ಸ್ಥಳೀಯ ಸುದ್ದಿಗಳು

ದೇವರ ಹುಂಡಿ ಮೇಲೆ ಬಿಜೆಪಿ ಕಾಕದೃಷ್ಟಿ: ಆರ್. ಮೋಹನ್ ಆರೋಪ

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಮತ್ತು ಮಾಜಿ ಉಪ ಮುಖ್ಯಮಂತ್ರಿಕೆ.ಎಸ್. ಈಶ್ವರಪ್ಪನವರು ಹಿಂದು ಧರ್ಮ ಹಾಗೂ ದೇವಸ್ಥಾನಗಳನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಿದ್ದಾರೆ. ಅಯೋಧ್ಯ, ಈದ್ಗಾ ಮೈದಾನ, ಬಾಬಾ ಬುಡನ್‌ಗಿರಿಯಂತೆ ಶಬರಿಮಲೆಯಲ್ಲಿ ಜನರ ಧಾರ್ಮಿಕ ಭಾವನೆ ಕೆರಳಿಸಿ ವಿವಾದದ ಕೇಂದ್ರವನ್ನಾಗಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರು, ಕೆಪಿಸಿಸಿ ಸಂಯೋಜಕರಾದ ಆರ್. ಮೋಹನ್ ಆರೋಪಿಸಿದ್ದಾರೆ.

ಶಬರಿಮಲೆ ಯಾತ್ರಿಕರಿಗೆ ಮೂಲ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯ. ಆದರೆ ಇದರ ನೆಪದಲ್ಲಿ ಕೇರಳದ ಶಬರಿಮಲೆಯಲ್ಲಿ ದೊಡ್ಡ ಆಂದೋಲನ ನಡೆಸಲಾಗುವುದು ಎಂದು ಕೆ.ಎಸ್. ಈಶ್ವರಪ್ಪ ಹೇಳುವ ಮೂಲಕ ಇದನ್ನೊಂದು ವಿವಾದದ ಕೇಂದ್ರವನ್ನಾಗಿಸುವ ಸೂಚನೆ ನೀಡಿದ್ದಾರೆ. ಕೇರಳ ಸರ್ಕಾರವು ದೇವಸ್ಥಾನದ ಆದಾಯದಿಂದ ಸಂಪನ್ಮೂಲ ಕ್ರೋಢೀಕರಿಸಿ ಅಭಿವೃದ್ಧಿ ನಡೆಸುತ್ತಿದೆ. ಆದರೆ ಅಲ್ಲಿನ ಸರ್ಕಾರವನ್ನು ಗುರಿಯಾಗಿಸಿಕೊಂಡು ಆರೋಪ ಮಾಡುವುದು ಸರಿಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯದ ನಡುವೆ ಸಮನ್ವಯತೆ ಅತ್ಯಗತ್ಯ.ದುರುದ್ದೇಶದಿಂದ ಕೇಂದ್ರವು ರಾಜ್ಯದ ಆಡಳಿತದಲ್ಲಿ ಮೂಗು ತೂರಿಸಬಾರದು ಎಂದು ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಈಶ್ವರಪ್ಪ ಒತ್ತಾಯಿಸಿರುವುದು ಖಂಡನೀಯ. ಈ ದೇವಸ್ಥಾನಕ್ಕೆ ವಾರ್ಷಿಕ 350 ಕೋಟಿ ರೂ.ಗೂ ಅಧಿಕ ಆದಾಯವಿದೆ. ಇದರಿಂದಾಗಿ ಬಿಜೆಪಿ ದೇವರ ಹುಂಡಿ ಮೇಲೆ ಕಾಕದೃಷ್ಟಿ ಬೀರಿದೆ. ಮುಂಬರುವ ದಿನಗಳಲ್ಲಿ ತಿರುಪತಿ, ಧರ್ಮಸ್ಥಳದಂತಹ ಅಧಿಕ ಆದಾಯವಿರುವ ದೇವಸ್ಥಾನಗಳ ಮೇಲೂ ಬಿಜೆಪಿ ಕಣ್ಣು ಹಾಕಿದಲ್ಲಿ ಆಶ್ಚರ್ಯವಿಲ್ಲ.

ರಥಯಾತ್ರೆ, ಕೋಮುಗಲಭೆ, ಶಾಂತಿಯುತ ಧಾರ್ಮಿಕ ಕೇಂದ್ರಗಳನ್ನು ವಿವಾದದ ಕೇಂದ್ರವನ್ನಾಗಿಸುವ ಮೂಲಕ ಹಿಂದುಗಳ ರಕ್ತವನ್ನು ನೆಲಕ್ಕೆ ಚೆಲ್ಲಿ ಅಧಿಕಾರಕ್ಕೆ ಹಪಹಪಿಸುವುದು ಬಿಜೆಪಿ ಹಾಗೂ ಈ ಪಕ್ಷದ ಈಶ್ವರಪ್ಪನವರಂತಹ ರಾಜಕಾರಣಿಗಳ ಕುತ್ಸಿತ ಮನೋಭಾವವಾಗಿದೆ. ವಾಸ್ತವವನ್ನು ತಿರುಚುವುದು, ಮರೆ ಮಾಚುವುದು, ಸುಳ್ಳನ್ನೇ ಸತ್ಯವೆಂದು ಬಿಂಬಿಸುವುದು, ಜನರ ಭಾವನೆ ಕೆರಳಿಸಿ ರಾಜಕೀಯ ಲಾಭ ಪಡೆಯುವುದು, ಅಧಿಕಾರ ಹಿಡಿಯುವುದೇ ಬಿಜೆಪಿಯ ಅಜೆಂಡಾ ಆಗಿದೆ ಎಂದು ದೂರಿದ್ದಾರೆ.

ನೂತನ ಸಂಸತ್ ಭವನದಲ್ಲಿ ದುಷ್ಕರ್ಮಿಗಳು ಬಿಗಿ ಭದ್ರತೆ ಭೇದಿಸಿ ಹೊಗೆ ಬಾಂಬ್ ಸಿಡಿಸುವ ಮೂಲಕ ದೇಶದ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಹ ಸನ್ನಿವೇಶವನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ. ಇಂತಹ ವೈಫಲ್ಯ, ದೇಶದ ಅಭಿವೃದ್ಧಿ ಬಗ್ಗೆ ಈಶ್ವರಪ್ಪನವರು ಚಕಾರವೆತ್ತುವುದಿಲ್ಲ. ಪ್ರಚಾರ ಹಾಗೂ ಪಕ್ಷದಲ್ಲಿ ಮೂಲೆ ಗುಂಪಾಗಿ ಬಿಡಬಹುದೆಂದು ಭಾವಿಸಿ ತನ್ನ ಅಸ್ತಿತ್ವಕ್ಕಾಗಿ ವಿವಾದಾತ್ಮಕ ಹೇಳಿಕೆ ನೀಡುವುದಷ್ಟೇ ಇವರ ರಾಜಕೀಯ ಉದ್ದೇಶವಾಗಿದೆ. ಇವರಿಗೆ ಕಿಂಚಿತ್ತೂ ಜನರ ಹಿತಾಸಕ್ತಿ ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿರು.

ಮುಖ್ಯಮಂತ್ರಿಯವರು ರಾಜ್ಯದ ನೀರಾವರಿ ಯೋಜನೆ, ಬಾಕಿ ಇರುವ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ, ಅನುದಾನ ಮತ್ತಿತರೆ ಕಾರಣಕ್ಕಾಗಿ ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ಸಿದ್ದರಿದ್ದರೂ ಪ್ರಧಾನಿಯವರು ಸಮಯವನ್ನೇ ನೀಡುತ್ತಿಲ್ಲ ಎಂದು ಸ್ವತಃ ಸಿದ್ದರಾಮಯ್ಯನವರೇ ಬೆಳಗಾವಿ ಅಧಿವೇಶನದಲ್ಲಿ ಹೇಳಿರುವುದು ಕೇಂದ್ರದ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ.

ಈಶ್ವರಪ್ಪನವರಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ. ಇದರಿಂದಲಾದರೂ ಇನ್ನಾದರೂ ಅವರ ಮನೋಭಾವ ಬದಲಾಗಲಿ. ಅವರು ಉದ್ರೇಕಕಾರಿ, ಉಪದ್ರವಕಾರಿ, ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಆರ್. ಮೋಹನ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4941

Related Articles

Leave a Reply

Your email address will not be published. Required fields are marked *

Back to top button