ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೆಸರು ದುರ್ಬಳಕೆ ಮಾಡಿಕೊಂಡು, ಹೊಸ ವರ್ಷಕ್ಕೆ, ವಿಷ ಪದಾರ್ಥ ಬೆರೆಸಿರುವ ಸಿಹಿ ತಿಂಡಿ ರವಾನಿಸಿರುವ ಪ್ರಕರಣವೊಂದು ಸಂಭವಿಸಿದ್ದು ಈ ಸಂಬಂಧ ಡಾ. ಧನಂಜಯ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಠಾಣೆಗೆ ದೂರು ನೀಡಿದ್ದಾರೆ.
ಹೊಸ ವರ್ಷದ ಶುಭ ಕೋರುವ ಪತ್ರದೊಂದಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ನಾಗರಾಜ್ ಅವರಿಗೆ ಕೊರಿಯರ್ ಮೂಲಕ ಸಿಹಿ ತಿಂಡಿ ತಲುಪಿತ್ತು. ಪೊಟ್ಟಣದಲ್ಲಿದ್ದ ಸ್ವೀಟ್ ಸೇವಿಸಿದ ನಾಗರಾಜ್ ಅವರಿಗೆ ಅತ್ಯಂತ ಕಹಿ ಅನಿಸಿದೆ. ಡಾ. ಧನಂಜಯ ಸರ್ಜಿ ಅವರಿಗೆ ಕರೆ ಮಾಡಿದಾಗ ತಾವು ಯಾವುದೇ ಸ್ವೀಟ್ ಬಾಕ್ಸ್ ಕಳಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಡಾ. ಧನಂಜಯ ಸರ್ಜಿ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಸಿಹಿ ತಿಂಡಿ ಕಳುಹಿಸಲಾಗಿದೆ. ಅದರಲ್ಲಿ ವಿಷ ಪದಾರ್ಥ ಬೆರಸಿರುವ ಅನುಮಾನವಿದೆ ಎಂದು ಆರೋಪಿಸಿ ಡಾ. ಧನಂಜಯ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಸಚಿನ್ ರಾಜ್ ದೂರು ನೀಡಿದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.