ಶಾಸಕ ಡಾ.ಧನಂಜಯ ಸರ್ಜಿ ಅವರಿಂದ ಮಹಾತ್ಮನ ಗುಣಗಾನ



ಸುದ್ದಿಲೈವ್/ಬೆಳಗಾವಿ 

ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮಗಾಂಧಿ ಅವರು ವಹಿಸಿ ನೂರು ವರ್ಷಗಳು ತುಂಬಿರುವ ಹಿನ್ನೆಲೆ ವಿಧಾನ ಪರಿಷತ್ ಕಲಾಪದಲ್ಲಿ ಸೋಮವಾರ ನಡೆದ ವಿಶೇಷ ಚರ್ಚೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಅವರು ಮಹಾತ್ಮಾ ಗಾಂಧೀಜಿ ಅವರ ಕುರಿತು ಗುಣಗಾನ ಮಾಡಿದರು. 

ಮಹಾತ್ಮಾ ಗಾಂಧೀಜಿ ಅವರು ತಮ್ಮ ಎರಡು ಕೈಯಲ್ಲಿ ಬರೆಯುವಂತಹ ಸಾಮರ್ಥ್ಯವನ್ನು ಹೊಂದಿದ್ದರು. ಹಿಂದ್ ಸ್ವರಾಜ್ ಪುಸ್ತಕದಲ್ಲಿ ತಾವು ಬರೆಯಬೇಕಾದರೆ ಸಾಕಷ್ಟು ಪುಟಗಳನ್ನು ಎಡ ಗೈನಲ್ಲೆ ಬರೆದಿದ್ದು ವಿಶೇಷ. ಜಗತ್ತಿನಾದ್ಯಂತ ನೂರಕ್ಕೂ ಹೆಚ್ಚು ದೇಶಗಳಲ್ಲಿ ಗಾಂಧೀಜಿಯವರ ಭಾವಚಿತ್ರ ಇರುವಂತಹ ಪೋಸ್ಟರ್ ಎನ್ವಲಪ್ ಗಳನ್ನೂ ಬಿಡುಗಡೆಗೊಳಿಸಿದ್ದಾರೆ ಹಾಗೂ ಬಳಸುತ್ತಿದ್ದಾರೆ. 

ಭಾರತ ದೇಶದಲ್ಲಿ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರ ಇರುವಂತಹ ಸುಮಾರು 40 ಸ್ಟ್ಯಾಂಪ್ ಹಾಗೂ 200 ಪೋಸ್ಟರ್ ಎನ್ವಲಪ್ ಬಳಸಲಾಗುತ್ತಿದೆ. 40 ದೇಶಗಳಲ್ಲಿ ಗಾಂಧೀಜಿ ಅವರು ಇರುವಂತಹ ನಾಣ್ಯಗಳನ್ನುಮತ್ತು 80 ದೇಶಗಳಲ್ಲಿ ಅವರ ಪ್ರತಿಮೆಗಳು, 40ಕ್ಕೂ ಹೆಚ್ಚು ದೇಶಗಳಲ್ಲಿ ರಸ್ತೆಗಳಿಗೆ ಮಹಾತ್ಮಾ ಗಾಂಧೀಜಿ ಅವರ ಹೆಸರನ್ನು ಇಟ್ಟಿದ್ದಾರೆ.ಗಾಂಧೀಜಿ ಅವರು ಜೀವನದಲ್ಲಿ ಒಂದು ಬಾರಿಯೂ ಅಮೇರಿಕಾ ದೇಶಕ್ಕೆ ಹೋದವರಲ್ಲ, ಆದರೂ ಅಮೆರಿಕಾದ ವಿವಿಧ ಪ್ರದೇಶಗಳಲ್ಲಿ 30 ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಅವರು ವಿಧಿವಶರಾದ ಸಂದರ್ಭದಲ್ಲಿ ವಿಶ್ವ ಸಂಸ್ಥೆಯಲ್ಲಿರುವ 50 ದೇಶಗಳು ರಾಷ್ಟ್ರ ಧ್ವಜಗಳನ್ನು ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಿದ್ದು, ಭಾರತವೇ ಹೆಮ್ಮೆಪಡುವಂತಹ ಸಂಗತಿ ಎಂದು ಹೇಳಿದರು.  

ಮಹಾತ್ಮಾ ಗಾಂಧೀಜಿ ಅವರನ್ನು ನಾವು ರಾಷ್ಟ್ರಪಿತ ಎಂದು ಕರೆಯುತ್ತೇವೆ, ಆ ರಾಷ್ಟ್ರಪಿತರನ್ನು  ನಾವು ನಮ್ಮ ಪರ, ಅವರ ಪರ, ಇವರ ಪರ ಎಂದು ಹೇಳಿಕೊಂಡು ಓಡಾಡುತ್ತೇವೆ, ಗಾಂಧೀಜಿ ಅವರು ಜನರ ಪರ, ರಾಷ್ಟ್ರದ ಪರವಾಗಿ ಇದ್ದರು. ಯಾರು ರಾಷ್ಟ್ರದ ಪರವಾಗಿ ಶ್ರಮಿಸುತ್ತಾರೆಯೋ, ಯಾರು ದೇಶದ ಏಳಿಗೆಗಾಗಿ ದುಡಿಯುತ್ತಾರೆ, ಯಾರು ರಾಷ್ಟ್ರದ ಅಖಂಡತೆಗೆ ಹೋರಾಡುತ್ತಾರೆ, ಯಾರು ದೇಶವನ್ನು ಪ್ರೀತಿಸುತ್ತಾರೆ ಅವರ ಪರ ಮಹಾತ್ಮಾ ಗಾಂಧೀಜಿ ಅವರು ಇರುತ್ತಾರೆ. 

ದೇಶಕ್ಕೆ ಸ್ವಾತಂತ್ರ್ಯ ದೊರೆತು 77 ವರ್ಷಗಳು ಕಳೆದವು ಇವತ್ತಿನ ರಾಷ್ಟ್ರ ಮತ್ತು ರಾಜ್ಯದ ರಾಜಕಾರಣ, ಜನರ ಅಭದ್ರತೆ, ಅತ್ಯಾಚಾರ, ಹಗರಣಗಳನ್ನು ನೋಡಿದರೆ ಮಹಾತ್ಮಾ ಗಾಂಧೀಜಿ ಅವರು ಏನು ಸ್ವಾತಂತ್ರ್ಯವನ್ನು ತಂದುಕೊಟ್ಟರೋ, ರಾಮರಾಜ್ಯದ ಕನಸನ್ನು ಕಂಡಿದ್ದರೋ, ಗ್ರಾಮ ಸ್ವರಾಜ್ಯದ ಕನಸನ್ನು ಕಂಡಿದ್ದರೋ, ಈಗಿನ ಕಾಲದಲ್ಲಿ ಅದು ನನಸಾಗುವ ಕಾಲ ಉಳಿದಿಲ್ಲ ಎನಿಸುತ್ತದೆ. “ದುಷ್ಟರು ತುಂಬಾ ಬೆಳೆಯಬಹುದು ಆದರೆ ಉಳಿಯಲು ಸಾಧ್ಯವಿಲ್ಲ, ಸಜ್ಜನರನ್ನು ತುಂಬಾ ತುಳಿಯಬಹುದು, ಆದರೆ ನಾಶ ಮಾಡಲು ಸಾಧ್ಯವಿಲ್ಲ “ಎಂಬ ಗಾಂಧೀಜಿಯವರ ನುಡಿಗಳನ್ನು ಹೇಳುವ ಮೂಲಕ ಮಹಾತ್ಮಾ ಗಾಂಧೀಜಿಯವರನ್ನು ಸ್ಮರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close