ಸುದ್ದಿಲೈವ್/ಶಿವಮೊಗ್ಗ
ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನವರು ಸಾಲ ವಸೂಲಾತಿಗಾಗಿ ದಬ್ಬಾಳಿಕೆ ಮಾಡಿದ್ದು, ತಮ್ಮ ಮನೆಯನ್ನು ಸೀಜ್ ಮಾಡಿದ್ದು, ಇದರಿಂದ ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೋರಿ ಹಾರೋಬೆನವಳ್ಳಿ ತಾಂಡಾದ ಹನುಮಂತನಾಯ್ಕ್ ಬಿನ್ ಭೀಮಾನಾಯ್ಕ್ ಕುಟುಂಬ ಬಿಹೆಚ್ ರಸ್ತೆಯ ಆಧಾರ್ ಹೌಸಿಂಗ್ ಫೈನಾನ್ಸ್ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ತ ಕುಟುಂಬದ ಹನುಮಂತನಾಯ್ಕ್, ನನಗೆ ಇಬ್ಬರು ಪುತ್ರು, ಓರ್ವ ಪುತ್ರಿ ಇದ್ದು ಮೂವರು ಪದವೀಧರರಾಗಿದ್ದಾರೂ ನಿರುದ್ಯೋಗಿಗಳಾಗಿದ್ದಾರೆ. ನಮ್ಮ ಮನೆ ಬೀಳುವ ಸ್ಥಿತಿಯಲ್ಲಿದ್ದಾಗ ಆಧಾರ್ ಹೌಸಿಂಗ್ ಫೈನಾನ್ಸ್ ನವರು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವುದಾಗಿ ಹೇಳಿ ೧೩ ಲಕ್ಷ ರೂ. ಸಾಲ ನೀಡಿದ್ದರು. ಸದರಿ ಸಾಲಕ್ಕೆ ಪ್ರತಿ ತಿಂಗಳು ೧೮ ಸಾವಿರದಂತೆ ೧೨ ಲಕ್ಷ ರೂ. ಕಟ್ಟಿದ್ದೇನೆ. ಇನ್ನೂ ಕೇವಲ ೯ ಕಂತು ಬಾಕಿ ಇದೆ. ಆದರೂ ಹಣ ವಸೂಲಿಗಾಗಿ ದಬ್ಬಾಳಿಕೆ ನಡೆಸಿ ಮನೆಗೆ ಬೀಗ ಹಾಕಿದ್ದಾರೆ. ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದರು.
ಫೈನಾನ್ಸ್ ನವರು ನನಗೆ ಅಧಿಕ ಬಡ್ಡಿ ವಿಧಿಸಿದ್ದು ಅಸಲು ಬಡ್ಡಿ ಮನ್ನಾ ಮಾಡಿಸಿಕೊಡಬೇಕೆಂದು ಅವರು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಫೈನಾನ್ಸ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಮೇಲಾಧಿಕಾರಿಗಳಗಮನಕ್ಕೆ ಈ ವಿಷಯ ತಂದಿದ್ದೇವೆ. ತಮಗೆ ಸಮಯ ಕೊಡಿ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಕೆ.ಟಿ. ಗಂಗಾಧರ್, ಗಿರೀಶ್, ಮಂಜುನಾಥ್, ಜಗದೀಶ್ ನಾಯ್ಕ್, ಅಣ್ಣಪ್ಪ, ಗಿರೀಶ್ ಮೊದಲಾದವರಿದ್ದರು.