ರಾಜಕೀಯ ಸುದ್ದಿಗಳು

ಪ್ರಜ್ವಲ್ ಪ್ರಕರಣ – ಎಸ್.ಐ.ಟಿ. ಬದಲು ಸಿಬಿಐ ನಡೆಸಲಿ – ಆರಗ ಜ್ಞಾನೇಂದ್ರ

ಸುದ್ದಿಲೈವ್/ಶಿವಮೊಗ್ಗ

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್‍ಐಟಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಎಸ್‍ಐಟಿಯಲ್ಲಿ ಒಳ್ಳೆಯ ಅಧಿಕಾರಿಗಳಿದ್ದಾರೆ. ಆದರೆ ಅವರಿಗೆ ಫ್ರೀ ಹ್ಯಾಂಡ್ ಕೊಟ್ಟಿಲ್ಲ. ಸಿಎಂ, ಡಿಸಿಎಂ ಹೇಳಿದ ಹಾಗೆ ಅವರು ಒತ್ತಡಕ್ಕೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತ ಮಹಿಳೆಯರ ಮಾನ ಹರಾಜಾಕುವ ಕೆಲಸ ಮಾಡುತ್ತಿದ್ದಾರೆ.

ಇದು ಹಳೆಯ ಪ್ರಕರಣ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಇದ್ದಾಗಲೇ ಈಗಿನ ಸಿಎಂ, ಡಿಸಿಎಂಗೆ ಅರಿವಿತ್ತು. ಆಗ ಸುಮ್ಮನಿದ್ದ ಇವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎನ್.ಡಿ.ಎ. ಮೈತ್ರಿಕೂಟಕ್ಕೆ ಹಾನಿ ಮಾಡುವ ಉದ್ದೇಶದಿಂದ ಚುನಾವಣೆಯ ಮುನ್ನಾ ದಿನ ಸಾವಿರಾರು ಪೆನ್‍ಡ್ರೈವ್ ಗಳನ್ನು ಹಂಚಿ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ದೂರಿದ್ದಾರೆ.

ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಮಾಡಿದ ಅಪರಾಧಿಯನ್ನು ಬೆಂಬಲಿಸುವುದಿಲ್ಲ. ಅವರಿಗೆ ಶಿಕ್ಷೆಯಾಗಲೇಬೇಕು. ಅಮಿತ್ ಶಾ ಮತ್ತು ನರೇಂದ್ರ ಮೋದಿ ಕೂಡ ಇದೇ ಮಾತು ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಇಳಿ ವಯಸ್ಸಿನಲ್ಲಿ ಅವರ ಘನತೆ ಗೌರವ ಕುಗ್ಗಿಸಲು ಸಿಎಂ, ಡಿಸಿಎಂ ಸೇರಿ ಷಡ್ಯಂತ್ರ ಮಾಡಿದ್ದಾರೆ. ಅವರಿಗೆ ಮಾನಸಿಕವಾಗಿ ನೋವುಂಟು ಮಾಡಿದ್ದಾರೆ ಎಂದಿದ್ದಾರೆ.

ಈ ಪ್ರಕರಣದ ಹಿಂದೆ ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದಾರೆ. ನೈಜ ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ. ಪೆನ್ ಡ್ರೈವ್ ಹಂಚುವುದು ಮತ್ತು ಮಹಿಳೆಯರ ಬಗ್ಗೆ ಅಪಪ್ರಚಾರ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ. ಮಲೇಷ್ಯಾದಲ್ಲಿ ಪೆನ್ ಡ್ರೈವ್ ಗಳು ತಯಾರಾಗಿವೆ ಎಂಬ ಮಾತು ಕೇಳಿ ಬರುತ್ತಿದ್ದು, ಈ ಪ್ರಕರಣದ ಕಬಂಧಬಾಹುಗಳು ದೇಶ ವಿದೇಶಗಳಲ್ಲಿ ಹರಡಿರುವುದರಿಂದ ಮತ್ತು ಇದೊಂದು ಅತ್ಯಂತ ದೊಡ್ಡ ಪ್ರಕರಣವಾಗಿರುವುದರಿಂದ ಕೂಡಲೇ ಸಿಬಿಐಗೆ ಒಪ್ಪಿಸುವುದು ಸೂಕ್ತ ಎಂದಿದ್ದಾರೆ.

ವಕೀಲ ದೇವರಾಜೇಗೌಡ ಅವರು ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷಕರಿಗೆ ಬರೆದ ಪತ್ರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಕಾಂಗ್ರೆಸ್ ನವರಿಗೆ ಈ ವಿಚಾರ ಮೊದಲೇ ತಿಳಿದಿತ್ತು ಎಂಬ ಮಾಹಿತಿ ಇದೆ. ನಾಲ್ಕು ವರ್ಷ ಸುಮ್ಮನಿದ್ದು ಈಗ ಯಾಕೆ ಬಿಡುಗಡೆಗೊಳಿಸಿದರು ಎಂಬುದು ಪ್ರಶ್ನೆ. ಒಕ್ಕಲಿಗರ ನಾಯಕತ್ವದ ಹಿನ್ನಲೆಯಲ್ಲಿ ಕೂಡ ಈ ರೀತಿಯ ಒಂದು ಆಟ ಆಡಿದ್ದಾರೆ. ಪ್ರಕರಣ ಗಂಭೀರವಾಗಿದ್ದು, ಸರ್ಕಾರ ಪಾರದರ್ಶಕ ತನಿಖೆ ನಡೆಸಬೇಕು. ಅಪರಾಧಿಗಳು ಎಷ್ಟೇ ಪ್ರಭಾವಿಗಳಿದ್ದರೂ ಶಿಕ್ಷಗೊಳಪಡಿಸಬೇಕು ಎಂದರು.

ಇದನ್ನೂ ಓದಿ-https://suddilive.in/archives/14463

Related Articles

Leave a Reply

Your email address will not be published. Required fields are marked *

Back to top button