ಸುದ್ದಿಲೈವ್/ಶಿವಮೊಗ್ಗ
ಸಹಕಾರ ಸಂಘಗಳ ಚುನಾವಣೆಗಳು ನಡೆತುವ ಹೊತ್ತಿಗೆ ಉಳ್ಳೂರಿನ ಸಹಕಾರ ಸಂಘ ಬಾಗಿಲು ಹಾಕಿಕೊಂಡಿದೆ. ಈ ಸಹಕಾರ ಸಂಘಕ್ಕೆಮಂಗಳವಾರ ರಜೆ ಇದ್ದರೂ ಭಾನುವಾರವೂ ಬಾಗಿಲು ಬಂದ್ ಆಗಿದೆ. ಇದು ಹೋಗಲಿ ಈ ಸಂಘದ ಆಡಿಟ್ ವರದಿಯಿಂದ ಹಣ ಲೂಟಿಯಾಗಿರವ ಆರೋಪವೂ ಕೇಳಿ ಬಂದಿದೆ.
ಇತ್ತೀಚಿನ ದಿನದಲ್ಲಿ ತಾಲೂಕಿನ ಹಲವು ಸಹಕಾರಿ ಸಂಘಗಳಲ್ಲಿ ಅವ್ಯವಹಾರ ಪ್ರಕರಣ ಬೆಳಕಿಗೆ ಬರುತ್ತಿದೆ. ಕಲ್ಮನೆ ಸಹಕಾರ ಸಂಘದಲ್ಲಿ ನಡೆದಿದ್ದ ಕೋಟ್ಯಂತರ ರೂ. ಅವ್ಯವಹಾರದಲ್ಲಿ ಸಿಇಓ ಹೆಸರು ಕೇಳಿಬಂದಿದ್ದು ಮಾಸುವ ಮೊದಲೇ ಸಾಗರ ತಾಲೂಕಿನ ಉಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಲವು ರೀತಿಯ ಲೂಟಿ ನಡೆದಿರುವ ಬಗ್ಗೆ ಲೆಕ್ಕಪರಿಶೋಧಕರ ೨೦೨೩-೨೪ರ ವರದಿಯಲ್ಲಿ ಬಹಿರಂಗವಾಗಿದೆ. ಇದರ ಪರಿಣಾಮವಾಗಿ ಸಹಕಾರ ಸಂಘಗಳ ಕಾಯ್ದೆ ನಿಯಮ ಮತ್ತು ಉಪವಿಧಿಗಳ ಪಾಲನೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದರಿಂದ ಸಂಘವು ಮೂರನೇ ವರ್ಗದ ಶ್ರೇಣಿಗೆ ಕುಸಿದಿದೆ. ಇದು ಆಡಳಿತ ಮಂಡಳಿ ಮತ್ತು ಕಾರ್ಯದರ್ಶಿಯವರ ಆಡಳಿತ ವೈಫಲ್ಯದ ಪರಿಣಾಮವಾಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಇಲ್ಲಿನ ಕಾರ್ಯದರ್ಶಿ ಅನಂತ್‌ರವರು ಷೇರಿನ ಮುಖಬೆಲೆ ಅನುಗುಣವಾಗಿ ಷೇರು ಸಂಗ್ರಹ ಮಾಡದೇ ಮುಖಬೆಲೆಗೆ ಬದಲಾಗಿ ಮನಸೋ ಇಚ್ಛೆ ಷೇರು ಹಣ ಸಂಗ್ರಹಿಸಿರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಷೇರು ಖಾತೆ ನಂ. ೧೭೯/೩ರಲ್ಲಿ ರೂ. ೧೦೦, ೨೦೬/೩ಕ್ಕೆ ರೂ. ೧೧೦, ೩೪/೪ಕ್ಕೆ ರೂ. ೧೪೦ ಹೀಗೆ ಬೇಕಾಬಿಟ್ಟಿಯಾಗಿ ಷೇರು ಹಣ ಸಂಗ್ರಹಿಸಿರುವುದು ಪತ್ತೆಯಾಗಿದೆ. ಅಲ್ಲದೆ ೯೫ಕ್ಕೂ ಹೆಚ್ಚು ಪ್ರಕರಣದಲ್ಲಿ ಒಂದು ಷೇರಿನ ಮೊತ್ತಕ್ಕೆ ಅನುಗುಣವಾಗಿರದವರನ್ನು ಸದಸ್ಯರೆಂದು ಪರಿಗಣಿಸಲಾಗಿರುವುದು ತಪ್ಪಾಗಿದ್ದು, ಅಪೂರ್ಣ ಷೇರುದಾರರೆಂದು ಉಲ್ಲೇಖಿಸಿ ಅವರಿಗೆ ಸದಸ್ಯತ್ವ ಮಾನ್ಯತೆ ನೀಡಿರುವುದು ಸಹಕಾರಿ ಕಾನೂನಿನ ಅಡಿಯಲ್ಲಿ ತಪ್ಪಾಗಿರುತ್ತದೆ.
ಸಂಘದ ನಗದು ಪುಸ್ತಕದ ಶಿಲ್ಕನ ಮೊತ್ತಕ್ಕೆ ಸರಿಯಾಗಿ ನಗದು ಇರುವುದನ್ನು ಅಧ್ಯಕ್ಷರು ಪರಿಶೀಲಿಸಿ ದೃಢೀಕರಿಸಲು ಇರುವ ಜವಾಬ್ದಾರಿಯನ್ನು ಇಡೀ ವರ್ಷದಲ್ಲಿ ಯಾವತ್ತು ನಿರ್ವಹಿಸದಿರುವುದು, ಆಡಳಿತ ಮಂಡಳಿ ಹಾಗೂ ಕೆಲ ಸದಸ್ಯರು ಸೇವಾ ಶುಲ್ಕ ಮತ್ತು ಜಾಮೀನು ಸಾಲಕ್ಕೆ ಬಡ್ಡಿ ಪಡೆಯದೇ ಸಂಘದ ಆದಾಯದಲ್ಲಿ ಕೊರೆಯಾಗುವಂತೆ ನಡೆದುಕೊಂಡಿರುವುದು ಅವರೆಲ್ಲರ ಬೇಜವಾಬ್ದಾರಿಗಿದ್ದು, ನೈತಿಕವಾಗಿ ಕೆಲವರು ನೈತಿಕವಾಗಿ ಹುದ್ದೆಯಲ್ಲಿ ಇರಲು ಅನರ್ಹರಾಗಿರುತ್ತಾರೆ. ಜಾಮೀನು ಸಾಲದ ಬಡ್ಡಿ, ಸೇವಾ ಶುಲ್ಕ ಮತ್ತು ಕಟ್ಟಡ ಬಾಡಿಗೆ ಹಾಗೂ ಷೇರುಗಳ ಮೇಲೆ ಪಡೆದಿರುವ ಹಣದ ಕುರಿತು ಲೆಕ್ಕಪರಿಶೋಧಕರು ಸಮಗ್ರ ಪರಿಶೀಲನೆ ನಡೆಸಿ, ಪಾವತಿ ಮಾಡದವರಿಂದ ವಸೂಲಿಗೆ ಸೂಚಿಸಿರುತ್ತಾರೆ. ಅಂದರೆ ಸೊಸೈಟಿಗೆ ಬರಬೇಕಿದ್ದ ಆದಾಯವನ್ನು ಕಡಿತ ಮಾಡಿರುವುದು ಮೇಲ್ನೋಟಕ್ಕೆ ಆಡಳಿತ ಮಂಡಳಿಯ ಬೇಜವಾಬ್ದಾರಿತನವನ್ನು ತೋರಿಸುವಂತಿದೆ.
ಮುಖ್ಯವಾಗಿ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಆರ್ಥಿಕ ವ್ಯವಹಾರದ ಸಮಗ್ರ ವಿಶ್ಲೇಷಣಾತ್ಮಕ ವರದಿಯನ್ನು ಸದಸ್ಯರೆಲ್ಲರಿಗೂ ನೀಡದಿರುವುದು ಸಹಕಾರಿ ಕಾನೂನಿನ ಉಪನಿಯಮಕ್ಕೆ ವಿರುದ್ಧವಾಗಿದ್ದು, ಆಡಳಿತ ಮಂಡಳಿ ಸದಸ್ಯರೇ ಮಹಾಸಭೆಯ ಒಟ್ಟು ಖರ್ಚುವೆಚ್ಚಗಳಿಗೆ ಜವಾಬ್ದಾರರಾಗಿರುತ್ತಾರೆ ಎಂದು ಲೆಕ್ಕಪರಿಶೋಧಕರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಕುಟುಂಬಸ್ಥರಿಗೆ ಸಾಲ
ಉಳ್ಳೂರು ಸೊಸೈಟಿಯಲ್ಲಿ ಜಾಮೀನು ಸಾಲವಾಗಿ ಪಡೆದ ೬,೨೦,೦೦೦ ರೂ. ಪೈಕಿ ೪ಲಕ್ಷ ರೂ. ಮೊತ್ತವನ್ನು ಆಡಳಿತ ಮಂಡಳಿ ಓರ್ವ ಸದಸ್ಯ ತನಗೆ ಮತ್ತು ತನ್ನ ಕುಟುಂಬದ ಸದಸ್ಯರು ಹೆಸರಿನಲ್ಲಿ ತನ್ನ ಸ್ವಂತಕ್ಕೆ ಪಡೆದಿರುವುದು ಸ್ವಜನಪಕ್ಷಪಾತ ಮಾಡಿದ್ದಾರೆ ಎನ್ನುವುದು ೨೦೨೩-೨೪ರ ವರದಿಯಲ್ಲಿ ಪತ್ತೆಯಾಗಿದೆ. ಇದರಲ್ಲಿ ಮುಖ್ಯವಾಗಿ ಹೀಗೆ ಸಾಲ ನೀಡುವಾಗ ಸಂಘವು ಒಳ ನಿಯಮ ರೂಪಿಸದೆ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುವಂತಿದೆ. ಜೊತೆಯಲ್ಲಿ ಸಾಲಕ್ಕೆ ಬಡ್ಡಿ ಜಮಾ ಮಾಡದಿರುವುದು ಸೊಸೈಟಿಯ ಆದಾಯಕ್ಕೆ ಧೋಕಾ ಮಾಡಿದಂತಾಗಿದೆ. ಇಂಥ ಹತ್ತುಹಲವು ಆಘಾತಕಾರಿ ಅಂಶಗಳು ಹಿಂದಿನ ಸಾಲಿನ ಲೆಕ್ಕಪತ್ರ ವರದಿಯಲ್ಲಿ ಬಹಿರಂಗವಾಗಿದೆ. ಇದೆಲ್ಲದಕ್ಕೂ ಹಾಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರೇ ನೇರ ಹೊಣೆಯಾಗಿದ್ದು, ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಹಲವು ಷೇರುದಾರರು ಒತ್ತಾಯಿಸಿದ್ದಾರೆ.
ಅವ್ಯವಹಾರ ಬೆಳಕಿಗೆ ಬಂದಿದ್ದು ಶಾಸಕರಿಂದ
ಶಾಸಕ ಬೇಳೂರು ನಿರ್ದೇಶಕರಾದ ಬಳಿಕ ಬೆಳಕಿಗೆ ಬರುತ್ತಿದೆಯಾ ಹಲವು ಅವ್ಯವಹಾರ? ಎಂಬ ಸತ್ಯಸಂಗತಿ ಹೊರಬಿದ್ದಿದೆ.
ಶಾಸಕ ಗೋಪಾಲಕೃಷ್ಣ ಬೇಳೂರು ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ ಆಯ್ಕೆಯಾಗಿ ವರ್ಷವಿನ್ನೂ ಆಗಿಲ್ಲ. ಅಷ್ಟರೊಳಗೆ ಕಲ್ಮನೆ ಸೊಸೈಟಿಯಲ್ಲಿ ಸುಮಾರು ೫-೬ ಕೋಟಿ ಮೊತ್ತದ ಅವ್ಯವಹಾರ ನಡೆದು, ಪಿಗ್ಮಿ ಕಟ್ಟಿದವರು, ಷೇರುದಾರರ ಠೇವಣಿ ಮೊತ್ತ ಹೀಗೆ ಸಿಕ್ಕಿದ್ದೆಲ್ಲವನ್ನೂ ದೋಚುವ ಕೆಲಸವಾಗಿ, ಸಿಇಓ ವಿರುದ್ಧ ಜನ ಆಕ್ರೋಶಗೊಂಡು ದೂರು ದಾಖಲಿಸಿದ್ದರು. ಇದರ ವಿಚಾರಣೆ ಸದ್ಯ ನಡೆಯುತ್ತಿದೆ. ಇದರ ನಡುವೆಯೇ ಉಳ್ಳೂರು ಸೊಸೈಟಿಗೆ ಇದೇ ತಿಂಗಳ ೨೯ರಂದು ಚುನಾವಣೆ ನಡೆಯಲಿದೆ. ಆದರೆ ಈ ಸಂಘದ ಹಿಂದಿನ ವರ್ಷದ ಆಯವ್ಯವಯ ಪತ್ರದಲ್ಲೇ ಯಪರಾತಪರ ಆಗಿರುವುದು ಬೆಳಕಿಗೆ ಬಂದಿದೆ. ಹಾಗಿದ್ದರೆ ಹೊಸ ನಿರ್ದೇಶಕರಿಗೆ ಇದರ ಅರಿವಿಲ್ಲವಾ? ಹೀಗೇ ಇನ್ನೆಷ್ಟು ಸಂಘದಲ್ಲಿ ಹಣಕಾಸಿನ ಲೂಟಿ ನಡೆಯುತ್ತಿದೆ? ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಎಲ್ಲ ನಿರ್ದೇಶಕರು ಸೊಸೈಟಿಗಳು ಇರುವುದೇ ತಮ್ಮ ಆದಾಯ ವೃದ್ಧಿಸಿಕೊಳ್ಳಲು ಎಂದು ತಿಳಿದುಕೊಂಡAತಿದೆಯಾ?
ಆಡಿಟ್ ವರದಿಯಲ್ಲುರುವ ನೂನ್ಯತೆ ಸರಿಪಡಿಸಿಕೊಳ್ಳದ ಆಡಳಿತ ಮಂಡಳಿ
೨೦೨೩-೨ನೇ ಸಾಲಿ ಆಡಿಟ್ ವರದಿಯಲ್ಲಾಗಿರುವ ಗಂಭೀರ ನ್ಯೂನತೆಗಳನ್ನು ತಿದ್ದಿಕೊಂಡು ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಲೆಕ್ಕಪರಿಶೋಧಕರು ತಿಳಿಸಿದ್ದರು. ಆದರೂ ಆಗಿರುವ ತಪ್ಪು, ಆಕ್ಷೇಪಗಳ ಯಾವುದೇ ಅಂಶವನ್ನೂ ಸರಿಪಡಿಸಲು ಮುಂದಾಗದೆ, ಯಥಾಸ್ಥಿತಿ ಕಾಪಾಡಿಕೊಂಡು ಹೋಗುತ್ತಿರುವ ಹಾಲಿ ಆಡಳಿತ ಮಂಡಳಿಯ ನಿಲುವು, ನಿರ್ದೇಶಕರಿಗೆ ಅರಿವಾಗದಿದ್ದರೂ ಹುದ್ದೆಯಲ್ಲಿ ಖಾಯಂ ಇರುವ ಕಾರ್ಯದರ್ಶಿ ಎಲ್ಲರಿಗೂ ಸತ್ಯ ಮತ್ತು ಕಾನೂನು ತಿಳಿಸುವ ಕೆಲಸ ಮಾಡದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಕಲ್ಮನೆ ಬಳಿಕ ಉಳ್ಳೂರು ಸೊಸೈಟಿಯ ಆರ್ಥಿಕ ಹೊಡೆತ ಹಲವು ಅನುಮಾನ ಹುಟ್ಟುಹಾಕಿದ್ದು, ಇದರ ಪರಿಣಾಮ ಮುಂದಿನ ಆಡಳಿತ ಮಂಡಳಿಯ ಮೇಲೆ ಬೀರುವುದು ನಿಚ್ಚಳ.