ಕಮನವಳ್ಳಿ ಸರ್ದಾರ ಅಜರಾಮರ..






ಸುದ್ದಿಲೈವ್/ಶಿವಮೊಗ್ಗ

ಹಬ್ಬದಲ್ಲಿ ಈ ಹೋರಿ ಅಖಾಡಕ್ಕಿಳಿದರೆ ಪೈಲ್ವಾನ್ ಫಂಟರ್ ಗಳು ಅಖಾಡವನ್ನೇ  ಬಿಟ್ಟು ಹೋಗುತ್ತಿದ್ದ ಕಾಲವೊಂದಿತ್ತು. ಆ ಕಾಲ ಈಗ ನೆನಪು ಮಾತ್ರ. ಆದರೆ ಅದರ ಮಾಲೀಕರು ಮಾತ್ರ ಇಂದೂ ಸಹ ನೆನಪಿಸಿಕೊಂಡು ಮೂರ್ತಿ ಮಾಡಿ ಪೂಜೆ ಮಾಡ್ತರೆ ಎಂದರೆ ನಿಜಕ್ಕೂ ನಂಬಲೇಬೇಕು. ಯಾವುದಪ್ಪ ಆ ಹೋರಿ ಅಂತೀರ, ಅದುವೇ ಕಮನವಳ್ಳಿಯ ಸರ್ದಾರ.

ಹೋರಿಹಬ್ಬದಲ್ಲಿ  ಕಮನವಳ್ಳಿ ಸರ್ದಾರ ಎಂದರೆ ಅಖಾಡವೇ ನಡುಗುತ್ತಿದ್ದ ಕಾಲವಿತ್ತು. ಎಲ್ಲಿ ಸರ್ದಾರ ಇರ್ತಾನೋ ಅಲ್ಲಿ ಗೆಲುವು ಖಚಿತ ಎಂಬ ನಾಣ್ಣುಡಿಯಾಗಿತ್ತು. ಹೀಗೆ ದಶಕಗಳ ಕಾಲ ಅಖಾಡದಲ್ಲಿ ರಾಜ್ಯಭಾರವನ್ನೇ ಆಳಿದ‌ ಹೋರಿ ಅದು.

ಹಳ್ಳಿಕಾರ್ ಜಾತಿಯ ಹೋರಿಯನ್ನ ಕಮನವಳ್ಳಿ ಶಿವಾನಂದಪ್ಪನವರು  ಶಿರಸಿ ಮಾಳಂಗಿ ಬಳಿ 2002ರಲ್ಲಿ ಖರೀದಿ ಮಾಡಿದ್ದರು. ಉಳುಮೆಗಾಗಿ ತಂದ ಎತ್ತುಗಳ ಜೊಡಿಯಲ್ಲಿದ್ದ ಸರ್ದಾರ್ ಮುಂದೆ ಮಾಡಿದ್ದು ಇತಿಹಾಸ.  ಬೇಸಾಯಕ್ಕಾಗಿ ತರಲಾಗಿದ್ದ ಹೋರಿ ಒಂದು ವರ್ಷದಲ್ಲಿ ಕಮನವಳ್ಳಿಯಲ್ಲಿ ನಡೆದ ಹಬ್ಬಕ್ಕೆ ಮೊದಲ ಬಾರಿ ಅಖಾಡಕ್ಕಿಳಿಸಲಾಗಿತ್ತು.  2003 ರ ಹಬ್ಬವದು. ಹಬ್ಬದ ಅಖಾಡವನ್ನೇ ಬೆಚ್ಚಿಬೀಳಿಸಿತ್ತು. ನಂತರ ನಡೆದ ಆನವಟ್ಟಿಯ ರಾಷ್ಟ್ರೀಯ ಹಬ್ಬದಲ್ಲಿ ಮತ್ತೊಂದು ಇತಿಹಾಸವನ್ನೇ ಸೃಷ್ಠಿಸಿತ್ತು.. 

ಕುಬಟೂರಿನಲ್ಲಿ 6 ಬಾರಿ ಆಡಿದ ಹೋರಿಯನ್ನ ಫೈಲ್ವಾನರ ಕೈಗೆ ಸಿಗದೆ ನೀರುಣಿಸಿತ್ತು. 6 ಬಾರಿ ನಡೆದ ಸುತ್ತಿನಲ್ಲಿ ಹೋರಿಯನ್ನ ಹಿಡಿಯಲಾಗದನ್ನ ಗಮನಿಸಿದ್ದ ಆಗಿನ ಸಣ್ಣನೀರಾವರಿ ಸಚಿವರಾಗಿದ್ದ ಕುಮಾರ್ ಬಂಗಾರಪ್ಪನವರು ಗುರುತಿಸಿ ಪ್ರಶಸ್ತಿ ಕೊಡಿಸಿದ್ದರು. ಈ ಹೋರಿಗೆ ಕಮನವಳ್ಳಿ ಸರ್ದಾರ ಎಂಬ ಹೆಸರು ಬಂದಿದ್ದೆ ಒಂದು ರೋಚಕದ ಕಥೆಯೂ ಇದೆ. 

ಬನವಾಸಿಯಲ್ಲಿ 2004, 2005, 2006ರಲ್ಲಿ ನಡೆದ ಹಬ್ಬದಲ್ಲಿ ಬಂಪರ್ ಪ್ರೈಸ್ ಹೊಡೆದ ಹೋರಿಗೆ ಕಮನವಳ್ಳಿ ಸರ್ದಾರ ಎಂದು ಹೆಸರು ಇಡಲಾಗುತ್ತೆ. ಮುಂದೆ ನಡೆದ 10 ವರ್ಷ ಕಮನವಳ್ಳಿ ಸರ್ದಾರನದ್ದೇ ದರ್ಬಾರ್.

ಕಮನವಳ್ಳಿ ಸರ್ದಾರ ಅವರ ಮಾಲೀಕರಿಗೆ 8 ತೊಲ ಬಂಗಾರ, 45 ತೊಲ ಬೆಳ್ಳಿ, ಒಂದು ಎತ್ತಿನ ಗಾಡಿ, 4 ಟಿವಿ, 6 ಬೀರು, 5 ಹಂಡೆ, 5 ಸೈಕಲ್ ಗಳನ್ನ ತಂದುಕೊಟ್ಟಿದೆ. 6 ಸಾವಿರರೂಗೆ ಶಿರಸಿಯಿಂದ ತಂದಿದ್ದ ಶಿವಾನಂದಪ್ಪನವರನ್ನ ಲಕ್ಷಾಧಿಪತಿಯನ್ನಾಗಿ ಮಾಡಿತ್ತು. 2015 ರಲ್ಲಿ ಕಮನವಳ್ಳಿ ಸರ್ದಾರ ಕೊನೆ ಉಸಿರು ಎಳೆದಿದ್ದಾನೆ.‌

ಪಿಪಿ ಹೋರಿ ಮತ್ತು ಆಕ್ಷನ್ ಹೋರಿಯಾಗಿದ್ದ ಕಮನವಳ್ಳಿ ಸರ್ದಾರ ಹಾನಗಲ್ ರಾಜ್ಯಮಟ್ಟದ ಹಬ್ಬ, ಬ್ಯಾಡಗಿಯಲ್ಲಿ ರಾಷ್ಟ್ರಮಟ್ಟದ ಹಬ್ಬ ಬಂಗಾರವನ್ನ ತಂದುಕೊಟ್ಟಿದೆ, ಆಯನೂರು, ಎತ್ತಿನಕೊಪ್ಪ, ನಳೀನಕೊಪ್ಪದಲ್ಲೂ ಬಂಗಾರದ ಪ್ರೈಸ್ ಪಡೆದಿದೆ. ಒಬ್ಬರನ್ನೂ  ಹತ್ತಿರಕ್ಕೆ ಬಿಡ್ತಿರಲಿಲ್ಲ ಈ ಸರ್ದಾರ ಶಿಕಾರಿಪುರ ಈಸೂರಿನಲ್ಲಿ ಆಕರ್ಷಕ ಹಬ್ಬದಲ್ಲಿ ಸರ್ದಾರ ದರ್ಬಾರವನ್ನೇ ನಡೆಸಿದೆ. ಈಗ ನೆನಪು ಮಾತ್ರ. 

ಸೊರಬ, ಶಿಕಾರಿಪುರ, ಶಿರಾಳಕೊಪ್ಪ, ಶಿವಮೊಗ್ಗ ಗ್ರಾಮಾಂತರ, ಶಿರಸಿ ಹಾವೇರಿ ಜಿಲ್ಲೆಗಳಲ್ಲಿ ಹೋರಿ ಅಭಿಮಾನಿಗಳು ಜಾಸ್ತಿ, ಕಳೆದುಕೊಂಡ ಹೋರಿ ನೆನಪಿಗೆ ಒಂದು ಫೋಟೋ ಇಡಬಹುದಷ್ಟೆ, ಆದ್ರೆ, ಶಿವಾನಂದಪ್ಪನವರು ಮನೆಯ ಮುಂದೆ ಸರ್ದಾರನ ಪ್ರತಿಮೆ ಮಾಡಿ ಪ್ರತಿದಿನ ಪೂಜೆ ಮಾಡುತ್ತಿದ್ದಾರೆ.‌ ಮನೆ ಮಂದಿಯವರೆಲ್ಲಾ ಪೂಜೆ ನಡೆಸುತ್ತಾರೆ. ನಿತ್ಯ ಆ ಹೋರಿಯನ್ನು ಬಸವನ ಪ್ರತಿ ಎಂದು ನಂಬಿ ಮನೆಯ ಬಲಭಾಗದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಸರ್ದಾರನ ಹಾಗೆ ಇರುವ ಮತ್ತೊಂದು ಹೋರಿಯನ್ನ ತರಬೇಕು ಎಂಬ ಪ್ರಯತ್ನದಲ್ಲಿ ಶಿವಾನಂದಪ್ಪ ಇದ್ದಾರೆ. ಆದರೆ 9 ವರ್ಷವಾಯಿತು. ಇದುವರೆಗೂ ಅವರಿಗೆ ಹೋರಿ ಸಿಕ್ಕಿಲ್ಲ. ಕಮನವಳ್ಳಿ ಸರ್ದಾರ ಅಜರಾಮರ.... ಕಮನವಳ್ಳಿ ಸರ್ದಾರನಿಗೆ ಕಮನವಳ್ಳಿ ಸರ್ದಾರನೇ ಸಾಟಿ...

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close