ಸುದ್ದಿಲೈವ್/ಸಾಗರ
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಜು ಎಂಬುವವರ ಮೇಲೆ ವಿದ್ಯಾರ್ಥಿ ಹಾಗೂ ಆತನ ತಂದೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ತೀವ್ರ ಗಾಯಗೊಂಡಿರುವ ಪ್ರೊ. ರಾಜು ಅವರನ್ನ ಉಪವಿಭಾಗೀಯ ಅಸ್ಪತ್ರೆಗೆ ದಾಖಲಿಸಲಾಗಿದೆ. ರಾಜು ಅವರ ಕಣ್ಣು ಮತ್ತು ಕಾಲಿಗೆ ಗಾಯವಾಗಿದೆ.
ಹಾಜರಾತಿಗೆ ಸಂಬಂಧಪಟ್ಟಂತೆ ದ್ವಿತೀಯ ವರ್ಷದ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಹಾಗೂ ಅವರ ತಂದೆ ವಿಜಯಕುಮಾರ್ ಶನಿವಾರ ಕಾಲೇಜಿಗೆ ಬಂದು ಪ್ರಾಧ್ಯಾಪಕ ಪ್ರೊ. ರಾಜು ಅವರ ಬಳಿ ವಿಚಾರಿಸಿದ್ದಾರೆ. ಹಾಜರಾತಿ ಕಡಿಮೆ ಇರುವುದರಿಂದ ಪರೀಕ್ಷೆಗೆ ಕೂರಿಸಲು ಸಾಧ್ಯವಿಲ್ಲ. ಪ್ರಾಚಾರ್ಯರ ಬಳಿ ಮಾತನಾಡಿ ಎಂದು ಹೇಳಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಪರಸ್ಪರ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಹೊಯ್‌ಕೈ ಸಂಭವಿಸಿದೆ. ವಿದ್ಯಾರ್ಥಿ ನಿಶ್ಚಯ್ ಕುಮಾರ್ ಹಾಗೂ ವಿಜಯಕುಮಾರ್ ಕೈಗೆ ಸಿಕ್ಕಿದ ವಸ್ತುವಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆದಿರುವುದು ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದೆ. ವಿಜಯಕುಮಾರ್ ಸಹ ತಾಂತ್ರಿಕ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರೂ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬAಧ ಪರಸ್ಪರ ದೂರು ದಾಖಲಾಗಿದೆ.
ಘಟನೆಯನ್ನು ಖಂಡಿಸಿರುವ ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ ಪೋಷಕರು ಮತ್ತು ವಿದ್ಯಾರ್ಥಿ ಕಾಲೇಜಿನ ಪ್ರಾಧ್ಯಾಪಕರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ವಿದ್ಯಾರ್ಥಿ ನಿಶ್ಚಯ್ ಕುಮಾರ್ ಹಾಜರಾತಿ ಕಡಿಮೆ ಇರುವುದರಿಂದ ಪರೀಕ್ಷೆಗೆ ಕೂರಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು. ವಿದ್ಯಾರ್ಥಿ ಕ್ರೀಡಾ ಚಟುವಟಿಕೆಯಲ್ಲಿ ಇರುವುದರಿಂದ ವಿದ್ಯಾರ್ಥಿಗೆ ಪರೀಕ್ಷೆಗೆ ಕೂರಿಸಲು ಪ್ರಯತ್ನ ನಡೆಸಲಾಗಿತ್ತು. ಆದರೆ ಶನಿವಾರ ಏಕಾಏಕಿ ಮಗನ ಜತೆ ಬಂದು ಪೋಷಕರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು.