ಸುದ್ದಿಲೈವ್/ಶಿವಮೊಗ್ಗ
ಅಕ್ರಮ ಗಣಿಗಾರಿಕೆ ವಿರುದ್ಧ ಮಹಿಳಾ ಅಧಿಕಾರಿಯೊಬ್ಬರು ಶಿವಮೊಗ್ಗ ತಾಲೂಕಿನಲ್ಲಿ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
6 ತಿಂಗಳ ಹಿಂದೆ ಮಾಧ್ಯಮಗಳ ಕರೆಯನ್ನೇ ಸ್ವೀಕರಿಸದಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿದ್ದ ಕಾಲವಿತ್ತು. ಅದರಲ್ಲೂ ಬಿಜೆಪಿ ಅಧಿಕಾರವಿದ್ದ ಕಾಲದ ಅಧಿಕಾರಿಗಳು ಕೇವಲ ರಾಜಕಾರಣಿಗಳ ಕರೆ ಸ್ವೀಕರಿಸುತ್ತಿದ್ದರು ಬಿಟ್ಟರೆ ಮಾಧ್ಯಮ ಅಥವಾ ಸಾರ್ವಜನಿಕರು ಎಂದರೆ ಅಲರ್ಜಿ ತೋರಿಸುತ್ತಿರುವ ಕಾಲವೂ ಇತ್ತು. ಯಾವಾಗ ಇಲಾಖೆಯಲ್ಲಿ ವರ್ಗಾವಣೆಯಾದರೋ ಪ್ರಿಯಯವರು ಸೇರಿದಂತೆ ಹಿರಿಯ ಭೂವಿಜ್ಞಾನಿ ಅಧಿಕಾರಿಗಳ ಆಗಮನದಿಂದ ಕೊಂಚ ಬದಲಾದಂತೆ ಕಂಡು ಬರುತ್ತಿದೆ.
ಡಿ.10 ರಂದು ರಾಗಿಗುಡ್ಡದಲ್ಲಿ ಹಾಡೋನಹಳ್ಳಿಯ ತುಂಗ ನದಿಯಿಂದ ಅಕ್ರಮ ಗಣಿಗಾರಿಕೆ ಮಾಡಿಕೊಂಡು ಬರುತ್ತಿದ್ದ ಲಾರಿಯನ್ನ ಸೀಜ್ ಮಾಡಿ ಎಫ್ಐಆರ್ ಮಾಡಿಸಿದ್ದ ಗಣಿ ಅಧಿಕಾರಿ ಪ್ರೀತಿಯವರು, ಅಕ್ರಮ ಮರಳುಗಾರಿಕೆ ವಿರುದ್ಧ ದೂರು ಬಂದ ಹಿನ್ನಲೆಯಲ್ಲಿ ತಹಶೀಲ್ದಾರ್ ಮತ್ತು ಗ್ರಾಮಾಂತರ ಠಾಣೆ ಪಿಐ ಸತ್ಯನಾರಾಯಣರನ್ನ ಅದೇ ಹಾಡೋನಹಳ್ಳಿಗೆ ಕರೆದುಕೊಂಡು ಹೋಗಿ ಟ್ರಂಚ್ ಹೊಡೆಸಿ ಅಕ್ರಮ ಗಣಿಗಾರಿಕೆ ನಡೆಸುವರಿಗೆ ಬಿಸಿ ಮುಟ್ಟಿಸಿದ್ದರು.
ಈಗ ಶಿವಮೊಗ್ಗ ತಾಲೂಕಿನ ಅಕ್ರಮ ಮರಳುಗಾರಿಕೆಗೆ ಬಳಸಲಾಗುತ್ತಿದ್ದ ಜೆಸಿಬಿಗಳನ್ನ ಸೀಜ್ ಮಾಡಿಸಿದ್ದಾರೆ. ಸಿದ್ಧರಹಳ್ಳಿ-ಕುಸ್ಕುರ್ ನಲ್ಲಿ 1 ಜೆಸಿಬಿ, ಹೊಳೆಹಟ್ಟಿಯಲ್ಲಿ 3 ಜೆಸಿಬಿ, ಹಿಟ್ಟೂರು ಮತ್ತು ಸಿರಿಗೆರೆಯಲ್ಲಿ ತಲಾ ಒಂದೊದು ಮಣ್ಣು ಸಾಗಿಸುವ ವಾಹನವನ್ನ ಸೀಜ್ ಮಾಡಲಾಗಿದೆ. ಹೊಳೆಹಟ್ಟಿಯಲ್ಲಿ ನದಿಯ ಒಳಗೆ ಜೆಸಿಬಿ ಇಳಿಸಿ ಮರಳು ತೆಗೆಯುವಾಗ ವಾಹನವನ್ನ ಸೀಜ್ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಒಟ್ಟಿನಲ್ಲಿ ಅಕ್ರಮಗಣಿಗಾರಿಕೆಯ ವಿರುದ್ಧ ಓರ್ವ ಮಹಿಳಾ ಅಧಿಕಾರಿಗಳು ಝಲಕ್ ನೀಡುತ್ತಿರುವುದು ಸ್ವಾಗತಾರ್ಹ.