ಸ್ಥಳೀಯ ಸುದ್ದಿಗಳು

ಹೆದ್ದಾರಿ ದಾಟದ ಆನೆಗಳನ್ನ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಯಿಂದ ಅವಿರತ ಪ್ರಯತ್ನ

ಶಿಕಾರಿಪುರ/ ಸಾಗರ

ನೀರು, ಆಹಾರ ಅರಸಿ ಶೆಟ್ಟಿಹಳ್ಳಿ ಅಭಯಾರಣ್ಯದಿಂದ ದಾಟಿ ಅರಸಾಳು, ಚೊರಡಿ ವಲಯದ ಮೂಲಕ ಅಂಬ್ಳಿಗೋಳ ಅರಣ್ಯ ವಲಯಕ್ಕೆ ದಾಟಿರುವ ಕಾಡಾನೆಗಳನ್ನ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಸತತ ಪ್ರಯತ್ನ ಪಟ್ಟಿದ್ದಾರೆ. ಆದರೂ ಸಹ ಅವುಗಳು ಬಂದ ಹಾದಿ ಅರ್ಧವೂ ಕ್ರಮಿಸದೇ, ಹೆದ್ದಾರಿ ದಾಟದೇ ಚಿಂತೆಗೀಡುಮಾಡಿವೆ.

ಈ ಬಗ್ಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಅಂಬ್ಳಿಗೋಳ ಆರ್ ಎಫ್ ಓ ಮಾಧವ ಮಾತನಾಡಿ, ಕಳೆದ ಶುಕ್ರವಾರ ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಆನೆಗಳು ಈಚೆ ಕಡೆ ದಾಟಿದ್ದವು. ಅರಸಾಳು ಹಾಗೂ ಚೊರಡಿ ಅರಣ್ಯ ವಲಯಗಳನ್ನು ಹಾದು ಅಂಬ್ಳಿಗೋಳ ವಲಯಕ್ಕೆ ಲಗ್ಗೆ ಇಟ್ಟಿವೆ. ಶುಕ್ರವಾರ ರಾತ್ರಿ ಈ ಬಗ್ಗೆ ನಮಗೆ ಸಂದೇಶ ಬಂತು. ಜೋಡನಾಳ ಕಲ್ಲೊಡ್ಡು, ಈ ಭಾಗದಲ್ಲಿ ಆನೆಗಳಿರುವುದು ಗೊತ್ತಾಯ್ತು. ಸಿಬ್ಬಂದಿ ಕರೆದುಕೊಂಡು ನಾವು ಕಾರ್ಯಾಚರಣೆಗೆ ತೊಡಗಿದ್ದೇವೆ. ಆದರೆ ಅಂದು ಆನೆಗಳು ನಮಗೆ ಕಾಣಲಿಲ್ಲ. ಮರುದಿನ ಶನಿವಾರ ಮಧ್ಯಾಹ್ನ ಅಂಬ್ಳಿಗೊಳ ವಲಯದ ಎರೆಕೊಪ್ಪ ಹಾಗೂ ಗೊಬ್ಬರಹೊಂಡ ಭಾಗದಲ್ಲಿ ಬೆಳೆಹಾನಿ ಮಾಡಿರುವುದು ಕಂಡು ಬಂತು.

ಕಾಡಿನಲ್ಲಿ ಯಥೇಚ್ಛವಾಗಿ ಬಿದಿರು ಬೆಳೆದುಕೊಂಡಿರುವುದರಿಂದ ಹಾಗೂ ಅಲ್ಲಲ್ಲಿ ಗುಂಡಿಗಳು ಅದರೊಳಗೆ ನೀರು ಇರುತ್ತಿರುವುದರಿಂದ ಆನೆಗಳು ಈ ಕಡೆ ಬಂದಿವೆ. ನಮಗೆ ಅವುಗಳನ್ನು ಹುಡುಕುವುದು ಕಷ್ಟವಾಗಿತ್ತು. ನಮ್ಮ ಡಿಎಫ್ಓ ಸಂತೋಷ್ ಕೆಂಚಪ್ಪನವರ್ ನಾಲ್ಕೈದು ತಂಡಗಳನ್ನ ಮಾಡಿದ್ದಾರೆ. ಶಿಕಾರಿಪುರ ಹಾಗೂ ಚೋರಡಿ ರೇಂಜ್ ಸಿಬ್ಬಂದಿ ಕರೆದುಕೊಂಡು ಕಾರ್ಯಾಚರಣೆ ಮಾಡುತ್ತಿದ್ದೇವೆ.

ನಾವು ದಿನವಿಡೀ ಕಾರ್ಯಾಚರಣೆ ಮಾಡಿ ಆ ಕಡೆ ಆನೆಗಳನ್ನ ಅಟ್ಟಿದರೆ ಪುನಃ ರಾತ್ರಿ ಅದೇ ಸ್ಥಳಕ್ಕೆ ಬಂದು ನಿಲ್ಲುತ್ತಿವೆ. ಪುನಃ ಕಲ್ಲೊಡ್ಡು ಭಾಗಕ್ಕೆ ತಂದು ಅಟ್ಟಿದ್ದೇವೆ. ಇನ್ನೆರಡು ದಿನಗಳಲ್ಲಿ ಆಚೆ ಕಾಡು ಸೇರುವ ನಿರೀಕ್ಷೆ ಇದೆ ಎಂದರು.

ಇದನ್ನೂ ಓದಿ-https://suddilive.in/archives/4846

Related Articles

Leave a Reply

Your email address will not be published. Required fields are marked *

Back to top button