ಸುದ್ದಿಲೈವ್/ಶಿವಮೊಗ್ಗ
ದೂರದ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕರಂಬಳ ಚಾಪಗಾವ ಗ್ರಾಮದಲ್ಲಿ ಹಾವಳಿಯಿಟ್ಟಿದ್ದ ಕಾಡಾನೆಯೊಂದನ್ನ ಸೆರೆ ಹಿಡಿಯಲು ಶಿವಮೊಗ್ಗದ ಸಕ್ರೆಬೈಲಿನ ನಾಲ್ಕು ಆನೆಗಳನ್ನ ಕಳುಹಿಸಲಾಗಿದ್ದು ಇಂದು ಕಾಡಾನೆಯ ಕಾರ್ಯಾಚರಣೆ ಯಶಸ್ವಿಯಾಗಿದೆ.
ಕಳೆದ ಎರಡು ತಿಂಗಳಿಂದ ಖಾನಾಪುರದ ಕರಂಬಳ ಚಾಪಗಾಂವ ಗ್ರಾಮಗಳ ಸುತ್ತ ರೈತರಿಗೆ ತೊಂದರೆ ಕೊಡುತ್ತಿದ್ದ ಆನೆಯನ್ನ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಗುರುವಾರ ಬೆಳಗ್ಗೆ ಕಾರ್ಯಾಚರಣೆ ಕೈಗೊಂಡ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ನುರಿತ ಆನೆಗಳ ಸಹಾಯದಿಂದ ಪುಂಡ ಕಾಡಾನೆಯನ್ನ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಆದರೆ ವಿಷಯ ಅದಲ್ಲ. ಕಾಡಾನೆಯನ್ನ ಸೆರೆಹಿಡಿದು ಸಕ್ರಬೈಲಿನ ಕ್ರಾಲ್ ಗೆ ಕರತರುವ ಕಾರ್ಯಾಚರಣೆ ನಿಜವೇ ಆಗಿದ್ದರೆ, ಶಿವಮೊಗ್ಗ ತಾಲೂಕಿನ ಪುರುದಾಳು, ಆಲದ ಹೊಸೂರು, ಗುಡ್ಡದ ಅರಕೆರೆ, ಸಿರಿಗೆರೆ, ಮಲೆಶಂಕರದಲ್ಲಿ ಕಾಣಿಸಿಕೊಂಡಿದ್ದ ಆನೆಗಳನ್ನು ಹಿಡಿಯಲು ಆಗದ ಅರಣ್ಯ ಅಧಿಕಾರಿಗಳಿಗೆ ಬೆಳಗಾವಿಯ ಕರಂಬಳ ಚಂಪಗಾವ್ ನಲ್ಲಿ ಹಾವಳಿಯಿಟ್ಟಿದ್ದ ಕಾಡಾನೆ ಹಿಡಿದು ಕರೆತರಲು ಇಲ್ಲಿಂದ ನುರಿತ ಆನೆಗಳನ್ನು ಕಳುಹಿಸಲು ಇರುವ ಆಸಕ್ತಿಯಾದರೂ ಏನು? ಎಂಬುದು ತಿಳಿಯುತ್ತಿಲ್ಲ.
ಶಿವಮೊಗ್ಗ ತಾಲೂಕಿನಲ್ಲಿ ಕಾಣಿಸಿಕೊಂಡಿದ್ದ ಆನೆಗಳನ್ನು ಹಿಡಿಯಲಾಗದೆ ಹೊರ ಜಿಲ್ಲೆಯಲ್ಲಿ ಕಾಟ ಕೊಟ್ಟ ಕಾಡಾನೆ ಹಿಡಿಯಲು ಸಕ್ರೆಬೈಲಿನ ಆನೆಗಳನ್ನ ಕಳುಹಿಸಲು ಅಧಿಕಾರಿಗಳಿಗೆ ಇರುವ ಒತ್ತಡವಾದರೂ ಏನು? ಅಂದರೆ ನಮ್ಮ ಜಿಲ್ಲೆಯ ರಾಜಕೀಯ ವ್ಯಕ್ತಿಗಳಿಗೆ ಇಲ್ಲದ ಧಮ್ಮು ತಾಕತ್ತು ಬೆಳಗಾವಿ ಜಿಲ್ಲೆಯ ನಾಯಕರಿಗೆ ಇದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ನಮ್ಮ ರೈತರಬಗ್ಗೆ ಇಲ್ಲದ ಕಾಳಜಿ ಬೇರೆ ಜಿಲ್ಲೆಯ ರೈತರ ಮೇಲೆ ಉಕ್ಕಿಹರಿಯುತ್ತಿದೆಯಾ? ಎಂದೆನಿಸಿದೆ
ಶಿವಮೊಗ್ಗ ತಾಲೂಕಿನಲ್ಲಿದ್ದ ಆನೆಗಳು ಸಾಗರ ತಾಲೂಕನ್ನ ತಲುಪಿವೆ. ರೈತರು ಆನೆಯ ಹಾವಳಿಯಿಂದ ಕಂಗಾಲಾಗಿದ್ದಾರೆ. ಗುಡ್ಡದ ಅರಕೆರೆಯಲ್ಲಿ ವಿದ್ಯುತ್ ಶಾಕ್ ಗೆ ಕಾಡಾನೆಯೊಂದು ಸತ್ತಿದೆ. ಆನೆ ಹಾವಳಿಗೆ ಶಿವಮೊಗ್ಗ ತಾಲೂಕಿನ ರೈತನೋರ್ವ ಬಲಿಯಾಗಿದ್ದಾನೆ. ಈ ಅನಾಹುತಗಳು ಶಿವಮೊಗ್ಗ ಜಿಲ್ಲೆಯ ಅಧಿಕಾರಿಗಳ ಅರಿವಿಗೆ ಬಾರದೆ ಬೆಳಗಾವಿಯಲ್ಲಿ ಕಾಡಾನೆಯೊಂದು ಹಾವಳಿಯಿಟ್ಟಿದ್ದಕ್ಕೆ ಸ್ಪಂದಿಸಿ ಇಲ್ಲಿಂದ ನಾಲ್ಕಾನೆಗಳನ್ನ ಕಳುಹಿಸಿ ಅಲ್ಲಿಂದ ಐದು ಆನೆಗಳನ್ನು ತರಿಸಿಕೊಂಡಿದ್ದು ನಿಜವಾಗಿಯೂ ಅದ್ಭುತದಲ್ಲೊಂದು!
ಬೇರೆ ಜಿಲ್ಲೆಯಲ್ಲಿ ಕಂಡು ಬಂದ ಸಮಸ್ಯೆಗೆ ಸ್ಪಂಧಿಸಬಾರದು ಎಂಬುದು ನಮ್ಮ ಸುದ್ದಿಯ ಉದ್ದೇಶವಲ್ಲ. ಆದರೆ ನಮ್ಮಲ್ಲೇ ರೈತರ ಸಮಸ್ಯೆಗಳಿಗೆ ಸ್ಪಂಧಿಸದೆ ಕೇವಲ ಪಟಾಕಿ, ತಮಟೆ ಬಾರಿಸಿಕೊಂಡು ಕಾರ್ಯಾಚರಣೆ ನಡೆಸುವ ಬದಲು ಕಾಡಾನೆಗಳನ್ನ ಹಿಡಿದು ಕ್ರಾಲ್ ಗೆ ಹಾಕುವ ಕೆಲಸ ಅರಣ್ಯ ಇಲಾಖೆ ಮಾಡದೆ ಇದ್ದಿದ್ದರ ಬಗ್ಗೆ ನಮ್ಮ ಆಕ್ಷೇಪಣೆವಿದೆ. ಒಂದೋ ಅಧಿಕಾರಿಗಳು ಒತ್ತಡಕ್ಕೆಮಣಿದಿರಬೇಕು, ಇಲ್ಲ ನಮ್ಮ ಜನಪ್ರತಿನಿಧಿಗಳ ಬೆಳಗಾವಿ ರಾಜಕಾರಣಿಗಳಿಗಿಂತ ಶಕ್ತಿ ಕಡಿಮೆಯಿರಬೇಕು. ಇಲ್ಲ ನಮ್ಮ ರೈತರ ಗ್ರಹಚಾರವೂ ಇರಬಹುದು
ಈ ಆನೆಗಳನ್ನ ಕಳುಹಿಸಿರುವ ಬಗ್ಗೆಯಾಗಲಿ, ಅಲ್ಲಿಂದ ಹಿಡಿದ ಕಾಡಾನೆಗಳನ್ನ ಸಕ್ರೆಬೈಲಿಗೆ ತರಿಸಿ ಕೊಳ್ಳವ ಬಗ್ಗೆಯಾಗಲಿ ಅರಣ್ಯ ವನ್ಯಜೀವಿ ವಿಭಾಗದ ಡಿಎಫ್ಒ ಅಧಿಕಾರಿಯನ್ನ ಸಂಪರ್ಕಿಸಲು ಸುದ್ದಿಲೈವ್ ಪ್ರಯತ್ನ ನಡೆಸಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಮೊಬೈಲ್ ಕರೆಯನ್ನ ಸ್ವೀಕರಿಸಲಿಲ್ಲ. ಆದರೆ ಬೆಳಗಾವಿಯಲ್ಲಿ ವೆಬ್ ಸೈಟ್ ವೊಂದು ಸುದ್ದಿ ಮಾಡಿದೆ. ಮಾಹಿತಿ ಪ್ರಕಾರ ಸಕ್ರೆಬೈಲಿನಿಂದ ಬಹದ್ದೂರು, ಸಾಗರ, ಬಾಲಣ್ಣ ಹಾಗೂ ಸೋಮಣ್ಣ ಆನೆಯನ್ನ ಕಳುಹಿಸಿ ಕಾರ್ಯಾಚರಣೆ ನಡೆಸಲಾಗಿದೆ.