ವಾಮಾಚಾರದಿಂದ ಹಣದ ವಂಚನೆ-ಎರೆಡೆರಡು ಪ್ರಕರಣ ದಾಖಲು

 


ಸುದ್ದಿಲೈವ್/ಭದ್ರಾವತಿ

ಮಾಟ, ಮಂತ್ರ, ಶಾಸ್ತ್ರ ಎಂದು ನಂಬಿಸಿ ಭದ್ರಾವತಿಯ ಎರಡು ಕಡೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಶ್ರೀನಿವಾಸ್‌ ಎಂಬಾತ ಭದ್ರಾವತಿಯ ಇಬ್ಬರು ಪ್ರತ್ಯೇಕ ವ್ಯಕ್ತಿಗಳಿಗೆ (ಹೆಸರು ಗೌಪ್ಯ) ನಾನಾ ಕಾರಣ ತಿಳಿಸಿ, ಪೂಜೆ ಮಾಡುವುದಾಗಿ ನಂಬಿಸಿ ವಂಚಿಸಿದ್ದಾನೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಕೃಷಿಕರೊಬ್ಬರ (ಹೆಸರು ಗೌಪ್ಯ) ಮಗನಿಗೆ ಸರಿಯಾಗಿ ಮಾತು ಬರುವುದಿಲ್ಲ. ಇದಕ್ಕೆ ಮಾಟವೇ ಕಾರಣ ಎಂದು ಶ್ರೀನಿವಾಸ ನಂಬಿಸಿದ್ದ. ಕೃಷಿಕನ ಮನೆಯ ಹಾಲ್‌ನಲ್ಲಿ ಅಗೆದಾಗ ತಾಮ್ರದ ಚೊಂಬು, ನಾಲ್ಕು ಕವಡೆ ಪತ್ತೆಯಾಗಿತ್ತು. ಇದರಲ್ಲೆ ಮಾಟ ಮಾಡಿದ್ದಾರೆ ಎಂದು ನಂಬಿಸಿ ದೇವಿಗೆ ಪೂಜೆ ಆರಂಭಿಸಿದ್ದ. ಪೂಜಾ ಸಾಮಗ್ರಿಗಾಗಿ 2.25 ಲಕ್ಷ ರೂ. ಹಣ ಪಡೆದಿದ್ದ.
ಕೇಸ್ ನಂಬರ್ 1
ಪೂಜೆ ಸಂದರ್ಭ ಮನೆಯರ ಬಳಿ ಇದ್ದ ಚಿನ್ನಾಭರಣವನ್ನೆಲ್ಲ ತರಿಸಿ ಎಲ್ಲರ ಎದುರಲ್ಲಿಯೇ ತಾನೇ ತರಿಸಿದ್ದ ಒಂದು ಬಾಕ್ಸ್‌ಗೆ ಹಾಕಿ ಪೂಜೆ ಮಾಡಿದ್ದ. ಬಾಕ್ಸ್‌ಗೆ ಬೀಗ ಹಾಕಿ ಅದನ್ನು ಕೊಠಡಿಯಲ್ಲಿಟ್ಟು ಪೂಜಿಸಬೇಕು. ಆ ಸಂದರ್ಭ ಯಾರೂ ಒಳ ಬರುವಂತಿಲ್ಲ ಎಂದು ಸೂಚಿಸಿದ್ದ. ಪೂಜೆ ಮುಗಿಸಿ ತೆರಳುವಾಗ, ಈ ಬಾಕ್ಸ್‌ಗೆ 48 ದಿನ ಪೂಜೆ ನಡೆಯಬೇಕು ಎಂದು ತಿಳಿಸಿದ್ದ.
ಕೇಸ್ ನಂಬರ್ 2
ಭದ್ರಾವತಿಯ ಮತ್ತೊಂದು ಗ್ರಾಮದ ಯುವಕನೊಬ್ಬನ ಮನೆಗೆ (ಹೆಸರು ಗೌಪ್ಯ) ತೆರಳಿ, ಮಾಟ ಮಾಡಿರುವುದರಿಂದ ನಿಮಗೆ ಸಮಸ್ಯೆಯಾಗುತ್ತಿದೆ. ದೇವಿಗೆ ಪೂಜೆ ಮಾಡುತ್ತೇನೆ ಎಂದು ನಂಬಿಸಿದ್ದ. ಪೂಜಾ ಸಾಮಗ್ರಿಗೆ 1.50 ಲಕ್ಷ ರೂ. ಹಣ ಪಡೆದಿದ್ದ. ಪೂಜೆ ದಿನ ಚಿನ್ನಾಭರಣವನ್ನೆಲ್ಲ ಬಾಕ್ಸ್‌ಗೆ ಹಾಕಿ ಅವರದ್ದೇ ಮನೆಯ ಕೊಠಡಿಯಲ್ಲಿ ಇಟ್ಟು ಏಕಾಂತವಾಗಿ ಪೂಜೆ ಸಲ್ಲಿಸಿದ್ದ. 41 ದಿನ ನಿರಂತರ ಪೂಜೆ ಮಾಡುವಂತೆ ಸೂಚಿಸಿ ತೆರಳಿದ್ದ.
ಬಾಕ್ಸ್‌ ತೆಗೆದರೆ ಸತ್ತೇ ಹೋಗ್ತೀರ
ಇನ್ನು, ಎರಡು ಮನೆಗಳಲ್ಲಿ ಯಾರೂ ಬಾಕ್ಸ್‌ ಬೀಗ ತೆಗೆಯಬಾರದು ಎಂದು ಎಚ್ಚರಿಸಿದ್ದ. ಬೀಗ ತೆಗೆದವರು ಸಾಯುತ್ತಾರೆ ಎಂದು ಬೆದರಿಸಿದ್ದ. ಆತ ಸೂಚಿಸಿದಂತೆ ನಿತ್ಯ ಪೂಜೆ ಮಾಡಿದ್ದರು. 48 ದಿನದ ಬಳಿಕ ಕರೆ ಮಾಡಿದಾಗ ಶ್ರೀನಿವಾಸನ ಫೋನ್‌ ಮಾಡಿದಾಗ ಸ್ವಿಚ್‌ ಆಫ್‌ ಬಂದಿತ್ತು. ಅನುಮಾನಗೊಂಡು ಬಾಕ್ಸ್‌ ತೆರೆದಾಗ ಚಿನ್ನಾಭರಣ ನಾಪತ್ತೆಯಾಗಿದ್ದವು.

ಕೃಷಿಕನ ಮನೆಯಲ್ಲಿ 23.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2.25 ಲಕ್ಷ ರೂ. ನಗದು, ಯುವಕನ ಮನೆಯಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1.50 ಲಕ್ಷ ರೂ. ನಗದು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮರ್ಯಾದೆಗೆ ಅಂಜಿದ ಎರಡು ಕುಟುಂಬದವರು ದೂರು ನೀಡಲು ವಿಳಂಬ ಮಾಡಿದ್ದರು. ಸದ್ಯ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close