ಸುದ್ದಿಲೈವ್/ಶಿವಮೊಗ್ಗ
ಮಹಾನಗರ ಪಾಲಿಕೆಯಲ್ಲಿ ಸಿಗುವ ಜನನ ಮತ್ತು ಮರಣ ನೋಂದಣಿ ಕೌಂಟರ್ ಗೆ ಲಕ್ವಾ ಹೊಡೆದಿದೆ. ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಪರದಾಡುವಂತೆ ಆಗಿದೆ. ಕಾರಣ ಕೇಳಿದರೆ ನವರಾತ್ರಿಯ ನೆಪ ಹೇಳಲಾಗುತ್ತಿತ್ತು ಲೋಕಾಯುಕ್ತರ ಮಧ್ಯಪ್ರವೇಶದಿಂದ ಸಮಸ್ಯೆ ಬಗೆಹರಿದಿದೆ.
ಆದರೆ ಅದೇ ಪಕ್ಕದ ಕೌಂಟರ್‌ನಲ್ಲಿ ಕಂದಾಯ ಹಣ ಪಡೆದು ರಶೀದಿ ಹಾಕಲು ಸಿಬ್ಬಂದಿಗಳಿದ್ದಾರೆ. ಆದರೆ ಜನರಿಗೆ ಬಹುಮುಖ್ಯವಾಗಿ ಬೇಕಾಗಿರುವ ಜನನ ಮತ್ತು ಮರಣದ ಕೌಂಟರ್ ನ ಸಿಬ್ಬಂದಿಗಳು ಕಳೆದು ಹೋಗಿ ಮೂರು ನಾಲ್ಕು ದಿನವೇ ಕಳೆದಿದೆ. ಸಿಬ್ಬಂದಿಯ ಅಲಭ್ಯತೆಗೆ ನವರಾತ್ರಿಯ ನೆಪ ಹೇಳಲಾಗುತ್ತಿದೆ.
ಜನನ ಮತ್ತು ಮರಣ ನೋಂದಣಿ ಕಾರ್ಯ ಬಿಜೆಪಿ ಸರ್ಕಾರದಿಂದ ಕೊಂಚ ಸುಧಾರಣೆಯಾಗಿತ್ತು. ಈಗ ದಸರಾ ಹಬ್ಬದ ಸಂಭಂಧ ಜನರು ಪರದಾಡುವಂತೆ ಮಾಡಿದೆ. ಆದರೆ ಕಂದಾಯ ವಿಭಾಗದ ಹಣ ಪಡೆಯುವಿಕೆ ಮಾತ್ರ ಹಬ್ಬ ಹರಿದಿನಗಳನ್ನ ದಾಟಿ ನಿರಂತರವಾಗಿ ನಡೆಯುತ್ತಿದೆ.
ಇಂದು ಸ್ವಲ್ಪ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆ ಪುನರ್ ಆರಂಭಗೊಂಡಿದೆ. ಆದರೆ ಈ ವಿಷಯ ಲೋಕಾಯುಕ್ತರ ಗಮನಕ್ಕೆ ಬಂದ ನಂತರ ಇಂದಿನಿಂದ ಪ್ರಾರಂಭವಾಗಿದೆ. ಎಲ್ಲದಕ್ಕೂ ಲೋಕಾಯುಕ್ತಕ್ಕೆ ಹೋಗಿ ಬಗೆಹರಿಸಿಕೊಳ್ಳಬೇಕೆಂದರೆ ಪಾಲಿಕೆಯನ್ನ ವಿಸರ್ಜಿಸುವುದೇ ಲೇಸು ಎನ್ನುವ ಮಟ್ಟಕ್ಕೆ ಸಾರ್ವಜನಿಕರು ಶಾಪ ಹಾಕುವಂತಾಗಿದೆ.
ನಾಲ್ಕು ದಿನಗಳ ನಿರಂತರ ಸ್ಥಗಿತವಾದ ಪರಿಣಾಮ ಜನರು ಗಲಾಟೆ ನಡೆಸಿದ್ದಾರೆ. ಪರಿಣಾಮ ಇಂದು ಆರಂಭವಾಗಿದೆ.
ಬ್ಯಾಂಕ್ ಲೋನ್ ಗೆ ಪರದಾಟ
ಮೊದಲು ಹಳದಿ ಬಣ್ಣದ ಕಾಗದ ಪತ್ರದಲ್ಲಿ ಖಾತೆ ಎಕ್ಸ್ ಟ್ರ್ಯಾಕ್ಟ್ ನೀಡಲಾಗುತ್ತಿತ್ತು. ಇದು ಬ್ಯಾಂಕ್ ಮತ್ತು ಸಹಕಾರ ಸಂಘದಲ್ಲಿ ಹಣ ಪಡೆಯಲು ಅನುಕೂಲ ವಾಗುತ್ತಿತ್ತು. ಆದರೆ ಇಂದಿನಿಂದ ಖಾತೆ ಎಕ್ಸ್ ಟ್ರ್ಯಾಕ್ಟ್ ಬದಲು ಸರ್ಕಾರ ಇ-ಸ್ವತ್ತು ಪಡೆಯಲು ಸೂಚಿಸಿದೆ. ಇದು ಸ್ವಲ್ಪ ಗೊಂದಲ ಇರುವುದರಿಂದ ಬ್ಯಾಂಕ್ ಲೋನ್ ಆಗುತ್ತಿಲ್ಲವೆಂದು ಸಾರ್ವಜನಿಕರ ಅಳಲಾಗಿದೆ.