ಸುದ್ದಿಲೈವ್/ಸಾಗರ
ಶಿವಮೊಗ್ಗದಲ್ಲಿ ಸದ್ದು ಮಾಡಿದ
ಮೀಟರ್ ಬಡ್ಡಿ ದಂಧೆ ಜಿಲ್ಲೆಯಲ್ಲಿ ಮುಂದುವರೆದಿದೆ. ಮೀಟರ್ ಬಡ್ಡಿ ದಂಧೆಗೆ ಬಲಿಯಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಆತ್ಮಹತ್ಯೆಗೆ ಯತ್ನ ನಡೆದಿರುವ ಘಟನೆ ವರದಿಯಾಗಿದೆ.
ಜಿಲ್ಲೆಯ ಸಾಗರ ತಾಲೂಕು ಕಲ್ಮನೆ ಗ್ರಾಮದ ಉದ್ರಿ ಸನ್ಯಾಸಿ ಜೆಡ್ಡು ಗ್ರಾಮದಲ್ಲಿ ವಿಶ್ವನಾಥ್ ಎಂಬ ಸುಮಾರು 30 ವರ್ಷದ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಡ್ಡಿ ಕಟ್ಟದಿದ್ದರೆ ಮರುದಿನವೇ ಡಬ್ಕುಡಬ್ಬಲ್ ಬಡ್ಡಿ ಆಗುವ ಧಂಧೆಗೆ ಬಲಿಯಾಗಲು ಯತ್ನಿಸಿದ್ದಾನೆ.
ಚಾಲಕ ವೃತ್ತಿಯ ವಿಶ್ವನಾಥ್ ಮನೆ ಕಟ್ಟಲು ಮತ್ತು ತಾಯಿಯ ಆರೋಗ್ಯಕ್ಕೆ ಸಾಲಕ್ಕೆ ಕೈವೊಡ್ಡಿದ್ದನು. ಬ್ಯಾಂಕುಗಳ ನೂರೆಂಟು ದಾಖಲೆಗಳ ತಾಪತ್ರಯಗಳಿಂದ ಬೇಗನೆ ಸಾಲ ಸಿಗುವ ಕಡೆ ಕೈವೊಡ್ಡಿ ಸಾಲದ ಬಡ್ಡಿಯ ಮೊತ್ತ ಹೆಚ್ಚಿಕೆಯಾಗಿದೆ. ಸಾಲ ಮಾಡಿದ್ದು ಕೇವಲ ಎರಡು ಲಕ್ಷ ಆದರೂ ಎಲ್ಲೆ ಇಲ್ಲದ ಬಡ್ಡಿಯ ಪರಿಣಾಮ ಒತ್ತಡಕ್ಕೆ ಮಣಿದು ವಿಷ ಸೇವಿಸಿದ್ದಾನೆ.
ನಿನ್ನೆ ಗ್ರಾಮದ ತಮ್ಮ ಹಳೆಯ ಮನೆಯಲ್ಲಿ ವಿಷ ಸೇವಿಸಿದ ಪರಿಣಾಮ ಯುವಕನ ಪರಿಸ್ಥಿತಿ ಉಲ್ಬಣಿಸಿದೆ. ಮೆಗ್ಗಾನ್ ಗೆ ದಾಖಲಾಗಿದ್ದಾನೆ. ಎಲ್ಲೆ ಮೀರಿದ ಮೀಟರ್ ಬಡ್ಡಿ ಪರಿಣಾಮ ಶಿವಮೊಗ್ಗದಲ್ಲಿ ಮಾಜಿ ನಗರ ಸಭೆ ಸದಸ್ಯ ಆರ್ ಲಕ್ಷ್ಮಣ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬದುಕಿ ಬಾಳಬೇಕಿದ್ದ ಯುವಕ ಸಹ ಈ ಮೀಟರ್ ಬಡ್ಡಿಗೆ ಆತ್ಮಹತ್ಯೆಯ ಯತ್ನ ಮಾಡಿಕೊಂಡಿದ್ದಾರೆ.
ಲಕ್ಷಣ್ ಸಾವಿನ ಬೆನ್ನಲ್ಲೇ ಪೊಲೀಸರು ಮೀಟರ್ ಬಡ್ಡಿದಂಧೆಕೋರರ ವಿರುದ್ಧ ಖಡಕ್ ಕಾರ್ಯಾಚರಣೆ ನಡೆಸಿದ್ದರು. ಬಡ ಚಾಲಕನ ಆತ್ಮಹತ್ಯೆ ಪ್ರಕರಣದಲ್ಲಿ ಏನಾಗಲಿದೆ ಕಾದು ನೋಡಬೇಕಿದೆ. ಯುವಕನ ಸ್ಥಿತಿ ಗಂಭೀರವಾಗಿದೆ.