ಸುದ್ದಿಲೈವ್/ಶಿವಮೊಗ್ಗ
ತಾಲೂಕಿನ ಹಾಡೋನಹಳ್ಳಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ವಿಷಯ ತಿಳಿದು ಬರುತ್ತಿದ್ದಂತೆ, ತಹಶೀಲ್ದಾರ್ ರಾಜೀವ್, ಶಿವಮೊಗ್ಗ ಗ್ರಾಮಾಂತರ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಿಯಾ ಮೇಡಂ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿಯಲ್ಲಿ ಭರ್ಜರಿ ಬೇಟೆ ಸಿಕ್ಕಿದೆ.
ಸರಿ ಸುಮಾರು ಒಂದು ತಿಂಗಳ ಹಿಂದೆ ಇದೇ ಹಾಡೋನಹಳ್ಳಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ, ತಹಶೀಲ್ದಾರ್ ಅವರಿಗೆ ಯಾವುದೇ ಅಕ್ರಮಗಳ ಕುರುಹುಗಳು ಪತ್ತೆಯಾಗಿರಲಿಲ್ಲ. ಆದರೆ ಇಂದು ಸರಿ ಸುಮಾರು 60 ಮೆಟ್ರಿಕ್ ಟನ್ ಮರಳು ಸಿಕ್ಕಿದೆ.
ಒಟ್ಟಿನಲ್ಲಿ ಅಕ್ರಮ ಮರಳಿನ ವಿಚಾರದಲ್ಲಿ ನಡೆಯುತ್ತಿರುವ ಒಳಜಗಳ ಬಹುತೇಕ ಬೀದಿಗೆ ಬೀಳುತ್ತಿರುವುದು ತಿಳಿದು ಬಂದಿದೆ. ದಾಳಿ ನಡೆದ ಜಾಗದಲ್ಲಿ ಯಾರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದು ಇನ್ನೂ ತಿಳಿದು ಬರಬೇಕಿದೆ. ಊರಿನ ದೇವಸ್ಥಾನದ ಕಮಿಟಿಗೆ ರಾಯಲ್ಟಿ ಕಟ್ಟಿ ಅಕ್ರಮ ಮರಳುಗಾರಿಗೆ ನಡೆಸುತ್ತಿರುವುದು ತಿಳಿದು ಬಂದಿದೆ. ದಾಳಿ ನಡೆಸಿದ ಅಧಿಕಾರಿಗಳಿಗೆ ಇನ್ನು ಎಷ್ಟು ಜನರಿಂದ ಕರೆ ಬರಲು ಆರಂಭವಾಗುತ್ತದೆ ಕಾದು ನೋಡಬೇಕಿದೆ.
ದಾಳಿಯಲ್ಲಿ ಪತ್ತೆಯಾದ 60 ಮೆಟ್ರಿಕ್ ಟನ್ ಮರಳನ್ನ ಬಿಟ್ಟು ಬೇರೆಯಾವ ವಾಹನಗಳು ಪತ್ತೆಯಾಗಿಲ್ಲ. ಸ್ಥಳದಲ್ಲಿ ಯಾವ ವ್ಯಕ್ತಿಯೂ ಇರಲಿಲ್ಲ ಎಂದು ತಿಳಿದು ಬಂದಿದೆ. ಪತ್ತೆಯಾದ ಮರಳನ್ನ ಪಿಡಬ್ಲೂಡಿಗೆ ಹಸ್ತಾಂತರಿಸುವ ನಿರೀಕ್ಷೆಯಿದೆ.