ಸ್ಥಳೀಯ ಸುದ್ದಿಗಳು

ಕಟ್ಟಡ ಕಟ್ಟಿಕೊಡುವ ಮೇಸ್ತ್ರಿ, ಇಂಜಿನಿಯರ್ ಗೆ ಎಚ್ಚರ! ಕೈಕೊಟ್ಟ್ರೆ ಬೀಳುತ್ತೆ ದಂಡ

ಸುದ್ದಿಲೈವ್/ಶಿವಮೊಗ್ಗ

ಅರ್ಜಿದಾರರಾದ ವಿಜಯಕುಮಾರಿ ಅವರು ಬಾಲಾಜಿ ಬಿಲ್ಡಿಂಗ್ ಕಂಟ್ರಾಕ್ಟರ್ ವಿರುದ್ದ ಸೇವಾನ್ಯೂನ್ಯತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದಾಖಲಿಸಿದ್ದ ಪ್ರಕರಣದಲ್ಲಿ ಆಯೋಗವು ಎದುರುದಾರರ ಸೇವಾನ್ಯೂನ್ಯತೆಯನ್ನು ಪರಿಗಣಿಸಿ ಅರ್ಜಿದಾರರಿಗೆ ಪರಿಹಾರ ನಿಡುವಂತೆ ಆದೇಶಿಸಿದೆ.

ಅರ್ಜಿದಾರರಾದ ವಿಜಯಕುಮಾರಿ ಶಿವಮೊಗ್ಗದ ಪಂಚವಟಿ ಕಾಲೋನಿಯ ವಾಸಿಯಾಗಿದ್ದು ತ್ಯಾವರೆಚಟ್ನಹಳ್ಳಿಯಲ್ಲಿರುವ ತಮ್ಮ 30*40 ಅಡಿ ಖಾಲಿ ನಿವೇಶನದಲ್ಲಿ ಮನೆ ನಿರ್ಮಿಸುವ ಉದ್ದೇಶದಿಂದ ಎದುರುದಾರರೊಂದಿಗೆ ಒಪ್ಪಂದ ಮಾಡಿಕೊಂಡು ರೂ.5,70,000/- ಗಳನ್ನು ಮುಂಗಡವಾಗಿ ಸಂದಾಯ ಮಾಡಿರುತ್ತಾರೆ.

ಆದರೆ ಎದುರುದಾರರು ಸೂಕ್ತ ಕಾರಣಗಳನ್ನು ನೀಡದೇ ಮನೆ ನಿರ್ಮಾಣ ಕಾರ್ಯವನ್ನು ಒಪ್ಪಂದದ ಪ್ರಕಾರ ಪೂರ್ತಿಗೊಳಿಸಲು ಸಾಧ್ಯವಿಲ್ಲ, ಬೇರೆ ವ್ಯಕ್ತಿಗಳ ಸಹಾಯದಿಂದ ತಾವು ಬಾಕಿ ಉಳಿದ ಕಟ್ಟಡ ನಿರ್ಮಾಣ ಕಾರ್ಯವನ್ನು ಪೂರ್ತಿಗೊಳಿಸಿಕೊಳ್ಳಬಹುದು ಮತ್ತು ಹೆಚ್ಚುವರಿಯಾಗಿ ಪಡೆದ ಹಣವನ್ನು ಮರುಪಾವತಿಸುವುದಾಗಿ ತಿಳಿಸಿರುತ್ತಾರೆ.

ಅರ್ಜಿದಾರರು ಬೇರೆ ಇಂಜಿನಿಯರ್ ಸಹಾಯದಿಂದ ಖರ್ಚಿನ ಅಂದಾಜು ಪಟ್ಟಿ ತಯಾರಿಸಿ ನೋಡಲಾಗಿ ಎದುರುದಾರರು ರೂ.1,58,550 ಹೆಚ್ಚುವರಿಯಾಗಿ ಪಡೆದಿರುವುದು ಕಂಡು ಬಂದಿದ್ದು ಈ ಹಣವನ್ನು ಮರುಪಾವತಿಸುವಂತೆ ಸಾಕಷ್ಟು ಬಾರಿ ವಿನಂತಿಸಿದಾಗ್ಯೂ ಹಣ ಮರುಪಾವತಿಸುವಲ್ಲಿ ಎದುರುದಾರರು ನಿರ್ಲಕ್ಷ್ಯ ತೋರಿದ ಹಿನ್ನೆಲೆ ಪ್ರಕರಣ ದಾಖಲಿಸಿರುತ್ತಾರೆ.

ಆಯೋಗವು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ, ಅರ್ಜಿದಾರರು ಸಲ್ಲಿಸಿದ ದಾಖಲೆಗಳು ಮತ್ತು ಸಾಕ್ಷ್ಯ ವಿಚಾರಣೆ ವಿವರದ ಆಧಾರದ ಮೇಲೆ ಎದುರುದಾರರಿಂದ ಸೇವಾನ್ಯೂನ್ಯತೆ ಆಗಿರುತ್ತದೆ ಎಂದು ಪರಿಗಣಿಸಿ, ಅರ್ಜಿದಾರರಿಗೆ ಎದುರುದಾರರು ಹೆಚ್ಚುವರಿಯಾಗಿ ಪಡೆದಂತಹ ರೂ.1,58,550 ಗಳನ್ನು ಶೇ.9 ವಾರ್ಷಿಕ ಬಡ್ಡಿ ಸಮೇತ ಹಿಂತಿರುಗಿಸಬೇಕು ಮತ್ತು ರೂ.5000 ಮಾನಸಿಕ ಹಿಂಸೆ ಮತ್ತು ಹಾನಿಗೆ ಪರಿಹಾರವಾಗಿ ಹಾಗೂ ರೂ.10,000 ಗಳನ್ನು ವ್ಯಾಜ್ಯ ಅಥವಾ ಖರ್ಚುವೆಚ್ಚಗಳ ಮೊತ್ತವಾಗಿ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸಬೇಕೆಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಇವರ ಪೀಠವು ಮಾ.15 ರಂದು ಆದೇಶಿಸಿದೆ.

ಇದನ್ನೂ ಓದಿ-https://suddilive.in/archives/11222

Related Articles

Leave a Reply

Your email address will not be published. Required fields are marked *

Back to top button