ಸ್ಥಳೀಯ ಸುದ್ದಿಗಳು

’ಎಲ್ಲವನ್ನೂ ಅನುಭವಿಸಿಯೇ ಬದುಕನ್ನು ಅರಿತುಕೊಳ್ಳಬೇಕಿಲ್ಲ-ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು

ಸುದ್ದಿಲೈವ್/ಶಿವಮೊಗ್ಗ

’ಎಲ್ಲವನ್ನೂ ಅನುಭವಿಸಿಯೇ ಬದುಕನ್ನು ಅರಿತುಕೊಳ್ಳಬೇಕಿಲ್ಲ. ಇನ್ನೊಬ್ಬರ ಜೀವನಾನುಭವ ಅರಿತು ಅದರಿಂದ ದೊರೆತ ಪಾಠ ಅಳವಡಿಸಿಕೊಂಡರೆ ಆರೋಗ್ಯಕರವಾಗಿ ಬದುಕಲು ಸಾಧ್ಯ‘ ಎಂದು ಸಿರಿಗೆರೆ ತರಳಬಾಳು ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಹೊನ್ನಾಳಿ ತಾಲ್ಲೂಕು ತೀರ್ಥರಾಮೇಶ್ವರದ ಡಿ.ತೀರ್ಥಲಿಂಗಪ್ಪ ಅಭಿನಂದನಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ’ತೀರ್ಥಗಿರಿ‘ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.

’ನಾವು ದುರ್ಬಲರಾದರೆ ದುಷ್ಟರು ತಲೆಯ ಮೇಲೆ ಕಾಲು ಇಡುತ್ತಾರೆ. ಪ್ರಬಲರಾದರೆ ಕಾಲು ತಿಕ್ಕುತ್ತಾರೆ ಎಂದು ನನಗೆ ಪಟ್ಟ ಕಟ್ಟಿದ ಮಾರನೇ ದಿನವೇ ಸಿರಿಗೆರೆ ಮಠದ ಹಿರಿಯ ಶ್ರೀಗಳು ಕಿವಿಮಾತು ಹೇಳಿದ್ದರು. ಅವರ ಅಗಿನ ಜೀವನಾನುಭವ ನಮಗೆ ಈಗ ಅಗುತ್ತಿದೆ. ಸಾರ್ವಜನಿನಕ ಬದುಕಿನಲ್ಲಿ ಟೀಕೆ–ಟಿಪ್ಪಣಿಗಳು ಅನಿವಾರ್ಯ. ವೈಯಕ್ತಿಕ ಬದುಕಿನಲ್ಲೂ ಟೀಕೆ–ಟಿಪ್ಪಣಿ ಮಾಡುವವರು ಇರುತ್ತಾರೆ. ಅದಕ್ಕೆ ಸೊಪ್ಪ ಹಾಕದೇ ಮುನ್ನಡೆಯಬೇಕು‘ ಎಂದರು.

ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರ ಆತ್ಮಕಥೆಯ ಭಾಗವನ್ನು ಉಲ್ಲೇಖಿಸಿದ ಸ್ವಾಮೀಜಿ, ’ನಮ್ಮನ್ನು ಚೆನ್ನಾಗಿ ಯಾರು ಬಲ್ಲರೋ ಅವರದ್ದೊಂದು ವರ್ಗ. ನಾವೇನು ಎಂದು ಗೊತ್ತಿದ್ದರೂ ಪೂರ್ವಾಗ್ರಹ ಪೀಡಿತರಾಗಿರುವವರದ್ದು ಎರಡನೇ ವರ್ಗ. ನಮ್ಮ ಬಗ್ಗೆ ಏನು ಗೊತ್ತಿರೊಲ್ಲ ಅಂತಹವರದ್ದು ಮೂರನೇ ವರ್ಗ.

’ನಮ್ಮ ಬಗ್ಗೆ ಚೆನ್ನಾಗಿ ಬಲ್ಲವರಿಗೆ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಬಗ್ಗೆ ಗೊತ್ತಿದ್ದರೂ ಪೂರ್ವಾನುಭವದಿಂದ ವರ್ತಿಸುವವರ ಬಗ್ಗೆ ಹೆಚ್ಚು ಆಲೋಚಿಸುವ ಅಗತ್ಯವಿಲ್ಲ. ಅವರಿಗೆ ಏನು ವಿವರಣೆ ಕೊಟ್ಟರೂ ಅವರು ತೃಪ್ತರಾಗುವುದಿಲ್ಲ. ಅದೇ ರೀತಿ ನಮ್ಮ ಬಗ್ಗೆ ಗೊತ್ತಿಲ್ಲದೇ ಮರೆಯಲ್ಲಿ ನಿಂದಿಸುವವರಿಗೂ ಪ್ರತಿ ನಿಂದನೆ ಮಾಡಬಾರದು. ಅವರ ನಿಂದನೆ ಕೇಳಿ ಸಂತೋಷ ಪಡಬೇಕು‘ ಎಂದು ಮಾರ್ಮಿಕವಾಗಿ ಹೇಳಿದರು.

’ಇನ್ನೊಬ್ಬರ ಒಳಿತಿಗೆ ಮಾಡಿಕೊಳ್ಳುವ ಕೋಪದಲ್ಲಿ ಸ್ವಾರ್ಥವಿರೊಲ್ಲ. ಅದು ಸಾತ್ವಿಕ ಕೋಪ. ಸ್ವತಃ ಬಸವಣ್ಣನವರಿಗೂ ಅಂತಹದ್ದೊಂದು ಕೋಪ ಇತ್ತು. ಆ ಅಭಿವ್ಯಕ್ತಿಗೆ ಜೀವನ ದರ್ಶನದಲ್ಲಿ ಮನ್ನಣೆಯೂ ಇದೆ. ಹಿರಿಯ ಗುರುಗಳ ಆಶಯದಂತೆ ಬಸವಣ್ಣನವರ ವಚನಗಳನ್ನು ಗೂಗಲ್‌ನಲ್ಲಿ ಅಳವಡಿಸಿ ವಿಶ್ವದಾದ್ಯಂತ ಹರಡುವ ಕಾರ್ಯ ಯಶಸ್ವಿಯಾಗಿ ನೆರವೇರಿಸಿದ ಭಾವ ನಮ್ಮದು‘ ಎಂದರು.

ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ’ವಯಸ್ಸು ಆಗುವುದಕ್ಕೆ ಶ್ರಮಪಡಬೇಕಿಲ್ಲ. ಬದಲಿಗೆ ಅದರ ಸಾರ್ಥಕತೆಗೆ ಪ್ರಯತ್ನಿಸಬೇಕು. ವಯಸ್ಸಿಗೆ ತಕ್ಕಂತೆ ವ್ಯಕ್ತಿತ್ವ ರೂಢಿಸಿಕೊಂಡರೆ ಅದಕ್ಕೆ ಬೆಲೆ ಬರುತ್ತದೆ. ಹಿರಿಯರ ಬದುಕನ್ನು ಇಂದಿನ ಪೀಳಿಗೆ ಗಂಭೀರವಾಗಿ ಅವಲೋಕಿಸಿ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕು‘ ಎಂದು ಸಲಹೆ ನೀಡಿದರು.

ಶಿವಮೊಗ್ಗ ಬಸವಕೇಂದ್ರದ ಅಧ್ಯಕ್ಷರಾದ ಡಾ.ಬಸವಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಪ್ರಕೃತಿಯ ಜೊತೆ ನಮ್ಮ ಬಾಂಧವ್ಯ ಕಳೆದುಕೊಳ್ಳದೇ ಬದುಕಬೇಕು. ವೈಯಕ್ತಿಕ ಬದುಕಿನ ಜೊತೆ ಸಾಮಾಜಿಕ ಬದುಕನ್ನು ಅಭ್ಯುದಗೊಳಿಸುವ ಕೆಲಸ ಹಿರಿತನಕ್ಕೆ ಹೊಳಪು ನೀಡುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕ ಆಯನೂರು ಮಂಜುನಾಥ್, ಸಾಧು–ಸದ್ದರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಡಿ.ತೀರ್ಥಲಿಂಗಪ್ಪ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ವೇದಿಕೆಯಲ್ಲಿ ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಡಿ.ತೀರ್ಥಲಿಂಗಪ್ಪ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್, ಶಿವಮೊಗ್ಗದ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್. ಪದವೀಧರ ಸಹಕಾರ ಸಂಘದ ಅಧ್ಯಕ್ಷ ಎಸ್.‍ಪಿ.ದಿನೇಶ್, ಸಾಹಿತಿ ಕತ್ತಿಗೆ ಚನ್ನಪ್ಪ, ಗದ್ದಿಗೇಶ, ಪ್ರಾಚಾರ್ಯ ಡಾ.ಧನಂಜಯ, ಡಿ.ಟಿ.ರಾಜೇಂದ್ರ, ಡಿ.ಟಿ.ಸುರೇಶ್ ಹಾಜರಿದ್ದರು.

ಶಿವಮೊಗ್ಗದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ’ತೀರ್ಥಗಿರಿ‘ ಅಭಿನಂದನಾ ಗ್ರಂಥವನ್ನು ಸಿರಿಗೆರೆ ತರಳಬಾಳು ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬಸವಕೇಂದ್ರದ ಡಾ.ಬಸವ ಮರಳುಸಿದ್ಧ ಸ್ವಾಮೀಜಿ ಬಿಡುಗಡೆ ಮಾಡಿದರು.

ಇದನ್ನೂ ಓದಿ-https://suddilive.in/archives/5845

Related Articles

Leave a Reply

Your email address will not be published. Required fields are marked *

Back to top button