ತಂತ್ರಜ್ಞಾನ ಆವಿಷ್ಕಾರದಿಂದ ಜನ-ಜೀವನ ಹಸನಾಗಬೇಕು: ಡಾ.ಪಿ.ನಾರಾಯಣ



ಸುದ್ದಿಲೈವ್/ಶಿವಮೊಗ್ಗ

ʼವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧ ಕಲ್ಪಿಸುವ ಸಂಪರ್ಕ ಸೇತುವೆ ಗಟ್ಟಿಯಾಗಿರಬೇಕು. ಅಚಲವಾದ ನಂಬಿಕೆಯೊಂದಿಗೆ ರೋಗಿಯು ಮೊದಲು ವೈದ್ಯರನ್ನು ನಂಬಬೇಕು. ಇದು ವೈದ್ಯಕೀಯ ಕ್ಷೇತ್ರದ ಮೂಲಭೂತ ತತ್ವ. ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಆವಿಷ್ಕಾರಗಳು ಸಾಕಷ್ಟು ಬಂದಿರಬಹುದು.  ಆದರೆ, ಆವಿಷ್ಕಾರಗಳಿಂದ ಜನ -ಜೀವನ ಹಸನಾಗಬೇಕುʼ ಎಂದು ಹಿರಿಯ ವೈದ್ಯರು ಹಾಗೂ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿಯೂ ಆದ ಡಾ.ಪಿ.ನಾರಾಯಣ ಅಭಿಪ್ರಾಯಪಟ್ಟರು.


ʼನಗರದ ಆರಾಧನಾ ಆರ್ಥೋಪೆಡಿಕ್ ಕೇಂದ್ರ ಆಸ್ಪತ್ರೆಯಲ್ಲಿ ನೂತನವಾಗಿ ಜಾರಿಗೆ ತಂದಿರುವ ಮಂಡಿ ನೋವು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ʼರೋಬೋಟಿಕ್ ತಂತ್ರಜ್ಞಾನʼ ಅಳವಡಿಕೆ ಕುರಿತ ಇಲ್ಲಿನ ಹರ್ಷ ದಿ ಫರ್ನ್ ಹೋಟೆಲ್ ಆವರಣದಲ್ಲಿ ಭಾನುವಾರ ಆಯೋಜಿಸಿದ್ದಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ʼಅರಾಧನಾ ಆಸ್ಪತ್ರೆಯಲ್ಲಿ ರೋಬೋಟಿಕ್‌ ತಂತ್ರಜ್ಞಾನ ಅಳವಡಿಸಿಕೊಂಡು ರೋಗಿಗಳಿಗೆ ಮೊಣಕಾಲು ಚಿಪ್ಪು ಬದಲಾವಣೆ ನಡೆಸುವ ಪ್ರಯೋಗ, ಶಿವಮೊಗ್ಗದಲ್ಲಿ ಇತಿಹಾಸ ಸೃಷ್ಠಿಯ ಮೈಲಿಗಲ್ಲಾಗಲಿದೆ. ಇಲ್ಲಿ ರೋಗಿಗಳು ವೈದ್ಯರನ್ನು ದೇವರೆಂದು ಭಾವಿಸಿದ್ದಾರೆ. ಇದಕ್ಕೆ ಪೂರಕವಾಗಿ ವೈದ್ಯರು ಸೇವೆ ಒದಗಿಸಬೇಕು. ಈ ನಿಟ್ಟಿನಲ್ಲಿ ಆಸ್ಪತ್ರೆಯ ವೈದ್ಯರು ನಂಬಿಕೆ ಉಳಿಸಿಕೊಳ್ಳಬೇಕುʼ ಎಂದರು.


ʼನಾನು ವೈದ್ಯಕೀಯ ವೃತ್ತಿಯನ್ನು 1967ರಲ್ಲಿ ಪ್ರಾರಂಭಿಸಿ ಜನರಿಗೆ ವೈದ್ಯಕೀಯ  ಸೇವೆ  ಆರಂಭಿಸಿದಾಗ ಸ್ಟೆತಸ್ಕೋಪ್, ಥರ್ಮೋಮೀಟರ್ ಬಳಸಿಕೊಂಡು ರೋಗಿಗಳ ಕೈಹಿಡಿದು ರೋಗ ಗುಣಪಡಿಸಬೇಕಿತ್ತು. ಅಂದು ಸುಸಜ್ಜಿತ ಹಾಗೂ ವ್ಯವಸ್ಥಿತ ಲ್ಯಾಬೋರೇಟರಿ ಕೇಂದ್ರಗಳು ಇರಲಿಲ್ಲ. ಆದರೆ, ಪ್ರಸ್ತುತ ತಂತ್ರಜ್ಞಾನ ಬೆಳವಣಿಗೆಗೊಂಡಿದೆ. ಹೊಸ ಆವಿಷ್ಕಾರಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಬಳಸಿಕೊಂಡು  ರೋಗಿಗಳ ಆರೋಗ್ಯ ಸುಧಾರಿಸುವ ಕಾರ್ಯ ವೈದ್ಯರು ಮಾಡಲಿʼ ಎಂದು ಆಶಿಸಿದರು.


ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಮಾತನಾಡಿ, ʼಮನುಷ್ಯನಿಗೆ ಮರು ಜನ್ಮ ಕೊಡುವ ಶಕ್ತಿ ಇದ್ದರೆ, ಅದು ವೈದ್ಯರಿಗೆ ಮಾತ್ರ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವೈದ್ಯಕೀಯ ವೆಚ್ಚ ಅತಿ ಕಡಿಮೆ ಇದೆ. ಇದೇ ಕಾರಣಕ್ಕೆ ವಿದೇಶದ ಜನರು ಭಾರತದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.  ದಶಕದ ಹಿಂದೆ ಇಲ್ಲಿನ ರೋಗಿಗಳು ಮಣಿಪಾಲ್‌ನಂತಹ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಹೋಗುತ್ತಿದ್ದರು. ಪ್ರಸ್ತುತ, ಈ ತೊಡಕು ನಿವಾರಣೆಗೊಂಡಿದೆ. ಶಿವಮೊಗ್ಗ ಹೆಲ್ತ್ ಹಬ್ ಆಗಿ ಮಾರ್ಪಟ್ಟಿದೆʼ ಎಂದರು.


ʼಶಿವಮೊಗ್ಗದಲ್ಲಿ ಉತ್ತಮ ವೈದ್ಯಕೀಯ ತಂಡ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದೆ. ಪ್ರಸ್ತುತ ಆರಾಧನಾ ಆಸ್ಪತ್ರೆಯಲ್ಲಿ ರೂ. ೧.೭೫ ಲಕ್ಷ ದೊಳಗೆ ಮೊಣಕಾಲು ಚಿಪ್ಪು ಬದಲಾವಣೆ  ಶಸ್ತ್ರಚಿಕಿತ್ಸೆಗೆ ರೋಬೋಟ್‌ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಇದೇ ಚಿಕಿತ್ಸೆ ವಿದೇಶ ಅಥವಾ ಬೆಂಗಳೂರಿನಲ್ಲಿ ಪಡೆದರೆ  3 ರಿಂದ 5 ಲಕ್ಷ ವ್ಯಯಿಸಬೇಕು ಎಂದರು.  

ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಕರೋನ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರ ಕಂಗಾಲಾಗಿತ್ತು. ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ  ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. ಪ್ರಸ್ತುತ ರೋಗಿಗಳ ಆರೋಗ್ಯ ಸುಧಾರಣೆಗೆ ಯಂತ್ರೋಪಕರಣಗಳ ಮೇಲೆ ವೈದ್ಯರು ಹೆಚ್ಚು ಅವಲಂಭಿತರಾಗಿದ್ದಾರೆ.  ಮನುಷ್ಯನ ದೇಹದ ಅಂಗಾಂಗಳಲ್ಲಿ ಸಮಸ್ಯೆಗಳನ್ನು ಗುರುತಿಸಲು ತಂತ್ರಜ್ಞಾನ ಹೆಚ್ಚಿನ ಪ್ರಾಮುಖ್ಯತೆ ವಹಿಸುತ್ತದೆ. ಇದಕ್ಕೆ ರೋಬೋಟಿಕ್‌ ತಂತ್ರಜ್ಞಾನ ಕೈಗನ್ನಡಿಯಂತಿದೆ‌ ಎಂದರು.


ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ರೋಬೋಟಿಕ್ ತಂತ್ರಜ್ಞಾನದಿಂದ ಶಿವಮೊಗ್ಗಕ್ಕೆ ಗೌರವ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನದಿಂದ ರೋಗಿಗಳ ಆರೋಗ್ಯ ಸುಧಾರಣೆ ಕಾಣಲಿ ಎಂದು ಆಶಿಸಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಪುರಾತನ ಕಾಲದಿಂದಲೂ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಅವಿಷ್ಕಾರಗಳು ನಡೆಯುತ್ತಲೇ ಇವೆ. ಕಾಲಘಟ್ಟಕ್ಕೆ ತಕ್ಕಂತೆ ಜನರ ಆರೋಗ್ಯ ಸುಧಾರಣೆಗೆ ತಂತ್ರಜ್ಞಾನ ಬಳಕೆಯಾಗುತ್ತಿದೆ.  ಇಲ್ಲಿ ರೋಬೋಟಿಕ್‌ ತಂತ್ರಜ್ಞಾನ ಬಳಸಿಕೊಂಡು ಜನರ ಆರೋಗ್ಯ ಗುಣಪಡಿಸಲು ಮುಂದಾಗಿರುವುದು ಶಿವಮೊಗ್ಗದ ಹೆಗ್ಗಳಿಕೆ ಎಂದರು.

ಭೋವಿ ಅಭಿವೃದ್ಧಿ ನಿಗಮ ರಾಜ್ಯ ಘಟಕ ಅಧ್ಯಕ್ಷ ಎಸ್.ರವಿಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೀಶ್, ಆರಾಧನಾ ಆಸ್ಪತ್ರೆಯ ಅಧ್ಯಕ್ಷ ಟಿ.ಕೃಷ್ಣಪ್ಪ,

ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾರಾಯಣ ರಾವ್, ಅರಾಧನಾ ಆಸ್ಪತ್ರೆಯ ನಿರ್ದೇಶಕಿ ಡಾ.ಶೋಭಾ, ಐಎಂಎಯ ಉಪಾಧ್ಯಕ್ಷ ಶಂಭುಲಿಂಗ, ಡಾ. ಎಂ.ಪಿ.ಸುನಿಲ್ ಇದ್ದರು.


ರೋಬೋಟಿಕ್ ಶಸ್ತ್ರಚಿಕಿತ್ಸೆಯಿಂದ ಬೇಗನೆ ಚೇತರಿಕೆ: ಡಾ.ಗಿರೀಶ್


ಮೊಣಕಾಲು ಶಸ್ತ್ರಚಿಕಿತ್ಸೆಗೆ ಹಳೆಯ ಪದ್ಧತಿಗೆ ಹೋಲಿಸಿಕೊಂಡರೆ ರೋಬೋಟಿಕ್ ತಂತ್ರಜ್ಞಾನದ ಚಿಕಿತ್ಸೆ ಅತ್ಯಂತ ಸರಳ ಹಾಗೂ ರೋಗಿಗಳು ಅತಿ ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ಅರಾಧನಾ ಆಸ್ಪತ್ರೆಯ ವ್ಯವಸ್ಥಾಪಕ ಡಾ. ಗಿರೀಶ್  ಕುಮಾರ್ ಕೆ‌. ಹೇಳಿದರು.


ಮಂಡಿಯ ಸವಕಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ಮೂರು ಹಂತಗಳಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತದೆ. ರೋಗಿಗಳಿಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡುವುದು ನಮ್ಮ ಗುರಿ. ಆದ್ದರಿಂದ, ಇಲ್ಲಿ ರೋಬೋಟಿಕ್‌ ತಂತ್ರಜ್ಞಾನ ಬಳಸಿಕೊಂಡು ರೋಗಿಗಳಿಗೆ ಮೊಣಕಾಲು ಮಂಡಿ ಶಸ್ತ್ರಚಿಕಿತ್ಸೆಗೆ ಈ ತಂತ್ರಜ್ಞಾನ ಅನುಷ್ಠಾನಗೊಳಿಸಲಾಗಿದೆ ಎಂದರು.


ಆರಾಧನಾದಲ್ಲಿ ಇದು ಪ್ರಥಮ ಪ್ರಯತ್ನ. ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಬದಲಾವಣೆ ಆಗುತ್ತಿವೆ. ಬೆಂಗಳೂರಿನಲ್ಲಿ ಸಿಗುವ ಎಲ್ಲಾ ಸವಲತ್ತುಗಳು ನಮ್ಮ ಆಸ್ಪತ್ರೆಯಲ್ಲಿಯೇ ಲಭಿಸಲಿವೆ. ವೈದ್ಯಕೀಯ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದ ಕ್ರಾಂತಿಕಾರಿ ಬದಲಾವಣೆ ಇಲ್ಲಿ ತರಲಾಗಿದೆ ಎಂದ ಅವರು, ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಬಿಟ್ಟರೆ ಶಿವಮೊಗ್ಗದಲ್ಲಿ ಮಾತ್ರ ರೋಬೋಟಿಕ್ ತಂತ್ರಜ್ಞಾನ ಬಳಸಿಕೊಂಡು ರೋಗಿಗಳಿಗೆ ಮೊಣಕಾಲು ಮಂಡಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ‌ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close