ಸುದ್ದಿಲೈವ್/ಶಿವಮೊಗ್ಗ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಅಕ್ಟೋಬರ್ 28 ರಂದು ಬೆಳಿಗ್ಗೆ 11 ಕ್ಕೆ ನಗರದ ಅಶೋಕ ವೃತ್ತದ ಬಳಿ ಆಗಮಿಸಲಿದ್ದು ರಥವನ್ನು ಸ್ವಾಗತಿಸಿ, ಕುವೆಂಪು ರಂಗಮಂದಿರದವರೆಗೆ ಮೆರವಣಿಗೆಯಲ್ಲಿ ಸಾಗಲಿದೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ಡಿ. 20, 21 ಮತ್ತು 22, ನಡೆಯಲಿದ್ದು, ಸಮ್ಮೇಳನದಲ್ಲಿ ಭಾಗವಹಿಸಲು ಅರಿವು ಮೂಡಿಸುವ ದೃಷ್ಷಿಯಿಂದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಕನ್ನಡದ ನಾಡದೇವತೆಯಾದ ಶ್ರೀಭುವನೇಶ್ವರಿ ದೇವಿ ದೇವಾಲಯಯವಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿಯಿಂದ ಸೆ.22 ರಂದು ಹೊರಟು ನಾಡಿನಾದ್ಯಂತ ಎಲ್ಲಾ ಜಿಲ್ಲೆಗಳನ್ನು ಸಂಚರಿಸಲಿದೆ.
ಕನ್ನಡಜ್ಯೋತಿ ಹೊತ್ತ ರಥಯಾತ್ರೆಯನ್ನು ಶಿವಮೊಗ್ಗದ ಅಶೋಕವೃತ್ತದ ಬಳಿ ಸ್ವಾಗತಿಸಲು ಹಾಗೂ ಕುವೆಂಪು ರಂಗಮಂದಿರದವರೆಗೆ ಮೆರವಣಿಗೆಯಲ್ಲಿ ಸಾಗಲು ಎಲ್ಲ ಕನ್ನಡದ ಮನುಸುಗಳು ಭಾಗವಹಿಸಬೇಕೆಂದು ಕೋರಲಾಗಿದೆ.
ಕನ್ನಡ ರಥ ಸಂಚರಿಸುವ ವೇಳೆಯಲ್ಲಿ ಆಯಾ ಜಿಲ್ಲೆಯಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡಪರ/ರೈತ/ಕಾರ್ಮಿಕ ಸಂಘಟನೆಗಳು, ಎನ್.ಸಿ.ಸಿ/ಎನ್.ಎಸ್.ಎಸ್. ಸೌಟ್ಸ್ ಮತ್ತು ಗೈಡ್ಸ್ ಗಳು, ರೋಟರಿ/ಲಯನ್ಸ್ ಕ್ಲಬ್. ರೆಡ್ ಕ್ರಾಸ್ ಸೇರಿದಂತೆ ಅನೇಕ ಸೇವಾಸಂಸ್ಥೆಗಳು, ಸ್ತ್ರೀಶಕ್ತಿ ಸಂಘಗಳು, ಇನ್ನಿತರೆ ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ಜೊತೆಗೂಡಿಸಿಕೊಂಡು ಕಲಾತಂಡಗಳ ಕಲಾ ಪ್ರದರ್ಶನದ ಜೊತೆಗೆ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥವನ್ನು ಗೌರವಯುತವಾಗಿ ಸ್ವಾಗತಿಸಿ, ಜಿಲ್ಲೆಗಳಲ್ಲಿ ಸಂಚರಿಸುವ ವೇಳೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಂತರ ಜಿಲ್ಲೆಯ ಗಡಿಭಾಗಗಳಲ್ಲಿ ಬೀಳ್ಕೊಡಲು ಆಯಾ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಂದಾಳತ್ವ ನೀಡಲಾಗಿದೆ.
ರಥಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುತ್ತಾ ಶಿವಮೊಗ್ಗ ಜಿಲ್ಲೆಗೆ ಅ.26 ರಂದು ಆಗಮಿಸಲಿದೆ. ಮೊದಲು ಶಿಕಾರಿಪುರಕ್ಕೆ ಬೆಳಗ್ಗೆ 10.30ಕ್ಕೆ, ಮಧ್ಯಾಹ್ನ 12:30 ಕ್ಕೆ ಶಿರಾಳಕೊಪ್ಪ, ಮಧ್ಯಾಹ್ನ 2.00ಕ್ಕೆ ಸೊರಬ, ಸಂಜೆ 5.00ಕ್ಕೆ ಉಳವಿ, ಸಂಜೆ 6.00 ಕ್ಕೆ ಸಾಗರ ತಲುಪಲಿದೆ. ಅ.27 ರಂದು ಬೆಳಗ್ಗೆ 10.30 ಕ್ಕೆ ಬಟ್ಟೆಮಲ್ಲಪ್ಪ, ಮಧ್ಯಾಹ್ನ 12.30 ಕ್ಕೆ ಹೂಸನಗರ, ಮಧ್ಯಾಹ್ನ 3.00 ಕ್ಕೆ ರಿಪ್ಪನ್‌ಪೇಟೆ, ಸಂಜೆ 4.30ಕ್ಕೆ ಕೋಣಂದೂರು, ಸಂಜೆ 6.00 ಕ್ಕೆ ತೀರ್ಥಹಳ್ಳಿ ತಲುಪಲಿದೆ. ಅ. 28 ರಂದು ಬೆಳಗ್ಗೆ 9:30 ಕ್ಕೆ ಬೆಜ್ಜುವಳ್ಳಿ, ಬೆಳಗ್ಗೆ 10.00 ಕ್ಕೆ ಮಂಡಗದ್ದೆ, 11.00ಕ್ಕೆ ಗಾಜನೂರು 11.30 ಕ್ಕೆ ಶಿವಮೊಗ್ಗ, ಮಧ್ಯಾಹ್ನ 3.30ಕ್ಕೆ ಎಂ.ಆರ್.ಎಸ್, ಸಂಜೆ 4.30 ಕ್ಕೆ ಮಲವಗೊಪ್ಪ, ಸಂಜೆ 5.30 ಕ್ಕೆ ಭದ್ರಾವತಿ ತಲುಪಿ, ಅ. 29 ರಂದು ಅಲ್ಲಿಂದ ನಿರ್ಗಮಿಸಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎನ್ ಹೇಮಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.