ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಮಹಾನಗರ ಪಾಲಿಕೆಯ ಜನನ ಮತ್ತು ಮರಣ ವಿಭಾಗದಲ್ಲಿ ಗಂಭೀರ ಬದಲಾವಣೆಯಾಗಿದೆ. ನಿನ್ನೆ ಜನನ ಮರಣ ಕೇಂದ್ರಕ್ಕೆ ನೂತನ ಅಧಿಕಾರಿಗಳ ಅಧಿಕಾರ ಸ್ವೀಕಾರವಾಗುತ್ತಿದ್ದಂತೆ ಲೂಟಿತನಕ್ಕೆ ಬ್ರೇಕ್ ಆಗಿದೆ.
ನಿನ್ನೆ ಅಧಿಕಾರ ಮಹಿಳಾ ಅಧಿಕಾರಿಯೊಬ್ಬರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಸರ್ಕಾರ ನಿಗದಿಪಡಿಸಿರುವ ಶುಲ್ಕದ ಪ್ರತಿಯನ್ನು ಅಂಟಿಸುವುದರ ಮುಖಾಂತರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಷ್ಟು ದಿನ ಜನನ ಮರಣ ಪ್ರತಿಗೆ 20 ರೂ. ಪಡೆದುಕೊಂಡು ಲೂಟಿ ಹೊಡೆಯಲಾಗುತ್ತಿತ್ತು. ಆದರೆ ಕೇವಲ ಐದು ರೂ.ಗೆ ಪ್ರತಿ ಸಿಗುತ್ತಿದೆ. ಒಂದು ಕಾಪಿಗೆ ಇಪ್ಪತ್ತು ಕೊಡುತ್ತಿದ್ದ ಜನಕ್ಕೆ ಇದು ಆಶ್ಚರ್ಯವೂ ಹೌದು! ಇಷ್ಟು ದಿನ 20 ರೂ. ಪಡೆದು ಲೂಟಿ ಮಾಡುತ್ತಿದ್ದ ಹಣವನ್ನ ಆಯುಕ್ತರು ಪೀಕಿಸಿದಾಗಲೇ ಈ ಎಲ್ಲಾ ಪ್ರಯತ್ನಕ್ಕೆ ಗೆಲವು ಸಿಗಲಿದೆ.
ಒಂದು ಪ್ರತಿಗೆ ರೂ. 20 ನಂತೆ 10 ಪ್ರತಿ ತೆಗೆದುಕೊಂಡರೆ 200 ರೂ ಆಗುತ್ತಿತ್ತು ಮೊದಲನೇ ಪ್ರತಿಗೆ ಹತ್ತೂರು ನಂತರ ಪಡೆಯುವ ಪ್ರತಿಗಳಿಗೆ ಐದು ರೂ. ನಿಗದಿಯಾಗಿದೆ. 10 ಪ್ರತಿಗೆ 55 ರೂಪಾಯಿ ಆಗುತ್ತಿದೆ. ಇಷ್ಟು ದಿನ ಸರ್ಕಾರಕ್ಕೆ 55 ರೂ. ಸಂದಾಯವಾದರೆ ಸಿಬ್ಬಂದಿಯ ಜೇಬಿಗೆ 145 ರೂ. ಇಫಿಸಲಾಗುತ್ತಿತ್ತಾ ಎಂಬ ಅನುಮಾನ ಶುರುವಾಗಿದೆ.
ಮೊದಲನೇ ಪ್ರತಿ ಉಚಿತ ಎಂಬುದೇ ವಿಶೇಷವಾಗಿದೆ. ಒಟ್ಟಾರೆ ಜನನ ಮರಣದಿಂದ ಒಂದು ದಿನಕ್ಕೆ ನಾಲ್ಕರಿಂದ ಐದು ಸಾವಿರ ತನಕ ಭ್ರಷ್ಟಚಾರ ನಡೆದಿರುವುದು ಮಾತ್ರ ಸತ್ಯ. ಇದಕ್ಕೆ ಕಡಿವಾಣ ಹಾಕಿದ ಅಧಿಕಾರಿಗೆ ಮತ್ತು ಆಯುಕ್ತರಿಗೆ ಜನಸಾಮಾನ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಮಾತೇ ಕೇಳದ ಜನಪ್ರತಿನಿಧಿಗಳು
ಈ ಲೂಟಿಯ ಬಗ್ಗೆ ಮೊದಲೇ ಸಂಘಟನೆಯೊಂದು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಗಮನ ಸೆಳೆದಿತ್ತು. ಹಣ ಹೆಚ್ಚಿಗೆ ಪಡೆಯುವ ಬಗ್ಗೆ ಹಿಂದಿನ ಬಿಜೆಪಿಯ ಮೇಯರ್ ಮತ್ತು ಉಪಮೇಯರ್ ಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಕ್ಯಾರೆ ಮಾಡದ ಜನಪ್ರತಿನಿಧಿಗಳಿಂದಾಗಿ ಲೂಟಿ ಮುಂದು ವರೆದಿತ್ತು.
ಈಗ ಪಾಲಿಕೆಯಲ್ಲಿ ಜನಪ್ರತಿನಿಧಿಗಳೆ ಇಲ್ಲವಾಗಿದೆ. ಜನಪ್ರತಿನಿಧಿಗಳು ಇಲ್ಲದ ವೇಳೆಯಲ್ಲೇ ಜನರಿಗೆ ಉಪಕಾರವಾದಂತೆ ಆಗಿದೆ. ಜನಗಳಿಗೆ ಅನುಕೂಲವಾಗುವುದಾದರೆ ಜನಪ್ರತಿನಿಧಿಗಳಿಗಿಂತ ಅಧಿಕಾರಿಗಳೆ ಮೇಲು ಎಂಬಂತಾಗಿದೆ.