ಅಪರಾಧ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಪರಾಧ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಸೆಪ್ಟೆಂಬರ್ 7, 2024

ಹೆಡ್‌ಕಾನ್‌ಸ್ಟೇಬಲ್, ಮಹಿಳೆ ಹಾಗೂ ಹನಿಟ್ರ್ಯಾಪ್

 


ಸುದ್ದಿಲೈವ್/ರಿಪ್ಪನ್‌ಪೇಟೆ 


ಪಟ್ಟಣದ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಜಾತಿ ನಿಂದನೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ದಾಖಲಾಗಿದ್ದು ದೂರು ನೀಡಿದ ಮಹಿಳೆ ಹಾಗೂ ಆತನ ಪತಿ ವಿರುದ್ದ ಹನಿಟ್ರ್ಯಾಪ್ ಪ್ರಕರಣವೂ ದಾಖಲಾಗಿದೆ.


ಹೌದು.. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಎ ಎನ್ ಎಂಬುವವರ ವಿರುದ್ದ ಸಾಗರದ ಶೈಲಜಾ ಎಂಬುವವರು ಜಾತಿ ನಿಂದನೆ , ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ದೂರನ್ನು ದಾಖಲಿಸಿದ್ದಾರೆ.


ಇನ್ನೂ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ರಾಘವೇಂದ್ರ ಎ ಎನ್ ರವರ ಪತ್ನಿ ಸೀಮಾ ಸಾಗರದ ಶೈಲಜಾ ಹಾಗೂ ಅವರ ಪತಿ ವೀರೇಶ್ ವಿರುದ್ದ 10 ಲಕ್ಷ ರೂ ಹಣಕ್ಕೆ ಬೇಡಿಕ್ಕೆ ಇಟ್ಟಿದ್ದಾರೆ ಎಂದು ಹನಿ ಟ್ರ್ಯಾಪ್ ಪ್ರಕರಣವನ್ನು ದಾಖಲಿಸಿದ್ದಾರೆ.


ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು ತೀರ್ಥಹಳ್ಳಿ ಉಪ ವಿಭಾಗದ ನೇರ ನಿಷ್ಪಕ್ಷಪಾತ ಡಿವೈಎಸ್ಪಿ ಗಜಾನನ ವಾಮನ ಸುತಾರ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದು ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಾಗಿದೆ.


ಇನ್ನೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವ ದೂರಿನ ಪ್ರಕಾರ ರಾಘವೇಂದ್ರ ಎ ಎನ್ ಪೊಲೀಸ್ ನೌಕರಿಗೂ ಮುಂಚೆ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತಿದ್ದು ಆ ಸಂಧರ್ಭದಲ್ಲಿ ದೂರುದಾರೆ ಶೈಲಜಾ ಅವರ ವಿದ್ಯಾರ್ಥಿಯಾಗಿದ್ದರು ಈ ದೆಸೆಯಲ್ಲಿ ಇಬ್ಬರಿಗೂ ಮೊದಲಿನಿಂದಲೂ ಪರಿಚಯವಿತ್ತು. 2017 ರಲ್ಲಿ ಫೇಸ್ಬುಕ್ ನಲ್ಲಿ ಮತ್ತೆ ಪರಿಚಯವಾಗಿ ಫೋನ್ ಹಾಗೂ ಮೆಸೆಜ್ ಮೂಲಕ ಸಂಪರ್ಕದಲ್ಲಿರುತ್ತಾರೆ.


ಆರೋಪಿಯ ಪತ್ನಿ ಸೀಮಾ ಸಲ್ಲಿಸಿರುವ ದೂರಿನಲ್ಲೇನಿದೆ..!??


ತನ್ನ ಪತಿ ರಾಘವೇಂದ್ರ ಎ ಎನ್ 2004 -2005 ರಲ್ಲಿ ಸಾಗರದ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದ್ದು ಆ ಸಮಯದಲ್ಲಿ ಅವರ ಬಳಿ 10 ನೇ ತರಗತಿಯಲ್ಲಿ ಶೈಲಜಾ ವಿದ್ಯಾರ್ಥಿನಿಯಾಗಿ ಓದಿರುತ್ತಾರೆ. ನನ್ನ ಪತಿಗೆ ಪೊಲೀಸ್‌ ಇಲಾಖೆಯಲ್ಲಿ ಕಾನ್ ಸ್ಟೇಬಲ್ ಕೆಲಸ ಸಿಕ್ಕಿದ ನಂತರ ಅತಿಥಿ ಶಿಕ್ಷಕರ ಕೆಲಸವನ್ನು ಬಿಟ್ಟು ಪೊಲೀಸ್ ಕೆಲಸಕ್ಕೆ ಸೇರಿರುತ್ತಾರೆ. ನಂತರ 2017 ರಲ್ಲಿ ಗಂಡನಿಗೆ ಶೈಲಜಾ ರವರು ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದು ನಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ಒಬ್ಬರಿಗೊಬ್ಬರು ನೀಡಿ ತದನಂತರ ಮಾತನಾಡಲು ಪ್ರಾರಂಭಿಸಿರುತ್ತಾರೆ. 


ನಂತರ ಈ ವಿಷಯ ತಿಳಿದ ನಾನು ತಮ್ಮ ಸಂಸಾರ ಹಾಳಾಗಬಾರದೆಂದು ಗಂಡನ ಮೊಬೈಲ್ ನಲ್ಲಿ ಶೈಲಜ ರವರ ಮೊಬೈಲ್‌ ನಂಬರ್ ಬ್ಲಾಕ್ ಮಾಡಿಸಿ ನನ್ನ ಗಂಡನ ವಿಷಯಕ್ಕೆ ಬರಬಾರದೆಂದು ಎಚ್ಚರಿಸಿರುತ್ತಾರೆ ಆದರೆ ಶೈಲಜ ಒಂದಿಲ್ಲ ಒಂದು ಕಾರಣ ಮತ್ತು ನೆಪ ಹೇಳಿ ನನ್ನ ಗಂಡನ ಜೊತೆ ಸಲುಗೆಯಿಂದ ಮಾತನಾಡಲು ಅವರಿಗೆ ಭೇಟಿಯಾಗಲು ಹೇಳುತಿದ್ದು ನನ್ನ ಗಂಡ ಅದಕ್ಕೆ ನಿರಾಕರಿಸುತ್ತಿದ್ದಾಗ ಕೆಲಸದಿಂದ ತೆಗೆಸುತ್ತೇನೆ ಅಂತ ಹೆದರಿಸುವುದು, ಜೈಲಿಗೆ ಕೇಸು ಹಾಕಿ ಜೀವನ ಹಾಳುಮಾಡುತ್ತೇನೆ ಎಂದು ಹೇಳಿ ಹೆದರಿಸುತ್ತಿದ್ದಳು, ಇಂದು ಅಥವಾ ನಾಳೆ ಶೈಲಜ ಸರಿಯಾಗಬಹುದೆಂದು ಯಾವುದೇ ರೀತಿಯ ಕಾನೂನು ಕ್ರಮಕ್ಕೆ ಮುಂದಾಗಿರುವುದಿಲ್ಲ. 


ನಂತರ ದಿನಾಂಕ:21-12-2022 ರಂದು ಶೈಲಜ ಇಂದ ನನ್ನ ಗಂಡನ ಮೊಬೈಲ್ ಗೆ ಕರೆ ಮಾಡಿ ಸುಮಾರು 10 ಲಕ್ಷ ಕೊಟ್ಟರೆ ನಾನು ಯಾವುದೇ ಕೇಸನ್ನು ಯಾವುದೇ ರೀತಿಯಲ್ಲಿ ಮಾಡುವುದಿಲ್ಲ ಮತ್ತು ತೊಂದರೆಯನ್ನು ನೀಡುವುದಿಲ್ಲ ಇಲ್ಲದಿದ್ದರೆ ನಿನ್ನ ಮೇಲೆ ಸುಳ್ಳು ಪ್ರಕರಣವನ್ನು ನೀಡಿ ನಿಮ್ಮನ್ನು ಕೆಲಸದಿಂದ ತೆಗೆಸಿ ಜೀವನ ಹಾಳು ಮಾಡುತ್ತೇನೆ ಎಂದು ಹೇಳಿ ಹೆದರಿಸಿರುತ್ತಾಳೆ. 


ಇದರ ಆಡಿಯೋ ರೆಕಾರ್ಡಿಂಗ್ ನನ್ನ ಬಳಿ ಇರುತ್ತದೆ. ಆದರೆ ಆ ಸಮಯದಲ್ಲಿ ಯಾವುದೇ ಹಣವನ್ನು ನೀಡಿರುವುದಿಲ್ಲ. ಇದೇ ರೀತಿ ನನ್ನ ಕುಟುಂಬದವರಿಗೆ ನಾನಾ ರೀತಿಯಲ್ಲಿ ಶೈಲಜ ಮತ್ತು ಅವರ ಗಂಡ ತೊಂದರೆಯನ್ನು ನೀಡಿರುತ್ತಾರೆ. ಶೈಲಜಳ ಮಾತನ್ನು ಕಟ್ಟಿಕೊಂಡು ರೇಖಾ ಎಂಬುವವರು ನನ್ನ ಗಂಡ ರಾಘವೇಂದ್ರ ರವರ ಮೇಲೆ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರನ್ನು ನೀಡಿ ಜೈಲಿಗೆ ಕಳುಹಿಸಿರುತ್ತಾರೆ. ಆ ಕೇಸಿನಲ್ಲಿ ಶೈಲಜಾ ರವರು ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಬಂದಿರುತ್ತಾರೆ. ಈಗ ಆ ಪ್ರಕರಣ ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆಯ ಹಂತದಲ್ಲಿರುತ್ತದೆ.


ನನ್ನ ಪತಿಯ ಮೊಬೈಲ್ ಗೆ ಶೈಲಜಾ ಕರೆಮಾಡುವುದು ಮೆಸೇಜ್ ಅನ್ನು ಕಳುಹಿಸಿ ಹೀನಾಯವಾಗಿ ಬೈಯುವುದು ಅವಾಚ್ಯವಾಗಿ ನಿಂದಿಸುವುದು ಮಾಡಿರುತ್ತಾಳೆ. ಇದರಲ್ಲಿ ಶೈಲಜ ಅವರಿಗೆ ಅವರ ಗಂಡ ಕೂಡಾ ಸಹಾಯ ನೀಡಿರುತ್ತಾರೆ.ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಸಂತ್ರಸ್ಥ ಮಹಿಳೆಯ ದೂರಿನಲ್ಲೇನಿದೆ..!??


ದಿನಾಂಕ:17-09-2022 ರಂದು ರೇಖಾ ಎಂಬುವವಳು ರಾಘವೇಂದ್ರ ಎ ಎನ್ ಮೇಲೆ ಅತ್ಯಾಚಾರ ಕೇಸ್ ಹಾಕಿರುತ್ತಾಳೆ, ರೇಖಾ ಎಂಬುವವಳನ್ನು ಶೈಲಜಾ ಗೆ ರಾಘವೇಂದ್ರ ರವರೇ ಪರಿಚಯಿಸಿರುತ್ತಾರೆ, ಆಕೆಯ ಕಷ್ಟಗಳನ್ನು ಶೈಲಜಾ ಹತ್ತಿರ ಹೇಳಿಕೊಂಡಿರುತ್ತಾಳೆ ಅವಳ ಕಷ್ಟಗಳನ್ನು ಕೇಳಿ ಅವಳ ಕೇಸಿನಲ್ಲಿ ಸಾಕ್ಷಿಗೆ ಶೈಲಜಾ ಸಹಿ ಹಾಕಿರುತ್ತಾರೆ.


ದಿನಾಂಕ:14/05/2024 ರಂದು ಶೈಲಜಾ ರಿಪ್ಪನ್ ಪೇಟೆಯ ದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಸ್ನೇಹಿತೆಯೊಂದಿಗೆ ಬಂದಿರುತ್ತಾರೆ, ದೇವಸ್ಥಾನದಿಂದ ಬರುವಾಗ ರಾಘವೇಂದ್ರ ರವರು ಶೈಲಜಾಗೆ ಮುಖಾಮುಖಿ ಭೇಟಿಯಾದ ಸಂಧರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 


ಆರೋಪಿತ ರಾಘವೇಂದ್ರನು ಶೈಲಜಾ ಗೆ ಮನೆಗೆ ಬರುವಂತೆ ಒತ್ತಾಯಿಸಿರುತ್ತಾನೆ, ಇದರಿಂದ ಭಯ ಬಿದ್ದು ಅವನ ಮನೆಗೆ ಹೊಗಿದ್ದು, ಮನೆಯೊಳಗೆ ಕರೆದು ನಾನು ನಿನ್ನ ಜಾತಿ ನಿಂದನೆ ಮಾಡಿರುವುದು ಸರಿ ಇರುವುದಿಲ್ಲ. ನನ್ನ ಪರವಾಗಿ ನೀನು ಸಾಕ್ಷಿ ಹೇಳಲೇ ಬೇಕು ಇಲ್ಲಂದರೆ ನಾನು ನಿನ್ನ ಮಕ್ಕಳನ್ನು ಅಪಹರಣ ಮಾಡಿಸುತ್ತೇನೆ. ನಾನು ಮಾಡದಿದ್ದರು ಬೇರೆಯವರಿಂದ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿ ಆತ್ಯಾಚಾರ ಮಾಡಲು ಪ್ರಯತ್ನಿಸುತ್ತಾನೆ. ಈ ವಿಷಯವಾಗಿ ಶೈಲಜಾ ಸ್ವಲ್ಪ ದಿನಗಳ ನಂತರ ಅವರ ಹೆಂಡತಿಗೂ ಮೆಸೇಜ್ ಮೂಲಕ ವಿಷಯ ತಿಳಿಸಿರುತ್ತಾರೆ,ನಂತರ ಈ ವಿಷಯದಲ್ಲಿ ರಾಜಿ ಸಂಧಾನ ಮಾಡಲು ಹಲವರು ಬಂದಿರುತ್ತಾರೆ, ಅವರು ಎಷ್ಟೇ ಪ್ರಯತ್ನ ಪಟ್ಟರು ರಾಜಿಯಾಗಲಿಲ್ಲ, ಇದರಿಂದ ಮರ್ಯಾದೆಗೆ ಅಂಜಿ ಯಾರಿಗೂ ಹೇಳದೆ ಶೈಲಜಾ ದಿನಾಂಕ:04/09/2024 ರಂದು ನಿದ್ದೆ ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಇದರಿಂದ ರಾಘವೇಂದ್ರ ಎ ಎನ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..

ಮಂಗಳವಾರ, ಸೆಪ್ಟೆಂಬರ್ 3, 2024

ಇಬ್ಬರು ಯುವಕರ ನಡುವೆ ಗಲಾಟೆ-ಸಮಯಪ್ರಜ್ಞೆ ಮೆರೆದ ಸಂಚಾರಿಪೊಲೀಸರು



ಸುದ್ದಿಲೈವ್/ಶಿವಮೊಗ್ಗ


ನಗರದ ನೆಹರೂ ರಸ್ತೆಯಲ್ಲಿ ಇಬ್ಬರು ಯುವಕರ ನಡುವೆ ಹೊಡೆದಾಟ ನಡೆದಿದ್ದು ಅಲ್ಲಿನ ಟ್ರಾಫಿಕ್ ಪೊಲೀಸರು ಸಮಯ ಪ್ರಜ್ಞೆ ಮೆರೆದು ಗಲಾಟೆಯನ್ನ ಬಿಡಿಸಿ ಕಳುಹಿಸಿದ್ದಾರೆ. 


ನಗರದ ನೆಹರೂ ರಸ್ತೆಯಲ್ಲಿರುವ ಅಕೀಫ್ ಎಂಬುವರ ಅಂಗಡಿಯ ಮುಂದೆ ಸಲ್ಮಾನ್ ಎಂಬಾತ ಯುವಕ ಕುಡಿದು ಗಲಾಟೆ ಮಾಡಿದ್ದಾನೆ‌. ಇಬ್ಬರ ನಡುವೆ ತಳ್ಳಾಟ ನಡೆದಿದೆ. 


ಇದನ್ನ ಗಮನಿಸಿದ ಟ್ರಾಫಿಕ್ ಪೊಲೀಸರು ಸಲ್ಮಾನ್ ನನ್ನ ವಶಕ್ಕೆ ಪಡೆದಿದ್ದಾರೆ. ಈಗ ಸಧ್ಯಕ್ಕೆ ಸಲ್ಮಾನ್ ನನ್ನ ಕೋಟೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. 

ಲ್ಯಾಪ್ ಟ್ಯಾಪ್ ಕಳುವಿನ ಕಥೆ

 


ಸುದ್ದಿಲೈವ್/ಶಿವಮೊಗ್ಗ


ಬಸ್ ನಿಲ್ದಾಣದಲ್ಲಿ ಚಿನ್ನಾಭರಣ, ಲ್ಯಾಪ್ ಟಾಪ್ ಮೊದಲಾದ ಬೆಲೆಬಾಳುವ ವಸ್ತುಗಳನ್ನ ಕಳೆದುಕೊಳ್ಳುವುದು ಸಹಜವಾಗಿಬಿಟ್ಟಿದೆ. ಶಿವಮೊಗ್ಗದ KSRTC ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿಗೆ ಬ್ರೇಕ್ ಹಾಕಿದರೂ ಸಹ ಕಳ್ಳತನ ಮುಂದು ವರೆದಿದೆ.


ಬೆಂಗಳೂರಿನಿಂದ ತೀರ್ಥಹಳ್ಳಿಯ ಕಮ್ಮರಡಿಗೆ ಹೊರಟ ಸಾಫ್ಟ್ ವೇರ್ ಇಂಜಿನಿಯರ್ ಅವರು ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಂದು ಬ್ಯಾಗ್ ಚೆಕ್ ಮಾಡಿಕೊಂಡಿದ್ದಾರೆ. ಬ್ಯಾಗ್ ಕಳುವಾಗಿದೆ. ಬ್ಯಾಗನಲ್ಲಿ ಲ್ಯಾಪ್ ಟ್ಯಾಪ್ಇದ್ದು ಬ್ಯಾಗ್ ಸಮೇತ ಎತ್ತಿಕೊಂಡು ಹೋಗಿದ್ದಾರೆ. 


ಇನ್ನೊಂದು ಅಚ್ಚರಿ ಬೆಳವಣಿಗೆಯಲ್ಲಿ ಆಂಧ್ರದಿಂದ ಹೊರಟು ಶೃಂಗೇರಿಗೆ ಪ್ರಯಾಣ ಬೆಳೆಸಿದ್ದ ಯುವತಿಯೊಬ್ಬಳು ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಂದು ಶೃಂಗೇರಿ ಬಸ್ ಗೆ ಕಾಯ್ತಾ ಕುಳಿತಿದ್ದ ವೇಳೆ . ಕಮ್ಮರಡಿಗೆ ಹೊರಟಿದ್ದ ಯುವತಿಯ ಬ್ಯಾಗ್ ನ್ನ ಕದ್ದ ಕಳ್ಳರು ಲ್ಯಾಪ್ ಟ್ಯಾಪ್ ನ್ನ ಎತ್ತುಕೊಂಡು   ಶೃಂಗೇರಿಗೆ ಹೊರಟಿದ್ದ ಯುವತಿಯ ಬಳಿ ಬ್ಯಾಗ್ ಬಿಟ್ಟು ಹೋಗಿದ್ದಾರೆ.


ಶೃಂಗೇರಿಗೆ ಹೊರಟಿದ್ದ ಯುವತಿಯ ಬ್ಯಾಗ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಆಕೆಯ ಬ್ಯಾಗ್ ನಲ್ಲಿದ್ದ ವಸ್ತುಗಳು ಏನೇನು ಕಳೆದಿದೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ. ಕಮ್ಮರಡಿಗೆ ಹೊರಟಿದ್ದ ಯುವತಿಯ ಲ್ಯಾಪ್ ಟ್ಯಾಪ್ ಕಳುವಿನ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಶನಿವಾರ, ಆಗಸ್ಟ್ 24, 2024

ಕಳುವಾಗಿದ್ದ 4 ಹಸುಗಳು ಪತ್ತೆ-ಆರೋಪಿಗಳು ಅರೆಸ್ಟ್



ಸುದ್ದಿಲೈವ್/ಶಿರಾಳಕೊಪ್ಪ


ಫಾರಂ ಹೌಸ್ ನಲ್ಲಿದ್ದ 2.40 ಲಕ್ಷ ರೂ ಮೌಲ್ಯದ 4 ಹಸುಗಳನ್ನ ಪತ್ತೆ ಮಾಡುವಲ್ಲಿ ಶಿರಾಳಕೊಪ್ಪದ ಪೊಲೀಸರು ಯಶಸ್ವಿಯಾಗಿದ್ದಾರೆ. 


ದಿನಾಂಕಃ 09-08-2024  ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಜಂಬೂರು ಗ್ರಾಮದ ವಾಸಿ ಶ್ರೀ ಮೊಹಮದ್ ಆಲಿ ಖಾನ್, 34 ವರ್ಷ ರವರ ಫಾರಂ ಹೌಸ್ ನಲ್ಲಿದ್ದ 04 ಹಸುಗಳನ್ನು ಕಳುವು ಮಾಡಲಾಗಿತ್ತು.  ಬಿಎನ್ ಎಸ್ ಕಾಯ್ದೆ ಅಡಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 


ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಮಾಲಿನ ಪತ್ತೆಗಾಗಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆರವರ ಮಾರ್ಗದರ್ಶನದಲ್ಲಿ ಶಿಕಾರಿಪುರದ ಡಿವೈಎಸ್ಪಿ ಕೇಶವ್, ಸಿಪಿಐ ರುದ್ರೇಶ್ ರವರ ಮೇಲ್ವಿಚಾರಣೆಯಲ್ಲಿ ಪಿಎಸ್ಐ ಪ್ರಶಾಂತ್ ಕುಮಾರ್ ಟಿ.ಬಿ.ರವರ ನೇತೃತ್ವದಲ್ಲಿ ಪಿಎಸ್ಐ ಪುಷ್ಪಾ,  ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಸಂತೋಷ್, ಟೀಕಪ್ಪ, ಪಿಸಿ ಸಲ್ಮಾನ್, ಕಾರ್ತಿಕ್, ಅಶೋಕ್  ಮತ್ತು  ಪ್ರೇಮಾ ಬಾಯಿ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 


ತನಿಖಾ ತಂಡವು ದಿನಾಂಕಃ 23-08-2024  ರಂದು ಪ್ರಕರಣದ ಆರೋಪಿ ಶಿವರಾಜ್ @ ಕುಮಾರ, 26 ವರ್ಷ, ಆರಿಕಟ್ಟೆ ಗ್ರಾಮ, ಹಿರೇಕೆರೂರು ತಾ॥, ಹಾವೇರಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 2,40,000/- ರೂಗಳ 04 ಹಸುಗಳನ್ನು ವಶಪಡಿಸಿಕೊಳ್ಳಲಾಗಿತ್ತು.‌ ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಶುಕ್ರವಾರ, ಆಗಸ್ಟ್ 23, 2024

ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ವಿಷಯ ಸುಳ್ಳು-ಮಹಿಳೆಯರು ತುರ್ತುಪರಿಸ್ಥಿತಿಯಲ್ಲಿ 112 ಗೆ ಕರೆಮಾಡಿ-ಎಸ್ಪಿ ಸ್ಪಷ್ಟನೆ

 


ಸುದ್ದಿಲೈವ್/ಶಿವಮೊಗ್ಗ


ವಾಟ್ಸಪ್ ಗಳಲ್ಲಿ ಗಾಳಿ ಸುದ್ದಿ ಹರಡುತ್ತಿದ್ದು ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇಂತಹ ಯಾವುದೇ ವ್ಯವಸ್ಥೆಯನ್ನ ಪೊಲೀಸ್ ಇಲಾಖೆ ಮಾಡುತ್ತಿಲ್ಲ.‌ ತುರ್ತು ಪರಿಸ್ಥಿತಿಗೆ 112 ಗೆ ಕರೆ ಮಾಡುವಂತೆ ಸ್ಪಷ್ಟನೆ ನೀಡಿದ್ದಾರೆ.


ವಾಟ್ಸಪ್ ಗಳಲ್ಲಿ ಹರಡುತ್ತಿರುವ ಸುದ್ದಿ ಏನು?


ಯಾವುದೇ ಮಹಿಳೆ ಒಂಟಿಯಾಗಿರುವಾಗ ಮತ್ತು ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಮನೆಗೆ ಹೋಗಲು ವಾಹನ ಸಿಗದಿದ್ದಾಗ ಪೊಲೀಸ್ ಪಡೆ ಉಚಿತ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದೆ. 


ಅವರು ಪೊಲೀಸ್ ಸಹಾಯವಾಣಿ ಸಂಖ್ಯೆಗಳು: 1091 ಮತ್ತು 7837018555 ಅನ್ನು ಸಂಪರ್ಕಿಸಿ ಮತ್ತು ವಾಹನಕ್ಕಾಗಿ ವಿನಂತಿಸಬಹುದು. ಅವರು 24x7 ಕೆಲಸ ಮಾಡುತ್ತಾರೆ. ನಿಯಂತ್ರಣ ಕೊಠಡಿಯ ವಾಹನ ಅಥವಾ ಹತ್ತಿರದ PCR ವಾಹನ/SHO ವಾಹನವು ಅವಳನ್ನು ಸುರಕ್ಷಿತವಾಗಿ ಆಕೆಯ ಗಮ್ಯಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇದನ್ನು ಉಚಿತವಾಗಿ ಮಾಡಲಾಗುವುದು.  ದಯವಿಟ್ಟು ಈ ಸಂದೇಶವನ್ನು ನಿಮಗೆ ತಿಳಿದಿರುವ ಎಲ್ಲರಿಗೂ ಹರಡಿರಿ.

 
ಹೆಂಡತಿಯರು, ಹೆಣ್ಣುಮಕ್ಕಳು, ಸಹೋದರಿಯರು, ತಾಯಂದಿರು, ಸ್ನೇಹಿತರು ಮತ್ತು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರಿಗೆ ಸಂಖ್ಯೆಯನ್ನು ಕಳುಹಿಸಿ. ಸಂಖ್ಯೆಗಳನ್ನು ಉಳಿಸಲು ಅವರನ್ನು ಕೇಳಿ.. ಪುರುಷರು ದಯವಿಟ್ಟು ನಿಮಗೆ ತಿಳಿದಿರುವ ಮಹಿಳೆಯರೊಂದಿಗೆ ಹಂಚಿಕೊಳ್ಳಿ .
 

ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಖಾಲಿ ಸಂದೇಶ ಅಥವಾ ಮಿಸ್ಡ್ ಕಾಲ್ ಅನ್ನು ಸಹ ನೀಡಬಹುದು.. ಇದರಿಂದ ಪೊಲೀಸರು ನಿಮ್ಮ ಸ್ಥಳವನ್ನು ತಿಳಿದುಕೊಳ್ಳುತ್ತಾರೆ ಮತ್ತು ನಿಮಗೆ ಸಹಾಯ ಮಾಡುತ್ತಾರೆ. ಭಾರತದಾದ್ಯಂತ ಅನ್ವಯಿಸುತ್ತದೆ ಎಂದು ವಾಟ್ಸಪ್ ಗಳಲ್ಲಿ ಹರಡುತ್ತಿದೆ.


7837018555 ನಂಬರ್ ಗೆ ಕರೆ ಮಾಡಿದರೆ ಲೂದಿಯಾನ ಎಂದು ಬರುತ್ತದೆ. ಆದರೆ ಇಂತಹ ಯಾವುದೇ ವ್ಯವಸ್ಥೆಯನ್ನ ಶಿವಮೊಗ್ಗದಲ್ಲಿ ಮಾಡಿಲ್ಲ. ಯಾರಾದರೂ ಈ ರೀತಿ ಹೇಳಿಕೊಂಡು ವಾಹನಗಳು ಬಂದರೆ 112 ಗೆ ಕರೆ ಮಾಡಬಹುದಾಗಿದೆ. ಮಹಿಳೆಯರು ತುರ್ತುಪರಿಸ್ಥಿತಿಯಲ್ಲಿ 112 ಗೆ ಕರೆ ಮಾಡಬೇಕೆಂದು ಶಿವಮೊಗ್ಗ ಪೊಲೀಸ್ ಇಲಾಖೆ ವಿಂತಿಸಿಕೊಂಡಿದೆ.

ಚಂಪಕಸರಸಿನಲ್ಲಿ ಈಜಲು ಹೋಗಿ ಇಂಜಿನಿಯರ್ ಸಾವು



ಸುದ್ದಿಲೈವ್/ಶಿವಮೊಗ್ಗ


ಆನಂದಪುಂನ ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದ  ಎಂಜಿನಿಯರ್‌ ಮೃತಪಟ್ಟಿದ್ದಾನೆ. ಶಿವಮೊಗ್ಗದ ಸಾಗರದ ಆನಂದಪುರ ಬಳಿ ಇರುವ ಚಂಪಕ ಸರಸು ಕಲ್ಯಾಣಿಯಲ್ಲಿ ಘಟನೆ ನಡೆದಿದೆ. ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುವ ದುರ್ದೈವಿ.


ಬೆಂಗಳೂರಿನ ಕುಶಾಲ್‌ ತನ್ನಿಬ್ಬರು ಸ್ನೇಹಿತರೊಡನೆ ಪ್ರವಾಸಕ್ಕೆಂದು ಕಾರಿನಲ್ಲಿ ಆಗಮಿಸಿದ್ದ. ಕುಶಾಲ್, ಸಾಯಿರಾಂ ಹಾಗೂ ಯಶವಂತ ಈ ಮೂವರು ಇತಿಹಾಸ ಹೊಂದಿರುವ ಮಹಂತಿನ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕುಶಾಲ್‌ ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದಾನೆ. ಆದರೆ ಉಸಿರುಗಟ್ಟಿ ನೀರಿಲ್ಲಿ ಮುಳುಗಿ ಮೃತಪಟ್ಟಿದ್ದಾನೆ.


ಹಲವಾರು ವರ್ಷಗಳ ಕಾಲ ಪಾಳು ಬಿದ್ದಿದ್ದ ಚಂಪಕ ಸರಸು ಕಲ್ಯಾಣಿಯನ್ನು ಚಲನಚಿತ್ರ ನಟ ಯಶ್ ಅವರ ಯಶೋಮಾರ್ಗ ಸಂಸ್ಥೆ ಕಳೆದೆರೆಡು ವರ್ಷಗಳ ಹಿಂದೆಯಷ್ಟೇ ಸ್ವಚ್ಚಗೊಳಿಸಿದ್ದರು. 


ಸ್ನೇಹಿತರೊಂದಿಗೆ ಈಜಾಡಲು ಬಂದ ಕುಶಾಲ್‌ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಲ್ಯಾಣಿಯಿಂದ ಶವ ಮೇಲಕ್ಕೇತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೀಟರ್ ಬಡ್ಡಿಗೆ ಯುವಕ ಬಲಿ



ಸುದ್ದಿಲೈವ್/ಶಿವಮೊಗ್ಗ


ತಂದೆ ಮಾಡಿದ್ದ ಸಾಲಕ್ಕೆ ಮಗನಿಗೆ ಹಲ್ಲೆ ಮಾಡಲಾಗಿದ್ದು, ಮನನೊಂದ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ಪೇಪರ್ ಟೌನ್ ನಲ್ಲಿ ಸಂಭವಿಸಿದೆ. 


ಸ್ಟೀವನ್ (25) ಯುವಕ ಮೃತನಾಗಿದ್ದು, ಭದ್ರಾವತಿಯ ಪೇಪರ್ ಟೌನ್ ಬಡಾವಣೆಯಲ್ಲಿ ಕಳೆದ ಎರಡು ದಿನದ ಹಿಂದೆ ಘಟನೆ ನಡೆದಿದೆ. 


ಪರಶುರಾಮ್ ಎಂಬುವರ ಬಳಿ 2 ಲಕ್ಷ ಸಾಲವನ್ನ  ಪೇಪರ್ ಟೌನ್ ನ ನಿವಾಸಿ ಜೋಸೆಫ್ ಎಂಬುವರು ಪಡೆದಿದ್ದರು. ಜೋಸೆಫ್, ಮೃತ ಸ್ಟೀವನ್ ನ  ತಂದೆಯಾಗಿದ್ದಾರೆ. ಸಾಲ ಪಡೆದುಕೊಂಡು ತೀರಿಸಲಾಗದೇ  ಜೋಸೆಫ್ ಮನೆ ಬಿಟ್ಟು ಹೋಗಿದ್ದನು. 


ಸಾಲ ವಸೂಲಿಗಾಗಿ ಸ್ಟೀವನ್ ಕರೆದುಕೊಂಡು ಹೋಗಿ ಪರಶುರಾಮ ಹಲ್ಲೆ ನಡೆಸಿರುವುದಾಗಿ ಇಂದು ದಾಖಲಾಗಿದ್ದ ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ. ಹಲ್ಲೆಯಿಂದ ಮನನೊಂದ ಸ್ಟೀವನ್ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ. 


ಘಟನೆ ಕುರಿತು ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಧ್ಯ‌ಭದ್ರಾವತಿ ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆರೋಪಿಯ ಬಂಧನದ ಬಗ್ಗೆ ಇನ್ನೂ ತಿಳಿದು ಬರಬೇಕಿದೆ. 

ಗುರುವಾರ, ಆಗಸ್ಟ್ 22, 2024

ಪ್ರತಿಷ್ಠಿತ ಶೋರೂಮ್ ನಲ್ಲಿ ಲಕ್ಷಾಂತರ ರೂ ಹಣ ಕಳವು

 


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಕಾರು ಶೋರೂಮ್ ನಲ್ಲಿ 5,49,942 ರೂ. ಹಣವನ್ನ ಕದ್ದಿರುವ ಬಗ್ಗೆ ನಿನ್ನೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಡೀಲರ್ ಶಿಪ್ ಪಡೆದವರೇ ದೂರು ದಾಖಲಿಸಿದ್ದಾರೆ. 


ಪ್ರತಿಷ್ಠಿತ ಶೋ ರೂಮ್ ನಲ್ಲಿ ದೈನಂದಿನ ವ್ಯವಹಾರದ ಹಣವನ್ನ ಇಡಲು ಕ್ಯಾಬಿನ್ ಮಾಡಲಾಗಿದ್ದು ಕ್ಯಾಬಿನ್ ನಲ್ಲಿ ತಿಚೋರಿಯನ್ನ ನಿರ್ಮಿಸಿ ಇಡಲಾಗಿತ್ತು. ಕ್ಯಾಶ್ ಕೌಂಟರ್ ನ ಗುಮಾಸ್ತರು ಪ್ರತಿನಿತ್ಯದ ಹಣವನ್ನ ಈ ತಿಜೋರಿಯಲ್ಲಿ ಇಟ್ಟು ಹೋಗುತ್ತಿದ್ದರು. 


ಆ.20 ರಂದು 5,49,942 ರೂ. ಹಣವನ್ನ ಇಟ್ಟು ಕೀಯನ್ನ ಕ್ಯಾಬಿನ್ ನನ್ನ ಲಾಕ್ ಮಾಡಿ ಹೋಗಿದ್ದರು. ಮರುದಿನ ಬಂದ ಗುಮಾಸ್ತರಿಗೆ ಹಣ ಇಟ್ಟ ತಿಚೋರಿ ಇಟ್ಟಾಗ ನಾಪತ್ತೆಯಾಗಿರುವ ಬಗ್ಗೆ ತಿಳಿದು ಬಂದಿದೆ. ನಂತರ ಹುಡುಕಿದರೂ ಸಿಗದೆ ನಂತರ ಮಾಲೀಕರಿಗೆ ತಿಳಿಸಿದ್ದಾರೆ. 


ಮಾಲೀಕರು ಸಿಬ್ಬಂದಿಗಳನ್ನ ವಿಚಾರಿಸಿದಾಗ‌ ಯಾರೂ ತೆಗೆದುಕೊಂಡಿಲ್ಲ ಎಂದು ಹೇಳಿದ್ದರಿಂದ ನಿನ್ನೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ 5,49,942 ರೂ. ಹಣ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಲಾಗಿದೆ. 

ಕೆರೆಗೆ ಇಳಿದ ದಳಪತಿ



ಸುದ್ದಿಲೈವ್/ಶಿಕಾರಿಪುರ


ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಖಾಸಗಿ ಬಸ್ಸ್ ಚುರ್ಚುಗುಂಡಿ-ಚಿಕ್ಕಜೋಗಿಹಳ್ಳಿ ಮದ್ಯ ಬರುವ ಹೆಗ್ಗೆರಿ ಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಇಳಿದಿದೆ.‌ ಸಣ್ಣಪುಣ್ಣ ಗಾಯಗಳಿಂದ ಪ್ರಯಾಣಿಕರು ಮತ್ತು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



ಕೆರೆ ತುಂಬಿಕೊಂಡಿದ್ದು ಸ್ವಲ್ಪ ಎಡವಟ್ಟಾಗಿದ್ದರೂ ಬಸ್ ಸಂಪೂರ್ಣ ಮುಳುಗುವ ಆತಂಕ ಎದುರಾಗಿತ್ತು.  ಪೂರ್ತಿ ಬೀಳದೆ ಬಸ್ ನ ಮುಂಭಾಗ ನೀರಿಗೆ ಇಳಿದಿದೆ.‌ 15 ವರ್ಷದಿಂದ ಕೆರೆ ಏರಿ ಎಷ್ಟು ಸರಿ ಮಾಡಿದರೂ  ಮಳೆಗಾಲದಲ್ಲಿ ಮಣ್ಣು ಕುಸಿಯುವುದರಿಂದ  ಇದಕ್ಕೆ ಶಾಶ್ವತ ಪರಿಹಾರ ಇನ್ನೂ ಕೂಡ ಸಿಕ್ಕಿಲ್ಲ.


ಪ್ರತಿದಿನ ಇಲ್ಲಿ ಚಾಲಕರು ಮತ್ತು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುವ ಭಯ ಎದುರಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುವಂತೆ ಸ್ಞತಳೀಯರು ಕೇಳಿಕೊಂಡಿದ್ದಾರೆ. 

ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ-ಹೈಕೋರ್ಟ್ ಮೆಟ್ಟಿಲೇರುವುದಾಗಿ ಪತ್ನಿ ಕವಿತಾ ಹೇಳಿಕೆ


ಸುದ್ದಿಲೈವ್/ಶಿವಮೊಗ್ಗ


ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣವವನ್ನ ಹೆಚ್ಚು ತನಿಖೆ ನಡೆಸಬೇಕು ಎಂದು ಅವರ ಪತ್ನಿ ಕವಿತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 


ತನಿಖೆ ಸರಿಯಾಗಿ ನಡೆಸದಿದ್ದರೆ ಹೈಕೋರ್ಟ್ ಮೊರೆ ಹೋಗ್ತೀವಿ. ಸಿಬಿಐ ತನಿಖೆ ಆಗಬೇಕು ಅಂತಾ ಆಗ್ರಹಿಸುತ್ತೇನೆ. ಚಂದ್ರಶೇಖರ್ ಹಣ ತಿಂದಿಲ್ಲ. ಹಣ ತಿಂದಿದ್ದಾರೆ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ನಾನು ಜೀವನ ನಡೆಸಲು ಪರದಾಡ್ತಿದ್ದೇವೆ.‌ನಮ್ಮ ತಾಯಿ ಮನೆಯಲ್ಲಿ ವಾಸ ಮಾಡ್ತಿದ್ದೇವೆ ಎಂದು ಹೇಳಿದರು. 


ಸರಕಾರದಿಂದ ಪರಿಹಾರ ಕೊಡ್ತೀವಿ ಅಂದ್ರು ಇದುವರೆಗೆ ಯಾವುದೇ ಪರಿಹಾರ ಬಂದಿಲ್ಲ.ತನಿಖೆ ನಡೆಸಲಿ, ನಮ್ಮ ಮನೆಯವರು ಹಣ ತಿಂದಿದ್ದಾರೋ ಇಲ್ವಾ ಹೊರಗೆ ಬರಲಿ. ಸರಕಾರ ಸರಿಯಾಗಿ ತನಿಖೆ ನಡೆಸಿಲ್ಲ. ನ್ಯಾಯಯುತವಾಗಿ ತನಿಖೆ ನಡೆಸಲಿ. ಕೇಸ್ ಕೊಟ್ಟವರು ನಾವೇ ನಮ್ಮ ಮನೆಯವರ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌


ಸರಕಾರ ಯಾವುದೇ ಪರಿಹಾರ ಕೊಟ್ಟಿಲ್ಲ. ಅವತ್ತು ಎಲ್ಲಾ ಮಾತನಾಡಿಸಿಕೊಂಡರು ಹೋದ್ರು, ಇದುವರೆಗೆ ಯಾರು ನಮ್ಮ ಮನೆ ಕಡೆ ಬಂದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.‌

ಮಠದಲ್ಲಿ ಚಿನ್ನದ ಪಾದುಕೆ ಕಳವು



ಸುದ್ದಿಲೈವ್/ಶಿವಮೊಗ್ಗ


ಕೂಡಲಿ ಮಠದ ಶಾರದಾಂಬೆ ದೇವಿಗೆ ಮಾಡಿಸಿರುವ ಚಿನ್ನದ ಪಾದುಕೆಗಳು ಕಳವಾಗಿದ್ದು ಈ ಬಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ  ಮಠದ ರಮೇಶ್ ಹುಲ್ಮನಿಯವರು ದೂರು ದಾಖಲಿಸಿದ್ದಾರೆ. 


ಕೂಡ್ಲಿ ಶ್ರೀಮಠದಲ್ಲಿ ಪರಂಪರಗತವಾಗಿ ಬಂದಿರುವ ಪಾದುಕೆ ಹಾಗೂ ಬೆಳ್ಳಿಯ ಶ್ರೀ ಮುದ್ರೆಯು (ಒಂದು ದೊಡ್ಡ ವಿ ಮುದ್ರೆ ಇನ್ನೊಂದು ಸಣ್ಣ ಮುದ್ರೆ ಜೊತೆಗೆ ಶ್ರೀ ಮನ್ನಾರಾಯಣ ಸ್ಮೃತಯ ಅನ್ನುವ ಬೆಳ್ಳಿಯ ಸೀಲು) ಸುರಕ್ಷಿತವಾಗಿ ಬಿರುವಿನಲ್ಲಿಡಲಾಗಿತ್ತು, ಆ.08 ರಂದು ಶ್ರೀಮಠದ ಭಕ್ತರೋರ್ವರು ಪೂಜೆಗೆ ಎಂದು ಬೀಗ  ಕೇಳಿದಾಗ ಪೀಠಾಧಿಪತಿಗಳಾದ ಶ್ರೀಮಹಾಸ್ವಾಮಿಗಳ ಬಳಿ ಇದ್ದ ಬೀಗವನ್ನು ಉಪಯೋಗಿಸಿ ತೆಗೆಯಲು ಹೋದಾಗ ಆ ಬೀಗವು ಬಳಸಲು ಬಾರದೆ ಇರುವುದು ಕಂಡು ಬಂದಿದೆ. 



ನಂತರ ಶ್ರೀ ಮಠದ ಅರ್ಚಕರು ಇದರ

ಬೀಗದ ಕೈ ಇಲ್ಲಿ ಇದೆ ಎಂದು ತಂದು ಕೊಟ್ಟಿರುತ್ತಾರೆ. ನಂತರ ರಮೇಶ್ ಹುಲಮನಿಯವರು ತಾವು ಬೀರುವನ್ನು ತೆಗೆದಾಗ ಸುವರ್ಣ ಪಾದುಕೆಯು ಇರಲಿಲ್ಲ.


ಕಳೆದ ವರ್ಷ ಜುಲೈ 23 ರಿಂದ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳವರು ಹಿಂದಿನ ಚಾರ್ತುಮಾಸ ಹಾಗೂ ನಂತರ ದಿನಗಳಲ್ಲಿ ಅನಾರೋಗ್ಯದ ನಿಮಿತ್ತವಾಗಿ ದಾವಣಗೆರೆಯ ಶಾಖ ಮಠದಲಿ ಹಾಗೂ ಬೆಂಗಳೂರು ನಗರದಲ್ಲಿ ವಾಸವಾಗಿದ್ದರು. ಈ ನಡುವೆ ಸ್ವಾಮಿಗಳ ಖಾಸಗಿ ಉಪಯೋಗದ ದಾಸ್ತಾನು ಕೊಠಡಿ ಬೀಗವನ್ನು ಒಡೆದಿದ್ದು ತಿಳಿದು ಬಂದಿದ್ದರಿಂದ ಹುಲಮನಿಯವರು ಮೂರನೇ ದಿನದಂದು ಮಠಕ್ಕೆ ತೆರಳಿ ಬೇರೆ ಬೀಗವನ್ನು ಹಾಕಿ ಖಾತ್ರಿ ಪಡಿಸಿಕೊಂಡು ಬಂದಿರುತ್ತಾರೆ, 


ಕಳೆದ ಎಂಟು ತಿಂಗಳಿಂದ ಶ್ರೀಗಳು ದಾವಣಗೆರೆಯ ಶಾಖ ಮಠದಲ್ಲಿ ಇದ್ದಿದ್ದು ಈ ಮಠದಲ್ಲಿ ಯಾವುದೇ ಆಗು ಹೋಗುವ ವಿಚಾರ ತಮ್ಮ ಗಮನಕ್ಕೆ ಬಂದಿರುವುದಿಲ್ಲ. ನಂತರ ಚಾರ್ತುಮಾಸ ಕಾರ್ಯಕ್ರಮ ನಿಮಿತ್ತ ದಿನಾಂಕ:20/07/2024 ರಂದು ಶ್ರೀ ಮಠಕ್ಕೆ ಬಂದು ವಾಸ್ತವ್ಯವಿದ್ದರು. 


ಆಗ ಶಾರದಂಬ ದೇವಸ್ಥಾನದ ಹುಂಡಿಯನ್ನು ತೆಗೆದು ಕಾಣಿಕೆ ಹಣವನ್ನು ಬ್ಯಾಂಕಿಗೆ ಪಾವತಿ ಮಾಡುವ ಸಮಯ ಮೀರಿದ್ದರಿಂದ ಸದರಿ ಹಣವನ್ನು ಬೀರುವಿನಲ್ಲಿ ಇಡುವಂತೆ ಹೇಳಿ ತಮ್ಮ ಬಳಿ ಇದ್ದ ಬಿರುವಿನ ಬೀಗವನ್ನು ಕೊಟ್ಟಿರುತ್ತಾರೆ. ಆದರೆ ಆ ಬೀಗದ ಕೈಯಿಂದ ಬೀರು ತೆಗೆಯಲು ಆಗಿರುವುದಿಲ್ಲ. 


ಆಗ ಮಠದ ಆರ್ಚಕರಾದ ದತ್ತಾತ್ರಿಶಾಸ್ತ್ರಿ ರವರು ಈ ಬೀಗದ ಕೈಯಿಂದ ಬೀರು ಬೀಗ ತೆಗೆಯಿರಿ ಎಂದು ತಮ್ಮ ಬಳಿ ಇದ್ದ ಬೀಗದ ಕೈಯನ್ನು ಕೊಟ್ಟರು ಅದೇ ಬೀಗದ ಕೈಯಿಂದ ಬೀರು ಬೀಗ ತೆಗೆದು ಹಣ ಇಟ್ಟು ಬೀಗ ಹಾಕಲಾಗಿದೆ. 


ಆಗ ಶ್ರೀಗಳಿಗೆ ಸಂಶಯ ಬಂದು ಉಳಿದೆರಡು ಬಿರುವಿನ ಬೀಗವನ್ನು ತೆಗೆಸಿನೋಡಿದಾಗ ಬಿರುವಿನಲ್ಲಿಟ್ಟಿದ್ದ ಬಂಗಾರದ ಎರಡು ಪಾದುಕೆಗಳು ಕಾಣೆ ಆಗಿದ್ದು ಕಂಡು ಬಂದಿರುತ್ತದೆ. ನಂತರ ಎಲ್ಲಾರು ಹುಡುಕಾಡಿದರೂ ಅವು ಸಿಕ್ಕಿರುವುದಿಲ್ಲ ಈ ಬಗ್ಗೆ ಗುರುಗಳೊಂದಿಗೆ ಚರ್ಚಿಸಿ ತಡವಾಗಿ ಈದಿನ ಕಾಣೆಯಾಗಿರುವ ಸುಮಾರು ಅಂದಾಜು 1 ಕೆ.ಜಿ 50 ರಿಂದ 60 ಲಕ್ಷ ಮೌಲದ ಬಂಗಾರದ ಪಾದುಕೆಗಳನ್ನು ಪತ್ತೆ ಮಾಡಿಕೊಡಬೇಕೆಂದು ಹೊಳೆಹೊನ್ನೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

ಜೈಲಿನಿಂದಲೇ ಶಾಸಕರ ಮಗನ ಹತ್ಯೆಗೆ ಸ್ಕೆಚ್ ಅಂಡ್ ಡೀಲ್

 


ಸುದ್ದಿಲೈವ್/ಭದ್ರಾವತಿ


ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪುತ್ರ ಬಸವೇಶ್ ರನ್ನ ಮುಗಿಸಲು ಡೀಲ್ ನಡೆದಿತ್ತಾ? ಎಂಬ ಪ್ರಶ್ನೆಗೆ ಈ ಎಫ್ಐಆರ್ ಉತ್ತರವಾಗಿದೆ. ಜೈಲಿನಿಂದಲೇ ಬಸವನ ಹತ್ಯೆಗೆ ಸ್ಕೆಚ್ ನಡೆದಿದೆ.  ಹಾಗಾದರೆ ಎಫ್ಐಆರ್ ಏನು ಹೇಳುತ್ತೆ?


ಭದ್ರಾವತಿ ನಗರದ ಜಟ್ ಪಟ್ ನಗರದ ವಾಸಿಯಾದ ಮುಬಾರಕ್ ಮುಬ್ಬು ಕಳೇದ 17 ನೇ ತಾರೀಖು ಗುತ್ತಿಗೆದಾರನ ಬಳಿ ಬಂದು ಬಸಣ್ಯ ಎಲ್ಲಿದ್ದಾರೆ ಎಂದು ಕೇಳಿದ್ದಾನೆ. ಆ ಬಳಿಕ ಆತ ಡಿಚ್ಚಿ ಮುಬಾರಕ್‌ ಜೈಲಿನಿಂದ  ಎರಡು ಪ್ರತ್ಯೇಕ ಫೋನ್‌ ನಂಬರ್‌ನಿಂದ ಕರೆ ಮಾಡಿ, ಬಸವರನ್ನ ಮುಗಿಸುವ ಡೀಲ್‌ ನಡೆದಿರುವ ಬಗ್ಗೆ ಹೇಳಿದ್ದಾನೆ.ಇದನ್ನ ಕೇಳಿಸಿಕೊಂಡ ವ್ಯಕ್ತಿಯು ಪೊಲೀಸರಿಗೆ ದೂರು ನೀಡಿದ್ದಾರೆ. 


ಮುಬ್ಬು ಹೇಳಿದಂತೆ ಜೈಲಿನಿಂದಲೇ ಡಿಚ್ಚಿ ಮುಬಾರಕ್‌ ಬಸವನ ಹತ್ಯೆಗೆ ಸ್ಕೆಚ್‌ ಹಾಕಿ ಸೀಗೆಬಾಗಿ ನಿವಾಸಿ ಟಿಪ್ಪುಗೆ ಡೀಲ್‌ ಕೊಟ್ಟಿದ್ದಾನೆ. ಗಾಂದಿ ಸರ್ಕಲ್‌ನಲ್ಲಿ ಬಸವನನ್ನ ಹೊಡೆದು ಹಾಕಿ ಎಂದು ಟಿಪ್ಪು ಆಂಡ್‌ ಟೀಂಗೆ ಹೇಳಿದ್ದ ಎಂದು ಮುಬ್ಬು ತಿಳಿಸಿದ್ದಾಗಿ ದೂರುದಾರರು ಹೇಳಿದ ಪ್ರಕಾರ ಎಫ್‌ಐಆರ್‌ ದಾಖಲಾಗಿದೆ. 


ಇಷ್ಟೆ ಅಲ್ಲದೆ ಕಳೇದ 17 ತಾರೀಖು ರಂಗಪ್ಪ ಸರ್ಕಲ್‌ ಬಳಿ ಸಿಕ್ಕ ಟಿಪ್ಪು ಬಾರ್‌ವೊಂದರಲ್ಲಿ ಕುಳಿತು ಡಿಚ್ಚಿ ಮುಬಾರಕ್‌ ಡೀಲ್‌ ಕೊಟ್ಟಿದ್ದು, ಅದರಂತೆ ಚಾಕು ತಂದಿದ್ದೇನೆ ಎಂದು ಮುಬ್ಬುಗೆ ತೋರಿಸಿರುವ ಬಗ್ಗೆ ಎಫ್‌ಐಆರ್‌ ನಲ್ಲಿ ಉಲ್ಲೇಖಿಸಲಾಗಿದೆ. 


ಒಟ್ಟಾರೆ ಕೊಲೆಗೆ ಸ್ಕೆಚ್‌, ಅಕ್ರಮ ಕೂಟು, ಸಂಚು ರೂಪಿಸಿದ ಆರೋಪ ಸೇರಿದಂತೆ ಬಿಎನ್‌ಎಸ್‌ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಾಗಿದೆ.  

ಬುಧವಾರ, ಆಗಸ್ಟ್ 21, 2024

ವಿದ್ಯುತ್ ತಂತಿ ತಗುಲಿ ಯುವಕ ಸಾವು



ಸುದ್ದಿಲೈವ್/ಶಿವಮೊಗ್ಗ


ಹಳೆ ಜಂಬರಗಟ್ಟೆಯಲ್ಲಿ ಗಾರೆ ಕೆಲಸ ಮಾಡುವ ವೇಳೆ ಯುವಕನೋರ್ವನಿಗೆ  ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. 


ಹೊಳೆಹೊನ್ನುರಿನ  ಉಪ್ಪಾರ್ ಕೇರಿಯ ವಾಸಿ ಶರಥ್ ಮೃತ ಪಟ್ಟ ಯುವಕನಾಗಿದ್ದಾನೆ. ಹಳೇ ಜಂಬೂರಗಟ್ಟೆಯಲ್ಲಿ ದೇವಸ್ಥಾನದ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಸಾವಾಗಿದೆ. 

ವಿಲ್ಸನ್ ಬಾಬು ಹತ್ಯೆಯೂ ಹಾಗೂ ಕೇರಂ ಜೂಜಾಟವೋ

 


ಸುದ್ದಿಲೈವ್/ಭದ್ರಾವತಿ


ಅನುಮಾನಸ್ಪದ ಸಾವಾದ ಬೆನ್ನಲ್ಲೇ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಾಬು ಟಿ ಅಲಿಯಾಸ್ ಜೋಶ್ವಾ, ಜೋಯೆಲ್ ಮತ್ತು ಜೋಸೆಫ್ ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ವಿಲ್ಸನ್ ಬಾಬು ಎಂಬ 32 ವರ್ಷದ ಹುಡುಗನನ್ನು ಹಳೇ ಬುಳ್ಳಾಪುರದ ಪಿರಿಯಾಪಟ್ನದಮ್ಮನ ದೇವಸ್ಥಾನದ ಬಳಿ ಹೀನಾಮಾನವಾಗಿ ಹೊಡೆದು ನಂತರ ಆತನ ಸ್ನೇಹಿತನಿಗೆ ಕರೆ ಮಾಡಿ ವಿಲ್ಸನ್ ಬಾಬು ಕುಡಿದು ಮಲಗಿದ್ದಾನೆ ಎಂದು ತಿಳಿಸಿದ್ದಾರೆ.




ವಿಲ್ಸನ್ ಬಾಬು ಅವನ ಸ್ನೇಹಿತ ಸಂತೋಷ್ ಬಂದು ಎದ್ದೇಳಿಸಿದರೂ ಏಳದ ಬಾಬುವನ್ನ ಇದೇ ಜೋಯೆಲ್, ಜೋಶ್ವಾ, ಜೋಸೆಫ್ ಎತ್ತಾಕಿಕೊಂಡು ಬೈಕ್ ನಲ್ಲಿ ಕೂರಿಸಿದ್ದಾರೆ. ಈ ವೇಳೆ ವಿಲ್ಸನ್ ಉಸಿರಾಡುತ್ತಿದ್ದನು.


ಇತ್ತ ಮಗ ಬಂದಿಲ್ಲವೆಂದು ತಡರಾತ್ರಿ ಹುಡುಕಾಡಿದ ತಂದೆ ಮನೆಗೆ ವಾಪಾಸ್ ಬಂದಾಗ ಮನೆಯ ಮೊದಲನೇ ಹಾಲ್ ನಲ್ಲಿದ್ದಕಾಟ್ ಮೇಲೆ ಮಲಗಿಸಿ ಹೋಗಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವಿಲ್ಸನ್ ಬಾಬು ಕೊನೆ ಉಸಿರೆಳಿದಿದ್ದಾನೆ.


ಆತನನ್ನ ಸ್ನೇಹಿತರಾದ ಬಾಬು ಟಿ ಅಲಿಯಾಸ್ ಜೋಶ್ವಾ, ಜೋಯೆಲ್ ಮತ್ತು ಜೋಸೆಫ್ ಅವರೆ ಹೊಡೆದು ಕೊಂದಿರುವುದಾಗಿ ಎಫ್ಐಆರ್ ದಾಖಲಾಗಿದೆ. ದೇವಸ್ಥಾನದ ಆವರಣದಲ್ಲಿ ಕೇರಂ ಜೂಜಾಟದಲ್ಲಿ ಕೊಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.


ಬೇಕರಿಯಲ್ಲಿ ಸಿಲಿಂಡರ್ ಸ್ಪೋಟ



ಸುದ್ದಿಲೈವ್/ಶಿವಮೊಗ್ಗ


ಆಯನೂರಿನ ಹಣಗೆರೆ ರಸ್ತೆಯಲ್ಲಿರುವ ಎಸ್‌ಎಲ್‌ವಿ ಐಯ್ಯಾಂಗಾರ್‌ ಬೇಕರಿಯಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷದಲ್ಲಿ ಬೇಕರಿ ಒಳೆಗೆ ಮೂರು ಬಾರಿ ಸ್ಪೋಟ ಸಂಭವಿಸಿದೆ. ಸಿಲಿಂಡರ್‌ಗಳು ಸ್ಪೋಟಗೊಂಡಿವೆ ಎಂದು ಸ್ಥಳೀಯರು ಶಂಕಿಸಿದ್ದಾರೆ.



ಬೇಕರಿಯ ಅಕ್ಕಪಕ್ಕದಲ್ಲಿನ ಅಂಗಡಿಯವರು, ಗ್ರಾಹಕರು ಕೂಡಲೆ ಸ್ಥಳದಿಂದ ಓಡಿ ಹೋಗಿದ್ದಾರೆ. ಬೇಕರಿ ಮುಂಭಾಗದಲ್ಲಿಯೇ ಪೆಟ್ರೋಲ್‌ ಬಂಕ್‌ ಇದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. 


ಕೇಕ್ ಓವನ್ ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಬೆಂಕಿಯ ಜ್ವಾಲೆ ವ್ಯಾಪಿಸಿಕೊಂಡಿದೆ. ಬೇಕರಿ ಸಂಪೂರ್ಣ ಸುಟ್ಟುಕರಕಲಾಗಿದೆ. ಬೆಂಕಿ ಸಿಡಿದೇಳುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಸಧ್ಯಕ್ಕೆ ಯಾರಿಗೂ ಪ್ರಾಣ ಹಾನಿ ನೋವು ಉಂಟಾಗಿರುವ ಬಗ್ಗೆ ತಿಳಿದು ಬಂದಿಲ್ಲ. ಬೇಕರಿ ಸುಟ್ಟು ಕರಕಲಾಗಿದೆ. 

ನಾಯಿ ಬೊಗಳಿದ ವಿಚಾರದಲ್ಲಿ ಗಲಾಟೆ

 

ಗಾಯಾಳು ಷಡಾಕ್ಷರಿ

ಸುದ್ದಿಲೈವ್/ಶಿವಮೊಗ್ಗ


ನಾಯಿ ಬೊಗಳಿದ ವಿಚಾರದಲ್ಲಿ ಗಲಾಟೆಯಾಗಿದೆ. ಶಾರು ಯಾನೆ ಲಂಗ್ಡಾ,  ಇರ್ಫಾನ್ ಯಾನೆ ಪಾಪ, ಸಬೀನಾ ರೇಷ್ಮಾ ಹಾಗೂ ಹೀನಾರ ವಿರುದ್ಧ ಭದ್ರಾವತಿ ಓಲ್ಡ್ ಟೌನ್ ನಲ್ಲಿ ದೂರು ದಾಖಲಾಗಿದೆ. 


ನ್ಯೂ ಸೀಗೆಬಾಗಿಯಲ್ಲಿ ಮನೆಯ ಮುಂದೆ ನಾಯಿ ಬೊಗಳುವ ವಿಚಾರದಲ್ಲಿ ಶಾರು ಯಾನೆ ಲಂಗ್ಡಾ, ಇರ್ಫಾನ್ ಯಾನೆ ಪಾಪ ಎಂಬುವರು ಇಬ್ಬರು ಷಡಾಕ್ಷರಿಯವರ ಮನೆಗೆ ಬಂದು ನಾಯಿ ಕಟ್ಟುಹಾಕುತ್ತೀರೋ ಅಥವಾ ನಿನ್ನ ಹೆಂಡತಿಯನ್ನ ಬೀದಿಗೆ ಬಿಡುತ್ತೀರೋ ಎಂದು ಗಲಾಟೆ ತೆಗೆದಿದ್ದಾರೆ. 


ಅದು ನಮ್ಮ ನಾಯಿ ಅಲ್ಲ ಸರಿಯಾಗಿ ಮಾತನಾಡಿ ಎಂದು ಷಡಾಕ್ಷರಿ ತಿಳಿಸಿದ್ದಾರೆ. ಇಷ್ಟಕ್ಕೆ ಗಲಾಟೆ ಮುಂದು ವರೆದಿದೆ. ಅಲ್ಲೇ ಇದ್ದ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಷಡಾಕ್ಷರಿಯವರ ಪತ್ನಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸಬೀನ, 


ಹೀನಾ ಮತ್ತು ರೇಷ್ಮ ಎಂಬುವರು ಶಾರೂ ಮತ್ತು ಇರ್ಫಾನ್ ಜೊತೆ ಸೇರಿ ಷಡಾಕ್ಷರಿಯವರ ಪತ್ನಿಯನ್ನ ಎಳೆದಾಡಿ ಅವಮಾನಗೊಳಿಸಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ. ಈ ಎಳೆದಾಟದಲ್ಲಿ ಪತ್ನಿಯ ಚಿನ್ನದ ಸರವೊಂದು ಕಳೆದು ಹೋಗಿದೆ. ನಂತರ ಪರಿಚಯಸ್ಥರು ಜಗಳ ಬಿಡಿಸಿದ್ದಾರೆ. 


ಹೆಂಡತಿಯ ಗೌವಕ್ಕೆ ದಕ್ಕೆ ಬರುವ ಹಾಗೆ ವರ್ತಿಸಿ ಎಳೆದಾಡಿದ ವಿಚಾರದಲ್ಲಿ ಐವರ ವಿರುದ್ಧ ಭದ್ರಾವತಿ ಹಳೆ ನಗರದಲ್ಲಿ ದೂರು ದಾಖಲಾಗಿದೆ. ಗಾಯಾಳು ಷಡಾಕ್ಷರಿ ಮತ್ತು ಅವರ ಪತ್ನಿಯನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ, ಆಗಸ್ಟ್ 20, 2024

ಜಿಲ್ಲೆಯಲ್ಲಿ ಮತ್ತೊಂದು ಅನುಮಾನಸ್ಪದ ಸಾವು ಪ್ರಕರಣ ದಾಖಲು



ಸುದ್ದಿಲೈವ್/ಸೊರಬ


ಮೊನ್ನೆ ಭಾನುವಾರ ಭದ್ರಾವತಿಯಲ್ಲಿ ಅನುಮಾನಸ್ಪದ ಸಾವು ಸಂಭಿಸಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೊಂದು ಅದೇ ರೀತಿ ಅನುಮಾನಕರವಾದ ಸಾವಿನ ಪ್ರಕರಣ  ನಡೆದಿದೆ. 


ಸೊರಬ ತಾಲೂಕು ತಾವರೆಕೊಪ್ಪ ಗ್ರಾಮದಲ್ಲಿ ಕೃಷಿ ಕಾರ್ಮಿಕನಾಗಿರುವ ಮಂಜುನಾಥ್ (36) ಅನುಮಾನಕರವಾಗಿ ಸಾವನ್ನಪ್ಪಿದ್ದಾನೆ. ನಿನ್ನೆ ಗದ್ದೆಯಲ್ಲಿ ತಂದೆ ಯುವರಾಜ್ ಎಂಬುವ ಜೊತೆ ಕೆಲಸ ಮಾಡುತ್ತಿದ್ದ ಮಂಜುನಾಥ್ ಅಣಬೆಯನ್ನ ಹುಡುಕಿಕೊಂಡು ಸಾಗಿದ್ದಾರೆ. 


ಮಧ್ಯಾಹ್ನದ ಹೊತ್ತಾದ ಕಾರಣ ತಂದೆ ಊಟಕ್ಕೆಂದು ಮನೆಗೆ ತೆರಳಿದ್ದಾರೆ. ಮನೆಯಲ್ಲೇ ವಿಶ್ರಾಂತಿ ಪಡೆದು ನಂತರ ಮಗ ಊಟಕ್ಕೆ ಬರಲಿಲ್ಲವೆಂದು ಹುಡುಕಿಕೊಂಡು ಹೊರಟಿದ್ದಾರೆ. ಹುಡುಕಿಕೊಂಡು ಹೋದಾಗ ಮಗ ತಮ್ಮ ಹೊಲದಲ್ಲೇ ಶವವಾಗಿ ಬಿದ್ದಿದ್ದು ಕಂಡು ದಿಗ್ಬ್ರಾಂತರಾಗಿದ್ದಾರೆ. 


ನಂತರ ಮಗನನ್ನ ಅಂಗಾತ ಮಲಗಿಸಿ ನೋಡಿದಾಗ ಹಿಂಬದಿ ಸುಟ್ಟಗಾಯಗಳು ಪತ್ತೆಯಾಗಿದೆ. ಈ ಸುಟ್ಟಗಾಯಗಳೆ ಅನುಮಾನಕ್ಕೆ  ಕಾರಣವಾಗಿದೆ. ಯುವರಾಜ್ ಅವರಿಗೆ ಮಂಜುನಾಥ ಸೇರಿ ಮೂವರು ಮಕ್ಕಳಿದ್ದಾರೆ. 


2022 ರಲ್ಲಿ ಮತ್ತೋರ್ವ ಮಗ ಮಹೇಶ್ ಟ್ರ್ಯಾಕ್ಟರ್ ನಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಈಗ ಅವರ ಸಹೋದರ ಮಹೇಶ್ ಸಹ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೂರನೇ ಅವರು ಸಹೋದರಿಯಾಗಿದ್ದಾರೆ. ಈಗ ಯುವರಾಜ್ ಹೊರತುಪಡಿಸಿ ಅವರ ಜೊತೆ ಕುಟುಂಬದ ಯಾವ ಸದಸ್ಯರೂ ಯಾರು ಇಲ್ಲವಾಗಿದೆ.


ಮಂಜುನಾಥ್  ಸಾವಿಗೆ ಕಾರಣ ಏನುಎಂಬುದರ ಬಗ್ಗೆ ಪೊಲೀಸ್ ಬೆನ್ನುಬಿದ್ದಿದೆ. ಇವರ ಮಧ್ಯೆ ಆಸ್ತಿ ವಿಚಾರದಲ್ಲಿ ದಾಯಾದಿ ಕಲಹದ ವಾಸನೆಯೂ ಹೊಡೆಯುತ್ತಿದೆ. ಮಂಜುನಾಥ್ ವಿದ್ಯುತ್ ಶಾಕ್ ನಿಂದ ಸತ್ತಿರುವುದಾಗಿ ಕುಟುಂಬ ಆರೋಪಿಸಿದೆ. 

ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು

 


ಸುದ್ದಿಲೈವ್/ಸಾಗರ


ತಾಲ್ಲೂಕಿನ ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಡ್ಡಿನಬೈಲು ಗ್ರಾಮದ ಬಳಿ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. 


ತಾಲ್ಲೂಕಿನ ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ರವಿ (30) ಮೃತ ಯುವಕನಾಗಿದ್ದಾನೆ. ಜಡ್ಡಿನಬೈಲು ಶರಾವತಿ ಹಿನ್ನೀರಿನಲ್ಲಿ ಮೀನುಗಾರ ರವಿ ಎಂಬುವವರು ಸೋಮವಾರ ಸಂಜೆ ಮೀನಿಗಾಗಿ ಬಲೆ ಹಾಕಿ ಬಂದಿದ್ದರು. 


ಮಂಗಳವಾರ ಬೆಳಿಗ್ಗೆ ಬಲೆ ತೆಗೆಯಲು ಹಿನ್ನೀರಿಗೆ ಇಳಿದಾಗ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. 
ವಿಪರೀತ ಮಳೆಯಿಂದಾಗಿ ಶರಾವತಿ ಹಿನ್ನೀರಿನಲ್ಲಿ ರಭಸ ಹೆಚ್ಚಿದ್ದು, ಜೊತೆಗೆ ಮರಮಟ್ಟಿ ವಿಪರೀತವಾಗಿದೆ. 

ಮರಮಟ್ಟಿಗಳಿಗೆ ಬಲೆ ಸಿಕ್ಕಿದ್ದನ್ನು ರವಿ ಬಿಡಿಸಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲೆಯ ಆವರಣದಲ್ಲಿ ನಿಲ್ಲಿಸಿದ್ದ ಬಸ್ ಗಳ ಪಾರ್ಟ್ಸ್ ಗಳು ಕಳುವು


 

ಸುದ್ದಿಲೈವ್/ಶಿವಮೊಗ್ಗ


ಗುರುಪುರದಲ್ಲಿರುವ ಖಾಸಗಿ ಶಾಲಾ ಬಸ್ ನ ಟಯರ್, ಟೂಲ್, ಸ್ಟೆಪ್ನಿ, ಲಿವರ್, ಜಾಕ್ ಮೊದಲಾದ ಸ್ಪೇರ್ ಪಾರ್ಟ್ಸ್ ಗಳನ್ನ ಕದ್ದೊಯ್ದಿರುವ ಬಗ್ಗೆ ಶಿವಮೊಗ್ಗ  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


ಶಿವಮೊಗ್ಗ ನಗರದ ಗುರುಪುರದಲ್ಲಿರುವ ಡೆಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಸೇರಿದ  ಬಸ್ಸುಗಳನ್ನು ಶಾಲಾ ಆವರಣದಲ್ಲಿರುವ ಪಾರ್ಕನ ಲಾಟ್ ನಲ್ಲಿ ನಿಲ್ಲಿಸಲಾಗಿತ್ತು. ಪ್ರತಿ ದಿನ ಮ್ಯಾನೇಜರ್ ಆದ ಚೇತನ ಬಿ ಸಿಂಗ್ ರವರು ಸಂಜೆ 07.00 ಗಂಟೆಗೆ ಶಾಲೆಗೆ ಬೀಗ ಹಾಕಿಕೊಂಡು ಮನೆಗೆ ಹೋಗುತ್ತಾರೆ. 


ಮರುದಿನ  ಬೆಳಿಗ್ಗೆ 07.00 ಗಂಟೆಗೆ ಚೇತನ ಬಿ ಸಿಂಗ್ ರವರು ಶಾಲಾ ಆವರಣಕ್ಕೆ ಬಂದು ಪರಿಶೀಲನೆ ಬಡೆಸಿ ತೆರಳುವುದು ಅವರ ಕಾಯಕವಾಗಿದೆ.  ಇತ್ತೀಚೆಗೆ  ಶಾಲೆಯ ಗೇಟಿನ ಬೀಗವನ್ನು ಮುರಿದು ಓಳ ಪ್ರವೇಶ ಮಾಡಿ ಶಾಲಾ ಆವರಣದಲ್ಲಿ ಅಳವಡಿಸಿದ್ದ, ಸಿ.ಸಿ.ಟಿ.ವಿ ಕ್ಯಾಮರದ ವೈರ್ ಗಳನ್ನು ಕಿತ್ತು ಹಾಕಿದ್ದಾರೆ.


ಪಾರ್ಕನಲ್ಲಿ ನಿಲ್ಲಿಸಿದ್ದ 11 ಶಾಲಾ ಬಸ್ಸುಗಳಲ್ಲಿ ಸುಮಾರು 07-08 ಬಸ್ಸುಗಳಿಗೆ ಸೇರಿದ 1) ಬಸ್ಸಿನ ಸೈಷ್ಟಿ-02 ಅಂದಾಜು ಬೆಲೆ-7000/- 2) ಬಸ್ಸಿನ ಜಾಕ್-02 ಅಂದಾಜು 5000/- 3) ಬಸ್ಸಿನ 02 ಲಿವರ್ ಅಂದಾಜು ಬೆಲೆ-1000 4) ಬಸ್ಸಿಗೆ ಅಳವಡಿಸುವ ಬೆಂಕಿ ಆರಿಸುವ 02 ಟ್ಯಾಂಕ್ ಅಂದಾಜು ಬೆಲೆ-6000 5) ಬಸ್ಸಿನ 02 ಟೈರ್ ಗಳು ಅಂದಾಜು ಬೆಲೆ 17000/- ಹಾಗೂ 6) ಕಳೆ ಕಟ್ ಮಾಡುವ ಯಂತ್ರ ಅಂದಾಜು ಬೆಲೆ 20000/- ರೂ ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನವಾದ ಒಟ್ಟು ಅಂದಾಜು ಬೆಲೆ 56,000/- ರೂಗಳಾಗಿವೆ.


ನಂತರ  ಶಾಲೆಯ ಮುಂಬಾಗದ ಮನೆಯ ವಾಸಿ ಪ್ರದೀಪರವರನ್ನು ವಿಚಾರ ಮಾಡಿದಾಗ ಪ್ರದೀಪರವರು ರಾತ್ರಿ 10.30 ಗಂಟೆ ಸಮಯದಲ್ಲಿ ಸುಮಾರು 4-5 ಜನರು ಶಾಲಾ ಕಾಂಪೌಂಡ ಒಳಭಾಗದಲ್ಲಿದ್ದು, ನಂತರ ಎಲ್ಲರು ಕೆ.ಎ 15 ಎ 2372 ಸಂಖ್ಯೆ ಆಟೋದಲ್ಲಿ ನಮ್ಮ ಮನೆಯ ಮುಂಬಾಗದ ಕಾಂಪೌಂಡ ಪಕ್ಕದ ರಸ್ತೆಯಲ್ಲಿ ಹೋಗುತ್ತಿರುವಾಗಿ ತಿಳಿಸಿದ್ದಾರೆ. 


ಆಟೋದಲ್ಲಿ, ವೈರ್, ಟೈರುಗಳು ನನಗೆ ಕಂಡಿದ್ದು, ಈ ಹಿಂದೆ ನಿಮ್ಮ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ, ಶಂಕರಪ್ಪ, ರವಿಕುಮಾ‌ರ್, ಮಾಲತೇಶರವರಾಗಿದ್ದರೆಂದು ತಿಳಿಸಿದ್ದಾರೆ. ಈ ಹಿಂದೆ ಶಾಲೆಯಲ್ಲಿ ಕಳ್ಳತನವಾಗಿದ್ದು ಇದರಲ್ಲಿ ಇವರುಗಳೇ ಆರೋಪಿಗಳಾಗಿದ್ದಾರೆ.  ಈ ಬಾರಿಯ ಕಳ್ಳತನಲ್ಲಿ  ಅರುಣ, ಶಂಕರಪ್ಪ, ರವಿ ಕುಮಾರ, ಮಾಲತೇಶ ಹಾಗೂ ಇತರರ ಮೇಲೆ ಅನುಮಾನವಿದೆ ಎಂದು ಶಾಲೆಯ ಜಗದೀಶ್ ಗೌಡರ್ ತಿಳಿಸಿದ್ದಾರೆ.

ಬೆಚ್ಚಿ ಬೀಳಿಸುವ ವಿಡಿಯೋ ವೈರಲ್-ಅರಣ್ಯ ಇಲಾಖೆಯಿಂದ ಸ್ಪಷ್ಟನೆ

 


ಸುದ್ದಿಲೈವ್/ಶಿವಮೊಗ್ಗ


ಕರಡಿಯನ್ನ ಹೊಡೆದು ಕೊಂದು ಹಾಕಿರುವ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಗೊಲ್ಲರಹಟ್ಟಿಯ ದೃಶ್ಯ ಎಂದು ಬಿಂಬಿಸಲಾಗಿದೆ.


ಆದರೆ ಅರಣ್ಯ ಇಲಾಖೆಯು ಇದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಯ ಯಾವುದೇ ಗ್ರಾಮದಲ್ಲಿ ಈ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲವರು ವಾಟ್ಸಪ್ ಸ್ಟೇಟಸ್ ಗೆ ಈ ವಿಡಿಯೋ ಹಾಕಿಕೊಂಡಿರುವುದಾಗಿ ತಿಳಿದು ಬಂದಿದೆ. ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ ಎಂದು ಬಿಂಬಿಸಿ ವಾಟ್ಸಪ್ ಸ್ಟೇಟಸ್ ಗೆ ಕೆಲ ಯುವಕರು ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದ್ದು, ಈ ರೀತಿಯ ಯಾವುದೇ ಘಟನೆ ನಡೆದಿಲ್ಲವೆಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದ್ದಾರೆ.



ತೆಂಗಿನ ತೋಟಕ್ಕೆ ನುಗ್ಗಿದ ಕರಡಿಯನ್ನ ಸ್ಥಳೀಯ ಗ್ರಾಮಸ್ಥರು ಹೊಡೆದು ಕೊಲ್ಲುವ ಪ್ರಯತ್ನ ನಡೆಸಿದ್ದಾರೆ. ಹೊಡೆಯುವ ವೇಳೆ ಯುವಕನ ಮೈಮೇಲೆ ಎಗರಿದ ಕರಡಿ ಆತನನ್ನ ಕಚ್ಚುತ್ತದೆ. ಆ ವೇಳೆ ಸ್ಥಳೀಯರು ದೊಣ್ಣೆ ಹಿಡಿದು ಮತ್ತು ಕೆಲವರು ಎಳನೀರು ಬಿಸಾಕಿ ಸಾಯಿಸಿದ್ದಾರೆ.


ಈ ವಿಡಿಯೋ ಭದ್ರಾವತಿ ತಾಲೂಲು ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿರುವುದಾಗಿ ಬಿಂಬಿಸಲಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಈ ವಿಡಿಯೋ ಉತ್ತರ ಭಾರತದ ಕಡೆಯಲ್ಲಿ ನಡೆದಘಟನೆ ಎಂದು ಸ್ಪಷ್ಟಪಡಿಸಿದೆ. ಈವಿಡಿಯೋವನ್ನ ವೈರಲ್ ಮಾಡುವ ಮುನ್ನ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.