VISL ಕಾರ್ಖಾನೆಗೆ ಬಂಡವಾಳ ಹೂಡಲು ಭರವಸೆ ನೀಡಿದ ಸಚಿವ ಹೆಚ್ ಡಿ ಕೆ


ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ(ವಿಐಎಸ್‌ಎಲ್‌)ಗೆ ಬಂಡವಾಳ ಹೂಡಿಕೆ ಮಾಡುವ ಸಂಬಂಧ ವರದಿ ಪಡೆಯಲು ತಜ್ಞರ ತಂಡವು ಶೀಘ್ರದಲ್ಲೇ ಕಾರ್ಖಾನೆಗೆ ಬರಲಿದೆ ಎಂಬ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿರುವುದು ಕಾರ್ಮಿಕರಲ್ಲಿ ಮತ್ತೊಮ್ಮೆ ಆಶಾಭಾವನೆ ಮೂಡಿಸಿದೆ.

VISL ಕಾರ್ಖಾನೆಯ ಕಾರ್ಮಿಕರ ಸಂಘದ ನಿಯೋಗವು ಹೊಸದಿಲ್ಲಿಯಲ್ಲಿಗುರುವಾರ  ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆಯನ್ನ ಕೈಬಿಟ್ಟು ಆಧುನೀಕರಣಕ್ಕೆ ಬಂಡವಾಳ ಹೂಡಿಕೆ ಮಾಡುವಂತೆ ಮನವಿ ಮಾಡಿರುವುದಾಗಿ ಕನ್ನಡ ಡಿಜಿಟಲ್ ಮಾಧ್ಯಮವೊಂದು ವರದಿ ಮಾಡಿದೆ.

ಇದಕ್ಕೆ ಸ್ಪಂದಿಸಿದ ಸಚಿವರು, ವಿಐಎಸ್‌ಎಲ್‌ಗೆ 10ರಿಂದ 15ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವ ಚಿಂತನೆ ನಡೆದಿದೆ. ಹೂಡಿಕೆ ಕಾರ್ಯ ಸಾಧ್ಯ ಮಾಡಲು ವರದಿ ತಯಾರಿಸುವ ಸಂಬಂಧವಾಗಿ ಕೋಲ್ಕತಾ ಮೂಲದ ಮೆ.ದುಸ್ತರ್ ಕಂಪನಿ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ತಜ್ಞರ ತಂಡವನ್ನು ಭದ್ರಾವತಿಗೆ ಕಳುಹಿಸಿಕೊಡುವುದಾಗಿ ಭವರಸೆ ನೀಡಿದ್ದಾರೆ.

ಕಾರ್ಖಾನೆಗೆ ಭೇಟಿ ಮಾಡಿದ ಒಂದು ವಾರದೊಳಗೆ ವರದಿ ಪಡೆದು ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರದ ಅನುಮೋದನೆಗೆ ಮಂಡಿಸಲಾಗುವುದು ಎಂದು ತಿಳಿಸಿರುವುದು ಭರವಸೆ ಹೆಚ್ಚಿಸಿದೆ.

ಇದಾದ ಬಳಿಕ ನಿಯೋಗವು ಸಂಸದ ಬಿ.ವೈ.ರಾಘವೇಂದ್ರರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಕಾರ್ಖಾನೆಗೆ ಬಂಡವಾಳ ಹೂಡಿಕೆ ವಿಚಾರ ಸಂಸತ್‌ ಅಧಿವೇಶನದಲ್ಲಿಸರಕಾರದ ಗಮನ ಸೆಳೆದು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕೋರುತ್ತೇನೆ ಎಂದು ಭರವಸೆ ನೀಡಿದರು. ನಿಯೋಗದಲ್ಲಿಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್‌, ಸಂಘದ ಪದಾಧಿಕಾರಿಗಳು, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್‌ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close