ಸುದ್ದಿಲೈವ್/ಶಿವಮೊಗ್ಗ
ಉತ್ತಮ ಸಂಸ್ಕೃತಿಯನ್ನು ನಿರ್ಮಿಸಲು ನಮ್ಮ ಮಾತೃಭಾಷೆಯೊಂದಿಗೆ ಭಾವನಾತ್ಮಕ ಬೆಸುಗೆ ಅತ್ಯಗತ್ಯ ಎಂದು ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್.ಅರುಣ್ ಹೇಳಿದರು.
ನಗರದ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯೋತ್ಸವ ಆಚರಣೆಗೆ ಸೀಮಿತವಾಗದೆ, ನಮ್ಮೊಳಗಿನ ಕನ್ನಡ ಪರ ಬದಲಾವಣೆಗಳಿಗೆ ಪೂರಕವಾಗಬೇಕು. ಸಾಧನೆಗೆ ಎಂದಿಗೂ ಭಾಷೆ ಅಡ್ಡಿಯಲ್ಲ. ಎಲ್ಲಾ ಭಾಷೆಯನ್ನು ಗೌರವಿಸುವುದರ ಜೊತೆಗೆ ನಮ್ಮ ಮಾತೃಭಾಷೆಯೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳಬೇಕಿದೆ ಎಂದರು.
ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಕಲಾಪದಲ್ಲಿ ನಡೆಯುವ ಚರ್ಚೆಯನ್ನು, ವಿದ್ಯಾರ್ಥಿಗಳು ವಿಧಾನಸೌಧಕ್ಕೆ ನೇರವಾಗಿ ಭೇಟಿ ನೀಡಿ ವೀಕ್ಷಿಸುವ ಅವಕಾಶವನ್ನು ಮಾಡಿಕೊಡಲಾಗುವುದು. ಅಲ್ಲಿ ಕೇವಲ ವಾಗ್ವಾದಗಳಷ್ಟೆ ಇರುವುದಿಲ್ಲ. ಉತ್ತಮ ಚರ್ಚೆ ಅನುಷ್ಟಾನಗಳು ನಡೆಯುತ್ತಿರುತ್ತದೆ. ಇಂತಹ ಸಂದರ್ಭವನ್ನು ಪ್ರತ್ಯಕ್ಷವಾಗಿ ವೀಕ್ಷಿಸುವ ಮೂಲಕ ಕಾನೂನು ವಿದ್ಯಾರ್ಥಿಗಳಿಗೆ ಅದ್ಭುತ ಜ್ಞಾನ ಸಿಗಲಿದೆ ಎಂದು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗನು ಸಹ ಮೊದಲು ಚಿಂತಿಸಿ, ಕಲಿತು, ಅರ್ಥೈಸುವುದು ಕನ್ನಡದಲ್ಲಿಯೇ. ನಂತರ ಅದನ್ನು ಬೇರೆ ಭಾಷೆಗೆ ಭಾಷಾಂತರಿಸಲು ಸಾಧ್ಯವಾಗುವುದು. ರಂಗಭೂಮಿ ಎಂಬುದು ಮನೋಧೈರ್ಯವನ್ನು, ಆತ್ಮವಿಶ್ವಾಸವನ್ನು ತಂದುಕೊಡುತ್ತದೆ. ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಜೀವನಾಸಕ್ತಿಯನ್ನು ಬೆಳೆಸುತ್ತದೆ ಎಂದು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಡಾ.ಕೆ.ಎ ವಿಷ್ಣುಮೂರ್ತಿ ಮಾತನಾಡಿ, ಶ್ರದ್ಧೆ ಆಸಕ್ತಿಗಳು ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿದೆ. ಅಮ್ಮ ಎಂಬ ಪದವೇ ಸ್ವರ ವ್ಯಂಜನಗಳ ಮಿಶ್ರಣವಾಗಿದ್ದು, ಕನ್ನಡದ ಪ್ರತಿಯೊಂದು ಪದವು ವೈಜ್ಞಾನಿಕ ಹಿನ್ನಲೆ ಹೊಂದಿದೆ. ಭಾಷೆಯ ಬಳಕೆಯಿಂದ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ.
ಯುವ ಸಮೂಹ ಜೆರಾಕ್ಸ್ ಮತ್ತು ಮೊಬೈಲ್ ಸಂಸ್ಕೃತಿಯಿಂದ ಹಾಳಾಗುತ್ತಿದ್ದಾರೆ. ಬರವಣಿಗೆಯ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆ ಅರಿಯಬೇಕಿದೆ. ಬದುಕಿನ ಕೊನೆಯಲ್ಲಿ ಉಳುಯುವುದು ಒಂದು ಆರೋಗ್ಯ ಮತ್ತೊಂದು ಜ್ಞಾನ. ನಮ್ಮ ಬದುಕಿನ ನಿಜವಾದ ಸ್ನೇಹಿತ ಪುಸ್ತಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.