Suddilive || Shivamogga
ಅಲ್ಲಮಪ್ರಭು ಅನುಭಾವ ಪರಂಪರೆಯ ಆಮೇಜಾನ್ : ಡಾ. ಮರುಳಸಿದ್ದ ಸ್ವಾಮೀಜಿ-The Amazon of Allama Prabhu Anubhav's legacy - Dr. Marulasidda Swamiji
ಬಸವಣ್ಣ ಸ್ಥಾಪಿಸಿದ್ದ ಅನುಭವ ಮಂಟಪದ ಶೂನ್ಯಪೀಠದ ಮೊದಲ ಅಧ್ಯಕ್ಷ ಅಲ್ಲಮಪ್ರಭುಗಳು ಕನ್ನಡ ಅನುಭಾವ ಪರಂಪರೆಯ ಅಮೇಜಾನ್ ನದಿಯಂತೆ ಎಂದು ಶಿವಮೊಗ್ಗ ಬಸವಕೇಂದ್ರದ ಡಾ. ಮರುಳಸಿದ್ದ ಸ್ವಾಮೀಜಿ ಹೇಳಿದ್ದಾರೆ.
ಶರಣ ಸಾಹಿತ್ಯ ಪರಿಷತ್, ಶಿವಮೊಗ್ಗ ಬಸವಕೇಂದ್ರ ಇನ್ನಿತರ ಸಂಘಟನೆಗಳು ಶಿವಮೊಗ್ಗದ ಅಲ್ಲಮ ಬಯಲಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಅಲ್ಲಮಪ್ರಭು ಜಯಂತಿಯಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಜಗತ್ತಿನ ಅತಿದೊಡ್ಡ ನದಿಯಾದ ಅಮೇಜಾನ್ ನದಿಯನ್ನು ‘ಸಿಹಿನೀರಿನ ಸಮುದ್ರ’ ಎಂದು ಕರೆಯುತ್ತಾರೆ. ಅದು ಸಾಗುವ ಮಾರ್ಗದಲ್ಲಿ ಸಿಗುವ ಎಲ್ಲ ನದಿ, ತೊರೆ, ಹಳ್ಳ, ಹೊಳೆಗಳನ್ನು ತನ್ನೊಂದಿಗೆ ಕರೆದೊಯ್ದು ಸಮುದ್ರವನ್ನು ಸೇರಿಸಿಬಿಡುತ್ತದೆ ಎಂದರು.
ಇದೇ ರೀತಿಯಲ್ಲಿ ಪ್ರಭುದೇವರು ತಾನು ಸಂಚಾರ ಮಾಡುತ್ತಾ ತನಗೆ ಭೇಟಿಯಾದ ಎಲ್ಲರನ್ನೂ ಚಲನಶೀಲಗೊಳಿಸಿ, ಅವರ ಸಾಧನೆಯ ಓರೆ ಕೊರೆಗಳನ್ನು ತಿದ್ದಿ ತೀಡಿ, ಬಯಲಿನೆಡೆಗೆ ಕೊಂಡೊಯ್ಯುತ್ತಾರೆ ಎಂದು ವಿಶ್ಲೇಷಿಸಿದರು.
ಪ್ರಭುವಿನ ಪ್ರಭಾವಕ್ಕೊಳಗಾಗಿ ಬಯಲಿಗೆ ಸಾಗಿದವರಲ್ಲಿ ಭಾರತೀಯ ಪರಂಪರೆಯ ಎಲ್ಲಾ ಆಧ್ಯಾತ್ಮ ಧಾರೆಗಳ ಸಾಧಕರು ಇರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಶೈವ, ವೈದಿಕ, ಜೈನ, ಬೌದ್ಧ, ಸಿದ್ಧ, ಸನ್ಯಾಸಿ, ಗೃಹಸ್ಥ.. ಹೀಗೆ ಅಲ್ಲಮಪ್ರಭುವಿನ ಪ್ರಭಾವಲಯಕ್ಕೆ ಬಾರದವರೇ ಇಲ್ಲ, ಹಿರಿಯ ವಿದ್ವಾಂಸ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರ ಮಾತಿನಲ್ಲಿ ಹೇಳುವುದಾದರೆ, ‘ಬುದ್ಧನಿಗಿಂತಲೂ, ತನ್ನ ಕಾಲದ ಆಧ್ಯಾತ್ಮ ಪರಂಪರೆಯನ್ನು ಹೆಚ್ಚು ಪ್ರಭಾವಿಸಿದ್ದು ಅಲ್ಲಮಪ್ರಭುದೇವರು’ ಎಂದರು.
ಜಂಗಮಶೀಲತೆ ಪ್ರಭುದೇವರ ಸ್ಥಾಯೀಭಾವ. ಪ್ರಭುವಿನ ಪ್ರಭಾವಕ್ಕೆ ಒಳಗಾದವರಾರೂ ಸ್ಥಾವರವಾಗಲಾರರು. ಭಾರತೀಯ ಅಧ್ಯಾತ್ಮಿಕ ಲೋಕದ ವಿಭಿನ್ನ ಪರಂಪರೆಗಳಾದ ಆರೂಢ, ಅವಧೂತ, ಅನುಭಾವಿ ಮೊದಲಾದ ಎಲ್ಲ ಪಂಥಗಳಿಗೂ ಗುರುವಾದಾತ ಎಂದರು
ಅಲ್ಲಮಪ್ರಭು ಭೂಮಿಯು ಆಕಾಶಕ್ಕೆ ಹಾರುವ ಭೂಮಿಕೆಯಾಗಬೇಕೆಂದು ಬಯಸಿದವರು. ಆದ್ದರಿಂದಲೇ ಭೂಮಿಯ ಮೇಲಣ ಯಾವುದಕ್ಕೂ ಅಂಟದೇ ಎಲ್ಲದರೊಳಗಿದ್ದು ಏನೂ ಆಗದ ಬಯಲಿನಂತೆ ಮಾನವ ಬಾಳಬೇಕೆಂದು ಪ್ರತಿಪಾದಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳು ಆಶೀರ್ವಚನ ನೀಡಿ, ಬಸವಣ್ಣ ಏನೆಲ್ಲಾ ಕ್ರಾಂತಿ ಮಾಡಿದರೂ ಅದಕ್ಕೊಂದು ಸ್ಥಿರತೆ ತಂದು ಕೊಡುವ ಉದ್ದೇಶದಿಂದ ಅನುಭವ ಮಂಟಪ ಸ್ಥಾಪನೆ ಆಯಿತು. ತರತಮ ಭಾವವಿಲ್ಲದ. ಅನುಭವ ಮಂಟಪ ಜಗತ್ತಿನ ಅದ್ಭುತ. ಅನುಭವ ಮಂಟದ ಸಂದೇಶವನ್ನು ಲೋಕಕ್ಕೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸೊನ್ನೆಗೆ ಪಾರಮಾರ್ಥಿಕ ಅರ್ಥ ಕೊಟ್ಟು ಅದನ್ನುಶೂನ್ಯ ಎಂದು ಕರೆದದ್ದು ಅಲ್ಲಮಪ್ರಭು ಎಂದು ವಿವರಿಸಿದರು.
ಅನುಭವ ಮಂಟಪ ಎಂಬುದು ಕೇವಲ ಕಾಲ್ಪನೀಕ ಎಂದು ಇತ್ತೀಚೆಗೆ ತಳಬುಡವಿಲ್ಲದ ವಿತಂಡವಾದ- ತರ್ಕ ಮಂಡನೆ ಆಗುತ್ತಿದೆ. ಇಂಥ ಅರ್ಥವಿಲ್ಲದ ಮಾತುಗಳನ್ನು ಬಿಟ್ಟು ಬಿಡುವುದು ನಮ್ಮೆಲ್ಲರ ವಿವೇಕ ಆಗಬೇಕು ಎಂದರು.
ಶಾಸಕರಾದ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ರುದ್ರೇಗೌಡರು, ಆಯನೂರು ಮಂಜುನಾಥ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹಾರುದ್ರ, ತಾಲೂಕು ಅಧ್ಯಕ್ಷರಾದ ಎಸ್.ಆರ್.ಸ್ವಾಮಿ, ಪ್ರಮುಖರಾದ ಹೆಚ್.ಸಿ. ಯೋಗೇಶ್, ಬೆನಕಪ್ಪ, ಚಂದ್ರಣ್ಣ, ಶಿವಯೋಗಿ, ಸುಹಾಸ್, ಕಿರಣ್ ಆನಂದಮೂರ್ತಿ, ಲವಕುಮಾರ್ ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.
The Amazon of Allama Prabhu