ಕುವೆಂಪು ವಿವಿ: ಸ್ನಾತಕೋತ್ತರ ಪದವಿಯ ಮೆರಿಟ್ ಸೀಟುಗಳು ಭರ್ತಿ


ಸುದ್ದಿಲೈವ್/ಶಂಕರಘಟ್ಟ, ನ. 14

ಕುವೆಂಪು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಸ್ನಾತಕೋತ್ತರ ಪದವಿ ಪ್ರವೇಶ ಕೌನ್ಸೆಲಿಂಗ್‌ನಲ್ಲಿ ಎಲ್ಲ 33 ವಿಭಾಗಗಳಿಗೂ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದು, ಬಹುತೇಕ ಎಲ್ಲ ಕೋರ್ಸ್ಗಳ ಮೆರಿಟ್ ಸೀಟುಗಳು ಭರ್ತಿಯಾಗಿವೆ. 

ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಡೂರು ಪಿ.ಜಿ.ಕೇಂದ್ರ, ಚಿಕ್ಕಮಗಳೂರು ಪಿಜಿ ಕೇಂದ್ರ ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲಾ ವಿಭಾಗಗಳಿಗೆ ನವೆಂಬರ್ 14, 15 ಮತ್ತು 16ರಂದು ಪ್ರವೇಶಾತಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ. ಮೊದಲ ದಿನವಾದ ಗುರುವಾರದಂದು ಮೆರಿಟ್ ಸೀಟುಗಳಿಗೆ ಪ್ರವೇಶಾತಿ ಪ್ರಕ್ರಿಯೆ ಯಾವುದೇ ತೊಡಕುಗಳಿಲ್ಲದೆ ನಡೆಯಿತು. 15 ಹಾಗೂ 16ರಂದು ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ. ವಿಶ್ವವಿದ್ಯಾಲಯದ ಶೈಕ್ಷನಿಕ ವಿಭಾಗದ ಪ್ರಕಾರ ಗುರುವಾರ ಸಂಜೆ 4 ಗಂಟೆಯ ಹೊತ್ತಿಗೆ ಎಲ್ಲ ಸ್ನಾತಕೋತ್ತರ ವಿಭಾಗಗಳ ಬಹುತೇಕ ಸೀಟುಗಳು ಭರ್ತಿಯಾಗಿದ್ದವು.   

ಕಳೆದ ಬಾರಿಯಂತೆ ವಾಣಜ್ಯ ಅಧ್ಯಯನ ಮತ್ತು ರಸಾಯನಶಾಸ್ತç ವಿಭಾಗಗಳ ಪ್ರವೇಶಾತಿಗಾಗಿ ಅತಿಹೆಚ್ಚು ಅಭ್ಯರ್ಥಿಗಳು ಆಗಮಿಸಿದ್ದು, ಕೌನ್ಸೆಲಿಂಗ್ ಕೇಂದ್ರದ ಮುಂದೆ ವಿದ್ಯಾರ್ಥಿಗಳು ಮತ್ತು ಪೋಷಕರ ಸಂದಣಿ ಇತ್ತು. ಪ್ರವೇಶಾತಿಗೆ ಆನ್ಲೈನ್ ಮತ್ತು ಆಫ್ಲೈನ್ ಎರಡೂ ಮಾದರಿಯಲ್ಲಿ ಅರ್ಜಿ ಹಾಕಲು ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳ ಪ್ರತಿಕ್ರಿಯೆ ಉತ್ತಮವಾಗಿತ್ತು.

ಪ್ರವೇಶಾತಿ ಪಡೆದ ಕೋರ್ಸುಗಳ ದಾಖಲಾತಿ ನಿರ್ವಹಣೆ ಹಾಗೂ ಶುಲ್ಕವನ್ನು ಭರಿಸಲು ವಿದ್ಯಾರ್ಥಿಗಳಿಗೆ ಸುಲಭ ಮಾದರಿಗಳಲ್ಲಿ  ಅವಕಾಶಗಳನ್ನು ನೀಡಲಾಗಿತ್ತು. ಆಫ್‌ಲೈನ್‌ನಲ್ಲಿ ಶುಲ್ಕ ಭರಿಸುವವರ ಸಂಖ್ಯೆ ಹೆಚ್ಚಾದಂತೆ ಬ್ಯಾಂಕಿನಲ್ಲಿ ಹೆಚ್ಚುವರಿಯಾಗಿ ಮೂರು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಜೊತೆಗೆ ಭಸವ ಸಭಾಭವನ ಹಾಗೂ ಜೀವವಿಜ್ಞಾನ ಸಮುಚ್ಛಯದಲ್ಲಿ ಕೌಂಟರ್‌ಗಳನ್ನು ತೆರೆದು ಶುಲ್ಕ ಭರಿಸುವ ಪ್ರಕ್ರಿಯೆಯನ್ನು ಸುಲಲಿತಗೊಳಿಸಲಾಯಿತು.  ಮುಂದಿನ ಎರಡು ದಿನವೂ ಇದೇ ಕಟ್ಟಡಗಳಲ್ಲಿ ಕೌನ್ಸೆಲಿಂಗ್ ನಡೆಯಲಿದೆ.

ವಿಶ್ವವಿದ್ಯಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿವಿಯ ದ್ವಾರದ ಬಳಿಯೇ ವಿಭಾಗವಾರು ಕೌನ್ಸೆಲಿಂಗ್ ಕಟ್ಟಡದ ವಿವರ, ಮಾರ್ಗತೋರುವ ಸೂಚನಾ ಫಲಕಗಳು, ಅಗತ್ಯ ದಾಖಲೆಗಳ ವಿವರ ಸೇರಿದಂತೆ ಸ್ವಾಗತಕೋರುವ ಫಲಕಗಳನ್ನು ಹಾಕಲಾಗಿತ್ತು. ಜೊತೆಗೆ ಪ್ರತಿಕಟ್ಟಡದ ಬಳಿಯೂ ಪೂರಕ ಮಾಹಿತಿ ನೀಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close