ಸುದ್ದಿಲೈವ್/ಸೊರಬ
ಬೈಕ್ ಮತ್ತು ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಮಹಿಳೆಯೊಬ್ಬರು ತೀವ್ರ ಗಾಯಗೊಂಡ ಘಟನೆ ತಾಲೂಕಿನ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆಯ ವರದಾನದಿ ಸೇತುವೆ ಬಳಿ ನಡೆದಿದೆ.
ಹೊಸನಗರ ತಾಲೂಕಿನ ಕಾರಕ್ಕಿ ಗ್ರಾಮದ ಸುದರ್ಶನ ಬಂದಿಗೇರ್ (22) ಮೃತ ಯುವಕನಾಗಿದ್ದಾನೆ. ಸುದರ್ಶನ ಅತ್ತೆಯೊಂದಿಗೆ ಬೈಕ್ ನಲ್ಲಿ ಹೊಸನಗರದಿಂದ ಸೊರಬ ಮಾರ್ಗವಾಗಿ ಚಂದ್ರಗುತ್ತಿ ಸಮೀಪದ ಭದ್ರಾಪುರ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚಂದ್ರಗುತ್ತಿ ಮಾರ್ಗವಾಗಿ ಆಗಮಿಸಿದ ಕಾರು ಡಿಕ್ಕಿ ಹೊಡೆದಿದೆ.
ಪರಿಣಾಮ ಅಪಘಾತದಲ್ಲಿ ತೀವ್ರ ಗಾಯಗೊಂಡ ಬೆಳ್ಳಮ್ಮ ಪುಟ್ಟಪ್ಪ ಚಿಟ್ಟಕ್ಕಿ (65) ಅವರಿಗೆ ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತ ಸುದರ್ಶನನ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.