ಸುದ್ದಿಲೈವ್/ತೀರ್ಥಹಳ್ಳಿ
112 ವಾಹನದ ಪೊಲೀಸರಿಬ್ಬರು ನದಿಗೆ ಬಿದ್ದಿದ್ದ ಅನಾಮಧೇಯ ವ್ಯಕ್ತಿಯೊಬ್ಬನ ಜೀವ ಉಳಿಸಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿಸಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಸೋಮವಾರ ಸಂಕದಹೊಳೆ ಸಮೀಪದ ನದಿಯಲ್ಲಿ ವ್ಯಕ್ತಿಯೊಬ್ಬ ಬಿದ್ದಿದ್ದಾನೆ ಎಂದು ತೀರ್ಥಹಳ್ಳಿ ಪೊಲೀಸ್ (112) ಗೆ ಕರೆ ಬಂದಿದೆ. ತಕ್ಷಣವೇ ಸ್ಥಳಕ್ಕೆ ಹೋದ ಪೊಲೀಸರಾದ ಲೋಕೇಶ್ ಹಾಗೂ ಸಾಧತ್ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯನ್ನು ಹೊರ ತೆಗೆದು 1 ಕಿಮೀ ಅಷ್ಟು ದೂರ ಹೊತ್ತು ತಂದಿದ್ದಾರೆ.
ನಂತರ 108 ಆಂಬುಲೆನ್ಸ್ ಗೆ ಕರೆ ಮಾಡಿದಾಗ ಮಾಳೂರಿನಲ್ಲಿ ಇರುವುದಾಗಿ ಹೇಳಿದ ಕಾರಣ 112 ವಾಹನದಲ್ಲೇ ಆ ವ್ಯಕ್ತಿಯನ್ನು ಕರೆದುಕೊಂಡು ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದು. ಆತ ಯಾರು, ಯಾವ ಊರಿನವನು , ನದಿಗೆ ಹಾರಿದ್ದ ಅಥವಾ ಆಯತಪ್ಪಿ ಬಿದ್ದಿದ್ದ ತಿಳಿದು ಬರಬೇಕಿದೆ.
ಮಾನವೀಯತೆ ಮೆರೆದ ಪೊಲೀಸರು
ಈ ಹಿಂದೆ ಸಹ ಈ ಪೊಲೀಸರು ಯಡೇಹಳ್ಳಿಕೆರೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ್ದರು. ಈಗ ಮತ್ತೊಮ್ಮೆ ಮತ್ತೊರ್ವನ ಪ್ರಾಣ ರಕ್ಷಣೆ ಮಾಡಿದ್ದಾರೆ. ಈ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.