ಸುದ್ದಿಲೈವ್/ಶಿವಮೊಗ್ಗ
KSRTC ಬಸ್ ನಿಲ್ದಾಣದಲ್ಲಿ ಖದೀಮರ ಕೈಚಳಕ ಮುಂದುವರೆದಿದೆ. ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ಆಧಾರ್ ಕಾರ್ಡ್ ತೆಗೆಯಲು ಮುಂದಾದ ಮಹಿಳೆಗೆ ಶಾಕ್ ಆಗಿದೆ.
ಶಿವಮೊಗ್ಗದ ರಾಮೇನಕೊಪ್ಪದಲ್ಲಿರುವ ತವರು ಮನೆಗೆ ಬಂದಿದ್ದ 28 ವರ್ಷದ ಮಹಿಳೆ ಗಂಡನ ಮನೆಯಾದ ಶಿಕಾರಿಪುರದ ನೆಲವಾಗಿಲು ಗ್ರಾಮಕ್ಕೆ ವಾಪಾಸ್ ಆಗಲು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಧರ್ಮಸ್ಥಳ-ಹುಬ್ಬಳ್ಳಿ ಕಡೆ ಹೋಗುವ KSRTC ಬಸ್ ಹತ್ತಿದ್ದಾರೆ. ಎಂದಿನಂತೆ ಬಸ್ ಹತ್ತಲು ರಶ್ ಆಗಿದೆ.
ರಶ್ ನಲ್ಲೇ ಸೀಟು ಹಿಡಿಯಲು ಮುಂದಾದ ಮಹಿಳೆಯು ಸೀಟು ಹಿಡಿದ ನಂತರ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಆಧಾರ್ ಕಾರ್ಡ್ ತೆಗೆಯಲು ಬ್ಯಾಗ್ ನೋಡಿಕೊಂಡಿದ್ದಾರೆ. ವ್ಯಾನಿಟಿ ಬ್ಯಾಗ್ ನ ಜಿಪ್ ಅರ್ಧ ತೆಗೆದಿರುವುದು ಗಮನಕ್ಕೆ ಬಂದಿದೆ. ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಮತ್ತು ಹಲವು ಕಾರ್ಡ್ ಗಳು ಕಾಣೆಯಾಗಿವೆ.
20 ಸಾವಿರದ ಕರಿಮಣಿ ಮತ್ತು ತಾಳಿಗುಂಡು ಇರುವ ತಾಳಿ ಸರ, ಈಶ್ವರನ ಡಾಲರ್, ಕೆನೆರಾ ಮತ್ತು ಇಂಡಿಯನ್ ಬ್ಯಾಂಕ್‌ನ ಎಟಿಎಂ ಕಾರ್ಡ್, ಕೆಎಂವೈ ಕಾರ್ಡ್, ಪಾನ್ ಕಾರ್ಡ್ ಕಳುವಾಗಿದೆ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ.