ಚಿನ್ಮಯಾನಂದ ದೀಕ್ಷೆ ಪಡೆದ ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿಗಳು ನುಡಿದಿದ್ದಾರು ಏನು?



ಸುದ್ದಿಲೈವ್/ಶಿವಮೊಗ್ಗ

ನಮ್ಮ ಪೂರ್ವಾಶ್ರಮದ ತಾಯಿಯವರು ನೀಡಿದ ಸಂಸ್ಕಾರದಿಂದ ನಾವಿಂದು ಈ ದೀಕ್ಷೆ ಪಡೆಯಲು ಸಾಧ್ಯವಾಯಿತು ಎಂದು ಚಿನ್ಮಯಾನಂದ ದೀಕ್ಷೆ ಪಡೆದ ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿಗಳು ನುಡಿದರು.

ಅವರು ಇಂದು ಮಾಚೇನಹಳ್ಳಿ ಡೈರಿ ಸಮೀಪದ ಬಸವ ನೆಲೆ ಮೈದಾನದಲ್ಲಿ ಆಯೋಜಿಸಿದ್ದ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭದ ಬಹಿರಂಗ ಅಧಿವೇಶನದಲ್ಲಿ ಆಶೀರ್ವಚನ ನೀಡಿದರು.

ಇದೊಂದು ಭಾವುಕವಾದ ಕ್ಷಣವಾಗಿದೆ. ೨೧ನೇ ವರ್ಷಕ್ಕೆ ನಾವು ಬಸವಕೇಂದ್ರದಲ್ಲಿ ಚರಮೂರ್ತಿಗಳಾಗಿ ಪ್ರವಚನಗಳ ಮೂಲಕ ೧೩ ವರ್ಷಗಳ ಕಾಲದ ನಂತರ ಇದೀಗ ಈ ಗುರು ಸ್ಥಾನವನ್ನು ಹಿರಿಯ ಸ್ವಾಮೀಜಿಗಳು ತಮ್ಮ ಅಮೃತ ಹಸ್ತದಿಂದ ದೀಕ್ಷೆಯ ಮೂಲಕ ನೀಡಿದ್ದಾರೆ. ಇದು ನನ್ನ ಪೂರ್ವಾಶ್ರಮದ ಪುಣ್ಯವೇ ಆಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ನನ್ನ ಪೂರ್ವಾಶ್ರಮದ ಮಾತೃಶ್ರೀ ಹಾಗೂ ಗುರುಗಳು ಕೂಡ ಭಾಗವಹಿಸಿರುವುದು ನಮಗೆ ಅತ್ಯಂತ ಭಾವುಕ ಕ್ಷಣವಾಗಿದೆ. ವಿರಕ್ತ ಮಠದಲ್ಲಿ ತಾಯಿಯ ಸಂಬಂಧ ಕೂಡ ಇರಬಾರದು ಎಂಬ ಕಾರಣಕ್ಕೆ ಇದನ್ನು ಪೂರ್ವಾಶ್ರಮ ಎಂದು ಕರೆಯಲಾಗಿದೆ. ಆ ತಾಯಿ ನಮಗೆ ಎಲ್ಲಾ ರೀತಿಯ ಸಂಸ್ಕಾರಗಳನ್ನು ನೀಡಿದ್ದಾರೆ. ಆ ಸಂಸ್ಕಾರವೇ ನಾವು ಇವರು ಈ ಪದವಿ ಪಡೆಯಲು ಸಾಧ್ಯವಾಗಿದೆ. ಇವರ ಜೊತೆಗೆ ಪೂರ್ವಾಶ್ರಮದಲ್ಲಿ ನಮಗೆ ವಿದ್ಯಾಭ್ಯಾಸ ನೀಡಿದ ಇಬ್ಬರು ಗುರುಗಳು ಕೂಡ ಭಾಗವಹಿಸಿರುವುದು ನಮಗೆ ಸಂತಸ ತಂದಿದೆ. ಗುರುಗಳಿಗೆ ನನ್ನ ಕೃತಜ್ಞತೆಗಳು ಎಂದರು.

ಇದರ ಜೊತೆಗೆ ತರಳಬಾಳು ಸಂಸ್ಥೆ, ದಾವಣಗೆರೆಯ ಜಯದೇವ ಹಾಸ್ಟೆಲ್, ಚಿತ್ರದುರ್ಗದ ಮಠ ಇವೆಲ್ಲವನ್ನೂ ನೆನಪು ಮಾಡಿಕೊಂಡ ಶ್ರೀಗಳು ನಾವು ಸ್ವಾಮೀಜಿಗಳಾಗಲು ಮೃತ್ಯುಂಜಯ ಶ್ರೀಗಳ ಕಾದಂಬರಿಯೇ ಪ್ರೇರಣೆಯಾಗಿದೆ. ಸ್ವಾಮೀಜಿ ಎಂದರೆ ಸಿನಿಮಾ, ನಾಟಕಗಳಲ್ಲಿ ಪಾತ್ರ ಹಾಕಿದಂತಲ್ಲ, ಈಗ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಹಿಂದೂ ಸಮಾಜದಲ್ಲಿ ದೀಕ್ಷೆ ಎಂಬ ಪದಕ್ಕೆ ಮಹತ್ವದ ಸ್ಥಾನವಿದೆ. ಇದು ಒಂದು ಉತ್ತಮ ಪರಂಪರೆಯದ್ದು. ತಾತ್ವಿಕ ಮನೋಭಾವದ್ದು, ಶಿಷ್ಯರೇ ಗುರುವಾಗುವ ಬಗೆ, ಜ್ಞಾನಸ್ವರೂಪಿಯಾಗಿ ತೇಜಸ್ಸು ಪಡೆದುಕೊಂಡು ಸಮಾಜಕ್ಕೆ ಬೆಳಕಾಗುವುದೇ ಈ ದೀಕ್ಷೆಯಾಗಿರುತ್ತದೆ. ಇದು ಶಿವತತ್ವದಲ್ಲಿ ನಡೆಯುವ ದಾರಿಯಾಗಿದೆ. ಬಸವತತ್ವದ ಪ್ರಕಾರ ಇದೊಂದು ಆಧ್ಯಾತ್ಮಿಕ ದೀಕ್ಷೆಯಾಗಿದೆ ಎಂದರು. 

 ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ಚಿನ್ಮಯ ಎಂದರೆ ದೈವೀಕ, ದೀಕ್ಷೆ ಎಂದರೆ ಒಳ್ಳೆಯ ಸನ್ಮಾರ್ಗದಲ್ಲಿ ಹೋಗುವಂತಹದ್ದು, ಪಂಚಭೂತಗಳಿಂದ ಆದಂತಹ ಶರೀರಕ್ಕೆ ಒಂದು ಶಕ್ತಿಯನ್ನು ಕೊಡುವಂತಹ ದೀಕ್ಷೆಯೇ ಚಿನ್ಮಯಾನುಗ್ರಹ ದೀಕ್ಷೆ. ಜಂಗಮ ದೀಕ್ಷೆ ಪಡೆದಿದ್ದ ಡಾ. ಶ್ರೀ ಬಸವಮರುಳಸಿದ್ಧ ಸ್ವಾಮಿಗಳು ಇಂದು ಚಿನ್ಮಯಾನುಗ್ರಹ ದೀಕ್ಷೆ ಪಡೆದುಕೊಂಡಿದ್ದಾರೆ. ಮನುಷ್ಯನಿಗೆ ಸಂಸ್ಕಾರ ಸಿಕ್ಕರೆ ಮಹಾದೇವ ಆಗುತ್ತಾನೆ. ಆತ್ಮ ಪರಮಾತ್ಮನಲ್ಲಿ ವಿಲೀನವಾಗಲು ಈ ಪ್ರಕ್ರಿಯೆ ಆಗಬೇಕು. ಗುರು ಎಂದರೆ ಅದ್ಭುತ ಶಕ್ತಿ, ಪ್ರೀತಿಯ ಆಗರ, ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕನ್ನು ನೀಡುವವರು ಎಂದರು.

ಇದೇ ಸಂದರ್ಭದಲ್ಲಿ ಅಲ್ಲಮ ಪ್ರಭುಗಳ ವ್ಯಕ್ತಿತ್ವ ಪುಸ್ತಕ ಬಿಡುಗಡೆಯನ್ನು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ನೆರವೇರಿಸಿದರು. ಸಂಸದ ರಾಘವೇಂದ್ರ ಕಾರ್ಯಕ್ರಮವನ್ನ ಉದ್ಘಾಟಿಸಿದರು.

ಇಂದು ಬೆಳಗ್ಗೆ ೫ ಗಂಟೆಗೆ ಶಿವಮೊಗ್ಗದ ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಲ್ಲಿ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸೇರಿದಂತೆ ಲಿಂಗ ಹಸ್ತದಿಂದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರಿಗೆ ಚಿನ್ಮಯಾನುಗ್ರಹ ದೀಕ್ಷೆಯನ್ನು ಅನುಗ್ರಹಿಸಲಾಯಿತು. 

ವೇದಿಕೆಯಲ್ಲಿ ನಿಟ್ಟೂರು ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸಂಸ್ಥಾನದ ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮಿಗಳು, ಕಡೂರು ಯಳನಾಡು ಸಂಸ್ಥಾನ ಮಠದ ಜಗದ್ಗುರು ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿಗಳು, ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಮಹಾಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮಿಗಳು, ಅಕ್ಕಿಆಲೂರು ವಿರಕ್ತ ಮಠದ ಶ್ರೀ ಶಿವಬಸವ ಸ್ವಾಮಿಗಳು, ಗುತ್ತಲ ಕಲ್ಮಠ ಶ್ರೀ ಪ್ರಭು ಮಹಾಸ್ವಾಮಿಗಳು, ಶಿಕಾರಿಪುರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮಿಗಳು, ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮಿಗಳು, ತೋಗರ್ಸಿಯ ಮಳೆಹಿರೇಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ತೋಗರ್ಸಿಯ ಪಂಚಮಣ್ಣಿಗೆ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಶಿಕಾರಿಪುರದ ಶ್ರೀ ಬಸವಾಶ್ರಮದ ಮಾತೆ ಶರಣಾಂಬಿಕೆ ಶಾಸಕ ಎಸ್.ಎನ್. ಚನ್ನಬಸಪ್ಪ, ಶಾಸಕ ಭೋಜೇಗೌಡ ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ, ಹೆಚ್.ಆರ್. ಬಸವರಾಜಪ್ಪ, ಬೆನಕಪ್ಪ, ಎಸ್.ದತ್ತಾತ್ರಿ, ಬಸವಂತಪ್ಪ, ಕಾಡಾ ಅಧ್ಯಕ್ಷ ಡಾ.ಕೆಪಿ ಅಂಶುಮನ್, ನಾಗರಾಜ ಕಂಕಾರಿ, ಎಸ್.ಪಿ. ದಿನೇಶ್ ಬಸವ ಮರುಳಸಿದ್ಧ ಸ್ವಾಮೀಜಿಯವರ ಮಾತೃಶ್ರೀ ಜಿ.ಎಂ.ಮೀನಾಕ್ಷಮ್ಮ, ಸಹೋದರ ಸುಧಾಕರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಹೆಚ್.ಸಿ. ಯೋಗೀಶ್ ಸ್ವಾಗತಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close