ಸ್ಥಳೀಯ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ಥಳೀಯ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಆಗಸ್ಟ್ 21, 2024

ಬಿಜೆಪಿ ತಕ್ಕೆಯಲ್ಲಿದ್ದ ಶಿರಾಳಕೊಪ್ಪ ಪುರಸಭೆ 'ಕೈ' ತೆಕ್ಕೆಗೆ



ಸುದ್ದಿಲೈವ್/ಶಿಕಾರಿಪುರ


ಶಿರಾಳಕೊಪ್ಪ ಪುರಸಭೆ ಈ ಹಿಂದೆ ಬಿಜೆಪಿಯ ಅಧಿಕಾರದಲ್ಲಿದ್ದು ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ದೊರೆತಿದೆ.


ನೂತನವಾಗಿ  ಅಧ್ಯಕ್ಷರಾಗಿ ಮಮತಾ ನಿಂಗಪ್ಪ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಮುದಾಸಿರ್ ಅಹಮದ್ ಉಪಾಧ್ಯಕ್ಷರಾಗಿ ಸುಮಾರು 17  ಜನ ಪುರಸಭಾ ಸದಸ್ಯರಿದ್ದು ಅದರಲ್ಲಿ 11 ಜನ ಕಾಂಗ್ರೆಸ್ ಪಕ್ಷದವರು ಬೆಂಬಲ ನೀಡಿ  ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿರುತ್ತಾರೆ. 


ಅದರಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಮಹಾಬಲೇಶ್ವರ ಮತ್ತು ಲಲಿತಮ್ಮ ಸಹಕಾರ ಕೊಟ್ಟಿದ್ದು ಅದೇ ರೀತಿ ಸಲ್ಮಾ ಬೇಗಂ ಕೋಂ ರಾಜ ಸಾಬ್, ಶಾಹಿದ ಬಾನು ಕೋಂ  ಸಫೀರ್ ಅಹ್ಮದ್ , ತಸ್ಲೀಮಾ ಸುಲ್ತಾನ್ ಕೋಂ  ಮನ್ಸೂರ್ ಅಲಿ  ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ಕೊಟ್ಟು ಇಂದು  ಶಿರಾಳಕೊಪ್ಪ ಪುರಸಭೆ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದಿರುತ್ತದೆ.

ಶುಕ್ರವಾರ, ಆಗಸ್ಟ್ 16, 2024

ಶಿವಮೊಗ್ಗದ ಆರ್ ಟಿ ಒ ಬಿ.ಶಂಕರಪ್ಪ ವಿಧಿವಶ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿಯ ಆರ್ ಟಿ ಒ ಅಧಿಕಾರಿಯಾಗಿ ನಿರ್ವಹಿಸುತ್ತಿದ್ದ ಬಿ.ಶಂಕರಪ್ಪ ಅನಾರೋಗ್ಯದ ಹಿನ್ನಲೆಯಲ್ಲಿ ಇಂದು ಅಸುನೀಗಿದ್ದಾರೆ. 


ಬಿ.ಶಂಕರಪ್ಪನವರಿಗೆ 59 ವರ್ಷವಾಗಿದ್ದು ನಿವೃತ್ತಿಗೆ ಇನ್ನೂ 9 ತಿಂಗಳ ಅವಧಿ ಉಳಿದಿತ್ತು. ಅನಾರೋಗ್ಯದ ಹಿನ್ನಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 


ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. 1/07/2023 ರಿಂದ ಪ್ರಭಾಗಿಯಾಗಿದ್ದ ಬಿ.ಶಂಕರಪ್ಪನವರು  ಸುಮಾರು ಒಂದು ತಿಂಗಳ ಹಿಂದೆ ರೆಗ್ಯೂಲರ್ ಆರ್ ಟಿಒ ಆಗಿ ನಿಯುಕ್ತಿಗೊಂಡಿದ್ದರು. ಆದರೆ ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಮೂಲತಃ ಗುಲ್ಬರ್ಗದವರು ಎನ್ನಲಾಗಿದೆ.

ಸೋಮವಾರ, ಆಗಸ್ಟ್ 12, 2024

ಹಿಂದೂ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಬೃಹತ್ ಮಾನವ ಸರಪಳಿ




ಸುದ್ದಿಲೈವ್/ಸೊರಬ


ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಸೋಮವಾರ ಪಟ್ಟಣದ ರೈತ ವೃತ್ತದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಅಡಿಯಲ್ಲಿ ಹತ್ತಾರು ಸಂಘಟನೆಗಳ ಕಾರ್ಯಕರ್ತರು ಬೃಹತ್ ಮಾನವ ಸರಪಳಿ ನಿರ್ಮಿಸಿ ನಾಮ ಫಲಕ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ, ಬಾಂಗ್ಲಾದೇಶದ ಸಂತ್ರಸ್ತ ಹಿಂದುಗಳಿಗೆ ಎಲ್ಲ ರೀತಿಯ ನೆರವು ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.


ಹಿಂದೂ ಹಿತರಕ್ಷಣಾ ವೇದಿಕೆಯ ಕಾಳಿಂಗರಾಜ್ ಮಾತನಾಡಿ, "ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಮೀಸಲಾತಿಯಿಂದ ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಅರಾಜಕತೆ ನಿರ್ಮಾಣವಾಗಿದೆ. ಅಲ್ಲಿನ ಹಿಂದುಗಳನ್ನು ಗುರಿಯಾಗಿಸಿಕೊಂಡು ಬಾಂಗ್ಲಾ ಇಸ್ಲಾಮಿಕ್ ಜಿಹಾದಿಗಳು ಸ್ತ್ರೀಯರು, ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಇತ್ತೀಚಿಗೆ ಗಾಜಾ ಪಟ್ಟಿಯಲ್ಲಿ ಏನಾದರೂ ಘಟಿಸಿದರೆ, ವಿಶ್ವಸಂಸ್ಥೆಯಲ್ಲಿ ಚರ್ಚಿಸಲಾಗುತ್ತದೆ. ಆದರೆ, ಬಾಂಗ್ಲಾದೇಶದ ಹಿಂದುಗಳ ಮೇಲಿನ ಆಕ್ರಮಣಗಳ ಬಗ್ಗೆ ಜಗತ್ತಿನಲ್ಲಿ ಯಾರೂ ಧ್ವನಿಯೆತ್ತುತ್ತಿಲ್ಲ," ಎಂದು ಆಕ್ಷೇಪಿಸಿದರು.


ಬಾಂಗ್ಲಾದೇಶಿ ಹಿಂದುಗಳ ರಕ್ಷಣೆಗೆ ತಕ್ಷಣವೇ ಕೇಂದ್ರ ಸರ್ಕಾರ ಮುಂದಾಗಬೇಕು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಹಿಂಸಾಚಾರ ಕುರಿತು ವಿಶೇಷ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಲ್ಲದೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಆಯೋಗ ಸ್ಥಾಪನೆ ಮಾಡಿ, ಅಲ್ಲಿನ ಹಿಂದುಗಳಿಗೆ ನ್ಯಾಯವನ್ನು ನೀಡಬೇಕು. ಈ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಿ, ವಿಶೇಷ ನಿಯೋಗವನ್ನು ಬಾಂಗ್ಲಾದೇಶಕ್ಕೆ ಕಳುಹಿಸಿ, ಪೀಡಿತ ಹಿಂದು ಕುಟುಂಬಗಳಿಗೆ ಪರಿಹಾರ ಒದಗಿಸಬೇಕು," ಎಂದು ಕಾಳಿಂಗರಾಜ ಆಗ್ರಹಿಸಿದರು.


ಸಮಾಜ ಸೇವಕರಾದ ಡಾ|| ಜ್ಞಾನೆಶ ಮಾತನಾಡಿ, "ಭಾರತದಲ್ಲಿರುವ ಸೆಕ್ಯುಲರ್‌ವಾದಿಗಳು ಮತ್ತು ಬುದ್ಧಿಜೀವಿಗಳು ಟರ್ಕಿಯಲ್ಲಿ ಅಥವಾ ಪ್ಯಾಲಿಸ್ಟೈನ್‌ನಲ್ಲಿ ಸಂಭವಿಸುವ ಘಟನೆಗಳಿಗೆ ಧ್ವನಿಯೆತ್ತುತ್ತಾರೆ. ಆದರೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಅವರ ಡೋಂಗಿ ಮಾನಸಿಕತೆಯನ್ನು ತೋರಿಸುತ್ತದೆ," ಎಂದು ದೂರಿದರು.


ಈ ಸಂದರ್ಭದಲ್ಲಿ ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಹಿಂದೂಪರ ಸಂಘಟನೆಗಳ ಪ್ರತಿನಿಧಿಗಳು, ಸಮಾಜಿಕ ಚಿಂತಕರು, ರೈತರು ಹಾಗೂ ಹಿಂದೂಗಳು ಭಾಗವಹಿಸಿದ್ದರು.

ಭಾನುವಾರ, ಆಗಸ್ಟ್ 11, 2024

ಹಬ್ಬದ ಪ್ರಯುಕ್ತ ಸೌಹಾರ್ಧ ಸಭೆ


 


ಸುದ್ದಿಲೈವ್/ಸೊರಬ ಆಗಸ್ಟ್, 11: 


ಗಣೇಶ ಹಾಗೂ ಈದ್ ಮಿಲಾದ್‌ ಹಬ್ಬವನ್ನು ಶಾಂತಿಯುತ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಆಚರಿಸುವಂತೆ ಪಿಎಸ್ಐ ಹೆಚ್ ಏನ್ ನಾಗರಾಜ್  ಹೇಳಿದರು.

 

ಇಂದು ಪಟ್ಟಣದ ಪೊಲೀಸ್ ಇಲಾಖೆಯ  ಆವರಣದಲ್ಲಿ ಸೆಪ್ಟೆಂಬರ್‌ 07ರಂದು ಗಣೇಶ ಚತುರ್ಥಿ ಹಾಗೂ ಸೆಪ್ಟೆಂಬರ್‌ 16 ನಡೆಯಲಿರುವ ಈದ್ ಮಿಲಾದ್ ಹಬ್ಬದ ಆಚರಣೆಯನ್ನು ಸೌಹಾರ್ಧಯುತವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಕರೆಯಲಾದ ಸೌಹಾರ್ಧ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು 


ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಆಯಾ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗುವ ಏಕಗವಾಕ್ಷಿಯಲ್ಲಿ ಅನುಮತಿ ಪಡೆದು ಪ್ರತಿಷ್ಠಾಪನೆ ಮಾಡಬೇಕು. ಈ ಹಿಂದಿನ ಹಳೆಯ ಪದ್ಧತಿ, ನಿಯಮ ಅನುಸರಿಸಿ ಎಲ್ಲಾ ರೀತಿಯ ಸಿದ್ಧತೆ ಹಾಗೂ ಶಾಂತಿಯುತವಾಗಿ ಆಚರಿಸಬೇಕು. ಹೊಸದಾಗಿ ಸೂಕ್ಷ್ಮಯುತವಾದ ಪ್ರದೇಶಗಳಲ್ಲಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ ಎಂದರು.


ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿದ ಸ್ಥಳಗಳಲ್ಲಿ ಬೆಳಕು ಹಾಗೂ ಸಿಸಿಟಿವಿ ವ್ಯವಸ್ಥೆ ಮಾಡಿಕೊಳ್ಳಬೇಕು. ಆಯೋಜಕರೇ ಸಂಪೂರ್ಣ ಹೊಣೆ ಹೊರಬೇಕು. ಹಾಗೂ ಅಹಿತಕರ ಘಟನೆಗಳು ನಡೆದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬೇಕು. ಹಬ್ಬದ ಆಚರಣೆಗಳಲ್ಲಿ ಪ್ರಚೋದನಾಕಾರಿ ಹೇಳಿಕೆ, ಅಸಭ್ಯ ವರ್ತನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


ಯಾವುದೇ ವಿದ್ಯುತ್ ಅವಘಡಗಳು ನಡೆಯದಂತೆ ಮೂರ್ತಿಗಳ ಕಡಿಮೆ ಎತ್ತರ, ಗಣಪತಿ ಅಲಂಕಾರ ಹಾಗೂ ಸಣ್ಣ ಗೋಪುರಗಳ ನಿರ್ಮಾಣ ಮಾಡಬೇಕು. ಧ್ವನಿವರ್ಧಕಗಳಿಗೆ ಬೆಳಗ್ಗೆ 6 ರಿಂದ ರಾತ್ರಿ 10ಗಂಟೆಯವರೆಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಹಬ್ಬಗಳ ಆಚರಣೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.


ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ಧತೆಯಿಂದ ಆಚರಣೆ ಮಾಡಬೇಕು. ಇಲಾಖೆಯಿಂದ ನೀಡಲಾಗುವ ಸೂಚನೆಗಳನ್ನು ನಿರ್ಬಂಧ ಎಂದುಕೊಳ್ಳಬಾರದು. ಎಲ್ಲರೂ ಕಾನೂನನ್ನು ಗೌರವಿಸಬೇಕು, ಇಲಾಖೆಯು ಸಹ ಎಲ್ಲರಿಗೂ ಸಹಕಾರ ನೀಡಲಿದೆ ಎಂದರು.


ಈ ಸಂದರ್ಭ ದಲ್ಲಿ ಸಾರ್ವಜನಿಕ ಸಂಘ ಸಂಸ್ಥೆಗಳ ಸದಸ್ಯರು ಪದಾಧಿಕಾರಿಗಳು ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನಾಗೇಶ್, ಲೋಕೇಶ್, ರಾಘವೇಂದ್ರ ಅವರು ಉಪಸ್ಥಿತರಿದ್ದರು.

ಶುಕ್ರವಾರ, ಆಗಸ್ಟ್ 9, 2024

ಮೌಡ್ಯತೆ ವಿರುದ್ಧ ಜಾಗೃತಿ



ಸುದ್ದಿಲೈವ್/ಆಯನೂರು


ಮಾನವ ಬಂಧುತ್ವ ವೇದಿಕೆ ಸೊರಬವತಿಯಿಂದ ಆಯನೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮೌಢ್ಯತೆ ವಿರುದ್ಧ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನಾಗರ ಕಲ್ಲಿಗೆ ಹಾಲನ್ನು ಎರೆಯುವದನ್ನ  ತಪ್ಪಿಸಿ ಮೂಢನಂಬಿಕೆಯ ಬಗ್ಗೆ ಅರಿವು ಮೂಡಿಸಿ ಪೌಷ್ಟಿಕ ಆಹಾರವಾದ ಹಾಲನ್ನು ಮಕ್ಕಳಿಗೆ ನೀಡಲಾಯಿತು


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆ ಸೊರಬ ತಾಲೂಕು ಅಧ್ಯಕ್ಷರಾದ ರಾಜೇಶ್ ಸಿ ಕಾನಡೆ ಅವರು ವಹಿಸಿದ್ದರು ಹಾಗೂ ಆಯನೂರು  ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಲತಾ ಅವರು ಹಾಗೂ ಆಸರೆ ಮಹಿಳಾ ಸಂಘದ ಅಧ್ಯಕ್ಷರಾದ ಶಿಲ್ಪ ಆರ್ ಅವರು ಹಾಗೂ ಆಸರೆ ಸಂಘದ ಕಾರ್ಯದರ್ಶಿಯಾದ ವಿಶಾಲಾಕ್ಷಮ್ಮ ಹಾಗೂ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಾಗರಾಜ್ ಬಿ ಟಿ, ಹಾಗೂ ಮಾನವ ಬಂದುತ್ವ ವೇದಿಕೆ ಸೊರಬ ಹೊಸಗುಡಿಗಿನಕೊಪ್ಪದ ಗ್ರಾಮ ಸಂಚಾಲಕರಾದ 


ವೀರಭದ್ರ ಸ್ವಾಮಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ತನೀಕಾ ಸಮಿತಿ ಸೊರಬದ ತಾಲೂಕು ಅಧ್ಯಕ್ಷರಾದ ಲತಾ ಟಿ ಎಚ್  ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ ಹಾಲು ಬ್ರೆಡ್ ಸ್ಲೇಟ್ ಹಾಗೂ ಚಾಪೀಸ್ ನೀಡಿ ಬಸವ ಪಂಚಮಿಯನ್ನು ಆಚರಿಸಲಾಯಿತು.

ಗುರುವಾರ, ಆಗಸ್ಟ್ 8, 2024

ಕಣದಲ್ಲಿ ಉಳಿದ ಅಂತಿಮ ಅಭ್ಯರ್ಥಿಗಳು



ಸುದ್ದಿಲೈವ್/ಶಿವಮೊಗ್ಗ


ಶಿಮೂಲ್ ಹಾಲು ಒಕ್ಕೂಟದ ಚುನಾವಣೆಗೆ ಆ‌14 ರಂದು ಚುನಾವಣೆ ನಡೆಯಲಿದ್ದು, ಆ.6 ರಂದು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದೆ. ಈಗಾಗಲೇ 64 ನಾಮಪತ್ರ ಸಲ್ಲಿಯಾಗಿದ್ದು ಇಂದು ಸ್ಕ್ರೂಟನಿ ಮಾಡಲಾಗಿದೆ. 


ಸ್ಕ್ರೂಟನಿಯ ಕೊನೆಯ ದಿನವಾದುದರಿಂದ 64 ಮಂದಿ ನಾಮಪತ್ರದಲ್ಲಿ  41 ಜನ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ. ಕೆಂಚೇನಹಳ್ಳಿಯ ಹಾಲು ಉತ್ಪಾದಕರ ಸಂಘದಿಂದ ಎಸ್.ಕುಮಾರ್, ಬುಳ್ಳಾಪುರದ ಹಾಲು ಉತ್ಪಾದಕರ ಸಂಘದಿಂದ ಹೆಚ್ ಬಿ ದಿನೇಶ್, ಯಡವಾಲ ಹಾಲು ಉತ್ಪಾದಕರ ಸಂಘದಿಂದ ಕೆ.ಎಲ್ ಜಗದೀಶ್ವರ್


ಕಾಚಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಆನಂದ್ ಡಿ, ತ್ಯಾಜುವಳ್ಳಿ ಹಾಲ ಒಕ್ಕೂಟದಿಂದ ಟಿ.ಬಿ.ಜಗದೀಶ್ವರ್, ದೊಡ್ಡ ಜೋಗಿಹಳ್ಳಿ ಹಾಲು ಉತ್ಪಾದಕರ ಸಂಘದಿಂದ ಬಿ.ಡಿ.ಭೂಕಾಂತ್, ಹಿರೇಮಾಗಡಿ ಹಾಲು ಉತ್ಪಾದಕರ ಸಂಘದಿಂದ ಗಂಗಾಧರಪ್ಪ, ಹಿರೇಜಂಬೂರು ಹಾಲು ಒಕ್ಕೂಟದಿಂದ ಶಿವಶಂಕರಪ್ಪ, ತ್ಯಾವಗೋಡುಹಾಲು ಒಕ್ಕೂಟದಿಂದ ಟಿ‌.ಎಸ್.ದಯಾನಂದ್


ದಾವಣಗೆರೆ ವಿಭಾಗದಲ್ಲಿ ಹಿರೇಗೋಣಿಗೆರೆಯ ಹಾಉ ಉತ್ಪಾದಕರ ಸಂಘದಿಂದ  ಬಸವರಾಜಪ್ಪ ಬಿ.ಎಂ, ಕುರುವ ಹಾಲು ಒಕ್ಕೂಟದಿಂದ ಸುರೇಶ್ ಕೆ.ಜಿ.ಕಂಚುಗಾರನಹಳ್ಳಿ ಹಾಲು ಒಕ್ಕೂಟದಿಂದ ಹೆಚ್ ಕೆ ಬಸಪ್ಪ, ಹನಗವಾಡಿ ಹಾಲುಒಕ್ಕೂಟದಿಂದ ಜಗದೀಶಪ್ಪ ಬಣಕಾರ್, ಗೋಪನಾಳು ಹಾಲು ಒಕ್ಕೂಟದಿಂದ ಹೆಚ್ ಕೆ ಪಾಲಾಕ್ಷಪ್ಪ, 


ಕುಂದೂರು ಹಾಲು ಒಕ್ಕೂಟದಿಂದ ಅನಿಲ್ ಕುಮಾರ್ ವೈ.ಎಂ, ಕತ್ತಲಗೆರೆ ಹಾಲು ಒಕ್ಕೂಟದಿಂದ ಕೆ.ನಾಗರಾಜ್, ಹನುಮನಹಳ್ಳಿ ಹಾಲು ಒಕ್ಕೂಟದಿಂದ ಬಿ.ಜಿ. ಬಸವರಾಜಪ್ಪ, ಬಿ.ಕಲಪನಹಳ್ಳಿ ಹಾಲು ಒಕ್ಕೂಟದಿಂದ ಚೇತನ ಎಸ್ ನಾಡಿಗೆರ, ಯಲವಟ್ಟಿ ಹಾಲು ಒಕ್ಕೂಟದಿಂದ  ಶಾಂತವೀರಪ್ಪ, 


ಚಿತ್ರದುರ್ಗ ವಿಭಾಗದಲ್ಲಿ ಬಬ್ಬೂರು ಹಾಲು ಒಕ್ಕೂಟದಿಂದ ಜಿ.ಪಿ.ಯಶವಂತರಾಜು, ಕೊರಟೀಕೆರೆ ಹಾಲು ಉತ್ಪಾದಕ ಸಂಘದಿಂದ ರಮೇಶಪ್ಪ, ಸಿರಿಗೆರೆ ಹಾಲೂ ಒಕ್ಕೂದಿಂದ ತಿಪ್ಪೇಸ್ವಾಮಿ, ಓಬವ್ವನಾಗಶಿಹಳ್ಳಿ ಹಾಲು ಒಕ್ಕೂಟದಿಂದ ರೇವಣಸಿದ್ದಪ್ಪ, ಟಿ.ನೂಲೆನೂರು ಜಿ.ಬಿ.ಶೇಖರಪ್ಪ, ತಾರೇಕೆರೆ ಶಂಕರಲಿಂಗಪ್ಪ, ನರಿಹರನಗರ ಹಾಲು ಉತ್ಪಾದಕರ ಸಂಘ ಬಿ.ಸಿ.ಸಂಜೀವಮೂರ್ತಿ, ಯಾದಲಗಟ್ಟೆ ಹಾಲು ಒಕ್ಕೂಟದಿಂದ ಸಿ.ವೀರಭದ್ರಬಾಬು


ಈರಣ್ಣನಪಾಳ್ಯ ಹಾಲು ಉತ್ಪಾದಕ ಒಕ್ಕೂಟದಿಂದ ಕಾಂತರಾಜು, ಚಿಲ್ಲನಹಳ್ಳಿ ಹಾಲು ಉತ್ಪಾದಕ ಒಕ್ಕೂಟದಿಂದ ಶಿವಣ್ಣ ಪಿ.ಎಲ್. ಎ.ಎಂ ಶಿವಾನಂದ, ಬಿ.ಆರ್ ರವಿಕುಮಾರ್ ಕಣದಲ್ಲಿ ಉಳಿದಿದ್ದಾರೆ. 

ಇದನ್ನೂ ಓದಿ-https://www.suddilive.in/2024/08/blog-post_75.html

ಒಂದು ವೇಳೆ ಶಾಸಕರು ಹಾಗೂ ಎಸಿ ಮಧ್ಯ ಪ್ರವೇಶಿಸದಿದ್ದರೆ ಶಿವಮೊಗ್ಗದ ಗ್ರಾಮದೇವತೆ ದೇವಸ್ಥಾನ ನಾಳೆಯಂದ ಓಪನ್ ಆಗ್ತಾ ಇರಲಿಲ್ವಾ?



ಸುದ್ದಿಲೈವ್/ಶಿವಮೊಗ್ಗ


ಮುಜರಾಯಿ ಇಲಾಖೆಯ ಯಡವಟ್ಟು ಮುಂದುವರೆದಿದೆ. ಒಂದು ವೇಳೆ ಶಾಸಕರ ಉಪವಿಭಾಗಾಧಿಕಾರಿಗಳು ಮದ್ಯ ಪ್ರವೇಶಿಸದ ಇದ್ದಿದ್ದರೆ ಈ ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತಿತ್ತು ಗೊತ್ತಾಗುತ್ತಿರಲಿಲ್ಲ.


ಶಿವಮೊಗ್ಗ ಗ್ರಾಮದೇವತೆ ಕೋಟೆ ಶ್ರೀಚಂಡಿಕಾದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರ ವರ್ಚಸ್ಸಿನಿಂದ ದೇವಸ್ಥಾನ ಬೆಳೆದಿದೆ. ದೇವಸ್ಥಾನ ಇಂದು ಬೆಳೆದು ನಿಂತಿದೆ ಮತ್ತು ಅಭಿವೃದ್ಧಿ ಹೊಂದಿದೆ ಎಂದರೆ ಸರ್ಕಾರದ ಪ್ರಯತ್ನ ಶೂನ್ಯವೇ.  ಆದರೆ ಅರ್ಚಕ ಶಂಕರಾನಂದ ಜೋಯಿಸ್ ಅವರ ಪ್ರಯತ್ನ ಮತ್ತು ಅವರ ಭಕ್ತರ ಶ್ರಮದಿಂದ ದೇವಸ್ಥಾನ ಬೆಳೆದಿದೆ.   


ಸರ್ಕಾರ ಅಭಿವೃದ್ಧಿ ಪಡಿಸದೆ ಹುಂಡಿಗೆ ಬಿದ್ದ ಕಾಸಿನ ಮೇಲೆ ಕಣ್ಣಿಟ್ಟಿದೆ. ಈ ಕಾಸು ಅರ್ಚಕರ ಸಂಬಳ, ದೇವಸ್ಥಾನದ ಹೂವು ಹಣ್ಣು ನಿರ್ವಹಣೆಗೆ ಖರ್ಚಾಗಬೇಕು‌. ಈ ಖರ್ಚನ್ನ ಹುಂಡಿ ಕಾಸಿನಲ್ಲೇ ತೆಗೆಯಬೇಕು. ಆದರೆ ಸರ್ಕಾರ ಹಣ ಎತ್ತುಕೊಂಡು ಹೋಯಿತೆ ಹೊರತು ನಿರ್ವಹಣೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. 


ಈ ಕುರಿತು ಅರ್ಚಕ ಶಂಕರಾನಂದ ಜೋಯಿಸ್ ವಾಟ್ಸಪ್ ಸಂದೇಶ ಇಂದು ತಲ್ಲಣ ಹುಟ್ಟಿಸಿದೆ. ವಾಟ್ಸಪ್ ಸಂದೇಶ ಹೀಗಿದೆ 'ಕೋಟೆ ರಸ್ತೆಯಲ್ಲಿ ಶ್ರೀ ಚಂಡಿಕಾದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ನಮಗೆ 2023 ಅಕ್ಟೋಬರ್ ತಿಂಗಳಿನಿಂದ ಕೊಡಬೇಕಾದ ನಿತ್ಯಕಟ್ಲೆ, ಹೆಚ್ಚುಕಟ್ಲೆ  ದೇವಸ್ಥಾನದ ಸಂಭಾವನೆ ಇತ್ಯಾದಿ ಖರ್ಚುವೆಚ್ಚಗಳನ್ನು ಕೊಡದೇ ಶಿವಮೊಗ್ಗ ತಾಲೂಕು ಕಛೇರಿಯ ಅಧಿಕಾರಿಗಳು ಕಳೆದ 10 ತಿಂಗಳಿನಿಂದ ಇಲ್ಲಸಲ್ಲದ ಸಬೂಬುಗಳನ್ನು ಹೇಳಿ  ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ನಮ್ಮ ಮನವಿಮೇರೆಗೆ ಶಿವಮೊಗ್ಗ ವಿಭಾಗಾಧಿಕಾರಿ ಗಳು ಜರೂರು ಕ್ರಮ ವಹಿಸಲು ಆದೇಶ ನೀಡಿದ್ದರೂ 


ಈ ವಿಷಯವಾಗಿ ಅನೇಕಬಾರಿ ಸಂಬಂಧಪಟ್ಟ  ಅಧಿಕಾರಿಗಳಲ್ಲಿ ಲಿಖಿತ ಮನವಿ ವಾಟ್ಸಾಪ್ ಮಾಡಿಕೊಂಡರೂ ಯಾವುದೇ ರೀತಿಯ ಸೂಕ್ತ ಅಧಿಕೃತ ಮಾಹಿತಿಯನ್ನಾಗಲಿ  ಹಿಂಬರಹವಾಗಲೀ ಕೊಡದೆ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದಾರೆ.  ದೇವಸ್ಥಾನದ ಹುಂಡಿ ಹಣವನ್ನು  ಭಕ್ತಾದಿಗಳಿಗೆ  ಅರ್ಚಕರಿಗೆ ಗೊತ್ತಾಗದಂತೆ  ದೇವಸ್ಥಾನದ ಖರ್ಚು ವೆಚ್ಚ ಗಳಿಗೆ ಬಳಸದೆ ನಿಶ್ಚಿತ ಠೇವಣಿ ಇಟ್ಟು ಮೋಸ ಅನ್ಯಾಯ  ಮಾಡುತ್ತಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೂಡ ಮಾಡಿರುವುದಿಲ್ಲ ಎಂದು ದೂರಲಾಗಿದೆ. 

 

ಅರ್ಚಕರು ಭಕ್ತಾದಿಗಳ ಅಪೇಕ್ಷೆಯ ಮೇರೆಗೆ ಯಾವುದೇ ಧಾರ್ಮಿಕ ಕಾರ್ಯಕ್ರಮ ಮಾಡಬಾರದು ಎಂದು ನೋಟೀಸ್ ಕೊಟ್ಟಿರುತ್ತಾರೆ. ಅನಿವಾರ್ಯವಾಗಿ 

ಈ ಎಲ್ಲ ಕಾರಣದಿಂದಾಗಿ ಅಮ್ಮನವರ ಪ್ರೇರಣೆಯಿಂದ ದಿನಾಂಕ  09-08-2024 ಶುಕ್ರವಾರದಿಂದ ಪ್ರತಿ ನಿತ್ಯ  ಲೋಕಕಲ್ಯಾಣಾರ್ಥವಾಗಿ ಸಂಕಲ್ಪಿಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ  ಪೂಜೆಯನ್ನು ಮಾಡಿ,  ಅನಿರ್ದಿಷ್ಟಾವಧಿಯವರೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲು ನಿರ್ಧರಿಸಿದೆ ಆದ್ದರಿಂದ ಸಮಸ್ಯೆಗಳು ನಿವಾರಣೆ ಆಗುವವರೆಗೆ ಸನ್ಮಾನ್ಯ ಭಕ್ತಾದಿಗಳು ಸಾರ್ವಜನಿಕರು  ಸಹಕರಿಸಬೇಕಾಗಿ ಕೋರುತ್ತೇವೆ ಎಂಬ ಸಂದೇಶ ತಲ್ಲಣ ಮೂಡಿಸಿದೆ. 


ಶಾಸಕ ಚೆನ್ನಬಸಪ್ಪ, ಎಸಿ ಸತ್ಯನಾರಾಯಣ ಅವರ ಪ್ರಯತ್ನದಿಂದ ಪ್ರಕರಣ ಬಹುತೇಕ ಸುಖಾಂತ್ಯಗೊಂಡಿದೆ. ಸುಖಾಂತ್ಯದ ವಿಷಯವಲ್ಲ. ಈ ರೀತಿಯ ಅವ್ಯವಸ್ಥೆಗೆ ಕಾರಣವೇನು? ಎಲ್ಲವೂ ಅಧಿಕಾರಿಗಳ ಬಳಿ ಹೋಗಿ ಕೈಮುಗಿದು ನಿಲ್ಲಬೇಕೆಂದರೆ ಅದು ನಿಯಮದಲ್ಲಿ ಇದೆಯಾ? ಸರ್ಕಾರಿ ಅಧಿಕಾರಿಗಳ ಸಂಬಳ ಹಿಡಿದಿಟ್ಟರೆ ಹೇಗಿರುತ್ತೆ? ಪರಿಸ್ಥಿತಿಯನ್ನ ಅವಲೋಕಿಸದೆ ಮುಂದುವರೆದರೆ ಮತ್ತಷ್ಟು ತಲೆನೋವಾಗುವುದು ಖಚಿತ

ಮಂಗಳವಾರ, ಆಗಸ್ಟ್ 6, 2024

ಅಮೃತಕ್ಕೆ ಸಮಾನ ಸ್ತನ್ಯಪಾನ ಪ್ರಕ್ರಿಯೆ ನಿರತರವಾಗಿರಲಿ-ಡಾ.ಪ್ರಶಾಂತ್ ವೀರಯ್ಯ

ಡಾ.ಪ್ರಶಾಂತ್ ವೀರಯ್ಯ


ಸುದ್ದಿಲೈವ್/ಶಿವಮೊಗ್ಗ 


ಅಮೃತಕ್ಕೆ ಸಮಾನವಾದ ಎದೆಹಾಲು ಉಣಿಸುವ ಪ್ರಕ್ರಿಯೆ ಯಾವುದೇ ಅಡೆ ತಡೆಗಳಿದಲ್ಲದೇ ನಿರಂತರವಾಗಿ ನಡೆಯಬೇಕು ಎಂದು ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪ್ರಶಾಂತ್ ವೀರಯ್ಯ ಹೇಳಿದರು. 


ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ತಾಯಂದಿರಿಗೆ ಮಾಹಿತಿ ಹಾಗೂ ಕ್ವಿಜ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ, ಈ ಬಾರಿಯ ಥೀಮ್ ಆಗಿರುವ ಎದೆಹಾಲು ಉಣಿಸುವ ಅಡೆ ತಡೆಗಳ ನಿವಾರಣೆ ಕುರಿತು ಮಾಹಿತಿ ನೀಡಿದರು. ತಾಯಿ ಮಗುವಿಗೆ ಎದೆ ಹಾಲು ಕುಡಿಸುವುದರಿಂದ ಮಗು ಮತ್ತು ತಾಯಿಯಲ್ಲಿ ಬಲವಾದ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ ಎಂದು ಹೇಳಿದರು.


ತಾಯಂದಿರು ಮಗುವಿಗೆ ಎದೆ ಹಾಲು ಉಣಿಸಲು ಕುಟುಂಬದವರೂ ಕೂಡ ತಾಯಿಗೆ ಸಂಪೂರ್ಣ ಸಹಕಾರವನ್ನು ನೀಡಬೇಕು, ಎದೆ ಹಾಲನ್ನು ಉಣಿಸುವ ಬಗ್ಗೆ ತಿಳಿ ಹೇಳಬೇಕು ಹಾಗೂ ಅನಿವಾರ್ಯ ಸಂದರ್ಭ ಸಾರ್ವಜನಿಕ ಸ್ಥಳಗಳಲ್ಲಿ ಎದೆ ಹಾಲು ಉಣಿಸಲು ಮುಜುಗರಪಡಬಾರದು, ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು, ಸರಕಾರವೂ ಕೂಡ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು. 


ಡಾ.ಅನಿಲ್ ಕಲ್ಲೇಶ್ ಮಾತನಾಡಿ, ತಾಯಿ ಎದೆ ಹಾಲು ಕುಡಿಸುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮಗು ಆರೋಗ್ಯ ಪೂರ್ಣವಾಗಿರುತ್ತದೆ, ಮಗುವಿಗೆ ಅಗತ್ಯ ಇರುವ ಎಲ್ಲಾ ರೀತಿಯ ಪೋಷಕಾಂಶವು ದೊರೆಯುತ್ತದೆ, ಎದೆಹಾಲಿನಲ್ಲಿರುವ ಪ್ರೊಟೀನ್, ವಿಟಮಿನ್, ಕ್ಯಾಲ್ಸಿಯಂ, ಅಂಶಗಳು ಮಗುವಿನ ದೈಹಿಕ ಮಾನಸಿಕ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ತಿಳಿಸಿದರು. 


ಕಾರ್ಯಕ್ರಮದಲ್ಲಿ ಡಾ. ಬಸವಕುಮಾರ್, ಡಾ.ವಿಜಯ್, ಡಾ. ಸಂತೋಷ್, ಡಾ.ಭಾರತಿ, ಡಾ.ಪ್ರತೀಕ್ಷಾ, ಡಾ.ನಿಯಾಜ್, ಡಾ.ರಗ್ದಾ ಹಾಗೂ ತಾಯಂದಿರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಕ್ವಿಜ್ ನ್ನು ಡಾ.ವಿದ್ಯಾ ಬಸವಕುಮಾರ್ ಹಾಗೂ ಡಾ.ಅನಿಲ್ ಕಲ್ಲೇಶ್ ಅವರು ಅಚ್ಚು ಕಟ್ಟಾಗಿ ನೆರವೇರಿಸಿಕೊಟ್ಟರು. ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ತಾಯಂದಿರು ಸ್ವಂತ ಅನುಭವ ಹಂಚಿಕೊಂಡು ಕೇಕ್ ಕತ್ತರಿಸಿ, ಸಂಭ್ರಮಿಸಿದರು, ಮೈತ್ರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿದರು.


ಇದನ್ನೂ ಓದಿ-https://www.suddilive.in/2024/08/blog-post_42.html

ಬೃಹತ್ತ ಗಾತ್ರದ ಹೆಬ್ಬಾವು(python) ಸೆರೆಹಿಡಿದು ರಕ್ಷಣೆ



ಸುದ್ದಿಲೈವ್/ತೀರ್ಥಹಳ್ಳಿ 

 

ತೀರ್ಥಹಳ್ಳಿಯ ಕುರುಬರ ಪಾಳ್ಯದ ಬಳಿ ಸುಹಾಸ್ ಎಂಬುವರ ಮನೆಯ ಗೋವುಗಳ ಸಾಕುವ ಹುಲ್ಲಿನ ಅಡಿಯಲ್ಲಿ ೦೭ ೧/೨ ಅಡಿ ಉದ್ದದ ಬೃಹತ್ ಗಾತ್ರದ ಹಾವೊಂದು ಕಾಣಿಸಿಕೊಂಡಿದ್ದು, ಉರಗ ತಜ್ಞ ಕಿರಣ್ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ 


ಇಂದು ಬೆಳಗ್ಗೆ ಸರಿಯಾಗಿ ೬.೩೦ ಕ್ಕ್ಕೆ ಸುಹಾಸ್ ಮೇವನ್ನು ತರಲು ಹೋದಾಗ ಬೃಹತ್ ಗಾತ್ರದ ಹಾವೊಂದು ಕಾಣಿಸಿಕೊಂಡಿದ್ದು ಬಯದಿಂದ ಯಾವ ಹಾವೆಂದು ತಿಳಿದುಕೊಳ್ಳಲು ಉರಗ ತಜ್ಞ ಕಿರಣ್ ಕರೆ ಮಾಡಿ ಕರೆಸಿದ್ದರು, ಗ್ರಾಮಸ್ಥರ ಸಹಾಯದಿಂದ ಅರ್ಧ ಗಂಟೆ ಆ ಜಾಗದಲ್ಲಿ ಹುಡುಕಿ , ಸುಮಾರು ೭ ೧/೨ ಅಡಿ ಉದ್ದದ ಹೆಬ್ಬವನ್ನು ಹಾವನ್ನು ಹಿಡಿದು ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಹಾವಿನ ತೂಕ ಸುಮಾರು ೭ ಕೆಜಿ ೭೦೫  ಇದ್ದು , ವಯಸ್ಸು ೮ ರಿಂದ ೧೦ ವರ್ಷ ವಯಸ್ಸಾಗಿತ್ತು ಎಂದು ತಿಳಿಸಿದ್ದಾರೆ

ಇದನ್ನೂ ಓದಿ-https://www.suddilive.in/2024/08/blog-post_93.html

ಸೋಮವಾರ, ಆಗಸ್ಟ್ 5, 2024

ಸಕ್ರೇಬೈಲಿನಲ್ಲಿ ಹೋಟೆಲ್ ಕಟ್ಟಿಕೊಳ್ಳಲು ಅವಕಾಶವಿದೆಯಾದರೆ, ಬಡವರಿಗೆ ಮನೆ ಕಟ್ಟಿಕೊಳ್ಳಲು ಅವಕಾಶವೇಕೆಯಿಲ್ಲ? ಪ್ರಶ್ನೆಗೆ ಉತ್ತರಿಸುತ್ತಾ ಅರಣ್ಯ ಇಲಾಖೆ?




ಸುದ್ದಿಲೈವ್/ಶಿವಮೊಗ್ಗ


ಬಡವನೋರ್ವನ ಸಣ್ಣಸೂರಿಗೆ ಆಕಾಶವೇ ಬಿದ್ದಂತೆ ಆಡುವ‌ ಅರಣ್ಯಾಧಿಕಾರಿಗಳಿಗೆ ಸಕ್ರೇಬೈಲಿನ ಹೋಟೆಲ್ ಗಳ ಬಗ್ಗೆ ಕಣ್ಣಿಗೆ ಕಾಣೋದಿಲ್ವಾ ಎಂಬ ಸಂದೇಶವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಅಲ್ಲಿ ನೂತನವಾಗಿ ತಲೆ ಏಳುತ್ತಿರುವ ಹೋಟೆಲ್ ನ ನೂತನ ಕಟ್ಟಡದ ಫೋಟೋವೊಂದು ವೈರಲ್ ಮಾಡಲಾಗುತ್ತಿದೆ. 


ಹೇಳೋರಿಲ್ಲ ಕೇಳೋರಿಲ್ಲಾ ಬಡವನೊಬ್ಬ ಸಣ್ಣ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡರೆ,  ಬಂದು ಕಿತ್ತು ಎಸೆಯುವ ಅರಣ್ಯ ಇಲಾಖೆ ,ಪರಿಸರ ಸೂಕ್ಷ್ಮ ಪ್ರದೇಶದ ವೈಲ್ಡ್ ಲೈಫ್ ಜಾಗದಲ್ಲಿ ಶೆಟ್ಟಿಹಳ್ಳಿ ಅಭಾಯರಣ್ಯ ಸಕ್ಕರೇಬೈಲು ರೇಂಜಿನಲ್ಲಿ ಯಾವುದೇ ಪರವಾನಗಿ ಇಲ್ಲದೇ ನಡೆಯುವ ಹೋಟೆಲ್ ದಂಧೆಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ.‌ 


ತುಂಗಾ ನದಿ ತೀರದ  ವನ್ಯಜೀವಿ ವಿಭಾಗದ ಜಾಗದಲ್ಲಿ ಬೃಹದಾಕಾರದ ಕಟ್ಟಡ ನಿರ್ಮಾಣ ಆಗುತ್ತಿದೆ ಆದರೆ ಬಡವರ ರಕ್ತ ಹೀರುವ ಅರಣ್ಯ ಇಲಾಖೆ ಎಲ್ಲಿದೆ?  ವನ್ಯಜೀವಿ ವಿಭಾಗ ನಿದ್ದೆ ಮಾಡ್ತಾ ಇದೆಯಾ? ಎಲ್ಲಿದೆ ಸೆಟ್ ಲೈಟ್ ಮ್ಯಾಫ್?,ಎಲ್ಲಿದ್ದಾರೆ ಡಿ ಎಫ್ ಓ?ಎಲ್ಲಿದ್ದಾರೆ ಆರ್ ಎಫ್ ಓ,? ಎಲ್ಲಿದ್ದಾರೆ ಫಾರೆಸ್ಟ್? ಆಫಿಸರ್,ಎಲ್ಲಿದ್ದಾರೆ ಗಾರ್ಡ?   ಹೇಳೋರಿಲ್ಲಾ ಕೇಳೋರಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. 


ಬಡವರ ಮೇಲೆ ಮಾತ್ರ ದೌರ್ಜನ್ಯ ನಡೆಸುವ ಅರಣ್ಯ ಕಾನೂನು ಪಿಕ್ ಅಂಡ್ ಚೂಸಾ? ರಸ್ತೆ ಮಾಡಲು ಅಡ್ಡ ಬರುವ, ಬಡ ರೈತ ಒಂದು ಗುದ್ದಲಿ ಮಣ್ಣು ತೆಗೆಯಲು ಕೂಡ ಅವಕಾಶ ಕೊಡದ ವನ್ಯಜೀವಿ ವಿಭಾಗ ಈಗೆಲ್ಲಿದೇ ಈ ಕಟ್ಟಡ ಕಟ್ಟಲು ಒಪ್ಪಿಗೆ ಕೊಟ್ಟಿದೆಯಾ? ಅನುನತಿ ಕೊಟ್ಟಿದ್ದರೆ ಇತರೆ ಕಟ್ಟಡಗಳಿಗೆ ಮನೆಗಳಿಗೆ ಯಾಕೆಯಿಲ್ಲ? 


ಈ ರೀತಿ ಇನ್ನೂ ಹತ್ತಾರು ಹೋಟೆಲ್ ನಡೆಸಲು ಅನುಮತಿ ಇರುವುದಾದರೆ,  ಬಡವರ ಮನೆಗಳಿಗೆ ವಾಸಿಸುವ ಜಾಗಗಳಿಗೆ ಯಾಕೆಯಿಲ್ಲ? ಬಡವರ ಉದ್ದಾರಕರೆಂದು ಹೇಳಿಕೊಳ್ಳುವ  ಜನಪ್ರತಿನಿಧಿಗಳೇ ಎಲ್ಲಿದ್ದೀರಿ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಲಾಗುತ್ತಿದೆ. ಅರಣ್ಯ ಇಲಾಖೆ ನಿದ್ದೆಯಿಂದ ಏಳುತ್ತಾ? ಅಥವಾ ಬಡವರಿಗೂ ಸೂರು ಕಟ್ಟಿಕೊಳ್ಳಲು ಅವಕಾಶ ಕೊಡುತ್ತಾ ಕಾದು ನೋಡಬೇಕಿದೆ. 

ಇದನ್ನೂ ಓದಿ-https://www.suddilive.in/2024/08/blog-post_60.html

ಶುಕ್ರವಾರ, ಆಗಸ್ಟ್ 2, 2024

ಭದ್ರ ನಂತರ ತುಂಗ ಜಲಾಶಯದ ಸುತ್ತಮುತ್ತ ನಿಷೇಧಾಜ್ಞೆ



ಸುದ್ದಿಲೈವ್/ಶಿವಮೊಗ್ಗ


ಭದ್ರ ಜಲಾಶಯದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾದ ಬೆನ್ನಲ್ಲೇ ಮತ್ತೊಂದು ಜಲಾಶಯದ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. 


ತುಂಗನದಿ ಜಲಾಶಯದ ಸುತ್ತಮುತ್ತ 500 ಮೀಟರ್ ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಲಿದ್ದು, ಜನಪ್ರತಿನಿಧಿಗಳು ಮತ್ತು ರೈತ ಮುಖಂಡರು ಜಲಾಶಯಕ್ಕೆ ನಿರಂತರವಾಗಿ ಬಾಗಿನ ಅರ್ಪಿಸಲು ಮುಂದಾಗಿದ್ದಾರೆ. 


ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ತುಂಗ ಜಲಾಶಯದ ಸುತ್ತಮುತ್ತ ನಿಷೇಧಾಜ್ಞೆ  ಹೊರಡಿಸಿದ್ದಾರೆ. ತುಂಗ ಜಲಾಶಯಕ್ಕೆ ಒಳಹರಿವು ಏರಳಿತ ಕಂಡಿವೆ. ಇವತ್ತಿಗೂ 30-40 ಸಾವಿರ ಕ್ಯೂಸೆಕ್ ನೀರು‌ ಹರಿದು ಬರುತ್ತಿದೆ ಹಾಗಾಗಿ ಜಲಾಶಯದ ಸುತ್ತಮುತ್ತ ಆದೇಶಿಸಿದ್ದಾರೆ.


ಇದನ್ನೂ ಓದಿ-https://www.suddilive.in/2024/08/blog-post_9.html

ಚಂದನಕೆರೆಯ ಅಂಗಳದಿಂದ ಜಿಲ್ಲಾಧಿಕಾರಿಗಳ ಅಂಗಳಕ್ಕೆ!

 


ಸುದ್ದಿಲೈವ್/ಶಿವಮೊಗ್ಗ


ಚಂದನಕೆರೆ ಎಂಪಿಎಂ ಭೂಮಿಯನ್ನ ಸಾಗುವಳಿ ರೈತರಿಗೆ ಬಿಟ್ಟುಕೊಡಿ ಎಂದು ನಡೆಯುತ್ತಿರುವ ಡಿಎಸ್ಎಸ್ ಅಂಬೇಡ್ಕರ್ ವಾದದ ಪ್ರತಿಭಟನೆ 83 ನೇ ದಿನಕ್ಕೆ ಕಾಲಿಟ್ಟಿದೆ. 82 ದಿನ ಚಂದನಕೆರೆಯಲ್ಲೇ ನಡೆಯುತ್ತಿದ್ದ ಪ್ರತಿಭಟನೆಯನ್ನ ಜಿಲ್ಲಡಳಿತ ನಿನ್ನೆ ಒಕ್ಕಲೆಬ್ಬಿಸಿದೆ.  


ಒಕ್ಕಲೆಬ್ಬಿಸಿದ ಪರಿಣಾಮ ಚಂದನಕೆರೆಯ ಅಂಗಳದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಅಂಗಳಕ್ಕೆ ಡಿಎಸ್ ಎಸ್ ಪ್ರತಿಭಟನೆಯನ್ನ   ಶಿಫ್ಟ್ ಮಾಡಿದೆ. ಜಿಲ್ಲಾಧಿಕಾರಿಗಳ ಅಂಗಳದಲ್ಲಿ ಅಹೋರಾತ್ರಿ ಧರಣಿಗೆ ಡಿಎಸ್ ಎಸ್ ಅಂಬೇಡ್ಕರ್ ವಾದ ಜಿಲ್ಲಾ ಘಟಕ ಮುಂದಾಗಿದೆ.


ದಲಿತ ವಿರೋಧಿ ಜಿಲ್ಲಾಡಳಿತಕ್ಕೆ, ಉಸ್ತುವಾರಿ ಸಚಿವರಿಗೆ ದಿಕ್ಕಾರ ಕೂಗಲಾಗುತ್ತಿದೆ. ಚಂದನಕೆರೆಯ ಸರ್ವೆ ನಂಬರ್ 12 ರಲ್ಲಿ 413 ಎಕರೆ ದನಗಳ ಮುಫತ್ತು ಜಾಗವಿದ್ದು  ಇದರಲ್ಲಿ ಖರಾಬು ಭೂಮಿ 60 ಎಕರೆ, 90 ಎಕರೆ ಸಾಗುವಳಿ ಭೂಮಿಯಾಗಿದೆ.  ಇದರಲ್ಲಿ 28 ಎಕರೆ ದಲಿತರ ಭೂಮಿಗೆ ಸೇರಿದೆ.‌ ಇದರಲ್ಲಿ 263 ಎಕರೆ 

ಯಲ್ಲಿ ಕಿರು ಅರಣ್ಯಕ್ಕೆ 140 ಎಕರೆ ನೀಡಲಾಗಿದೆ. ಉಳಿದ 123 ಎಕರೆಗಳನ್ನ ಗೋಮಾಳಕ್ಕೆ ಬಿಡಲಾಗಿದೆ.  


ಅರಣ್ಯದವರು 140 ಎಕರೆ ಕಿರು ಅರಣ್ಯ ಭೂಮಿ ಸೇರಿ  ದಲಿತರ 28 ಎಕರೆ ಸಾಗುವಳಿ ಭೂಮಿಯನ್ನ ಅರಣ್ಯ ಭೂಮಿ ಎಂದು ಹೇಳಲಾಗುತ್ತಿದ್ದಾರೆ. ನಿನ್ನೆ ಸಾರ್ವಜನಿಕ ಆಸ್ತಿಗಳಿಗೆ  ಚಂದನಕೆರೆಯಲ್ಲಿ ಬಂಧಿಸಲಾಗಿ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿತ್ತು. ಇಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದಜಿಲ್ಲಾ ಸಂಐ ಟನೆ ಶಿಫ್ಟ್ ಮಾಡಿದೆ.


ಸುಳ್ಳಕೇಸು ವಜಾಗೊಳಿಸಬೇಕು. ಬಗುರ್ ಹುಕುಂ ಸಾಗುವಳಿದಾರರಿಗೆಹಕ್ಕುಪತ್ರ ನೀಡಬೇಕು. ದೌರ್ಜನ್ಯ ನಡೆಸಿದ ಅರಣ್ಯ ಅಧಿಕಾರಿಗಳಿಗೆ ಕಾನೂನು ಕ್ರಮ ಜರುಗಿಸಬೇಕು‌ ಎಂದು ಸಂಘಟನಾಕಾರರು ಆಗ್ರಹಿಸಿದ್ದಾರೆ. 


ಪ್ರತಿಭಟನೆಯಲ್ಲಿ  ಡಿಎಸ್ ಎಸ್ ಅಂಬೇಡ್ಕರ್ ವಾದದ ಟಿ.ಹೆಚ್ ಹಾಲೇಶಪ್ಪ, ಶಿವಕುಮಾರ್ ಅಸ್ತಿ ಎಂಆರ್, ಎಡಿ ಆನಂದ್, ವಕೀಲರಾದ ಎಸ್ ಹೆಚ್ ಧನಂಜಯ್, ಅರದೋಟ್ಲು ನವೀನ್, ಕಲ್ಯಾಣ್,  ಹನುಮಂತಪ್ಪ ಮೊದಲಾದವರು ಉಪಸ್ಥಿತರಿದ್ದರು. 

ಇದನ್ನೂ ಓದಿ-https://www.suddilive.in/2024/08/blog-post_31.html

ಎಸಿಪಿ ಚಂದನ್ ಅಮಾನತ್ತುಗೊಳಿಸುವಂತೆ ಹಿಙದೂ ಜಾಗರಣ ವೇದಿಕೆ ಆಗ್ರಹ



ಸುದ್ದಿಲೈವ್/ಶಿವಮೊಗ್ಗ 


ಬೆಂಗಳೂರಿಗೆ ಅಕ್ರಮ ಮತ್ತ ಕಳಪೆ ಮಾಂಸವನ್ನು ಸರಬುರಾಜು ಮಾಡುವವರ ಮೇಲೆ ಕ್ರಮ ಜರುಗಿಸಬೇಕು ಮತ್ತು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಮಾಡಿದ ಎಸಿಪಿ ಚಂದನ್ ಕುಮಾರರವರನ್ನು ಅಮನಾತು ಮಾಡಬೇಕು ಮತ್ತು ರಾಮನಗರದ ಹೆಸರನ್ನು 'ದಕ್ಷಿಣ ಬೆಂಗಳೂರು' ಎಂದು ಮರುನಾಮಕರಣ ಮಾಡಬಾರದು. ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.


ಬೆಂಗಳೂರಿಗೆ ಕಳೆದ ಅನೇಕ ವರ್ಷಗಳಿಂದ ಅಕ್ರಮವಾಗಿ ಹೊರರಾಜ್ಯಗಳಿಂದ ಮ್ಯಾಜೆಸ್ಟಿಕ್ ರೈಲ್ವೇ ನಿಲ್ದಾಣದ ಮೂಲಕ ಬೇರೆ ಬೇರೆ ರೆಸ್ಟೋರೆಂಟ್, ಪ್ರತಿಷ್ಠಿತ ಹೊಟೆಲಗಳಿಗೆ ಅಕ್ರಮ ಮಾಂಸವು ಸರಬುರಾಜಾಗುತ್ತಿದೆ. ಈ ಮಾಂಸವನ್ನು ಅಕ್ರಮವಾಗಿ ಆಹಾರ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಸರಬುರಾಜು ಮಾಡಲಾಗುತ್ತದೆ ಮತ್ತು ಈ ಮಾಂಸವು ಸಾಗಾಣಿಕೆ ಮತ್ತು ಪುರೈಕೆಯ ಅವಧಿಯಲ್ಲಿ ಕೆಟ್ಟು ಹೋಗುತ್ತಿದ್ದು, ಅದನ್ನು ವಿವಿಧ ರಸಾಯನಿಕಗಳಿಂದ ತೊಳೆದು ಸರಬುರಾಜು ಮಾಡಲಾಗುತ್ತಿದೆ. 

ಈ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಹಾಗು ಹಿಂದೂ ಕಾರ್ಯಕರ್ತ ಶ್ರೀ ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಮಾಡಿದ ಎಸಿಪಿ ಚಂದನ್ ಕುಮಾರರವರನ್ನು  ಕರ್ತವ್ಯದಿಂದ ಅಮನಾತುಗೊಳಿಸಬೇಕು. ಹಾಗು ರಾಮನಗರದ ಹೆಸರನ್ನು 'ದಕ್ಷಿಣ ಬೆಂಗಳೂರು' ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಆದೇಶವನ್ನು ರದ್ದು ಪಡಿಸಲು ಕೋರಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಿದರು


ಇದನ್ನೂ ಓದಿ-https://www.suddilive.in/2024/08/108.html

ಗುರುವಾರ, ಆಗಸ್ಟ್ 1, 2024

ಸಾಗರ ಎಆರ್‌ಟಿಓ ಕಚೇರಿಗೆ ಲೋಕಾಯುಕ್ತ ಅನಿರೀಕ್ಷಿತ ಭೇಟಿ



ಸುದ್ದಿಲೈವ್/ಸಾಗರ


ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ, ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಮಂಜುನಾಥ್ ಚೌದರಿರವರು ಪೊಲೀಸ್ ನಿರೀಕ್ಷಕರಾದ ವೀರಬಸಪ್ಪ ಎಲ್ ಕುಸಲಾಪುರ ಮತ್ತು ಸಿಬ್ಬಂದಿಗಳೊAದಿಗೆ ಜುಲೈ 31 ರಂದು ಸಾಗರ ಎ.ಆರ್.ಟಿ.ಓ ಕಛೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಕೈಗೊಂಡಿರುತ್ತಾರೆ.


ಈ ಸಂದರ್ಭದಲ್ಲಿ ಸಾಗರ ಎ.ಆರ್.ಟಿ.ಓ ಕಛೇರಿಯ ಎ.ಆರ್.ಟಿ.ಓ ವೀರೇಶ್ ಡಿ.ಹೆಚ್ ಮತ್ತು ಐ.ಎಂ.ವಿ ಇನ್‌ಪೆಕ್ಟರ್ ವಾಸುದೇವ, ಕಛೇರಿ ಅಧೀಕ್ಷಕರು, ಸಿಬ್ಬಂದಿಯವರು ಮತ್ತು ಡಿಜಿಟಲ್ ಕಾರ್ಡ್ ಪ್ರಿಂಟಿAಗ್ ಸಿಬ್ಬಂದಿಯವರು ಹಾಜರಿದ್ದು, ಸಿಬ್ಬಂದಿಗಳ ಹಾಜರಾತಿ ಮಸ್ತಕ, ಕ್ಯಾಷ್ ಡಿಕ್ಲರೇಷನ್, ಚಲನವಲನ ವಹಿ, ದಸ್ತಾವೇಜುಗಳ ರಿಜಿಸ್ಟರ್‌ಗಳ, ಸಾರಥಿ ಮತ್ತು ವಾಹನ ತಂತ್ರಾAಶವನ್ನು ಪರಿಶೀಲಿಸಿ ಎಲ್.ಎಲ್.ಆರ್., ಡಿ.ಎಲ್., ಎಫ್.ಸಿ., ಹೊಸ ವಾಹನಗಳ ನೊಂದಣಿ, ವಾಹನಗಳ ವರ್ಗಾವಣೆ, 


ದಂಡವಸೂಲಿ, ಡಿಜಿಟಲ್ ಕಾರ್ಡ್ ಪ್ರಿಂಟಿAಗ್, ಆರ್.ಸಿ. ಕಾರ್ಡ್ ವಿತರಣೆ ಮತ್ತು ಸಕಾಲ ಯೋಜನೆಯಡಿಯಲ್ಲಿ ಬಾಕಿ ಇರುವ ಅರ್ಜಿಗಳಿಗೆ ಸಂಬAದ ಪಟ್ಟ ದಾಖಲಾತಿಗಳನ್ನು ಪರಿಶೀಲಿಸಿದ್ದು, ಪರಿಶೀಲನಾ ಸಮಯದಲ್ಲಿ ಕಂಡು ಬಂದ ನ್ಯೂನ್ಯತೆಗಳ ಬಗ್ಗೆ ಎ.ಆರ್.ಟಿ.ಓ ವೀರೇಶ್.ಡಿ.ಹೆಚ್ ರವರಿಗೆ ಸ್ಥಳದಲ್ಲಿಯೇ ಸೂಚನೆಗಳನ್ನು ನೀಡಲಾಗಿದ್ದು, ನ್ಯೂನ್ಯತೆಗಳ ಬಗ್ಗೆ ಕ್ರಮವಹಿಸಿ ಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚನೆಗಳನ್ನು ನೀಡಿರುತ್ತಾರೆ.


ಇದನ್ನೂ ಓದಿ -https://www.suddilive.in/2024/08/blog-post_48.html

ಬುಧವಾರ, ಜುಲೈ 31, 2024

ಚಂದನಕೆರೆ-ಯಡೇಹಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರತಿಭಟನೆ ಅಂತ್ಯಗೊಳಿಸಲು ಜಿಲ್ಲಾಧಿಕಾರಿಗಳಿಂದ ಮನವಿ



ಸುದ್ದಿಲೈವ್/ಭದ್ರಾವತಿ


ಹೊಳೆಹೊನ್ನೂರು ಚಂದನಕೆರೆ ಸರ್ವೆ ನಂ. 12 ಎಂ.ಪಿ.ಎಂ. ನೆಡುತೋಪು ಮತ್ತು ಯಡೇಹಳ್ಳಿ ಸರ್ವೆ ನಂ. 66 ರಲ್ಲಿನ ಅರಣ್ಯ ಪ್ರದೇಶದಲ್ಲಿ ಮಂಜೂರಾದ ಹಕ್ಕುಪತ್ರಗಳನ್ನು ವಜಾ ಮಾಡಿರುವ ವಿರುದ್ಧ ದಲಿತ ಸಂಘಟನೆಗಳು ಹಾಗೂ ಮಾನವ ಹಕ್ಕು ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ನಿರ್ದೇಶಕರು ಅರಣ್ಯ ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡವು ಪ್ರತಿಭಟನೆ ಅಂತ್ಯಗೊಳಿಸುವಂತೆ ಮನವಿ ಮಾಡಿದರು.


ಚಂದನಕೆರೆ ಸ.ನಂ.12ರಲ್ಲಿ 1980 ರಿಂದ ಎಂ.ಪಿ.ಎಂ. ರವರ ಸ್ವಾಧೀನದಲ್ಲಿದ್ದು, ನೀಲಗಿರಿ ನೆಡುತೋಪು ಇರುತ್ತದೆ. 2012-13 ರಲ್ಲಿ ಭದ್ರಾವತಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಸ್ವಾಧೀನ ಕೋರಿದ ಪ್ರಕರಣಗಳು ವಜಾ ಆಗಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಪ್ರತಿಭಟನಾಕಾರರ ಮನವಿಯನ್ನು ವಿಲೇ ಮಾಡಲು ಕಷ್ಟಸಾಧ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಪ್ರತಿಭಟನಾಕಾರರಿಗೆ ತಿಳುವಳಿಕೆ ನೀಡಿದರು.


ಪ್ರತಿಭಟನೆ ಮಾಡುತ್ತಿರುವ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಓಡಾಡುವ ಸ್ಥಳವಾಗಿದ್ದು, ಮಳೆಗಾಲ ಆಗಿದ್ದರಿಂದ ಗುಡುಗು ಮಿಂಚಿಗೆ ಪ್ರಾಣ ಹಾನಿಯಾಗುವ ಸಂಭವವಿರುತ್ತದೆ. ಇದು ಪ್ರತಿಭಟನೆ ಮಾಡಲು ಸೂಕ್ತ ಸ್ಥಳವಲ್ಲದ್ದರಿಂದ ಈ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ದಕ್ಕೆ ಆಗುವ ಸಂಭವವಿರುತ್ತದೆ. ಮತ್ತು ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುವುದು ಅಪರಾಧವಾಗಿರುತ್ತದೆ ಆದ್ದರಿಂದ ಪ್ರತಿಭಟನೆಯನ್ನು ಬೇರೆಡೆಗೆ ಸ್ಥಳಾಂತರಿಸಿ ಪ್ರತಿಭಟನೆಯನ್ನು ಕೈ ಬಿಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು. 


ಚಂದನಕೆರೆ ಸ. ನಂ. 12 ಎಂ.ಪಿ.ಎಂ. ನೆಡುತೋಪು ಪ್ರದೇಶವಾಗಿದ್ದು, ತೀವ್ರತರವಾದ ಅರಣ್ಯ ಪ್ರದೇಶವನ್ನು ಹೊಂದಿದೆ.  ಅರಣ್ಯ ನಾಶವು ಉಪಗ್ರಹ ಆಧಾರಿತವಾಗಿ ಗುರುತಿಸಿ ದಾಖಲಾಗಿರುತ್ತದೆ.  ಯಡೇಹಳ್ಳಿ ಸ.ನಂ.66 ಕಿರು ಅರಣ್ಯ ಪ್ರದೇಶವಾಗಿದ್ದು, ಅರಣ್ಯ ಪ್ರದೇಶದಲ್ಲಿ ಮಂಜೂರಾದ ಹಕ್ಕು ಪತ್ರಗಳನ್ನು ಪ್ರಾದೇಶಿಕ ನ್ಯಾಯಾಲಯವು ವಜಾ ಮಾಡಿರುತ್ತದೆ.  ಅರಣ್ಯ ಪ್ರದೇಶದಲ್ಲಿ ಮಂಜೂರಾತಿ ಮತ್ತು ಸಾಗುವಳಿ ನೀಡುವುದು ಅರಣ್ಯ ಸಂರಕ್ಷಣಾ ಕಾಯ್ದೆ-1980ರ ಅನ್ವಯ ನಿಷಿದ್ಧವಾಗಿರುತ್ತದೆ.  ಹಾಗೂ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳು ಅರಣ್ಯ ಪ್ರದೇಶಗಳಲ್ಲಿ ಮಂಜೂರಾತಿ ವಿರುದ್ಧ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿ ಸಾಗುವಳಿ ಮಾಡುವುದು ತಪ್ಪಾದ ಕ್ರಮವಾಗಿದೆ ಎಂದು ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರತಿಭಟನಾ ನಿರತರಿಗೆ ವಿವರಿಸಿದರು. 


ಚಂದನಕೆರೆ ಮತ್ತು ಯಡೇಹಳ್ಳಿ ಪ್ರದೇಶವು ಎಂ.ಪಿ.ಎಂ. ನೆಡುತೋಪು ಮತ್ತು ಅರಣ್ಯ ಪ್ರದೇಶವಾಗಿದ್ದು, ಈ ಪ್ರದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪುಗಳು ಇರುವುದರಿಂದ ಮಂಜೂರಾತಿಗಳನ್ನು ಕಾನೂನುಗಳ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುವುದು. ಆದ್ದರಿಂದ ಪ್ರತಿಭಟನೆಯನ್ನು ಕೈಬಿಡುವಂತೆ ಜಿಲ್ಲಾಡಿಳಿತದವರು ಮನವಿ ಮಾಡಿದರು.  


ಈ ಸಂದರ್ಭದಲ್ಲಿ ಭದ್ರಾವತಿ ತಹಶೀಲ್ದಾರರು ಮತ್ತು ತಾಲೂಕಿನ ಕಂದಾಯ, ಅರಣ್ಯ, ಎಂ.ಪಿ.ಎಂ. ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು. 


ಇದನ್ನೂ ಓದಿ-https://www.suddilive.in/2024/07/blog-post_910.html

ಬುಧವಾರ, ಜುಲೈ 24, 2024

74 ದಿನಗಳಿಂದ ಹೋರಾಟ ನಡೆಸುತ್ತಿದ್ದ ಡಿಎಸ್ ಎಸ್ ಅಂಬೇಡ್ಕರ್ ವಾದ ಸಂಘಟನೆಯ ಪ್ರತಿಭಟನೆಗೆ ಅಡ್ಡಿ

 

ಚಂದನ ಕೆರೆಯ ಸರ್ವೆ ನಂಬರ್ 12 ರಲ್ಲಿ ದಲಿತರ ಹೋರಾಟ

ಸುದ್ದಿಲೈವ್/ಭದ್ರಾವತಿ


ಭದ್ರಾವತಿಯ ಚಂದನ ಕೆರೆಯ  ಸರ್ವೆ ನಂಬರ್ 12 ರಲ್ಲಿರುವ ಜಮೀನನನ್ನ ದಲಿತರಿಗೆ ಅಳತೆ ಮಾಡಿಕೊಟ್ಟು ಹಂಚಬೇಕೆಂದು ಆಗ್ರಹಿಸಿ ಕಳೆದ 74 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಗೋವುಗಳನ್ನ ಬಿಟ್ಟು ಅಡ್ಡಿಪಡಿಸುವ ಪ್ರಯತ್ನ ನಡೆದಿದೆ. 


ಭದ್ರಾವತಿಯ ಚಂದನಕೆರೆ ಸರ್ವೆ‌ನಂಬರ್ 12 ರಲ್ಲಿ 1961 ರಿಂದ ದಲಿತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. 1961 ರಿಂದ 1984 ರವರೆಗೆ ಸಾಗುವಳಿ ಮಾಡಿಕೊಂಡು ಬಂದ ದಲಿತ ರೈತರನ್ನ ಒಕ್ಕಲೆಬ್ಬಿಸಿ ಎಂಪಿಎಂ ನೆಡುತೋಪು ನಿರ್ಮಿಸಲು ಅವಕಾಶ ನೀಡಲಾಗಿತ್ತು. 


1984 ರಿಂದ ದಲಿತ ರೈತರು ಸರ್ಕಾರಕ್ಕೆ ಪತ್ರ ಬರೆಯುವ ಮುಲಕ ಜಮೀನು ಬಿಟ್ಟಕೊಡಲು ಆಗ್ರಹಿಸುತ್ತಾ ಬರಲಾಗಿದೆ. ಇದರ ಅಂಗವಾಗಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಸಹ ಸಂಚಾಲಕ ಹಾಲೇಶಪ್ಪನವರ ನೇತೃತ್ವದಲ್ಲಿ ಎಂಪಿಎಂ ಭೂಮಿಯನ್ನ ದಲಿತರಿಗೆ ಬಿಟ್ಟುಕೊಡುವಂತೆ ಆಗ್ರಹಿಸಿ ಕಳೆದ 74 ದಿನಗಳಿಂದ ಪ್ರತಿಭಟಿಸುತ್ತಾ ಬಂದಿದ್ದಾರೆ. 



ಇಂದು ಗೋಮಾಳ ಜಾಗವನ್ನ ಕಬಳಿಸಿಕೊಂಡು ಬಂದ ಕೆಲ ಪಟ್ಟಭದ್ರ ಹಿತಾಸಕ್ತರು ಪ್ರತಿಭಟನಾಕಾರರ ಮೇಲೆ ಗೋವುಗಳನ್ನ ಬಿಟ್ಟು ಪ್ರತಿಭಟನೆ ನಿಲ್ಲಿಸಲು ಯತ್ನಿಸಿದ್ದಾರೆ. ಪ್ರತಿಭಟನಾ ಜಾಗದಲ್ಲಿ ಮೆಕ್ಕೆ ಜೋಳವನ್ನ ನೆಟ್ಟು ಅಡ್ಡಿಪಡಿಸಲಾಗಿದೆ ಎಂದು ಡಿಎಸ್ ಎಸ್ ಅಂಬೇಡ್ಕರ್ ವಾದ ಆರೋಪಿಸಿದೆ. 

ಅಡ್ಡಿಪಡಿಸಲು ಬಂದವರೇ  ಪೊಲೀಸ್ ಠಾಣೆಗೆ ಹೋಗಿ ಪ್ರತಿಭಟನಾಕರಾರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. 


ಇದನ್ನೂ ಓದಿ-https://www.suddilive.in/2024/07/blog-post_988.html

ಭದ್ರ ಒಳಹರಿವು ಇಳಿಮುಖ, ಲಿಂಗನಮಕ್ಕಿಯಲ್ಲಿ ಎಷ್ಟು?

ಶರಾವತಿ ಹಿನ್ನೀರು


ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಇದರಿಂದ ಜಿಲ್ಲೆಯ ಪ್ರಮುಖ ನದಿಗಳ ಜಲಾಶಯಗಳ ಒಳಹರಿವು ಸಹ ಕಡಿಮೆಯಾಗಿದೆ. 

ಭದ್ರಾ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ನಿನ್ನೆ 20,045 ಕ್ಯೂಸೆಕ್‌ ಒಳ ಹರಿವು ದಾಖಲಾಗಿತ್ತು. ಇಂದು 15 ಸಾವಿರ ಕ್ಯೂಸೆಕ್‌ ಒಳಹರಿವು ದಾಖಲಾಗಿದೆ. ನಿನ್ನೆ 168.2 ಅಡಿಗೆ ಇದ್ದ ಜಲಾಶಯದ ಮಟ್ಟ ಇಂದು 169.5 ಅಡಿಗೆ ಏರಿಕೆಯಾಗಿದೆ.

ತುಂಗಾ ಜಲಾಶಯದ ಒಳ ಹರಿವು ಪ್ರಮಾಣ ಕೊಂಚ ಏರಿಕೆಯಾಗಿದೆ. ನಿನ್ನೆ ಜಲಾಶಯಕ್ಕೆ 31,362 ಕ್ಯೂಸೆಕ್‌ ಒಳ ಹರಿವು ಇತ್ತು. ಇಂದು 34900 ಕ್ಯೂಸೆಕ್ ಹರಿದು ಬರುತ್ತಿದೆ. 33 ಸಾವಿರ ಕ್ಯೂಸೆಕ್ ನೀರನ್ನ ನದಿಗೆ 21 ಗೇಟಿನ ಮೂಲಕ ಹರಿಸಲಾಗುತ್ತಿದ್ದು, 1900 ಕ್ಯೂಸೆಕ್ ನೀರು ಕ್ಯಾನೆಲ್ ಗಳಿಗೆ ಹರಿಸಲಾಗುತ್ತಿದೆ. 

ಲಿಂಗನಮಕ್ಕಿ ಜಲಾಶಯಕ್ಕೆ ನಿನ್ನೆ ಒಳ ಹರಿವು 41,269 ಕ್ಯೂಸೆಕ್‌ ಇತ್ತು. ಇಂದು 58619 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1892 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯದ ನೀರಿನ ಮಟ್ಟ ನಿನ್ನೆ 1799 ಅಡಿಗೆ ಏರಿಕೆಯಾಗಿತ್ತು.  ಇಂದು 1801 ಅಡಿ ನೀರು ಸಂಗ್ರಹವಾಗಿದೆ.  ಒಟ್ಟು 151.65 ಟಿಎಂಸಿ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 98.40 ಟಿಎಂಸಿ ನೀರು ಸಂಗ್ರಹವಾಗಿದೆ.


ಇದನ್ನು ಓದಿ-https://www.suddilive.in/2024/07/blog-post_931.html

ಮಂಗಳವಾರ, ಜುಲೈ 23, 2024

ಜು.25 ರಂದು ವಿದ್ಯುತ್ ವ್ಯತ್ಯಯ

ಮೆಸ್ಕಾಂ ಕಚೇರಿ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ನಗರ ಉಪವಿಭಾಗ-2ರ ಮಂಡ್ಲಿ ಘಟಕ-6ರ ವ್ಯಾಪ್ತಿಯಲ್ಲಿ ಹೊಸ 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿದ್ದು, ಜು.25ರ ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. 

 

ಪೇಪರ್ ಪ್ಯಾಕೇಜ್, ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಮಾಕಮ್ಮಬೀದಿ, ಕೆರೆದುರ್ಗಮ್ಮನ ಬೀದಿ, ಪುಟ್ಟನಂಜಪ್ಪಕೇರಿ, ಆಜಾದ್ ನಗರ, ಕಲಾರ್ ಪೇಟೆ, ಸಿದ್ದಯ್ಯ ರಸ್ತೆ, ಇಮಾಮ್ ಬಡಾ, ಮುರಾದ್‍ನಗರ, ಕ್ರೌನ್ ಪ್ಯಾಲೇಸ್ ಶಾದಿಮಹಲ್, ತಾಹಾ ಶಾದಿಮಹಲ್, ಮಂಡಕ್ಕಿಭಟ್ಟಿ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಕೆ.ಆರ್. ಕುಡಿಯುವ ನೀರಿನ ಸ್ಥಾವರ, ನ್ಯೂಮಂಡ್ಲಿ, ಮಂಜುನಾಥ ಪೆಟ್ರೋಲ್ ಬಂಕ್, ವಿಜಯವಾಣಿ ಪ್ರೆಸ್ ಹತ್ತಿರ, ಎನ್.ಟಿ.ರಸ್ತೆ, ಹರಕೆರೆ, ಹಳೇ ಮಂಡ್ಲಿ, ಗಂಧರ್ವನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, 


ಗಜಾನನ ಗ್ಯಾರೇಜ್, ಮಂಜುನಾಥ ರೈಸ್ ಮಿಲ್, ಬೆನಕೇಶ್ವರ ರೈಸ್ ಮಿಲ್, ಸವಾಯಿಪಾಳ್ಯ, ಕುರುಬರ ಪಾಳ್ಯ, ಇಲಿಯಾಜ್ ನಗರ 1 ರಿಂದ 4ನೇ ಕ್ರಾಸ್, 100 ಅಡಿರಸ್ತೆ, ಕಾಮತ್ ಲೇಔಟ್, ಎಫ್-05 ಗಾಜನೂರು ಗ್ರಾಮಾಂತರ ಪ್ರದೇಶ, ಎಫ್-8 ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ, ಎಫ್-18 ಹೊಸಳ್ಳಿ, ಶರಾವತಿನಗರ, ಶಾರದ ಕಾಲೋನಿ ಮತ್ತು ಸುತ್ತಮುತ್ತಲಿನ ಐಪಿ ಲಿಮಿಟ್‍ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. 

ಇದನ್ನೂ ಓದಿ-


https://www.suddilive.in/2024/07/blog-post_324.html

ಸೋಮವಾರ, ಜುಲೈ 22, 2024

ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸಿಐಟಿಯು ಸಂಘಟನೆ


 

ಸುದ್ದಿಲೈವ್/ಶಿವಮೊಗ್ಗ


ನಿವೃತ್ತಿ ಹೊಂದಿದ ಅನ್ನದಾಸೋಹ ನೌಕರರಿಗೆ ಇಡಿಗಂಟು ನೀಡಲು ಅಧಿಸೂಚನೆ ಹೊರಡಿಸಿರುವ ಸರ್ಕಾರಕ್ಕೆ ಅಕ್ಷದಾಸೋಹ ನೌಕರರ ಸಂಘ (ಸಿಐಟಿಯು) ಧನ್ಯವಾದ ತಿಳಿಸಿದೆ. 


ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆ ಅಡಿ ನೇಮಕಗೊಂಡು 60 ವರ್ಷಗಳನ್ನ‌ ಪೂರೈಸಿ ಕರ್ತವ್ಯದಿಂದ ಬಿಡುಗಡೆಗೊಳ್ಳುವ ಅಡುಗೆ ಸಿಬ್ಬಂದಿಗೆ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನ ವಿಸ್ತರಿಸಲು ಒಪ್ಪಿಕೊಂಡಿದೆ. 


15 ವರ್ಷ ಹಾಗೂ ಅದಕ್ಕೂ ಹೆಚ್ಚಿನ ಅವಧಿಗೆ ಸೇವೆಸಲ್ಲಿಸಿ ನಿವೃತ್ತಿಗೊಂಡ ಅಡುಗೆ ಸಿಬ್ಬಂದಿಗಳಿಗೆ 40 ಸಾವಿರ ರೂ. ಇಡಿಗಂಟು ನೀಡಲು, 5 ವರ್ಷಕ್ಕೂ ಮೇಲ್ಪಟ್ಟು ಹಾಗೂ 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ ನಿವೃತ್ತಿಯಾದ 30 ಸಾವಿರ ರೂ. ಇಡಿಗಂಟು, ಕನಿಷ್ಠ 5 ವರ್ಷ ಸೇವೆಯನ್ನ ಪೂರ್ಣಗೊಳಿಸಿದ ಅಡುಗೆ ಸಿಬ್ಬಂದಿಗೆ ಒಂದು ಬಾರಿ ಇಡಿಗಂಟು ಸೌಲಭ್ಯ ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. 


ಈ ಸೌಲಭ್ಯಕ್ಕಾಗಿ ಸಿಐಟಿಯು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿತ್ತು. ಜು.15 ರಂದು  ಇಡಿಗಂಟು ನೀಡುವಂತೆ ಮತ್ತು ವಿವಿಧಬೇಡಿಕೆಗೆ ಒತ್ತಾಯಿಸಿ ಸಂಘಟನೆ ಪ್ರತಿಭಟಿಸಿತ್ತು. ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಸಂಘಟನೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದೆ. 


ಮುಂದಿನ ದಿನಗಳಲ್ಲಿ ಸಂಬಳ ಹೆಚ್ಚಿಸುವುದಾಗಿ ಮತ್ತು ಇಡಿಗಂಟು ಹೆಚ್ಚಿಸುವ ಭರವಸೆ ಇದೆ. ಈ ಭರವಸೆ ಈಡೇರದಿದ್ದರೆ ಮತ್ತೆ ಪ್ರತಿಭಟನಿಸುವುದಾಗಿ ಎಚ್ಚರಿಸಿದೆ. 


ಇದನ್ನೂ ಓದಿ-https://www.suddilive.in/2024/07/45.html

ಭಾನುವಾರ, ಜುಲೈ 21, 2024

ನೀರಿನಲ್ಲಿ ಈಜಿ ವಿದ್ಯುತ್ ಸಂಪರ್ಕ ಸರಿಪಡಿಸಿದ ಪವರ್ ಮ್ಯಾನ್

ಸುದ್ದಿಲೈವ್/ತೀರ್ಥಹಳ್ಳಿ


ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರವ ಮಳೆ ಹಿನ್ನೆಲೆಯಲ್ಲಿ ಹಳ್ಳದಿಣ್ಣೆಗಳು ತುಂಬಿ ತುಳುಕುತ್ತಿವೆ. ಅದರಂತೆ ವಿದ್ಯುತ್ ತಂತಿ ಸರಿಪಡಿಸಲು ಪವರ್ ಮ್ಯಾನ್ ವೊಬ್ಬ ಸಾಹಸ ಮೆರೆದಿದ್ದಾನೆ.



ವಿದ್ಯುತ್ ಸಂಪರ್ಕ ಕಲ್ಪಿಸಲು ಪವರ್ ಮ್ಯಾನ್ ವೊಬ್ಬ ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿಪಡಿಸಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಅರೇಹಳ್ಳಿ ಗ್ರಾ. ಪಂ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ನೀರಿನ ಮಧ್ಯೆ ಇದ್ದ ವಿದ್ಯುತ್ ತಂತಿ ತುಂಡಾದ ಹಿನ್ನೆಲೆಯಲ್ಲಿ ಕೆಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ವ್ಯತ್ಯಗೊಂಡಿದೆ. ನೀರಿಗೆ ಇಳಿದ ಸಿಬ್ಬಂದಿ ವಿದ್ಯುತ್ ಸಂಪರ್ಕ ಸರಿಪಡಿಸಿದ್ದಾನೆ. 

ನೀರಿನಲ್ಲಿ ಈಜಿ ತೆರಳುತ್ತಿರುವ ಪವರ್ ಮ್ಯಾನ್ ಸಂತೋಷ್


ನೀರಿಗೆ ಜಿಗಿದು ಸಂಪರ್ಕ ಸರಿಪಡಿಸಿದ ಪವರ್ ಮ್ಯಾನ್ ನನ್ನ ಸಂತೋಷ್ ಎಂದು ತಿಳಿದುಬಂದಿದೆ. ಕಲಬುರ್ಗಿ ಮೂಲಕ ಸಂತೋಷ್ ಮಲೆನಾಡಿನ ಜಲಾವೃತ ಪ್ರದೇಶದಲ್ಲಿರುವ ವಿದ್ಯುತ್ ಕಂಬಕ್ಕೆ ತೆರಳಲು ಸಾಹಸ ಪಟ್ಟಿದ್ದಾನೆ. ಆಗುಂಬೆ ಭಾಗಕ್ಕೆ ಕಮ್ಮರಡಿಯ ಸಬ್ ಡಿವಿಜನಿಂದ ಈ ವಿದ್ಯುತ್ ಸಂಪರ್ಕ ಕಲ್ಪಿಸ ಲಾಗಿದೆ. 


ಈತ ನೀರಿನಲ್ಲಿ ಈಜು ಹೊಡೆದುಕೊಂಡು ಹೋಗಿದ್ದು ತಪ್ಪು ಎನಿಸಿರಬಹುದು. ಆದರೆ ಮಲೆನಾಡಿನಲ್ಲಿ ಸುರಿದ ಮಳೆ ಅವಾಂತರವನ್ನ ಸೃಷ್ಠಿಸಿದೆ. ನೀರಿನಲ್ಲಿ ಇಳಿಯುವಾಗ ಸುರಕ್ಷತೆ ಇಲ್ಲದಿರುವುದು ತಪ್ಪಾಗಿದೆ.ಈ ಸಂಪರ್ಕವು ಸರಿ ಮಾಡಿದೆ ಇದ್ದರೆ ಮೂರು ಪಂಚಾಯಿತಿ ವಿದ್ಯುತ್ ಸಂಪರ್ಕ ಇಲ್ಲದಂತಾಗುತ್ತಿತ್ತು. ಇದನ್ನ ಮನಗಂಡು ನೀರಿಗೆ ಧುಮಕಿದ ಸಂತೋಷ್  ದುರಸ್ತಿ ಕೆಲಸ ನಡೆಸಿದ್ದಾನೆ.