ತಾಲೂಕು ಸುದ್ದಿಗಳು
ಜಿಲ್ಲಾ ಬಂಜಾರ ಸಂಘದ ಲೆಕ್ಕ ನೀಡಲು ಆಗ್ರಹ

ಸುದ್ದಿಲೈವ್/ಶಿವಮೊಗ್ಗ
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ನಾಯ್ಕ್ ಸೊತ ಬಳಿಕ ಅವರ ವಿರುದ್ಧದ ಬಣಗಳು ಕೈತೊಳೆದುಕೊಂಡು ಬೆನ್ನಿಗೆ ಬಿದ್ದಂತೆ ಕಾಣುತ್ತಿದೆ. ಅವರ ಸಮಾಜದವರೆ ಕೆಲ ಮುಖಂಡರು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರಾಗಿರುವ ಅಶೋಕ್ ನಾಯ್ಕ್ ಗೆ ಭವನ ನಿರ್ಮಾಣದ ಲೆಕ್ಕ ಕೇಳಲು ಮುಂದಾಗಿದ್ದಾರೆ. ನ್ಯಾಯಯುತವಾಗಿದ್ದರೆ ಲೆಕ್ಕ ಕೊಡಲು ಏನು ಸಮಸ್ಯೆ ಎಂಬುದೇ ಲೆಕ್ಕ ಕೇಳುತ್ತಿರುವವರ ಪ್ರಶ್ನೆಯಾಗಿದೆ.
ಬಾಲರಾಜ್ ಅರಸ್ ರಸ್ತೆಯಲ್ಲಿರುವ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಂಘ ಲೆಕ್ಕ ಕೊಡಬೇಕು ಮತ್ತು ಲೆಕ್ಕ ಕೇಳಿದರೆ ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಆಗ್ರಹಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ಕೇವಲ ಸರಕಾರದಿಂದ ಮಾತ್ರ ಹಣ ಬಂದಿಲ್ಲ. ಜಿಲ್ಲೆಯ ಎಲ್ಲಾ ತಾಂಡಾಗಳೂ ಹಣ ನೀಡಿವೆ. ಮತ್ತು ಸಮಾಜದ ಹಲವರು ಹತ್ತು ಸಾವಿರದಿಂದ ೫ ಲಕ್ಷದವರೆಗೆ ಹಣ ಕೊಟ್ಟಿದ್ದಾರೆ. ಆದರೆ ಇದ್ಯಾವುದಕ್ಕೂ ಸಮುದಾಯದ ಜಿಲ್ಲಾಧ್ಯಕ್ಷರಾಗಿರು ಅಶೋಕ್ ನಾಯ್ಕ ಉತ್ತರ ಕೊಟ್ಟಿಲ್ಲ. ಹೋಗಲಿ, ಕಳೆದ ಎರಡು ವರ್ಷಗಳಿಂದ ಸಭೆಯನ್ನೂ ಕರೆದಿಲ್ಲ. ಇದು ಖಂಡನೀಯ. ಲೆಕ್ಕ ಕೇಳಿದರೆ ಬೆದರಿಸುತ್ತಾರೆ ಎಂದು ಆರೋಪಿಸಿದರು.
ಸಮಾಜದ ಹಾಗೂ ವಿದ್ಯಾರ್ಥಿ ಸಂಘಟನೆಯ ಮುಖಂಡ ಅಭಿರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಲೆಕ್ಕ ಕೊಡಿ ಎಂದು ಕೇಳಿದ್ದರು. ಆದರೆ ಅಶೋಕ್ ನಾಯ್ಕ ಅವರ ಸಹೋದರ ಕುಮಾರ್ ನಾಯ್ಕ ದೂರವಾಣಿ ಮೂಲಕ ಕರೆಮಾಡಿ, ಅವಾಚ್ಯ ಶಬ್ದಗಳಿಂದ ಹೀಯಾಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕಾಲ್ ರೆಕಾರ್ಡ್ಸ್ ಕೂಡ ನಮ್ಮಲ್ಲಿದ್ದು, ಇಂದೇ ಈ ಬಗ್ಗೆ ಜಯನಗರ ಪೊಲೀಸ್ ಠಾಣೆಗೆ ದೂರು ಕೊಡಲಿದ್ದೇವೆ ಎಂದರು.
ಅಶೋಕ್ ನಾಯ್ಕ ಅವರು ಸಮುದಾಯ ಭವನಕ್ಕೆ ಸರಕಾರದಿಂದ ಅನುದಾನ ತಂದಿರಬಹುದು. ಇದನ್ನು ನಾವು ಸ್ವಾಗತಿಸುತ್ತೇವೆ. ಅದಕ್ಕಾಗಿ ನಾವು ಅವರಿಗೆ ಸನ್ಮಾನ ಕೂಡ ಮಾಡಿದ್ದೇವೆ. ಆದರೆ ಸಮುದಾಯ ಭವನದ ಲೆಕ್ಕವನ್ನೇ ಕೇಳಬಾರದು ಎಂದರೆ ಹೇಗೆ? ಕೇಳಿದರೆ ಧಮ್ಕಿ ಹಾಕುತ್ತಾರೆ.
ಹಾಗಾಗಿ ಜಿಲ್ಲಾ ಸಂಘ ಕೂಡಲೇ ಲೆಕ್ಕಪತ್ರ ಕೊಡಬೇಕು ಮತ್ತು ಲೆಕ್ಕ ಕೇಳಿದ್ದಕ್ಕೆ ಧಮ್ಕಿ ಹಾಕಿದ ಅಶೋಕ್ ನಾಯ್ಕ ಸಹಚರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ. ನಾನ್ಯಾ ನಾಯ್ಕ, ಉಮಾಮಹೇಶ್ವರ ನಾಯ್ಕ, ಹೆಚ್.ಡಿ. ಬಸವರಾಜ್, ರೇಣುಕಾ ನಾಯ್ಕ, ಅಭಿರಾಮ್ ಇದ್ದರು.
ಇದನ್ನೂ ಓದಿ-https://suddilive.in/?p=18122
