ರಾಜಕೀಯ ಸುದ್ದಿಗಳು

ಸರಕಾರದ ನಿರ್ಲಕ್ಷ್ಯದಿಂದ ಮಂಗನಕಾಯಿಲೆಗೆ ಇಬ್ಬರು ಬಲಿ-ಅಶೋಕ್ ಆಕ್ರೋಶ

ನವೆಂಬರ್ ತಿಂಗಳಲ್ಲೇ ರೋಗ ಕಾಣಿಸಿಕೊಂಡರೂ ಸೂಕ್ತ ಕ್ರಮ ಕೈಗೊಳ್ಳದಿದ್ದರಿಂದ ಪರಿಸ್ಥಿತಿ ಗಂಭೀರ ; ಪ್ರತಿದಿನ ಹತ್ತು – ಹದಿನೈದು ಮಂದಿಯಲ್ಲಿ ರೋಗ ಲಕ್ಷಣ, ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿರುವ ರೋಗದ ನಿಯಂತ್ರಣಕ್ಕೆ ಸಮರೋಪಾದಿ ಕ್ರಮ ಅಗತ್ಯ

ದೀರ್ಘ ಕಾಲ ಕಾರ್ಯ ನಿರ್ವಹಿಸುವ ಲಸಿಕೆ ಉತ್ಪಾದನೆ ಕುರಿತು ಔಷಧ ಕಂಪನಿಗಳ ಜತೆ ಮಾತುಕತೆ ನಡೆಸಲು ಆಗ್ರಹ

ಸುದ್ದಿಲೈವ್/ಬೆಂಗಳೂರು

ಸರಕಾರದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದ ಮಂಗನಕಾಯಿಲೆಗೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್- ಕೆಎಫ್ಡಿ)ಇಬ್ಬರು ಬಲಿಯಾಗಿದ್ದು ಮಲೆನಾಡು ಜಿಲ್ಲೆಗಳಲ್ಲಿ ರೋಗ ವ್ಯಾಪಕವಾಗಿ ಹರಡುತ್ತಿದ್ದು ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಕಳೆದ ನವೆಂಬರ್ ತಿಂಗಳಿನಲ್ಲೇ ಮಲೆನಾಡು ಭಾಗದ ಅಲ್ಲಲ್ಲಿ ಕಾಯಿಲೆ ಕಾಣಿಸಿಕೊಂಡ ಬಗ್ಗೆ ವರದಿಯಾಗಿತ್ತು. ಮಾಧ್ಯಮಗಳಲ್ಲೂ ಈ ಕುರಿತು ಸುದ್ದಿ ಪ್ರಕಟವಾದರೂ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈಫಲ್ಯವೇ ಕಾಯಿಲೆ ವ್ಯಾಪಕವಾಗಿ ಹರಡಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಗ ಹರಡುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಮತ್ತು ಎರಡು ಸಾವು ಸಂಭವಿಸಿದ ಬಳಿಕ ಸುದೀರ್ಘ ನಿದ್ದೆಯಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿತು. ಆ ಬಳಿಕವಷ್ಟೇ ಹಿರಿಯ ಅಧಿಕಾರಿಗಳು ಶಿವಮೊಗ್ಗಕ್ಕೆ ಧಾವಿಸಿ ಸಭೆ ನಡೆಸುವ ಶಾಸ್ತ್ರ ಮಾಡಿದ್ದಾರೆ ಎರಡು ತಿಂಗಳ ಮೊದಲೇ ಎಚ್ಚೆತ್ತುಕೊಂಡಿದ್ದಿದ್ದರೆ ಅಮಾಯಕ ಜೀವಗಳನ್ನು ಉಳಿಸಿಕೊಳ್ಳಬಹುದಿತ್ತು ಎಂದು ಪತ್ರಿಕಾ ಹೇಳಿಕೆಯಲ್ಲಿ ಇಲಾಖೆ ಕಾರ್ಯವೈಖರಿಗೆ ಕಿಡಿಕಾರಿದ್ದಾರೆ.

ಶಿವಮೊಗ್ಗ, ಉತ್ತರಕನ್ನಡ, ದಕ್ಷಿಣಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಮತ್ತು ಬೆಳಗಾವಿಯ ಕೆಲ ಪ್ರದೇಶಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಮಂಗನಕಾಯಿಲೆ ಕಾಣಿಸಿಕೊಳ್ಳುವುದು ವಾಡಿಕೆ. ಕಳೆದ 66 ವರ್ಷಗಳಿಂದ ಈ ರೋಗ ಕಾಡುತ್ತಿದೆ. ಇದು ಗೊತ್ತಿದ್ದರೂ ಇಲಾಖೆ ಕಾಲಾಹರಣ ಮಾಡಿದೆ. ಇದರಿಂದಾಗಿಯೇ ಇವತ್ತು ಆತಂಕಕಾರಿ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಅರಮನೆ ಕೊಪ್ಪದ ಯುವತಿ ಅನನ್ಯ(18) ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಧರೇಕೊಪ್ಪಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕ ಸುಬ್ಬಯ್ಯಗೌಡ (79) ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಐವತ್ತಕ್ಕೂ ಹೆಚ್ಚು ಮಂದಿಯಲ್ಲಿ ರೋಗ ಕಾಣಿಸಿಕೊಂಡ ಬಗ್ಗೆ ವರದಿಗಳಿವೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಭಾಗ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು, ಶೃಂಗೇರಿ ಮತ್ತು ಕೊಪ್ಪ ಭಾಗದ ಅನೇಕ ಗ್ರಾಮಗಳಲ್ಲಿ ಒಂದೇ ದಿನಕ್ಕೆ ಹತ್ತು-ಹದಿನೈದು ಮಂದಿಯಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡು ಭೀತಿ ಮೂಡಿಸಿದೆ. ಅರಣ್ಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮುನ್ನೇಚ್ಚರಿಕೆ ಕ್ರಮವಾಗಿ ಯಾರೂ ಹೊರಗೆ ಹೋಗಬೇಡಿ ಅನ್ನುತ್ತಾರೆ. ಮಲೆನಾಡಿನ ಜನ ಸೌದೆ,ಸೊಪ್ಪು,ದರಗು, ದನಕರುಗಳ ಕಾರಣಕ್ಕೆ ಕಾಡುಮೇಡು ಸುತ್ತಾಡಲೇಬೇಕು,. ಇಷ್ಟಕ್ಕೂ ಕಾಫಿ,ಅಡಕೆ ತೋಟ, ಹೊಲಗದ್ದೆಗಳಿಗೆ ಕಾಲಿಡದಿರಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಈ ಕೂಡಲೇ ಇಲಾಖೆ ವತಿಯಿಂದ ಆಂದೋಲನದ ಮಾದರಿಯಲ್ಲಿ ಮನೆ ಮನೆಗೆ ಲಸಿಕೆ ನೀಡಬೇಕು. ಸಂಶೋಧನಾ ಸಂಸ್ಥೆ ಮತ್ತು ಉತ್ಪಾದನಾ ಕಂಪನಿಗಳ ಜತೆ ಸಮಾಲೋಚನೆ ನಡೆಸಿ ರೋಗಕ್ಕೆ ಕಾರಣವಾಗಿರುವ ವೈರಸ್ ನಲ್ಲಿ ಆಗಿರುವ ಬದಲಾವಣೆಗೆ ಅನುಗುಣವಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಲಸಿಕೆ ಕಂಡು ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆ ಲಸಿಕೆ ದೀರ್ಘ ಕಾಲ ಕಾರ್ಯ ನಿರ್ವಹಿಸುವಂತಿರಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ಅಥವಾ ಶಿವಮೊಗ್ಗ ನಗರದಲ್ಲಿ ಕುಳಿತು ಸಭೆಗಳನ್ನು ನಡೆಸಿದರೆ ಪ್ರಯೋಜನ ಆಗುವುದಿಲ್ಲ. ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ಫೀಲ್ಡಿಗಿಳಿದು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಲೆನಾಡು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರೋಗದ ಕಾಲಾವಧಿ 3 ರಿಂದ 8 ದಿನ ಆಗಿರುತ್ತದೆ. ಹೀಗಾಗಿ ರೋಗದ ಲಕ್ಷಣಗಳಾದ ವಾಕರಿಕೆ, ವಾಂತಿ, ಸ್ನಾಯು ಬಿಗಿತ, ಮಾನಸಿಕ ಅಸ್ವಸ್ಥತೆ, ನಡುಕ, ದೃಷ್ಟಿ ಮಂದವಾಗುವುದು ಹಾಗೂ ತೀವ್ರ ತಲೆನೋವು ಪೈಕಿ ಯಾವುದೇ ಲಕ್ಷಣ ಕಾಣಿಸುತ್ತಿದ್ದಂತೆ ಅವರನ್ನು ತಾಲ್ಲೂಕು ಅಥವಾ ಜಿಲ್ಲೆ ಆಸ್ಪತ್ರೆಗೆ ಕರೊದೊಯ್ದು ಚಿಕಿತ್ಸೆ ಕೊಡಿಸುವ ಕೆಲಸ ಆಗಬೇಕು. ಅದಕ್ಕೆ ಮುಂಚೆ ಕಾಡಿನಂಚಿನ ಗ್ರಾಮಗಳಲ್ಲಿ ಅರಿವು ಮೂಡಿಸುವುದು, ಲಸಿಕೆ ಹಾಕುವುದು ಮತ್ತು ರೋಗ ತಪಾಸಣೆ ಮಾಡುವ ಕೆಲಸ ಆಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಒಂದು ವೇಳೆ ಸಿಬ್ಬಂದಿ ಕೊರತೆ ಇದ್ದರೆ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಗಳ ಜತೆ ಮಾತುಕತೆ ನಡೆಸಿ ಸ್ನಾತಕೋತ್ತರ ವೈದ್ಯ ವಿಭಾಗದ ವಿದ್ಯಾರ್ಥಿಗಳನ್ನು ಈ ಕೆಲಸಕ್ಕೆ ಬಳಸಿಕೊಳ್ಳಬೇಕು ಎಂದಿದ್ದಾರೆ.

ಬೆಂಗಳೂರಿನ ಆರೋಗ್ಯ ಭವನದಲ್ಲಿ ಠಿಕಾಣಿ ಹೂಡಿರುವ ಹಿರಿಯ ಅಧಿಕಾರಿಗಳನ್ನು ತಕ್ಷಣ ನೋಡಲ್ ಅಧಿಕಾರಿಗಳಾಗಿ ಮೂರು ಜಿಲ್ಲೆಗಳಿಗೆ ನೇಮಕ ಮಾಡಿ ಮೇಲುಸ್ತುವಾರಿ ನೋಡಿಕೊಳ್ಳಲು ಸೂಚನೆ ನೀಡಬೇಕು ಎಂದೂ ಅಶೋಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪರಿಹಾರ ಕೊಡಿ

ಈಗಾಗಲೇ ಕೆ ಎಫ್ ಡಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಇದಕ್ಕೆ ಇಲಾಖೆಯ ನಿರ್ಲಕ್ಷ್ಯ ಕಾರಣ. ಹೀಗಾಗಿ ಸಾವಿನ ನೈತಿಕ ಹೊಣೆ ಹೊತ್ತು ಮೃತರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ನೀಡಬೇಕು. ಆ ಕುಟುಂಬದ ಒಬ್ಬ ವ್ಯಕ್ತಿಗೆ ಸರಕಾರದ ಉದ್ಯೋಗ ನೀಡಬೇಕು ಮತ್ತು ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button