ಸೊರಬ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸೊರಬ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 15, 2024

ಸೊರಬದಲ್ಲಿ ಸಂಭ್ರಮದ ತಿರು ಓಣಂ



ಸುದ್ದಿಲೈವ್/ಸೊರಬ


ಪಟ್ಟಣ ಸೇರಿ ಸುತ್ತಲಿನ ಪ್ರದೇಶದಲ್ಲಿ ಮಲಯಾಳಿ ಭಾಷಿಕರು ತಿರು ಓಣಂ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು.


ಮಳೆಗಾಲ ಮುಗಿಯುವ ಹೊತ್ತಿನಲ್ಲಿ ಆರಂಭವಾಗುವ ಓಣಂ ಸಂದರ್ಭದಲ್ಲಿ ಕೃಷಿಕರ ಮೊದಲ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತಿದೆ. ಕೃಷಿಗೆ ಸಂಬಂಧಿಸಿದಂತೆ ಮೊದಲ ಬೆಳೆಯ ಸಂಭ್ರಮದ ಹಬ್ಬವೂ ಆಗಿದೆ.


ಮಹಾದಾನಿ ಮಹಾಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಸಿಂಹಮಾಸದ ಶ್ರಾವಣ ನಕ್ಷತ್ರದಂದು ಭೂಲೋಕಕ್ಕೆ ಬರುತ್ತಾನೆ ಎಂಬ ನಂಬಿಕೆ ಕೇರಳಿಗರಲ್ಲಿ ಇದೆ. ಈ ಕಾರಣದಿಂದಲೂ ಹಬ್ಬ ಪ್ರಾಮುಖ್ಯತೆ ಪಡೆದಿದೆ.


ಹೊಸ ಉಡುಗೆ, ತೊಡುಗೆ ತೊಟ್ಟ ಮಹಿಳೆಯರು, ಮಕ್ಕಳು ಒಟ್ಟಿಗೆ ಸೇರಿ ತಮ್ಮ ಮನೆಯಂಗಳದಲ್ಲಿ ಓಣಂ ಹಬ್ಬದ ವೈಶಿಷ್ಟ್ಯ ಎನಿಸಿದ ಹೂವಿನ ರಂಗೋಲಿ (ಪೊಳಕಂ) ಬಿಡಿಸಿದ್ದು ಗಮನ ಸೆಳೆಯಿತು.


ಮನೆಯಂಗಳವನ್ನು ಸಿಂಗರಿಸಿದ ಮಹಿಳೆಯರು ಕೇರಳದ ಸಂಸ್ಕೃತಿ ಪ್ರತಿಬಿಂಬಿಸುವ ಸಾಂಪ್ರದಾಯಿಕ ಸೀರೆ ಧರಿಸಿ ಹೂವಿನ ರಂಗೋಲಿಗೆ ದೀಪವನ್ನು ಬೆಳಗಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬಕ್ಕಾಗಿ ತಯಾರಿಸಿದ್ದ ವಿಶೇಷ ಭೋಜನವನ್ನು ಎಲ್ಲರೂ ಸೇರಿ ಸವಿದರು.


ಸೊರಬ ಪಟ್ಟಣದ ರಾಕೇಶ್ ಮತ್ತು ರಾಜೇಶ್ ಸಹೋದರರ ನಿವಾಸದಲ್ಲಿ‌ ತಿರು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸೋಮವಾರ, ಆಗಸ್ಟ್ 26, 2024

ಔಷಧ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷ-ಯವಕ ಸಾವು

 


ಸುದ್ದಿಲೈವ್/ಸೊರಬ

ತೋಟದಲ್ಲಿ ಅಡಿಕೆ (Areca) ಮರಗಳಿಗೆ ಔಷಧ ಸಿಂಪಡಿಸುವ ವೇಳೆ ವಿದ್ಯುತ್‌ ಪ್ರವಹಿಸಿ ರೈತ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೊರಬ ತಾಲೂಕು ಓಟೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ.


ಅಡಿಕೆ ಮರಗಳ ಹಿಂಗಾರಕ್ಕೆ ಕೊಳೆ ಔಷಧ ಸಿಂಪಡಿಸುವಾಗ ವಿದ್ಯುತ್ ತಂತಿಗೆ ಕೊಳೆ ಔಷಧ ತಗುಲಿದೆ. ಅದರಿಂದ ವಿದ್ಯುತ್‌ ಪ್ರವಹಿಸಿ ಆನವಟ್ಟಿ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶ್ರೀಕಾಂತ (35) ಮೃತಪಟ್ಟಿದ್ದಾರೆ


ತಂದೆ ಮತ್ತು ಅಣ್ಣನ ಜತೆ ಭಾನುವಾರ ಓಟೂರು ಗ್ರಾಮದ ವಿಶ್ವ ಎಂಬುವರ ತೋಟದ ಅಡಿಕೆಗೆ ಕೊಳೆ ಔಷಧ ಸಿಂಪಡಿಸಲು ಹೋಗಿದ್ದರು. ತೋಟದ ಪಕ್ಕದಲ್ಲಿ ವಿದ್ಯುತ್ ತಂತಿ ಹಾದು ಹೋಗಿದೆ. ಸಿಂಪಡಿಸುವ ಔಷಧ ತಂತಿಗೆ ತಗುಲಿದೆ. ಔಷಧ ಸಿಂಪಡಿಸುವ ಪೈಪ್‌ನಿಂದ ವಿದ್ಯುತ್ ಪಸರಿಸಿದ ಪರಿಣಾಮ ಶ್ರೀಕಾಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲ್ಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುಕ್ರವಾರ, ಆಗಸ್ಟ್ 23, 2024

ಕರಾಟೆ ಕಲಿಕೆ ಅತ್ಯಂತ ಪ್ರಯೋಜನಕಾರಿ-ಪುರಸಭೆ ಸದಸ್ಯೆ ಪ್ರೇಮಾ ಟೋಕಪ್ಪ



ಸುದ್ದಿಲೈವ್/ಸೊರಬ


ಹೆಣ್ಣುಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಕರಾಟೆ ಕಲಿಕೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಏಕಾಗ್ರತೆಯು ಸಹ ಹೆಚ್ಚಾಗುತ್ತದೆ ಎಂದು ಪುರಸಭೆ ಸದಸ್ಯೆ ಪ್ರೇಮಾ ಟೋಕಪ್ಪ ಹೇಳಿದರು. 


ಶುಕ್ರವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ಹಮ್ಮಿಕೊಂಡ ಕರಾಟೆ ತರಬೇತಿ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 


ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳು ಸಂಕೋಚಪಡದೆ ಕರಾಟೆಯನ್ನು ಶ್ರದ್ದೆಯಿಂದ ಕಲಿಯಬೇಕು. ವಿದ್ಯಾರ್ಥಿನಿಯರು ಕರಾಟೆ ತರಬೇತಿ ಪಡೆದರೆ ಧೈರ್ಯ ಹೆಚ್ಚುತ್ತದೆ. 



ಯಾರಾದರೂ ಆಕ್ರಮಣ ಮಾಡಿದರೆ ಅದರಿಂದ ಪರಾಗಲು ಅನುಕೂಲವಾಗುತ್ತದೆ ಎಂದ ಅವರು, ಕ್ಷೇತ್ರದ ಶಾಸಕರಾದ ಎಸ್. ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾಗಿರುವುದು ಹೆಮ್ಮೆಯ ವಿಷಯ. ಈಗಾಗಲೇ ಸಚಿವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸರ್ಕಾರವೂ ಸಹ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯವನ್ನು ಕಲ್ಪಿಸುತ್ತಿದೆ ಇದರ ಸದುಪಯೋಗ ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು. 


ಸಾಗರ ಕರಾಟೆ ಇನ್ಸ್ಟಿಟ್ಯೂಟ್‍ನ ಕರಾಟೆ ತರಬೇತುದಾರ ಶಿಹಾನ್ ಪಂಚಪ್ಪ ಮಾತನಾಡಿ, ಕರಾಟೆ ಕಲಿಕೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಜೊತೆಗೆ ಆತ್ಮರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. 


ಓದಿನಲ್ಲಿ ಆಸಕ್ತಿ ಮೂಡಲು ಸಹ ಅನುಕೂಲವಾಗುತ್ತದೆ. ನಾಯಕತ್ವದ ಗುಣ ಬೆಳೆಸಿಕೊಳ್ಳಬಹುದು. ಕರಾಟೆಯಲ್ಲಿ ಸಾಧನೆ ಮಾಡಿದರೆ ಉನ್ನತ ಶಿಕ್ಷಣ ಪಡೆಯಲು ಮೀಸಲಾತಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಆಸಕ್ತಿಯಿಂದ ಕರಾಟೆ ಕಲಿಯಬೇಕು ಎಂದರು. 


ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಮತ್ತು ಶಿಕ್ಷಣ ಇಲಾಖೆಯಿಂದ ಶೋ ವಿತರಿಸಲಾಯಿತು. ನಂತರ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಯಿತು. 


ಶಾಲೆಯ ಮುಖ್ಯ ಶಿಕ್ಷಕಿ ಬಿ. ಗೀತಾ ಪ್ರಾಸ್ತಾವಿಕ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತ್ಯಾಗರಾಜ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭವಾನಿ, ಸಿಆರ್ ಪಿ ಸುಧಾ, ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯಾಧಿಕಾರಿ ಎಚ್.ವೈ. ರಕ್ಷಿತಾ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಎಂ. ಶೀಲಾ, 


ಶಿಕ್ಷಕಿಯರಾದ ವಿದ್ಯಾ, ಜ್ಯೋತಿ, ಸುನಿತಾ, ರೂಪಾ, ಅಮೃತಾ ಸೇರಿದಂತೆ ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ತುಳಸಾ ನಾಯ್ಕ್ ಸ್ವಾಗತಿಸಿ, ಮುದಿಗೌಡರ್ ವಂದಿಸಿ, ಅರುಣ್ ಕುಮಾರ್ ನಿರೂಪಿಸಿದರು.