ಸುದ್ದಿಲೈವ್/ಶಿವಮೊಗ್ಗ
ಮಾರ್ನಮಿ ಬೈಲಿನಲ್ಲಿರುವ ಜೆಸಿ ನಗರದ ಮನೆಯಲ್ಲಿ ದಿಡೀರ್ ಎಂದು ಬೆಂಕಿ ಕಾಣಿಸಿಕೊಂಡಿದ್ದು, ಹೊಲಿಗೆಯಂತ್ರ ಮತ್ತು ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ ಮನೆಯ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರುತ್ತಿದ್ದು ಅಪಾಯದಲ್ಲಿ ಮಹಿಳೆ ಮತ್ತು ಅವರ ಮಗ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಮಾರ್ನಮಿ ಬೈಲಿನ ಜೆಸಿ ನಗರ ಎರಡನೇ ತಿರುವಿನಲ್ಲಿ ಮಂಜುಳಾ ಎಂಬುವರು ಮಗನೊಂದಿಗೆ ವಾಸವಾಗಿದ್ದಾರೆ. ನ.29 ರಂದು ಇವರು ಧರ್ಮಸ್ಥಳದ ಹಣ ಕಟ್ಟಲು ತೆರಳಿದ ವೇಳೆ ಹಾಗೂ ಮಗ ಸಹ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದು ಕೆಲಸಕ್ಕೆ ಹೋದಾಗ ಅಕ್ಕಪಕ್ಕದ ಮನೆಯಿಂದ ಮಂಜುಳಾರ ಮೊಬೈಲ್ ಗೆ ಕರೆ ಬಂದಿದೆ. ನಿಮ್ಮ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿಸಿದ ಕಾರಣ ಮನೆಗೆ ಮಹಿಳೆ ದೌಡಾಯಿಸಿದ್ದಾರೆ.
ಮನೆಗೆ ದೌಡಾಯಿಸಿದ ಮಹಿಳೆಗೆ ಶಾಕ್ ಆಗಿದೆ. ಅಷ್ಟರೊಳಗೆ ಅಕ್ಕಪಕ್ಕದ ನಿವಾಸಿಗಳು ಬೆಂಕಿ ಆರಿಸಿದ್ದಾರೆ. ಟೈಲರಿಂಗ್ ಮಾಡಿಕೊಂಡಿರುವ ಮಹಿಳೆಯ ಹೊಲಿಗೆ ಮಿಷನ್ ಸೇರಿ ಇವರ ಬಳಿ ಹೊಲಿಯಲು ಕೊಟ್ಟ ಬಟ್ಟೆಗಳು ಸಹ ಬೆಂಕಿಗೆ ಆಹುತಿಯಾಗಿದೆ. ಒಟ್ಟು ಒಂದು ಲಕ್ಷ ರೂ. ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿಗೆ ಆಹುತಿಯಾಗಿರುವ ಸುದ್ದಿ ಯಾವುದೋ ಆಕಸ್ಮಿಕವಾಗಿ ಆಗಿದೆ ಎಂದಿದ್ದರೆ ಸುಮ್ಮನಾಗಿ ಬಿಡಬಹುದಿತ್ತು. ಆದರೆ ಮಹಿಳೆ ಜುಲೈ ತಿಂಗಳಲ್ಲಿ ಇದೇ ರೀತಿಯ ಕೃತ್ಯ ನಡೆಸಿರುವುದಾಗಿ ಆರೋಪಿಸಿದ್ದಾರೆ. ಪ್ರತಿ ದಿನ ಮನೆಯ ಮೇಲೆ ಕಲ್ಲು ತೂರುವುದನ್ನ ಮಾಡುತ್ತಿರುವುದಾಗಿ ದೊಡ್ಡಪೇಟೆಯಲ್ಲಿ ಕೊಟ್ಟ ದೂರಿನಲ್ಲಿ ಉಲ್ಲೇಕಿಸಿರುವುದು ಆತಂಕ ಮೂಡಿಸಿದೆ.
ಈ ರೀತಿಯ ಘಟನೆಗಳು ಕೆಲ ಸಮುದಾಯದ ಕಿಡಿಗೇಡಿಗಳು ಮಾಡುತ್ತಿರುವ ಕೃತ್ಯವೆಂದು 2020-21 ರಲ್ಲಿಯೂ ಇದೇ ರೀತಿ ದೂರುಗಳು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ಕೆಲ ನಿರ್ದಿಷ್ಟ ಸಮುದಾಯದವರ ಮನೆಗಳ ಮೇಲೆ ಕಲ್ಲು ತೂರಿದ್ದ ಪ್ರಕರಣಗಳು ದಾಖಲಾಗಿದ್ದವು. ಈಗ ಮನೆಗೆ ಬೆಂಕಿ ಹಚ್ಚಿರುವ ಘಟನೆ ಆತಂಕ ಮೂಡಿಸಿದೆ.
ಈಗಾಗಲೇ ಪಾಲಿಕೆ ಸಹ ಮುಂಜಾಗೃತಕ್ರಮ ಕೈಗೊಳ್ಳಬೇಕಿದೆ. ಇಲ್ಲೂ ಸಹ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ ಮಾಡಲು ಪೊಲೀಸ್ ಇಲಾಖೆ ಪತ್ರ ಬರೆದಿದ್ದು ಬೀಟ್ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಿದೆ.