ಸೇವಾನ್ಯೂನ್ಯತೆ : ಅರ್ಜಿದಾರರಿಗೆ ಪರಿಹಾರ ನೀಡಲು ಆದೇಶ-ಏನಿದು ಶಿವಮೊಗ್ಗಅಂಬಾಭವಾನಿ ಎಲೆಕ್ಟ್ರಿಕಲ್ಸ್ vs ಕೆ.ಪಿ.ಶಾಂತಕುಮಾರ್ ಹೊಸೂರು ಪ್ರಕರಣ?

ಸುದ್ದಿಲೈವ್/ಶಿವಮೊಗ್ಗ

ಅಂಬಾ ಭವಾನಿ ಎಲೆಕ್ಟ್ರಿಕಲ್ಸ್, ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಅರ್ಜಿದಾರ ಕೆ.ಪಿ.ಶಾಂತಕುಮಾರ್‍ರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ಪರಿಹಾರ ಒದಗಿಸುವಂತೆ ಆದೇಶಿಸಿದೆ.
ಫಿರ್ಯಾದುದಾರರಾದ ಕೆ.ಪಿ.ಶಾಂತಕುಮಾರ್ ಹೊಸೂರು ಗ್ರಾಮದ ತಮ್ಮ ಜಮೀನಿನಲ್ಲಿ ಬೋರ್‍ವೆಲ್ ತೆಗೆಸಲು ಸಾಮಗ್ರಿಗಳನ್ನು ಖರೀದಿಸುವ ಉದ್ದೇಶದಿಂದ ಎದುರುದಾರ ಅಂಬಾ ಭವಾನಿ ಎಲೆಕ್ಟ್ರಿಕಲ್ಸ್‍ಗೆ
ದಿ: 10-06-2020 ರಂದು ರೂ.2 ಲಕ್ಷ ಗಳ ಚೆಕ್‍ನ್ನು ಮುಂಗಡವಾಗಿ ಪಾವತಿಸಿರುತ್ತಾರೆ. ಚೆಕ್ಕನ್ನು
ದಿ: 11-06-2020 ರಂದು ಎದುರುದಾರರು ನಗದೀಕರಿಸಿಕೊಂಡಿದ್ದರೂ ಸಹ ಸರಕು ಒದಗಿಸಿರುವುದಿಲ್ಲ.
ಆದ ಕಾರಣ ಪ್ರಕರಣ ದಾಖಲಿಸಿರುತ್ತಾರೆ.
ಎದುರುದಾರರು ಆಯೋಗದ ಮುಂದೆ ಹಾಜರಾಗಿ ಫಿರ್ಯಾದಿದಾರರು ತಮಗೆ ಅಪರಿಚಿತರಾಗಿದ್ದು, ಸರಕು ಖರೀದಿಗಾಗಿ ತಮ್ಮನ್ನು ಸಂಪರ್ಕಿಸಿರುವುದಿಲ್ಲ. ಮತ್ತು ಯಾವುದೇ ಚೆಕ್ಕನ್ನು ಸಹ ನೀಡಿರುವುದಿಲ್ಲ. ಡಾ.ಮೂರ್ತಿ ಎಂಬ ವ್ಯಕ್ತಿಯು ಸದರಿ ಚೆಕ್ಕನ್ನು ನೀಡಿದ್ದು, ಆ ವ್ಯಕ್ತಿ ಮುಖಾಂತರವೇ ಸಾಮಗ್ರಿಗಳನ್ನು ಸರಬರಾಜು ಮಾಡಲಾಗಿರುತ್ತದೆ ಎಂದು ಹೇಳಿರುತ್ತಾರೆ.
ಆದರೆ ಇನ್ವಾಯ್ಸ್‍ಗಳಲ್ಲಿ ಎಲ್ಲಿಯೂ ಸಹ ಎಲೆಕ್ಟ್ರಿಕ್ ಸಾಮಗ್ರಿಗಳನ್ನು ಸ್ವೀಕರಿಸಿದ ಡಾ.ಮೂರ್ತಿ ಸಹಿ ಕಂಡುಬಂದಿರುವುದಿಲ್ಲ. ಮತ್ತು ಅವಕಾಶ ನೀಡಿದಾಗ್ಯೂ ಎದುರುದಾರರು ಡಾ.ಮೂರ್ತಿಯವರ ಸಾಕ್ಷ್ಯ ವಿಚಾರಣೆಯನ್ನು ಆಯೋಗದ ಮುಂದೆ ಮಾಡಿರುವುದಿಲ್ಲ.
ಹಾಗೂ ಫಿರ್ಯಾದಿದಾರರು ಕಳುಹಿಸಿದ ಲೀಗಲ್ ನೋಟಿಸಿಗೆ ಸೂಕ್ತ ಪ್ರತಿ ಉತ್ತರವನ್ನು ನೀಡಿರುವುದಿಲ್ಲ. ಈ ಎಲ್ಲ ಕಾರಣಗಳಿಂದ ಎದುರುದಾರರು ಸೇವಾನ್ಯೂನ್ಯತೆ ಎಸಗಿದ್ದಾರೆಂದು ಕಂಡು ಬಂದಿದ್ದು ಈ ಪ್ರಕರಣವನ್ನು ಭಾಗಶಃ ಪುರಸ್ಕರಿಸಲಾಗಿರುತ್ತದೆ.
ಎದುರುದಾರರು ಚೆಕ್ ಮೊತ್ತ ರೂ.2 ಲಕ್ಷ ಗಳನ್ನು ಶೇ.9 ಬಡ್ಡಿ ಸಮೇತ ಫಿರ್ಯಾದುದಾರರಿಗೆ ಪಾವತಿಸತಕ್ಕದ್ದು. ಮತ್ತು ಉಂಟಾದ ಮಾನಸಿಕ ಹಿಂದೆ ಹಾಗೂ ಇತರೆ ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರವಾಗಿ ರೂ.10,000 ಹಾಗೂ ವ್ಯಾಜ್ಯದ ಖರ್ಚುವೆಚ್ಚಗಳ ಬಾಬ್ತು ರೂ.10,000/- ಗಳನ್ನು ಪಾವತಿಸತಕ್ಕದ್ದೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಇವರು ಪೀಠವು ದಿ: 06-10-2023 ರಂದು ಆದೇಶಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ-https://suddilive.in/archives/2206
