ ಹಿಂಸಿಕೊಂಡು ಸಾಯುವ ಸ್ಥಿತಿ ಈ ಕುಟುಂಬಕ್ಕೆ ಇರಲಿಲ್ಲ ಎಂದು ನನಗೆ ಅನಿಸುತ್ತೆ ಎಂದು ತಿಳಿಸಿದರು.

ಅರಳಸುರಳಿಯಲ್ಲೇ ಕಲ್ಲೊಣಿ ಎಂಬ ಗುಂಪು ಮನೆಗಳ ಮಧ್ಯೆ ಈ ಕೇಕುಡ ಎಂಬ ಬ್ರಾಹ್ಮಣ ಕುಟುಂಬ ವ್ಯವಸ್ಥಿತವಾಗಿ ಮೃತಪಟ್ಟಿರುವುದು ನೋಡಿ ಸ್ಥಳೀಯರಿಗೂ ಸಹ ಆತಂಕ ಸೃಷ್ಟಿಸಿದೆ. ಆಸ್ತಿ ಕಲಹ, ಹಣದ ಸಮಸ್ಯೆ ಯಾವುದೂ ಹೊರಜಗತ್ತಿಗೆ ಗೊತ್ತಿರದ ಕಾರಣ ಒಂಟಿ ಮನೆಯಲ್ಲಿನ ಘೋರ ದುರಂತಕ್ಕೆ ಜನ ಮರುಗಿದ್ದಾರೆ. ಅರ್ಚಕರಾಗಿಯೂ ಇದ್ದ ರಾಘವೇಂದ್ರ ಕಟ್ಟಿಗೆಗಳನ್ನ ಜೋಡಿಸಿ, ಸ್ವಯಂ ಚಿತೆ ಸಿದ್ಧ ಪಡಿಸಿಕೊಂಡಿದ್ದರಾ ಎಂಬ ಅನುಮಾನ ಮೂಡಿದೆ ಆದರೆ ಘಟನಾ ಸ್ಥಳವನ್ನ ಪೊಲೀಸರು ಆವರಿಸಿಕೊಂಡಿದ್ದು ಯಾವುದೇ ಮಾಹಿತಿ ಹೊರ ಬಾರದಂತೆ ನೋಡಿಕೊಂಡಿದ್ದಾರೆ.

ಬದುಕುಳಿದ ಭರತ್ ಪುನಃ ಅಗ್ನಿಯತ್ತ ಧಾವಿಸಿದ್ದನಾ..?

ಅರಳಸುರಳಿ ಗ್ರಾಮಸ್ಥ ರಂಗಪ್ಪ ಮಾತನಾಡಿ ತಾವು ಘಟನಾ ಸ್ಥಳಕ್ಕೆ ಬರುವವುದರೊಳಗೆ ಬೆಂಕಿ ಆವರಿಸಿಕೊಂಡಿತ್ತು. ಭರತ್‌ ಹೊರ ಬಿದ್ದಿದ್ದರು, ಅವರ ಮೈಮೇಲೆ ಬೆಂಕಿಯಿಂದ ಗಾಯಗಳಾಗಿದ್ದವು. ಅವನನ್ನ ಆಸ್ಪತ್ರೆಗೆ ದಾಖಲಿಸಿದ್ದೇವೆ ಎನ್ನುತ್ತಾರೆ. ಇನ್ನೊಬ್ಬ ಗ್ರಾಮಸ್ಥ ಸಂದೀಪ್‌ ಘಟನೆ ಕುರಿತು ಮಾತನಾಡಿ, ಚೀರಾಟ ಕೇಳಿ, ನೆರೆಮನೆಯ ಓರ್ವ ಮಹಿಳೆ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದಳು. ನಾವು ತಕ್ಷಣ ತೆರಳಿ ಮನೆಯ ಕೊಟ್ಟಿಗೆಯಲ್ಲಿದ್ದ ದನಕರುಗಳನ್ನ ಕುಣಿಕೆಯಿಂದ ಬಿಟ್ಟೆವು. ಗಾಯಾಳು ಭರತ್‌ ನನ್ನ ಆಸ್ಪತ್ರೆಗೆ ರವಾನೆ ಮಾಡಿಸಿದೆವು ಎನ್ನುತ್ತಾರೆ.

ಘಟನೆಯಲ್ಲಿ ಸದ್ಯ ಬದುಕುಳಿದಿರುವ ರಾಘವೇಂದ್ರ ಅವರ ಕಿರಿಯ ಪುತ್ರ ಭರತ್‌ ಪೊಲೀಸರಿಗೆ ಕೆಲ ಮಾಹಿತಿ ಹೇಳಿದ್ದಾನದರೂ ಸಹ ಆತನೂ ಜೀವನ್ಮರಣ ಹೋರಾಟ ನಡೆಸುತ್ತಿ‌ದ್ಧಾನೆ. ಸ್ಥಳೀಯರ ಪ್ರಕಾರ ಪೋಷಕರೊಂದಿಗೆ ಆತನೂ ಬೆಂಕಿ ಚಿತೆಯೊಳಗಿದ್ದ ಉರಿ ತಾಳದೇ ಹೊರ ಬಂದು ಅರಚಿದ್ಧಾನೆ. ಜನರನ್ನ ನೋಡಿದ ತಕ್ಷಣ ಪುನಃ ಬೆಂಕಿಯತ್ತ ಧಾವಿಸಲು ಮುಂದಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ-https://suddilive.in/archives/806

Related Articles

Leave a Reply

Your email address will not be published. Required fields are marked *

Back to top button