ಸುದ್ದಿಲೈವ್/ಸೊರಬ
ತಾಲ್ಲೂಕು ಐತಿಹಾಸಿಕ ಸಂಗತಿಯಲ್ಲಿ ವಿಶಿಷ್ಟ ಪಳೆಯುಳಿಕೆಗಳನ್ನು ಹುದುಗಿಸಿಕೊಂಡಿದ್ದು ಸಮಗ್ರ ಅಧ್ಯಯನದ ಮೂಲಕ ಇನ್ನಷ್ಟು ಬೆಳಕಿಗೆ ಬರಬೇಕಿದೆ ಎಂದು ರಾಜ್ಯ ಪುರಾತತ್ವ ಇಲಾಖೆ ಹಂಪಿಯ ನಿರ್ದೇಶಕರಾದ ಡಾ.ಆರ್.ಶೇಜೇಶ್ವರ ಹೇಳಿದರು.
ಸೊರಬ ತಾಲ್ಲೂಕು ಕ್ಷೇತ್ರಾಧ್ಯಯನ ನಡೆಸಿದ ಅವರು ಯಲಸಿಯ ಅಪೂರ್ವ, ವಿರಳ ಶಿಲ್ಪವೊಂದನ್ನು ವೀಕ್ಷಿಸಿದರು. ಇತಿಹಾಸದ ವಿಚಾರ ಸೊರಬ ತಾಲ್ಲೂಕು ಹಲವು ಮೊದಲುಗಳನ್ನು ಹೊಂದಿದ್ದು, ಇಲ್ಲಿನ ಕವಡಿಯ ಸತಿಸಹಗಮನ ಶಾಸನ, ಮಾವಲಿಯ ಒಂದು ಶಾಸನ, ತೆಲಗುಂದಿಯ ಐದನೇ ಶತಮಾನದ ಶಾಸನ, ಕುಪ್ಪಗಡ್ಡೆ ಹತ್ತನೇ ಶತಮಾನದ ಶಾಸನ ಮಹತ್ವದ್ದಾಗಿದೆ.
ಈಗಾಗಲೇ ಇದೇ ತಾಲ್ಲೂಕಿನ ಹಿರಿಯ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಅಧ್ಯಯನ ನಡೆಸಿದ್ದು ಸ್ಥಳೀಯ ಅರಸು ಮನೆತನಗಳ ಬಗ್ಗೆ, ಕೆರೆಗಳ ಬಗ್ಗೆ, ಜೈನ ಸ್ಮಾರಕಗಳ ಬಗ್ಗೆ, ರಾಷ್ಟ್ರಕೂಟರ ಶಾಸನ, ಶಿಲ್ಪಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ, ಈಚೆಗೆ ರಮೇಶ್ ಹಿರೇಜಂಬೂರು ಹಾಗೂ ಮಂಜಪ್ಪ ಚುರ್ಚುಗುಂಡಿ ಹಲವು ಶಿಲ್ಪ ಶಾಸನ ಗಳನ್ನು ಪತ್ತೆ ಹಚ್ಚಿದ್ದಾರೆ. ಆದಾಗ್ಯ ಇನ್ನೂ ಅಪಾರ ಸಂಖ್ಯೆಯ ಪಳೆಯುಳಿಕೆಗಳು ಅಧ್ಯಯನಕ್ಕೊಳಪಡಬೇಕಿದೆ.
ಯಲಸಿಯ ದೂತರ ವಿಗ್ರಹ ತೀರಾ ಅಪರೂಪದ್ದಾಗಿದ್ದು ಹೊನ್ನಾವರ ಹೈಗುಂದದ ಶಿಲ್ಪಗಳನ್ನು ಹೋಲುತ್ತಿದೆ. ಬಹುತೇಕ ಕದಂಬ ಪೂರ್ವದ ವಿಗ್ರಹವಾಗಿರುವ ಇದು ವಿಶಿಷ್ಟ ಶಿಲ್ಪವಾಗಿದೆ. ಗ್ರಾಮದವರು ಈ ಶಿಲ್ಪಗಳೂ ಸೇರಿದಂತೆ ಗ್ರಾಮದ ಅನೇಕ ಅಮೂಲ್ಯ ಇತಿಹಾಸದ ಕುರುಹುಗಳನ್ನು ಕಾಪಾಡಿಕೊಂಡು ಬಂದಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ತಾಲ್ಲೂಕಿನ ಹೆಚ್ಚೆ, ಚಂದ್ರಗುತ್ತಿ ಪ್ರದೇಶಗಳಲ್ಲಿ ಕ್ಷೇತ್ರಾಧ್ಯಯನ ನಡೆಸಿದರು. ಶ್ರೀಪಾದ ಬಿಚ್ಚುಗತ್ತಿ, ಹಂಪಿಯ ಭದ್ರಿ ತಿರುಗಾಟದಲ್ಲಿದ್ದರು.
ಹಲವು ಪ್ರಥಮಗಳ ದಾಖಲೆ ಹೊಂದಿರುವ ಸೊರಬ ತಾಲ್ಲೂಕು ಪ್ರಚಾರದ ಕೊರತೆ, ಪ್ರವಾಸೋದ್ಯಮದ ನಿರಾಸಕ್ತಿಯಿಂದಾಗಿ ಸೊರಗಿದೆ. ಯಲಸಿಯ ದೂತರ ಶೈಲಿ, ಛರ್ಯೆ ರಾಜ್ಯದ ಯಕ್ಷ ಪ್ರತಿಮೆಗಳಿಗಿಂತ ಭಿನ್ನವಾಗಿದ್ದು, ಆದಿ ಕದಂಬ ಕಾಲದ ಲಕ್ಷಣವನ್ನು ಹೊಂದಿದೆ. ಯಲಸಿಯಲ್ಲಿ ಈ ಹಿಂದೆ ಆದಿ ಕದಂಬ ಕಾಲದ ಮೃಣ್ ಪಾತ್ರೆ, ಸಣ್ಣಸಣ್ಣ ವಿಗ್ರಹಗಳು, ಇಟ್ಟಿಗೆಗಳು ಪತ್ತೆಯಾಗಿವೆ.