ಆಗುಂಬೆಯಲ್ಲಿ ತಪ್ಪಿದ ಭಾರಿ ದುರಂತ

ಸುದ್ದಿಲೈವ್/ಆಗುಂಬೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಘಾಟಿಯಲ್ಲಿ ಸಂಭವಿಸಬಹುದಾಗಿದ್ದ ಬಹುದೊಡ್ಡ ದುರಂತವೊಂದು ಅದೃಷ್ಟವಶಾತ್ ತಪ್ಪಿದೆ. ಶಾಲೆ ಮಕ್ಕಳು ಸೇರಿದಂತೆ 30 ಮಂದಿಯಿದ್ದ ಸ್ಕೂಲ್ ಬಸ್ವೊಂದು ಆಗುಂಬೆಯ ಘಾಟಿ ತಿರುವಿಗೆ ಡಿಕ್ಕಿ ಹೊಡೆದು ಅರ್ಧ ಮುಂದಕ್ಕೆ ಹೋಗಿದೆ. ಅಲ್ಲಿಯೇ ಬಸ್ ನಿಂತಿದ್ದರಿಂದ ಯಾರಿಗೂ ಅಪಾಯವಾಗಲಿಲ್ಲ. ಹಾಗೊಂದು ವೇಳೆ ಬಸ್ ಕೆಳಕ್ಕೆ ಬಿದ್ದಿದ್ದರೇ ಪರಿಣಾಮ ಹೇಳತೀರದಂತಾಗುತ್ತಿತ್ತು.
ಬೆಂಗಳೂರಿಂದ ಪ್ರವಾಸ ಬಂದಿದ್ದ ಶಾಲಾ ವಾಹನವೊಂದು ಶೃಂಗೇರಿಯಿಂದ ಕೊಲ್ಲೂರಿಗೆ ಹೋಗುತ್ತಿತ್ತು. ಈ ಮಾರ್ಗದಲ್ಲಿ ಆಗುಂಬೆ ಘಾಟಿಯ ಮೊದಲ ಕ್ರಾಸಿನಲ್ಲಿ ಅಪಘಾತವಾಗಿದೆ. ಆಗುಂಬೆ ಘಾಟಿಯ ಸೂರ್ಯಾಸ್ತಮಾನ ಜಾಗಕ್ಕೂ ಮೊದಲು ಸಿಗುವ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಸ್ಕೂಲ್ ಬಸ್, ಆಗುಂಬೆ ಗೇಟ್ ದಾಟಿಕೊಂಡು ಮುಂದಕ್ಕೆ ಸಾಗಿದೆ. ಅಲ್ಲಿಂದ ತಿರುವಿನಲ್ಲಿ ವೇಗವಾಗಿದ್ದರಿಂದ ಬಸ್ ಕಂಟ್ರೋಲ್ಗೆ ಸಿಗದೇ ತಿರುವಿನಂಚಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಬಸ್ನ ಅರ್ಧ ಭಾಗ ಮುಂದಕ್ಕೆ ಹೋಗಿ ನಿಂತಿದೆ.
ಇನ್ನೂ ಘಟನೆ ಬೆನ್ನಲ್ಲೆ ಅಲ್ಲಿದ್ದವರೆಲ್ಲಾ ಬಸ್ನಲ್ಲಿರುವವರನ್ನ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ. ಅಲ್ಲದೆ ನಡೆದ ಘಟನೆಯನ್ನು ನೆನೆದು ಸಣ್ಣದರಲ್ಲಿ ಆಯ್ತು ದೇವರು ದೊಡ್ಡವನು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ-https://suddilive.in/archives/2016
