ಎನ್.ಡಿ.ಸುಂದರೇಶ್ ಅವರ ನೆನೆಪಿನ ಸಭೆ



ಸುದ್ದಿಲೈವ್/ಶಿವಮೊಗ್ಗ 

ರೈತರು ಈ ದೇಶದ ಮಾಲೀಕರು. ಈ ದೇಶಕ್ಕೆ ಅನ್ನ ಕೊಟ್ಟು ಎಲ್ಲರನ್ನೂ ಸಾಕಿ ಸಲಹಿದವರು ರೈತರು. ರೈತ ಸಂಘ ಮೊದಲಿನಿಂದಲೂ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡು ಬಂದಿದೆ. ರೈತ ಸಂಘದಲ್ಲಿ ಜಾತಿ ಸಂಘರ್ಷ ಇಲ್ಲ. ರೈತರು ಎಂದರೆ ಒಂದೇ ಅದು ರೈತ ಕುಲ. ಆ ನಿಟ್ಟಿನಲ್ಲಿ ನಾವೆಲ್ಲರೂ ನಡೆದು ಬಂದಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.


ಶನಿವಾರ ಪತ್ರಿಕಾಭವನದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಕೆಚ್ಚೆದೆಯ ನಾಯಕ, ಧೀಮಂತ ಹೋರಾಟಗಾರ, ರೈತ ಕಣ್ಮಣಿ ರೈತ ಸಂಘದ ಸಂಸ್ಥಾಪಕ ಎನ್.ಡಿ.ಸುಂದರೇಶ್ ಅವರ ನೆನೆಪಿನ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವತ್ತು ಎನ್.ಡಿ.ಸುಂದರೇಶ್ ಅವರ 32ನೆ ನೆನೆಪಿನ ಸಭೆಯನ್ನು ಪ್ರತಿವರ್ಷದಂತೆ ಈ ವರ್ಷವೂ ಮಾಡುತ್ತಿದ್ದೇವೆ. 1980 ರಲ್ಲಿ ರೈತ ಚಳುವಳಿ ಪ್ರಾರಂಭವಾಯಿತು. ಅಂದಿನಿಂದ ದಿಟ್ಟ ಹೋರಾಟಗಳೊಂದಿಗೆ ಇವತ್ತು ಕರ್ನಾಟಕದ ಮೂಲೆ ಮೂಲೆಗಳಲ್ಲಿ ರೈತರನ್ನು ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಅವತ್ತಿನ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಸಾಲ ವಸೂಲಿಗಾಗಿ ಜಪ್ತಿ ಮಾಡುವುದು, ತೆರಿಗೆ, ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದರ ಜೊತೆಗೆ ಖಾಸಗೀಕರಣ ಮಾಡಿತು. ಕೃಷಿಯನ್ನು ಹೊರಗಿಡಬೇಕು ಎಂದು ದೊಡ್ಡ ಚಳುವಳಿಯನ್ನೇ ಮಾಡಿ ಸರ್ಕಾರ ವೇಗವಾಗಿ ಜಾರಿಗೆ ತಂದಿದೆ. ಬಿಜೆಪಿ ಸರ್ಕಾರವು ಆದನ್ನೇ ಮುಂದುವರೆಸಿಕೊಂಡು ಬಂದಿದೆ. ನಲುಗುಂದ ದಲ್ಲಿ ಗೋಲಿಬಾರ್ ಮಾಡಿ ಅವತ್ತು ಅತ್ತಿದ ಕಿಡಿ ಇವತ್ತು ರಾಜ್ಯಾದ್ಯಂತ ಹರಡಿದೆ ಎಂದರು.

3 ರೈತ ವಿರೋಧಿ ಕೃಷಿ ಕಾಯಿದೆಯನ್ನು ಜಾರಿಗೆ ತಂದರು. ಅದಕ್ಕೆ ಪೂರಕವಾಗಿ ಕರ್ನಾಟಕ ತಂಡ ಕೃಷಿ ಕಾಯಿದೆಗಳನ್ನೂ ಇವತ್ತಿಗೂ ವಾಪಾಸ್ ತೆಗೆದಿಲ್ಲ. 3 ರೈತ ವಿರೋಧಿ ಕೃಷಿ ಕಾಯಿದೆಯನ್ನು ತಕ್ಷಣ ವಾಪಸ್ ತಗೆಯಬೇಕು ಎಂದು ಈ ಮೂಲಕ ಒತ್ತಾಯ ಮಾಡುತ್ತಿದ್ದೇವೆ ಎಂದರು.

ರೈತರ ವಿರುದ್ಧ ಕಾಯಿದೆಯನ್ನು ಈ ಸಮಾವೇಶ ಖಂಡಿಸುತ್ತದೆ. ಕೇಂದ್ರ ಸರ್ಕಾರವು ಎಂ ಎಸ್ ಪಿ ಯನ್ನು ಕಾನೂನು ಪ್ರಕಾರವಾಗಿ ತಕ್ಷಣ ಜಾರಿ ಮಾಡಿ, ವಿದ್ಯುಚ್ಛಕ್ತಿ ಖಾಸಗೀಕರಣ ಮಾಡಬಾರದು. ಮೂರು ರೈತ ವಿರೋಧಿ ಕಾಯಿದೆಗಳನ್ನು ಹೋಮ್ಯಾಪ್ಡೆಯಬೇಕು ಎಂದು ಒತ್ತಾಯಿಸಿದರು.

ಆದರೆ ಕೇಂದ್ರ ಸರ್ಕಾರಕ್ಕಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಬಡವರ, ರೈತರ, ಜನ ಸಾಮಾನ್ಯರ ಸಮಸ್ಯೆ ಕಾಣುತ್ತಿಲ್ಲ. ಇಷ್ಟೆಲ್ಲಾ ತೊಂದರೆ ಇದ್ದರೂ ಯಾವುದೂ ಕ್ಷುಲ್ಲಕ ಕಾರಣಕ್ಕೆ ಲೋಕ ಸಭೆ ವಿಧಾನ ಸಭೆಯಲ್ಲಿ ಗಲಾಟೆ ಮಾಡುತ್ತಾರೆ ಎಂದು ದೂರಿದರು.

ವಿಧಾನ ಪರಿಷತ್ ಚಾವಡಿ ಒಳಗಡೆ ಒಬ್ಬ ಮಹಿಳೆಯ ಬಗ್ಗೆ ಈ ರೀತಿ ಮಾತನಾಡುತ್ತಾರೆ. ಹಳ್ಳಿಯಲ್ಲಿ ಹೆಬ್ಬೆಟ್ಟು ಒತ್ತುವ ರೈತರೂ ಕೂಡಾ ಬಳಸದ ಪದವನ್ನು ಬಳಸುತ್ತಾರೆ ಎಂದರೆ ಇವರಿಗೆ ಶಾಸಕ ಮಂತ್ರಿ ಆಗುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ ಅವರು, ಯಾವ ರೀತಿ ಕೆಲಸ ಮಾಡಬೇಕು ಎಂದು ಬಹಿರಂಗ ಸಭೆಯಲ್ಲಿ ಪಾಠ ಮಾಡಬೇಕಾಗಿದೆ. ಸದಸ್ಯರನ್ನು ತರಬೇತಿ ಮಾಡಿ, ಅವರ ಹಕ್ಕು, ವ್ಯಾಪ್ತಿಯ ಬಗ್ಗೆ ಜನ ಪ್ರತಿನಿಧಿಗಳಿಗೆ ತರಬೇತಿ ನೀಡಬೇಕಿದೆ. ಇವತ್ತು ಎಲ್ಲ ರಾಜಕಾರಣಿಗಳು ಸಭ್ಯತೆ ಮೀರಿ ವರ್ತನೆ ನಡೆಸುತ್ತಿದ್ದಾರೆ. ನಾಗರೀಕರು ನಾವೆಲ್ಲರೂ ತಲೆ ತಗ್ಗಿಸುವ ರೀತಿಯಲ್ಲೇ ನಡೆದುಕೊಳ್ಳುತ್ತಿದ್ದಾರೆ ಎಂದರು.

ಮಲೆನಾಡಿನ ಮುಳುಗಡೆ ರೈತರ ಸಮಸ್ಯೆ ಇದೆ, ಬಗರ್ ಹುಕುಂ ಸಮಸ್ಯೆ ಇದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕೂಡ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿಲ್ಲ. ಜವಾಬ್ದಾರಿಯಿಂದ ವರ್ತನೆ ಮಾಡುತ್ತಿಲ್ಲ ಎಂದು ದೂರಿದರು.

ಕುಡಿಯುವ ನೀರಿನ ಯೋಜನೆ ಕುರಿತು ಪ್ರಭಾವಿ ಮಂತ್ರಿ ಪ್ರಹ್ಲಾದ್ ಜೋಶಿ ಮನೆ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮತದಾರರು ಎಚ್ಚೆತ್ತುಕೊಂಡು ಆಮಿಷಗಳಿಗೆ ಒಳಗಾಗದೆ ಇದ್ದರೆ ಮಾತ್ರ, ಸರ್ಕಾರಕ್ಕೆ ಬುದ್ಧಿ ಕಲಿಸುವಂತಹ ಕೆಲಸ ನಾವು ಮಾಡಬಹುದು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ವಿರೋಧ ಪಕ್ಷದವರಿಗೂ ಜನರ ಬಗ್ಗೆ , ಜನರ ಸಮಸ್ಯೆಯ ಬಗ್ಗೆ ಚಿಂತೆ ಇಲ್ಲ ಇದು ಬೇಸರ ವ್ಯಕ್ತಪಡಿಸಿದರು.

ನಮ್ಮ ಹಣದಲ್ಲಿ ಸಂಬಳ ತೆಗೆದುಕೊಂಡು ಸೇವೆ ಮಾಡುವ ಎಲ್ಲರೂ ಸೇವಕರು. ನಾವು ರೈತರು ಮಾಲೀಕರು ಎಂದು ಹೆಮ್ಮೆಯಿಂದ ಹೇಳಿವುದನ್ನು ಕಲಿಯಿರಿ ಎಂದ ಅವರು, ಸುಂದರೇಶ್ ಅವರು ಗುಡುಗಿದರೆ ವಿಧಾನ ಸೌಧ ನಡುಗಬೇಕು ಆ ರೀತಿ ಗುಡುಗುತ್ತಿದ್ದರು. ಇವತ್ತಿನ ಸಂಘಟನೆಗೆ ಹಿರಿಯರ ಬಹಳ ದೊಡ್ಡ ಕೊಡುಗೆ ಇದೆ. ಅವರ ಆಶೋತ್ತರಗಳನ್ನು ಕಾರ್ಯಗತ ಮಾಡುವುದಿದೆ. ಬಿಡುವಿನ ಎರಡು ಮೂರು ದಿನಗಳನ್ನಾದರೂ ಸಂಘಟನೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಎಂದರು. 

ಇದೇ ಸಂದರ್ಭದಲ್ಲಿ ಎನ್. ಡಿ.ಸುಂದರೇಶ್ ಅವರ ಪತ್ನಿ ಶೋಭಾ ಸುಂದರೇಶ್ ಮಾತನಾಡಿದರು.ರಾಜ್ಯ ಗೌರವಾಧ್ಯಕ್ಷ ಕುರುವ ಗಣೇಶ್ ಮಾತನಾಡಿ, ಎನ್.ಡಿ.ಸುಂದರೇಶ್ ಅವರನ್ನು ಕಳೆದುಕೊಂಡು ಇವತ್ತಿಗೆ 32 ವರ್ಷ ಆಯಿತು. ಎನ್.ಡಿ.ಸುಂದರೇಶ್ ಅವರ  ಹೋರಾಟ, ರೈತ ಟಿಚಳುವಳಿಯಲ್ಲಿ ಅವರು ಕಟ್ಟಿರುವಂತಹ ರೈತ ಸಂಘ ಅದಕ್ಕಿಂತ ಮೊದಲು ಅವರು ನಡೆದು ಬಂದ ಹಾದಿಯನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಪ್ರಮುಖರಾದ ಹೊನ್ನೂರು ಮುನಿಯಪ್ಪ, ತರೀಕೆರೆ ಮಹೇಶ್, ಹುಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಕೊಟ್ಟೂರು ಭರ್ಮಣ್ಣ, ನಜೀರ್ ಸಾಬ್ ಮೂಲಿಮನಿ, ಅಮೀನ್ ಪಾಷಾ ದಿದ್ಗಿ, ಉತ್ತರ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ್ ರಾಮಪುರ, ಲಿಂಗಸೂರು, ಶಂಕರಮ್ಮ, ರಾಧಮ್ಮ, ವೀರಮ್ಮ, ರಾಘವೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close