ಸುದ್ದಿಲೈವ್/ಶಿವಮೊಗ್ಗ
ಇಂದಿನಿಂದ 9 ದಿನಗಳ ವರೆಗೆ ನವರಾತ್ರಿ ಹಬ್ಬಕ್ಕೆ ಬಿಜೃಂಭಣೆಯ ದಸರಾಕ್ಕೆ ಚಾಲನೆ ದೊರೆತಿದೆ. ಪಾಲಿಕೆಯಿಂದ ನವದುರ್ಗೆಯ ಬೆಳ್ಳಿಯ ವಿಗ್ರಹವನ್ನ ಕೋಟೆ ಚಂಡಿಕಾಪರಮೇಶ್ವರಿ ದೇವಸ್ಥಾನಕ್ಕೆ ಹೊತ್ತೊಯ್ದು ಪೂಜೆ ಸಲ್ಲಿಸಲಾಗಿದೆ.
ಕೋಟೆ ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ದಸರಾ ಉತ್ಸವಕ್ಕೆ ಸಿನಿಮಾ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ನಮ್ಮ ಸಂಸ್ಕೃತಿ ಹಬ್ಬ ಉತ್ಸವಗಳಿಂದ ತುಂಬಿದೆ ಎಂದು ಅಭಿಪ್ರಾಯಪಟ್ಟರು .
ಪ್ರತಿ ಮಾಸದಲ್ಲಿಯೂ ಕೂಡ ಒಂದಲ್ಲ ಒಂದು ಹಬ್ಬ ಉತ್ಸವಗಳು ಆಚರಣೆಯಲ್ಲಿವೆ. ಇವೆಲ್ಲವುಗಳಿಗೂ ಒಂದೊಂದು ಹಿನ್ನೆಲೆ ಇದೆ ಎಂದು ಹೇಳಿದರು.
ಆಂತರಿಕವಾಗಿ ಅಂದರೆ ಪಂಚೇಂದ್ರಿಯಗಳ ಮೂಲಕ ಅನುಭವಿಸುವ ಮತ್ತು ಬಾಹ್ಯವಾಗಿ ಅನುಭವಿಸುವ ಉತ್ಸವಗಳು ರೂಢಿಯಲ್ಲಿವೆ ಎಂದ ಅವರು, ರಾವಣ ಅತ್ಯಂತ ಮೇಧಾವಿ ಎಲ್ಲಾ ವೇದಗಳನ್ನು ಅರಿತವನು. ಅಲ್ಲದೇ ಶಿವ ಭಕ್ತ ಆದರೆ ಈತನಲ್ಲಿ ಅಹಂಕಾರವೆಂಬ ದುರ್ಗುಣವಿತ್ತು. ಅದರ ಪರಿಣಾಮ ತನ್ನ ಬದುಕನ್ನೇ ಹಾಳು ಮಾಡಿಕೊಂಡ ರಾಮನ ಮುಖಾಂತರ ಹತನಾದ ಎಂದು ಹಬ್ಬದ ಆಚರಣೆಯ ಹಿನ್ನೆಲೆಯನ್ನು ಹೇಳಿದರು.
ನಮ್ಮಲ್ಲಿಯೂ ಸಹ ರಾಮನಿದ್ದಾನೆ. ರಾವಣನಿದ್ದಾನೆ. ಅದರಲ್ಲಿ ರಾಮನ ಸದ್ಗುಣಗಳನ್ನು ಅರಿತುಕೊಂಡು, ರಾವಣನ ದುರ್ಗುಣವನ್ನು ಬಿಟ್ಟುಕೊಡುವುದೇ ನಿಜವಾದ ಹಬ್ಬದ ಆಚರಣೆಗಳು. ಅದೇ ರೀತಿಯಲ್ಲಿ ದುರ್ಗೆ ರಾಕ್ಷಸರನ್ನು ಸಂಹರಿಸಿದಳು. ದುರ್ಗೆಯ ಶಕ್ತಿಯನ್ನು ನಾವುಗಳು ಅಳವಡಿಸಕೊಂಡು. ರಾಕ್ಷರ ರೂಪದ ನಮ್ಮಲ್ಲಿನ ಅವಗುಣಗಳನ್ನು ಸಂಹಾರ ಮಾಡಬೇಕೆಂದು ಮಾರ್ಮಿಕವಾಗಿ ಹೇಳಿದರು.
ಶಕ್ತಿಯ ದೇವತೆಗಳ ಉತ್ಸವವಾದ ಈ ದಸರಾ ಹಬ್ಬ ನಾಡಿನ ಅತ್ಯಂತ ವೈಶಿಷ್ಟ್ಯಪೂರ್ಣ ಹಬ್ಬವಾಗಿದೆ. ಈ ಹಬ್ಬ ಸಮಸ್ತ ಕನ್ನಡ ನಾಡಿನ ಜನತೆಗೆ ಸುಖ-ಶಾಂತಿ ನೆಮ್ಮದಿಯನ್ನು ನೀಡಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ದೇವರ ಮೇಲೆ ಯಾರಿಗೆ ನಂಬಿಕೆ ಇರುವುದಿಲ್ಲವೋ ಅವರು, ಜೀವನದಲ್ಲಿ ನೆಮ್ಮದಿಯನ್ನು ಹೊಂದಲು ಸಾಧ್ಯವಿಲ್ಲ. ದೇವರು, ಧರ್ಮ ಇವುಗಳ ಮೇಲೆ ನಂಬಿಕೆ ಇದ್ದಾಗ ಮಾತ್ರ ಶಾಂತಿಯುತ ಜೀವನ ಹೊಂದಲು ಸಾಧ್ಯ ಎಂದು ಹೇಳಿದರು.
ಶಾಸಕ ಎಸ್,ಎನ್.ಚನ್ನಬಸಪ್ಪ ಮಾತನಾಡಿ, ಈ ಬಾರಿ ದಸರಾದಲ್ಲಿ ೬೮ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ, ಹೊಸದಾಗಿ ಪೌರ ಕಾರ್ಮಿಕರ ಗಮಕ ಹಾಗೂ ಪತ್ರಿಕಾ ದಸರಾವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕೊನೆಯ ದಿನ ನಡೆಯುವ ಉತ್ಸವದಲ್ಲಿ ನಗರದ ೨೫೦ಕ್ಕೂ ದೇವಾನು ದೇವತೆಗಳು ಪಾಲ್ಗೊಳ್ಳಲಿವೆ. ಉತ್ಸವದಲ್ಲಿ ಮೂರು ಆನೆಗಳು ಪಾಲ್ಗೊಳ್ಳಲಿವೆ. ನಮ್ಮ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಯಾವ ಸರ್ಕಾರವೂ ಕೂಡ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.
ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ತಹಶೀಲ್ದಾರ್ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.